ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿ ವೈರಲ್ ಆಗುತ್ತಿದೆ. ಅದರಲ್ಲೂ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಚರ್ಚೆ ಶುರುವಾಗಿದೆ. ಅದುವೇ, ರಾಮಾಯಣ ಚಿತ್ರದ ಟ್ರೇಲರ್‌ನಲ್ಲಿ ರಾವಣನ ಪಾತ್ರಕ್ಕೆ ಕನ್ನಡದ ಹಿರಿಯ ನಟ ದೇವರಾಜ್ ಅವರು ಧ್ವನಿ ನೀಡಿದ್ದಾರೆ ಎನ್ನುವುದು! ಹೌದು, ರಾಮಾಯಣ ಚಿತ್ರದ ಟ್ರೇಲರ್‌ನಲ್ಲಿ ರಾವಣನ ಪಾತ್ರಕ್ಕೆ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ಧ್ವನಿ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರ ಸತ್ಯಾಸತ್ಯತೆ ಕುರಿತ ಮಾಹಿತಿ ಇಲ್ಲಿದೆ:
ಯಶ್ ಪಾತ್ರಕ್ಕೆ ಧ್ವನಿ ಕೊಟ್ರಾ ದೇವರಾಜ್?
ಸಾಮಾಜಿಕ ಜಾಲತಾಣಗಳಲ್ಲಿ ರಾವಣನ ಪಾತ್ರಕ್ಕೆ ಕನ್ನಡದ ಹಿರಿಯ ನಟ ದೇವರಾಜ್ ಅವರು ಧ್ವನಿ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ, ನಟ ದೇವರಾಜ್ ಅವರ ಮಗ, ನಟ ಪ್ರಜ್ವಲ್ ದೇವರಾಜ್, "ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಟ್ರೇಲರ್‌ನಲ್ಲಿ ಕೇಳಿಬಂದಿರುವ ರಾವಣನ ಆ ಶಕ್ತಿಶಾಲಿ ಧ್ವನಿ ನನ್ನ ತಂದೆ ದೇವರಾಜ್ ಅವರದ್ದಲ್ಲ". ಆ ಧ್ವನಿ ಶೇ. 100 ರಷ್ಟು ಸ್ವತಃ ಯಶ್ ಅವರದ್ದೇ ಆಗಿದೆ. ಚಿತ್ರದ ಪಾತ್ರಕ್ಕಾಗಿ ಯಶ್ ಅವರು ತಮ್ಮ ಧ್ವನಿಯನ್ನು ಅಷ್ಟೊಂದು ಗಂಭೀರವಾಗಿ ಬದಲಾಯಿಸಿಕೊಂಡು ಅದ್ಭುತವಾಗಿ ಡಬ್ಬಿಂಗ್ ಮಾಡಿದ್ದಾರೆ ಎಂದು ಹೇಳುವ ಮೂಲಕ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ. ಇದರೊಂದಿಗೆ ಸಿನಿಮಾ ಪ್ರೇಮಿಗಳಲ್ಲಿದ್ದ ದೊಡ್ಡ ಕುತೂಹಲಕ್ಕೆ ಮತ್ತು ಗೊಂದಲಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.
ಹಾಗಾದರೆ, ಆ ಧ್ವನಿ ದೇವರಾಜ್ ಅವರದ್ದು ಎಂದು ವೈರಲ್ ಆಗಿದ್ದು ಹೇಗೆ?
ದೇವರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಹಾಗೂ ಗಂಭೀರವಾದ ಧ್ವನಿಗೆ ಪ್ರಸಿದ್ಧರಾಗಿದ್ದಾರೆ. ರಾಮಾಯಣ ಟ್ರೇಲರ್‌ನಲ್ಲಿ ರಾವಣನ ಪಾತ್ರ ಗರ್ಜಿಸುವಾಗ ಕೇಳಿಸಿದ ಧ್ವನಿ ಕೂಡ ಅಷ್ಟೇ ಗಂಭೀರವಾಗಿ, ಕಡಕ್ ಆಗಿ ಮತ್ತು ಶಕ್ತಿಯುತವಾಗಿತ್ತು. ಈ ಧ್ವನಿಯ ಏರಿಳಿತ ಮತ್ತು ಮಾತುಗಳ ಶೈಲಿ ದೇವರಾಜ್ ಅವರ ಧ್ವನಿಯನ್ನು ಹೋಲುವಂತಿದ್ದದ್ದೇ ವದಂತಿ ಹರಡಲು ಕಾರಣ ಎನ್ನಲಾಗಿದೆ.
2026ರಲ್ಲಿ ಯಶ್ ಸಿನಿಮಾಗಳ ದರ್ಬಾರ್
ಯಶ್ ಅಭಿಮಾನಿಗಳಿಗೆ 2026 ವರ್ಷ ಅತ್ಯಂತ ವಿಶೇಷವಾಗಿರಲಿದೆ. ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಆಗಸ್ಟ್ 26 ರಂದು ತೆರೆಕಾಣಲು ಸಜ್ಜಾಗಿದ್ದರೆ, ರಾಮಾಯಣ ಸಿನಿಮಾ ಇದೇ ವರ್ಷದ ದೀಪಾವಳಿ ಹಬ್ಬದ ವೇಳೆಗೆ ಪ್ರೇಕ್ಷಕರ ಮುಂದೆ ಬರಲಿದೆ.