ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಜಾಮೀನು ರದ್ದಾಗಿ ಆರೋಪಿ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಪತಿ ದರ್ಶನ್ ಮತ್ತೆ ಜೈಲು ಸೇರಿದ ಸಂಕಟದಲ್ಲಿರುವ ವಿಜಯಲಕ್ಷ್ಮೀಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಬೆಂಗಳೂರಿನ ನಿವಾಸದಲ್ಲಿ 3 ಲಕ್ಷ ರೂ. ಕಳ್ಳತನವಾಗಿದ್ದು, ಮ್ಯಾನೇಜರ್ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದ್ದು, ಮನೆಕೆಲಸದವರ ಮೇಲೆ ಶಂಕೆ ವ್ಯಕ್ತವಾಗಿದೆ.
ಮನೆಕೆಲಸದವರ ಮೇಲೆ ಶಂಕೆ ವ್ಯಕ್ತಪಡಿಸಿರುವ ಮ್ಯಾನೇಜರ್ ನಾಗರಾಜ್ ದೂರು ದಾಖಲಿಸಿದ್ದಾರೆ. 3 ಲಕ್ಷ ರೂಪಾಯಿ ಕಳ್ಳತನವಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 4ರಂದು ಕೆಲಸದ ನಿಮಿತ್ ವಿಜಯಲಕ್ಷ್ಮೀ ದರ್ಶನ್ ಮೈಸೂರಿಗೆ ತೆರಳಿದ್ದರು.
ಮೈಸೂರಿಗೆ ತೆರಳುವ ಮುನ್ನ ಮನೆಯ ವಾಡ್ರೂಬ್ ಕಾಟನ್ ಬಾಕ್ಸ್ ನಲ್ಲಿ ಹಣ ತೆಗೆದುಕೊಡಲು ಮ್ಯಾನೇಜರ್‌ಗೆ ಹೇಳಿದ್ದರು. ಅದರಲ್ಲಿನ ಸ್ವಲ್ಪ ಹಣ ತೆಗೆದು ಉಳಿದ ಹಣವನ್ನು ವಾಡ್ರೂಬ್ ಕಾಟನ್ ಬಾಕ್ಸ್ ನಲ್ಲಿಯೇ ಮ್ಯಾನೇಜರ್ ಇರಿಸಿದ್ದರು. ನಂತರ ಮನೆ ಬೀಗವನ್ನು ತಾಯಿಗೆ ನೀಡಿದ್ದ ವಿಜಯಲಕ್ಷ್ಮೀ ಅವರ ಮ್ಯಾನೇಜರ್ ಹೊರಗಡೆ ತೆರಳಿದ್ದರು.
ಸೆಪ್ಟೆಂಬರ್ 7 ರಂದು ಬೆಂಗಳೂರಿಗೆ ವಿಜಯಲಕ್ಷ್ಮಿ ವಾಪಸ್ ಬಂದಿದ್ದಾರೆ. ಸೆಪ್ಟೆಂಬರ್ 8ರಂದು ವಾಡ್ರೂಬ್ ಕಾಟನ್ ಬಾಕ್ಸ್ ನೋಡಿದಾಗ ಅಲ್ಲಿರಿಸಿದ್ದ ಹಣ ಇರಲಿಲ್ಲ. ಹಣ ಸಿಗದಿದ್ದಾಗ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ.
ಹಣ ಸಿಗದಿದ್ದಾಗ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯಲಕ್ಷ್ಮೀ ದರ್ಶನ್ ವಾಸವಾಗಿರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಫ್ಲಾಟ್ ನಲ್ಲಿ ಈ ಕಳ್ಳತನ ನಡೆದಿದೆ.