ಬೆಂಗಳೂರು: ಬೆಂಗಳೂರು ದಕ್ಷಿಣದ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಭಾರತದ ಅತಿದೊಡ್ಡ ಮಕ್ಕಳ ಚಲನಚಿತ್ರೋತ್ಸವದ ಎಂಟನೇ ಆವೃತ್ತಿ, ಸ್ಕೂಲ್ ಸಿನಿಮಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(SCIFF)-2025 ಆರಂಭವಾಗಿದೆ.
ನವೆಂಬರ್ 14 ರಿಂದ 30 ರವರೆಗೆ ನಡೆಯುವ ಈ ಚಲನಚಿತ್ರೋತ್ಸವದಲ್ಲಿ 20ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳ 100ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಿದ್ದು, ದೇಶಾದ್ಯಂತ 40,000 ಸರ್ಕಾರಿ ಶಾಲೆಗಳು ಮತ್ತು 1,000 ಕ್ಕೂ ಹೆಚ್ಚು ಖಾಸಗಿ ಶಾಲೆಗಳನ್ನು ತಲುಪಲಿದೆ.
ಬೆಂಗಳೂರಿನ ಪೂರ್ವವೀಕ್ಷಣೆ ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿನಿಮಾ ಪ್ರದರ್ಶನ ಮತ್ತು ಚಲನಚಿತ್ರ ನಿರ್ಮಾಪಕರೊಂದಿಗಿನ ಸಂವಾದಗಳಿಗೆ ಹಾಜರಾಗಿದ್ದರು. ಜೊತೆಗೆ ಭಾಗವಹಿಸುವ ಶಾಲೆಗಳಲ್ಲಿ ಆನ್‌ಲೈನ್ ಚಲನಚಿತ್ರ ನಿರ್ಮಾಣ ಕಾರ್ಯಾಗಾರಗಳನ್ನು ನಡೆಸಲಾಯಿತು.
"ನಾವು ಇಂದು ವೀಕ್ಷಿಸಿದ ಕಿರುಚಿತ್ರಗಳಲ್ಲಿ, ಒಂದು ಕಥೆಯು ಒಂದೇ ಸಮಯದಲ್ಲಿ ಹೇಗೆ ಶಿಕ್ಷಣ ಮತ್ತು ಮನರಂಜನೆಯನ್ನು ನೀಡುತ್ತದೆ ಎಂಬುದನ್ನು ತೋರಿಸಿದೆ" ಎಂದು 10 ನೇ ತರಗತಿಯ ವಿದ್ಯಾರ್ಥಿನಿ ಅನಿಂದಿತಾ ಶ್ರೇಯಸ್ ಅವರು ಹೇಳಿದ್ದಾರೆ.
"ಕೆಲವೇ ನಿಮಿಷಗಳಲ್ಲಿ, ದೊಡ್ಡ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಯಿತು. ಅದಕ್ಕಾಗಿಯೇ ಸಿನಿಮಾ ಮೂಲಕ ಕಲಿಯುವುದು ತುಂಬಾ ಶಕ್ತಿಯುತವಾಗಿದೆ" ಎಂದಿದ್ದಾರೆ.
"ಮಕ್ಕಳು ಅತ್ಯುತ್ತಮ ಚಲನಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಅವಕಾಶ ಸಿಗುತ್ತದೆ. ಏಕೆಂದರೆ ಅವುಗಳನ್ನು ಉತ್ಸವಗಳಲ್ಲಿ ಮಾತ್ರ ಪ್ರದರ್ಶಿಸಲಾಗುತ್ತದೆ. ಆದ್ದರಿಂದ ನಾವು ಚಲನಚಿತ್ರಗಳನ್ನು ನೇರವಾಗಿ ಶಾಲೆಗಳಿಗೆ ತರುವ ಮೂಲಕ ಉತ್ಸವವನ್ನು ಅವರ ಬಳಿಗೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಆ ರೀತಿಯಲ್ಲಿ, ಪ್ರತಿ ಮಗುವೂ ಉತ್ತಮ ಗುಣಮಟ್ಟದ ಸಿನೆಮಾವನ್ನು ನೋಡಲು ಸಾಧ್ಯ" ಎಂದು ಚಿತ್ರೋತ್ಸವದ ನಿರ್ದೇಶಕ ಸೈಯದ್ ಸುಲ್ತಾನ್ ಅಹ್ಮದ್ ಹೇಳಿದ್ದಾರೆ.