ಕರ್ನಾಟಕದ ಕೊಡಗಿನ ಸ್ಯಾಂಡಲ್ ವುಡ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರರಂಗದ ಅತಿದೊಡ್ಡ ನಟಿಯರಲ್ಲಿ ಒಬ್ಬರು, ಕನ್ನಡದ ಬಳಿಕ ತೆಲುಗಿಗೆ ಹೋದ ರಶ್ಮಿಕಾ ನಂತರ ಅಲ್ಲಿ ಯಶಸ್ಸು ಕಂಡು ತಮಿಳು, ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟ ಮೇಲೆ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ. ನ್ಯಾಶನಲ್ ಕ್ರಶ್ ಎಂಬ ಬಿರುದು ಬೇರೆ ಸಿಕ್ಕಿದೆ.
ಹೀಗಿರುವಾಗ ಅವರನ್ನು ಕನ್ನಡ ಚಿತ್ರಗಳಿಂದ ಬ್ಯಾನ್ ಮಾಡಲಾಗಿದೆ ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಾರಿ ಚರ್ಚೆಗೀಡಾಗಿದೆ. ಈ ಬಗ್ಗೆ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ಥಮ್ಮಾ ಬಿಡುಗಡೆಯ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸ್ವತಃ ರಶ್ಮಿಕಾ, ಜನರು ತಮ್ಮ ಬಗ್ಗೆ ಊಹಿಸುವ ಹೆಚ್ಚಿನ ವಿಚಾರಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದಾರೆ.
ರಶ್ಮಿಕಾ ಹೇಳಿದ್ದೇನು?
ನೋಡಿ, ನಮ್ಮ ಜೀವನದಲ್ಲಿ ಏನು ನಡೆದಿದೆ, ಏನು ನಡೆಯುತ್ತಿದೆ ಎಂದು ಜಗತ್ತಿಗೆ ತಿಳಿದಿರುವುದಿಲ್ಲ. ಬೇರೆಯವರ ವೈಯಕ್ತಿಕ ಜೀವನದ ಮೇಲೆ ಕ್ಯಾಮೆರಾ ಇಟ್ಟು ನೋಡಲು ಸಾಧ್ಯವಿಲ್ಲ ಅದು ದೇವರಿಗೆ ಮಾತ್ರ ಗೊತ್ತಿರುತ್ತದೆ. ನಮ್ಮೆಲ್ಲಾ ವಿಚಾರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ, ಹೊರಗಿನಿಂದ ಕಂಡದ್ದು ಸತ್ಯವಾಗಿರುವುದಿಲ್ಲ ಎಂದಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, ಜನರು ನಮ್ಮ ವೃತ್ತಿಪರ ಜೀವನದ ಬಗ್ಗೆ ಏನು ಹೇಳುತ್ತಾರೆ ಎಂಬುದು ಮುಖ್ಯವಾಗುತ್ತದೆ, ನಾವು ಅದನ್ನು ಪರಿಗಣಿಸುತ್ತೇವೆ ಮತ್ತು ಅದರ ಮೇಲೆ ಕೆಲಸ ಮಾಡುತ್ತೇವೆ ಹೊರತು ನಮ್ಮ ಬಗೆಗಿನ ವೈಯಕ್ತಿಕ ಟೀಕೆ, ಗಾಸಿಪ್ ಗಳು ಅಲ್ಲ, ಜನ ನನ್ನ ವೃತ್ತಿ, ಸಿನಿಮಾ ಬಗ್ಗೆ ಏನೇ ಟೀಕೆ ಮಾಡಿದರೂ ಅದನ್ನು ನಾನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ನಿಮ್ಮನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆಯೇ ಎಂದು ಸುದ್ದಿಗಾರರು ನೇರವಾಗಿ ಪ್ರಶ್ನಿಸಿದಾಗ, ಇಲ್ಲಿಯವರೆಗೆ ನನ್ನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿಲ್ಲ, ಅವೆಲ್ಲವೂ ವದಂತಿಯಷ್ಟೇ ಎಂದರು.
ಕಾಂತಾರಾ ಚಾಪ್ಟರ್ 1 ಚಿತ್ರ ವೀಕ್ಷಣೆ
ರಶ್ಮಿಕಾ ಮಂದಣ್ಣ ಪ್ರಸ್ತುತ ‘ಥಮಾ’ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಸಂದರ್ಶಕರು, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ರಶ್ಮಿಕಾ, ‘ಸಿನಿಮಾ ಬಿಡುಗಡೆ ಆದ ಎರಡು ಮೂರು ದಿನಗಳಲ್ಲಿಯೇ ನನಗೆ ನೋಡಲು ಸಾಧ್ಯವಿಲ್ಲ. ಹಾಗಾಗಿ ಸಿನಿಮಾ ರಿಲೀಸ್ ಆದ ಕೂಡಲೇ ನಾನು ಸಿನಿಮಾ ವೀಕ್ಷಿಸಲಿಲ್ಲ. ಆದರೆ ಇತ್ತೀಚೆಗಷ್ಟೆ ಸಿನಿಮಾ ನೋಡಿದೆ. ನನಗೆ ಇಷ್ಟವಾಯ್ತು, ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ, ಅವರು ಧನ್ಯವಾದ ಎಂದು ಪ್ರತಿಕ್ರಿಯೆ ನೀಡಿದ್ದಾರೆ’ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಸದ್ಯ ಆಯುಷ್ಮಾನ್ ಖುರಾನಾ ಜತೆ ರೊಮ್ಯಾಂಟಿಕ್ ಹಾರರ್ ಕಾಮಿಡಿ 'ಥಮ್ಮಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ತಿಂಗಳೇ ತೆರೆಗೆ ಬರಲಿದೆ. ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್ ಮತ್ತು ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ನಿಶ್ಚಿತಾರ್ಥ ನೆರವೇರಿದ್ದು ಫೆಬ್ರವರಿಯಲ್ಲಿ ಇಬ್ಬರು ವಿವಾಹವಾಗುತ್ತಾರೆ ಎನ್ನಲಾಗಿದೆ.