ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾ 'ಮಾರ್ಕ್' ಬಿಡುಗಡೆಗೆ ಈಗಾಗಲೇ ಅಭಿಮಾನಿಗಳು ಕಾಯುತ್ತಿದ್ದು, ಚಿತ್ರ ಬಿಡುಗಡೆ ಕುರಿತು ಹೊಸ ಅಪ್ಡೇಟ್ ಲಭ್ಯವಾಗಿದೆ. ಡಿಸೆಂಬರ್ 25ರಂದು ಮಾರ್ಕ್ ಚಿತ್ರವು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುಳಿವು ಸಿಕ್ಕಿದೆ.
ಸುದೀಪ್ ಅವರ ಇತ್ತೀಚಿನ ಅಪ್‌ಡೇಟ್‌ನ ಬೆನ್ನಲ್ಲೇ ಈ ಘೋಷಣೆ ಬಂದಿದ್ದು, ಚಿತ್ರದ ಒಂದು ಲಿರಿಕಲ್ ಟ್ರ್ಯಾಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 'ಅಜನೀಶ್ ಲೋಕನಾಥ್ ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಶೋಬಿ ಮಾಸ್ಟರ್ ನೃತ್ಯ ಸಂಯೋಜನೆ ಸುಂದರವಾಗಿ ಮಾಡಿದ್ದಾರೆ. ಚಿತ್ರೀಕರಣ ಮಾಡುವಾಗ ನನಗೆ ತುಂಬಾ ಸಂತೋಷವಾಯಿತು. ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ' ಎಂದು ಸುದೀಪ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಕೆರಳಿಸಿದೆ.
2024ರಲ್ಲಿ ಸುದೀಪ್ ಜೊತೆ 'ಮ್ಯಾಕ್ಸ್' ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿರುವ ಮಾರ್ಕ್ ಚಿತ್ರಕ್ಕಾಗಿ ಮ್ಯಾಕ್ಸ್ ಚಿತ್ರದ ತಾಂತ್ರಿಕ ತಂಡವೇ ಒಂದಾಗಿದೆ. ಸತ್ಯ ಜ್ಯೋತಿ ಫಿಲ್ಮ್ಸ್ ಬೆಂಬಲಿತ ಈ ಚಿತ್ರವು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ನಿಶ್ವಿಕಾ ನಾಯ್ಡು ಮತ್ತು ರೋಶನಿ ಪ್ರಕಾಶ್ ಕೂಡ ತಂಡದ ಭಾಗವಾಗಿದ್ದಾರೆ. ಸುದೀಪ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ ಮೊದಲ ಪೋಸ್ಟರ್ ಭಾರಿ ಕುತೂಹಲ ಮೂಡಿಸಿದ್ದು, ಕ್ರಿಸ್‌ಮಸ್ ಬಿಡುಗಡೆಗಾಗಿ ನಿರೀಕ್ಷೆಗಳು ಹೆಚ್ಚಿವೆ.
ಮಾರ್ಕ್ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಕಿಚ್ಚ ಸುದೀಪ್ ಸದ್ಯ ಅನೂಪ್ ಭಂಡಾರಿ ಜೊತೆ ಬೃಹತ್ ಪ್ಯಾನ್-ಇಂಡಿಯಾ ಚಿತ್ರ 'ಬಿಲ್ಲಾ ರಂಗ ಭಾಷಾ'ದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ತಮ್ಮ ನಿರ್ದೇಶನದ ಯೋಜನೆಯೊಂದಿಗೆ ಮತ್ತೆ ತೆರೆ ಮೇಲೆ ಬರಲು ಎದುರು ನೋಡುತ್ತಿದ್ದಾರೆ.