ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರತಂಡ ಕೂಡ ಚಿತ್ರದಲ್ಲಿ ಬಳಸಲಾಗಿರುವ ಆಕರ್ಷಕ ಬೈಕ್ ಅನ್ನು ಅನಾವರಣಗೊಳಿಸುವ ಮೂಲಕ ಆಚರಿಸಿತು. 45 ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಸಂಗೀತ ಸಂಯೋಜಕ ಅರ್ಜುನ್ ಜನ್ಯ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರವನ್ನು ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಎಂ ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ.
ಉಪೇಂದ್ರ ತೆರೆ ಮೇಲೆ ಸವಾರಿ ಮಾಡಿರುವ ವಿಶಿಷ್ಟವಾದ ಪ್ರಾಪರ್ಟಿಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. 'ಚಿತ್ರದಲ್ಲಿ ಬೈಕ್ ಕೂಡ ಒಂದು ಪಾತ್ರವಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನ ಭಾರತದಾದ್ಯಂತ ವಿವಿಧ ಸ್ಥಳಗಳಿಗೆ ಇದೇ ಬೈಕ್‌ನಲ್ಲಿ ಪ್ರಯಾಣಿಸಲಿದ್ದಾರೆ. ಅಭಿಮಾನಿಗಳಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಂಡ ಅಥವಾ ಉಪೇಂದ್ರ ಅವರನ್ನು ಟ್ಯಾಗ್ ಮಾಡಲು ಅವಕಾಶವಿದೆ ಎಂದು ಅರ್ಜುನ್ ಜನ್ಯ ವಿವರಿಸಿದರು.
ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ಈ ಬೈಕ್ ಅನ್ನು ತಯಾರಿಸಲು ಹಲವಾರು ದಿನಗಳು ಶ್ರಮ ಪಡಬೇಕಾಯಿತು ಮತ್ತು ಅಭಿಮಾನಿಗಳು ಆನ್‌ಲೈನ್‌ನಲ್ಲಿ ಅದರೊಂದಿಗೆ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು. ಉಪೇಂದ್ರ ಅವರು ತಮ್ಮ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದರು. ಹುಟ್ಟುಹಬ್ಬದಂದು ಸಾಮಾನ್ಯವಾಗಿ ಪೋಸ್ಟರ್‌ಗಳು ಅಥವಾ ಟೀಸರ್‌ಗಳು ಬಿಡುಗಡೆಯಾಗುತ್ತವೆ. ಆದರೆ, ಬೈಕ್ ಅನ್ನು ಅನಾವರಣಗೊಳಿಸುವುದು ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಒಂದು ಹೊಸ ಮಾರ್ಗವಾಗಿದೆ ಎಂದು ಹೇಳಿದರು.
45 ಡಿಸೆಂಬರ್ 25 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ನಿರ್ದೇಶನದೊಂದಿಗೆ ಅರ್ಜುನ್ ಜನ್ಯ ಅವರೇ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ.