ಬೆಂಗಳೂರು: ನಟ ದರ್ಶನ್ ಗೆ ಮದುವೆ ಆಹ್ವಾನ ನೀಡದಿರುವ ವಿಚಾರ ಇದೀಗ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸ್ವತಃ ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಜೀವನದ ಹೊಸ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ತಮ್ಮ ವಿಭಿನ್ನ ಹಾಸ್ಯ ಶೈಲಿಯ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿರುವ ಚಿಕ್ಕಣ್ಣ ಆಗಸ್ಟ್ 29 ಮತ್ತು 30ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಮೈಸೂರು ಮೂಲದ ಪಾವನಾ ಗೌಡ ಅವರೊಂದಿಗೆ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ. ಮದುವೆಗೆ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವು ಪ್ರಮುಖರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.
ಆದರೆ ನಟ ದರ್ಶನ್ ಗೆ ಮದುವೆ ಆಹ್ವಾನ ನೀಡದಿರುವ ವಿಚಾರ ಇದೀಗ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸ್ವತಃ ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ. ಚಿಕ್ಕಣ್ಣ ಮದುವೆಗೆ ದರ್ಶನ್ ನ ಆಹ್ವಾನಿಸಲಾಗಿಲ್ಲ ಎಂಬ ವಿಚಾರ ಇದೀಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಣ್ಣ, ದರ್ಶನ್ ಅವರ ಪ್ರಕರಣದಲ್ಲಿ ನಾನು ಸಾಕ್ಷಿ ಆಗಿರುವುದರಿಂದ ಅವರು ಜೈಲಲ್ಲಿ ಇಲ್ಲದಿದ್ದರು ಅವರನ್ನು ಕರೆಯುವಂತಿಲ್ಲ. ಅವರೂ ಬರುತ್ತಿರಲಿಲ್ಲ. ಹೀಗಾಗೇ ಅವರನ್ನು ಕರೆದಿಲ್ಲ. ಪ್ರಕರಣದಲ್ಲಿ ಸಾಕ್ಷಿ ಆಗಿರುವುದರಿಂದ ನಾನು ಅವರ ಬಗ್ಗೆ ಇಷ್ಟೇ ಹೇಳಲು ಸಾಧ್ಯ ಎಂದಿದ್ದಾರೆ.
ಯಶ್ ಹಾಗೂ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ ಚಿಕ್ಕಣ್ಣ, ಯಶ್ ಅವರನ್ನು ನಾನು ಅಣ್ಣ ಎಂದು ಕರೆಯುತ್ತೇನೆ. ಅವರ ಟಾಕ್ಸಿಕ್ ಸಿನಿಮಾವನ್ನು ಮದುವೆ ಆದ ಮೇಲೆ ಹೋಗಿ ನೋಡುತ್ತೇನೆ’ ಎಂದಿದ್ದಾರೆ. ಇನ್ನು, ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ನಟ ಚಿಕ್ಕಣ್ಣ ಹಾಗೂ ಪಾವನಾ ಗೌಡ ಅವರ ಮದುವೆ ನಡೆಯಲಿದೆ. ಈ ವಿವಾಹ ಸಮಾರಂಭದಲ್ಲಿ ಕನ್ನಡದ ನಟ ನಟಿಯರು ಭಾಗಿಯಾಗಲಿದ್ದಾರೆ.