ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲ್ಮ್ಸ್, ಗಾಂಧಿ ಜಯಂತಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 2 ರಂದು ಕಾಂತಾರ: ಚಾಪ್ಟರ್ 1ರ ವಿಶ್ವಾದ್ಯಂತ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ 2022ರ ಬ್ಲಾಕ್‌ಬಸ್ಟರ್ ಕಾಂತಾರ ನಂತರ ಬರುತ್ತಿರುವ ಕಾಂತಾರ: ಚಾಪ್ಟರ್ 1 ಚಿತ್ರ ಈಗಾಗಲೇ ದೇಶಾದ್ಯಂತ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.
ಕಾಂತಾರ: ಚಾಪ್ಟರ್ 1ಗಾಗಿ ವಿವಿಧ ಭಾಷೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಉತ್ತರ ಭಾರತದಲ್ಲಿ ಚಿತ್ರದ ವಿತರಣೆಯ ಹಕ್ಕನ್ನು ಎಎ ಫಿಲಂಸ್ ಪಡೆದಿದೆ. ಇದರೊಂದಿಗೆ ಹಿಂದಿ ಮಾತನಾಡುವ ಪ್ರದೇಶಗಳ ಪ್ರೇಕ್ಷಕರು ಸಹ ಈ ಮಹಾಕಾವ್ಯದ ಸಾಹಸಗಾಥೆಯನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಸಾಧ್ಯವಾಗುತ್ತದೆ.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದು, ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆಯ ಮೇಲೆ ತರುವ ಪ್ರಯತ್ನ ಚಿತ್ರತಂಡದ್ದಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದೆ.
ಈ ಚಿತ್ರವು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಮತ್ತು ಚೀನಾ ಹೊರತುಪಡಿಸಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.