ನವರಾತ್ರಿಯ ಶುಭ ಸಂದರ್ಭದಲ್ಲಿ ರಿಷಭ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಕಾಂತಾರ: ಚಾಪ್ಟರ್ 1 ಟ್ರೈಲರ್ ರಿಲೀಸ್ ಆಗಿದೆ.
ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದಿಂದು ಬಿಡುಗಡೆಗೆ ಸಜ್ಜಾಗಿರುವಂತೆಯೇ 10 ದಿನ ಮುಂಚಿತವಾಗಿ ಬಿಡುಗಡೆಯಾಗಿರುವ ಟ್ರೈಲರ್ ತನ್ನ ಮನಮೋಹಕ ದೃಶ್ಯ ವೈಭವದಿಂದ ವೀಕ್ಷಕರ ಗಮನ ಸೆಳೆಯುತ್ತಿದೆ.
ಕಾಂತಾರ ಚಿತ್ರದ ಪ್ರೀಕ್ವೆಲ್ ನ 2 ನಿಮಿಷ 56 ಸೆಕೆಂಡ್ ಗಳ ಟ್ರೈಲರ್ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಅಜನೀಶ್ ಹಿನ್ನೆಲೆ ಸಂಗೀತ ನೀಡಿದ್ದು, ರುಕ್ಮೀಣಿ ವಸಂತ್ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ನಟ ಜಯರಾಂ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ.
ಕೆಜಿಎಫ್ ಖ್ಯಾತಿಯ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಾಂತಾರ ಚಾಪ್ಟರ್ 1 ಅದ್ದೂರಿಯಾಗಿ ನಿರ್ಮಾಣವಾಗಿದ್ದು, ಬಾಲಿವುಡ್ ನಟ ಹೃತಿಕ್ ರೋಷನ್, ತೆಲುಗಿನ ಪ್ರಭಾಸ್, ತಮಿಳಿನ ಶಿವಕಾರ್ತಿಕೇಯನ್ ಹಾಗೂ ಮಲಯಾಳಂನ ಪೃಥ್ವಿರಾಜ್ ಸುಕಮಾರ್ ಟ್ರೈಲರ್ ಲಿಂಕ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.
ಹೊಂಬಾಳೆ ಫಿಲಂಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ದಂತಕಥೆಯ ಮುನ್ನುಡಿ , ಕಾರ್ಣಿಕದ ಆದಿ ಪರ್ವ… ನಿಮ್ಮಿಂದ ನಿಮಗಾಗಿ ಎಂಬ ಶೀರ್ಷಿಕೆಯಡಿ ಟ್ರೈಲರ್ ಹಂಚಿಕೊಂಡಿದ್ದಾರೆ.