ಮೈಸೂರು: ಹಾಸ್ಯನಟ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯ ಮೂಲದ ಪಾವನಾ ಅವರನ್ನು ಕೈಹಿಡಿದಿದ್ದಾರೆ.ಮೈಸೂರಿನ ಪ್ರಸಿದ್ಧ 'ಸ್ಪೆಕ್ಟ್ರಮ್ ಹಾಲ್' ಎಂದೇ ಕರೆಯಲ್ಪಡುವ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಇವರಿಬ್ಬರ ವಿವಾಹ ಅದ್ಧೂರಿಯಾಗಿ ನೆರವೇರಿದೆ.
ಇಂದು ಬೆಳಗ್ಗೆ 10.45 ರಿಂದ 11.25ರ ಶುಭಮುಹೂರ್ತದಲ್ಲಿ ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.
ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದ್ದು, ಚಿಕ್ಕಣ್ಣ–ಪಾವನಾ ಜೋಡಿಗೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಶುಭ ಹಾರೈಸಿದ್ದಾರೆ.
ಮದುವೆಗೂ ಮುನ್ನ ನಿನ್ನೆ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ ಡಾಲಿ ಧನಂಜಯ್, ತಾರಾ ಅನುರಾಧ, ಶ್ರೀಮುರಳಿ, ರಂಗಾಯಣ ರಘು, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ರು. ನವದಂಪತಿಗೆ ಸಿನಿರಂಗ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಚಿತ್ರರಂಗದಲ್ಲಿ ಹಾಸ್ಯನಟನಾಗಿ ವಿಶಿಷ್ಟ ಛಾಪು ಮೂಡಿಸಿರುವ ಚಿಕ್ಕಣ್ಣ, ಹಲವು ವರ್ಷಗಳಿಂದ ತಮ್ಮ ವಿಭಿನ್ನ ಹಾಸ್ಯ ಶೈಲಿಯ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದಾರೆ. ಪಾವನಾ ಗೌಡ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪರಿಸರ ಸ್ನೇಹಿ ಉದ್ಯಮವನ್ನೂ ನಡೆಸುತ್ತಿದ್ದಾರೆ.