ನವದೆಹಲಿ: ಇತ್ತೀಚೆಗಷ್ಟೇ ತೆರೆಕಂಡ ಮಲಯಾಳಂನ ಚಿತ್ರ 'ಲೋಕಾ ಚಾಪ್ಟರ್ 1: ಚಂದ್ರ' ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಗಲ್ಲಾ ಪೆಟ್ಟಿಗೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ನಟ ದುಲ್ಖರ್ ಸಲ್ಮಾನ್ ಇದೀಗ 'ಲೋಕಾ ಚಾಪ್ಟರ್ 2' ಚಿತ್ರವನ್ನು ಘೋಷಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ 'ಲೋಕಾ ಚಾಪ್ಟರ್ 1: ಚಂದ್ರ' ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಮೊದಲ ಚಾಪ್ಟರ್ ಅನ್ನು ನಿರ್ದೇಶಿಸಿದ್ದ ಡೊಮಿನಿಕ್ ಅರುಣ್ ಅವರೇ ಈ ಚಿತ್ರವನ್ನು ಬರೆದು, ನಿರ್ದೇಶಿಸಲಿದ್ದಾರೆ.
ಕಲ್ಯಾಣಿ ಪ್ರಿಯದರ್ಶನ್, ಸ್ಯಾಂಡಿ ಮತ್ತು ನಸ್ಲೆನ್ ನಟಿಸಿರುವ 'ಲೋಕಾ ಚಾಪ್ಟರ್ 1: ಚಂದ್ರ' ಆಗಸ್ಟ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನಟ ದುಲ್ಕರ್ ಸಲ್ಮಾನ್ ಚಿತ್ರವನ್ನು ತಮ್ಮ ನಿರ್ಮಾಣ ಸಂಸ್ಥೆಯಾದ ವೇಫೇರರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ದುಲ್ಕರ್ ಸಲ್ಮಾನ್ ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ, 'ಪುರಾಣಗಳನ್ನು ಮೀರಿ. ದಂತಕಥೆಗಳನ್ನು ಮೀರಿ. ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ಲೋಕಾ ಚಾಪ್ಟರ್ 2ರಲ್ಲಿ ಟೊವಿನೋ ಥಾಮಸ್ ನಟಿಸಿದ್ದಾರೆ. ಡೊಮಿನಿಕ್ ಅರುಣ್ ಬರೆದು, ನಿರ್ದೇಶಿಸಿದ್ದಾರೆ. ವೇಫೇರರ್ ಫಿಲ್ಮ್ಸ್ ನಿರ್ಮಾಣವಿದೆ' ಎಂದು ಬರೆದಿದ್ದಾರೆ.
'ಲೋಕ ಚಾಪ್ಟರ್ 1: ಚಂದ್ರ' ಮಲಯಾಳಂ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಹೀರೋ ಚಿತ್ರವಾಗಿ ಪದಾರ್ಪಣೆ ಮಾಡಿತು. ಜಾನಪದ ಮತ್ತು ಫ್ಯಾಂಟಸಿ ಅಂಶಗಳಿಂದ ತುಂಬಿದ ಆಧುನಿಕ ಜಗತ್ತನ್ನು ಮುನ್ನಡೆಸುವ ಶಕ್ತಿಶಾಲಿ, ಪುರಾಣ-ಪ್ರೇರಿತ ನಾಯಕಿ ಚಂದ್ರಳ ಪಾತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದಾರೆ.
ಈ ಚಿತ್ರವು ದಕ್ಷಿಣ ಭಾರತದ ಅತಿ ಹೆಚ್ಚು ಗಳಿಕೆ ಕಂಡ ಮಹಿಳಾ ಪ್ರಧಾನ ಚಿತ್ರವಾಗಿ ಹೊರಹೊಮ್ಮಿತು. ಮೊದಲ ವಾರದಲ್ಲೇ ಜಾಗತಿಕವಾಗಿ 100 ಕೋಟಿ ರೂ.ಗಳ ಗಡಿಯನ್ನು ದಾಟಿತು.
ನಟರಾದ ಅರುಣ್ ಕುರಿಯನ್, ಚಂದು ಸಲೀಂಕುಮಾರ್, ನಿಶಾಂತ್ ಸಾಗರ್, ರಘುನಾಥ್ ಪಲೇರಿ, ವಿಜಯರಾಘವನ್, ನಿತ್ಯಶ್ರೀ ಮತ್ತು ಶರತ್ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.