ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಬಳಿಕ ಸು ಫ್ರಮ್ ಸೋ ಚಿತ್ರವು ಇದೀಗ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಶನೀಲ್ ಗೌತಮ್, ಜೆಪಿ ತುಮಿನಾಡ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಹಿಟ್ ಚಿತ್ರ 'ಸು ಫ್ರಮ್ ಸೋ' ಕೊನೆಗೂ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದೆ. ಅಪ್ಲಿಕೇಶನ್‌ನಲ್ಲಿನ ವಿವರಗಳ ಪ್ರಕಾರ, ಚಿತ್ರವು ಸೆಪ್ಟೆಂಬರ್ 9 ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ.
'ಸು ಫ್ರಮ್ ಸೋ' ಬಿಡುಗಡೆಯಾದಾಗಿನಿಂದ ರಾಜ್ಯದಾದ್ಯಂತ ಭಾರಿ ಸದ್ದು ಮಾಡಿದ್ದು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಜುಲೈ 25 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ನಟನೆಯೊಂದಿಗೆ ಜೆಪಿ ತುಮಿನಾಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಅಗಾಧವಾದ ಸಕಾರಾತ್ಮಕ ವಿಮರ್ಶೆಗಳ ನಂತರ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಿತ್ರಕ್ಕೆ ಬೇಡಿಕೆ ಕಂಡುಬಂದ ನಂತರ ಆಯಾ ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು. ಇದರ ಪರಿಣಾಮವಾಗಿ ಚಿತ್ರವು ದೇಶದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 120 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಎಕ್ಕ ಮತ್ತು ಜೂನಿಯರ್ ಚಿತ್ರಗಳೊಂದಿಗೆ ತೆರೆಗೆ ಬಂದ 'ಸು ಫ್ರಮ್ ಸೋ' ಈ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರವಾಗಿದೆ. ಕೆಜಿಎಫ್, ಕಾಂತಾರ ಮತ್ತು 777 ಚಾರ್ಲಿ ನಂತರ ಸಾವಿರಾರು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತಂದ ಕೀರ್ತಿಗೆ ಪಾತ್ರವಾಗಿದೆ.
ಚಿತ್ರಕ್ಕೆ ಸುಮೇಧ್ ಕೆ ಅವರ ಸಂಗೀತ ಮತ್ತು ಎಸ್ ಚಂದ್ರಶೇಖರನ್ ಅವರ ಛಾಯಾಗ್ರಹಣವಿದೆ. ಕರ್ನಾಟಕದ ಆಚೆಗೆ, ಸು ಫ್ರಮ್ ಸೋ ಚಿತ್ರವನ್ನು ಗಂಗಾಧರ್ ವಿತರಿಸಿದರು. ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದರೆ, ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ಕೇರಳದಲ್ಲಿ ಮಲಯಾಳಂ ಆವೃತ್ತಿಯನ್ನು ಬಿಡುಗಡೆ ಮಾಡಿತು. ಅಂತರರಾಷ್ಟ್ರೀಯವಾಗಿ, ಫಾರ್ಸ್ ಫಿಲ್ಮ್ಸ್ ಚಿತ್ರವನ್ನು ಬಹು ಮಾರುಕಟ್ಟೆಗಳಲ್ಲಿ ವಿತರಿಸಿತು. ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ಜೊತೆಗೆ ಶಶಿಧರ್ ಶೆಟ್ಟಿ ಬರೋಡಾ ಮತ್ತು ರವಿ ರೈ ಕಳಸ ಬೆಂಬಲಿಸಿದ್ದಾರೆ.
ಕುತೂಹಲಕಾರಿಯಾಗಿ, ಬೇಡಿಕೆಯಿಂದಾಗಿ ಸುಮಾರು 175 ಪರದೆಗಳಲ್ಲಿ ಬಿಡುಗಡೆಯಾದ ನಂತರ ಈ ಚಿತ್ರವು ಕೇರಳದಲ್ಲಿ ಗಣನೀಯ ಪ್ರಮಾಣದ ಕಲೆಕ್ಷನ್ ಮಾಡಿದೆ. ಹಲವಾರು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೂ, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವಲ್ಲಿ ಯಶಸ್ವಿಯಾಗಿದೆ.
ಕನ್ನಡದಲ್ಲಿ 17ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ದಕ್ಷಿಣ ಭಾರತದ ಇತರ ಭಾಷೆಗಳ 60ಕ್ಕೂ ಚಿತ್ರಗಳನ್ನು ವಿತರಿಸಿರುವ ಎನ್.ಎಸ್. ರಾಜ್‌ಕುಮಾರ್ ಇತ್ತೀಚೆಗೆ ಸು ಫ್ರಮ್ ಸೋ ಚಿತ್ರದ ತಮಿಳು ರಿಮೇಕ್ ಹಕ್ಕುಗಳನ್ನು ದಾಖಲೆ ಬೆಲೆಗೆ ಪಡೆದುಕೊಂಡಿದ್ದರು.