ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ವಿರುದ್ಧ ಸಂಭಾವನೆ ನೀಡದ ಆರೋಪ ಕೇಳಿಬಂದಿದೆ. ಪುಷ್ಪ ಅವರ ಪಿಎ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚೊಚ್ಚಲ ಸಿನಿಮಾ ಕೊತ್ತಲವಾಡಿ ಆಗಸ್ಟ್ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಆದರೆ ಸಿನಿಮಾ ರಿಲೀಸ್ ಆಗಿ ತಿಂಗಳುಗಳು ಕಳೆದರೂ ನಮಗೆ ಬರಬೇಕಾಗಿದ್ದ ಸಂಭಾವನೆ ಬಂದಿಲ್ಲ ಎಂದು ನಟ ಪೃಥ್ವಿ ಅಂಬಾರ್ ಜೊತೆಗೆ ಅಭಿನಯಿಸಿದ್ದ ಮಹೇಶ್ ಗುರು ಆರೋಪ ಮಾಡಿದ್ದಾರೆ.
ಈ ಸಂಬಂಧ ಮಹೇಶ್ ಗುರು ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವೈರಲ್ ಆದ ನಂತರ ಮಾಧ್ಯಮಗಳು ಸುದ್ದಿ ಮಾಡಿದ್ದವು. ನಂತರ ಅವರು ತಮ್ಮ ಫೇಸ್ ಬುಕ್ ಖಾತೆಯಿಂದ ಅದನ್ನು ತೆಗೆದುಹಾಕಿದ್ದಾರೆ.
ಮಹೇಶ್ ಗುರು ಆರೋಪವೇನು? ಪುಷ್ಪ ಅವರು ನಿರ್ಮಿಸಿರುವ 'ಕೊತ್ತಲವಾಡಿ' ಸಿನಿಮಾದಲ್ಲಿ ನಟ ಪೃಥ್ವಿ ಅಂಬಾರ್ ಅವರ ಸಹ ನಟನಾಗಿ ಮೂರು ತಿಂಗಳಿಗೂ ಹೆಚ್ಚುಕಾಲ ಅವರೊಂದಿಗೆ ಸಿನಿಮಾದಲ್ಲಿ ಕೆಲಸ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ, ಕಾಲ್ ಮಾಡಿದ್ರೆ ಕಟ್
ನಿರ್ದೇಶಕರ ಕಡೆಯಿಂದ ಈ ಸಿನಿಮಾಗೆ ಸೆಲೆಕ್ಟ್ ಆಗಿದ್ದೆ. ತಿಂಗಳಿಗೆ ಇಷ್ಟು, ಡೈಲಿ ಕನ್ವಿನಿಯೆನ್ಸ್ ಇಷ್ಟು ಇರುತ್ತದೆ ಅಂತ ನಮಗೆ ಒಂದು ಪ್ಯಾಕೇಜ್ ನ್ನು ನಿರ್ದೇಶಕರು ಮಾತನಾಡಿದ್ದರು. ನಾವು ಕೂಡಾ ಖುಷಿ ಖುಷಿಯಾಗಿ ಒಪ್ಪಿಕೊಂಡಿದ್ದೆವು. ಸಿನಿಮಾ ಶುರು ಆಗೋದಕ್ಕೆ ಮುನ್ನ ಒಂದು ಅಡ್ವಾನ್ಸ್ ಮಾಡಿಸುತ್ತೇನೆ ಅಂತ ಹೇಳಿದ್ದರು. ಸಿನಿಮಾ ಮುಹೂರ್ತ ಆಯ್ತು. ಮುಹೂರ್ತದಲ್ಲಿ ಕೇಳಿದ್ದಕ್ಕೆ ,ಪ್ರೊಡಕ್ಷನ್ ನಿಂದ ಇನ್ನೂ ಅಮೌಂಟ್ ಬಂದಿಲ್ಲ. ಬಂದ ತಕ್ಷಣ ಮಾಡಿ ಕೊಡುತ್ತೇನೆ ಅಂತ ಹೇಳಿದ್ದರು. ಸಿನಿಮಾ ಶುರು ಆಯ್ತು. ಪೂರ್ತಿ ಸಿನಿಮಾ ಮುಗಿದಿತ್ತು. ಹಾಡು ಮುಗೀತು ಫೈಟ್ ಕೂಡಾ ಮುಗೀತು. ಎಷ್ಟು ಬಾರಿ ಕೇಳಿದ್ದರು ಪ್ರೊಡಕ್ಷನ್ ನಿಂದ ಇನ್ನೂ ಅಮೌಂಟ್ ಬಂದಿಲ್ಲ ಅಂತ ಹೇಳುತ್ತಲೇ ಬಂದರು. ಕೊನೆಗೆ ಡಬ್ಬಿಂಗ್ ಮುಗಿಸಿದ ನಂತರವೂ ಪೇಮೆಂಟ್ ಕ್ಲಿಯರ್ ಮಾಡಿಲ್ಲ. ನಮ್ಮ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಕಾಲ್ ಮಾಡಿದ್ರೆ ಕಟ್ ಮಾಡುತ್ತಿದ್ದರು.
ಈ ನಡುವೆ ಟೀಸರ್, ಟ್ರೈಲರ್, ಪ್ರೇಸ್ ಮೀಟ್ ಗಳಿಗೆ ನಮ್ಮನ್ನು ಕರೆಯುತ್ತಿರಲಿಲ್ಲ. ಸಿನಿಮಾ ಬಿಡುಗಡೆ ಆಗಿ ಒಟಿಟಿಗೆ ಬಂದಿದೆ. ಈಗಲೂ ಕೂಡಾ ನಮಗೆ ಸಂಭಾವನೆ ನೀಡಿಲ್ಲ. ಅವರ ಹತ್ತಿರದಿಂದ ಭೇಟಿ ಆಗುವ ಅವಕಾಶ ಸಿಗಲಿಲ್ಲ. ಪುಷ್ಪ ಮೇಡಂ ಅವರಿಗೆ ತಲುಪಲಿ ಅನ್ನುವ ಉದ್ದೇಶದಿಂದ ಈ ವಿಡಿಯೋ ಮಾಡಿರುವುದಾಗಿ ಮಹೇಶ್ ಗುರು ಹೇಳಿಕೊಂಡಿದ್ದಾರೆ.