ಬೆಂಗಳೂರು: ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ವೀರಾವೇಷದಿಂದ ಮಾತನಾಡಿ ಅವಹೇಳನಕಾರಿ ಹೇಳಿಕೆ ನೀಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ದ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ದೂರು ನೀಡಿದ್ದಾರೆ.
ಈ ಹಿಂದೆ 'ಕಾಟನ್‌ಪೇಟೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್, ನಿರ್ದೇಶಕ ಪ್ರೇಮ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು. ಪ್ರೇಮ್ ನಿರ್ಮಾಪಕರನ್ನು ಹಾಳುಮಾಡಿದ್ದಾರೆ ಎಂದಿದ್ದ ಅವರು, ನಟ ಧ್ರುವ ಸರ್ಜಾ ಹಾಗೂ ಇಂದಿನ ನಟರ ವರ್ತನೆ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಕುರಿ ಮೇಯಿಸುತ್ತಿದ್ದ ಪ್ರೇಮ್, ಸಿನಿಮಾ ಮಾಡಿದವರೆಲ್ಲಾ ಸರ್ವನಾಶ
'ನೀನು ಊರಿನಲ್ಲಿ ಎಮ್ಮೆ, ಕುರಿ ಮೇಯಿಸುತ್ತಿದ್ದಿದ್ದು ನನಗೆಲ್ಲಾ ಗೊತ್ತಿದೆ. ಇಂದು ನಿರ್ಮಾಪಕರ ತಲೆ ಹೊಡೆದು ನೂರಾರು ಕೋಟಿ ಆಸ್ತಿ ಮಾಡಿ ಆರಾಮಾಗಿದ್ದೀಯಾ. ಆದರೆ ನಿನಗೆ ಸಿನಿಮಾ ಮಾಡಿದ ಯಾವೊಬ್ಬ ನಿರ್ಮಾಪಕನೂ ಉದ್ದಾರ ಆಗಿಲ್ಲ' ಎಂದು ನಿರ್ದೇಶಕ ಪ್ರೇಮ್ ವಿರುದ್ಧ ನಿರ್ಮಾಪಕ ಕನಕಪುರ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದರು.
ಹೀರೋಗಳ ಮೇಲೆ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡ್ತೇವೆ. ಆದರೆ, ಈಗಿನ ಹೀರೋಗಳು ಬೀದಿಯಲ್ಲಿ ಹೋಗಿ ಜನರ ಮುಂದೆ ಕುಣಿದರೆ, ಯಾವ ಜನರು ತಾನೇ ಹಣ ಕೊಟ್ಟು ಅವರ ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಬರುತ್ತಾರೆ ಹೇಳಿ. ಸಿನಿಮಾ ನಾಯಕರು ಮನೆಯಲ್ಲಿ ಕೂರಬೇಕು ಎಂದು ಕನಕಪುರ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದರು.
ಗಂಡ್ಸಾಗಿದ್ರೆ ಎದುರಿಗೆ ಬಾ
'ಎಕ್ಸ್‌ಕ್ಯೂಸ್ ಮೀ ಚಿತ್ರದ ನಿರ್ಮಾಪಕ, ಕರಿಯಾ ಚಿತ್ರದ ನಿರ್ಮಾಪಕರು ಸೇರಿದಂತೆ ಪ್ರೇಮ್ ನಂಬಿ ಸಿನಿಮಾ ಮಾಡಿದವರೆಲ್ಲರೂ ಸರ್ವನಾಶವಾಗಿದ್ದಾರೆ. ನನ್ನ ಹತ್ತಿರವೇ 10 ಲಕ್ಷ ರೂಪಾಯಿ ಪಡೆದು 18 ವರ್ಷಗಳಾಗಿವೆ, ಇವತ್ತಿನವರೆಗೂ ಹಣ ಹಿಂತಿರುಗಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡಲ್ಲ. ನೀನು ಗಂಡಸಾಗಿದ್ದರೆ ನನ್ನ ಎದುರಿಗೆ ಬಾ' ಎಂದು ಬಹಿರಂಗ ಸವಾಲು ಹಾಕಿದರು. ಅಷ್ಟೇ ಅಲ್ಲದೆ, ನಟ ದರ್ಶನ್ ಜೈಲಿಗೆ ಹೋಗಿರುವುದಕ್ಕೂ ಪರೋಕ್ಷವಾಗಿ ಪ್ರೇಮ್ ಅವರೇ ಕಾರಣ ಎಂಬರ್ಥದಲ್ಲಿ ಶ್ರೀನಿವಾಸ್ ಮಾತನಾಡಿ ಅಚ್ಚರಿ ಮೂಡಿಸಿದರು.
ಜೋಗಿ ಪ್ರೇಮ್ ಗರಂ, ದೂರು ದಾಖಲು!
ತಮ್ಮನ್ನು ಹೊರತಾಗಿ ಚಿತ್ರರಂಗದಲ್ಲಿರುವವರೆಲ್ಲ ದುರುಳರು ಎಂಬ ರೀತಿ ಮಾತನಾಡಿದ್ದ ಶ್ರೀನಿವಾಸ್, ಪ್ರೇಮ್, ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಇದೀಗ ನಿರ್ದೇಶಕ ಪ್ರೇಮ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.
ಖುದ್ದಾಗಿ ಫಿಲಂ ಚೇಂಬರ್ಗೆ ಆಗಮಿಸಿದ ನಿರ್ದೇಶಕ ಪ್ರೇಮ್, ನೂತನ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿ ಆಗಿ ಕನಕಪುರ ಶ್ರೀನಿವಾಸ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ದೂರಿನ ವಿವರ
‘ನಿರ್ದೇಶಕ, ನಟ, ನಿರ್ಮಾಪಕನಾದ ನಾನು ಪ್ರೇಮ್, ಆರ್. 25 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿಯವರೆಗೂ ಹಲವಾರು ನಿರ್ಮಾಪಕರ ಜೊತೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಹಲವಾರು ಸದಾಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿದ್ದೇನೆ, ಇಲ್ಲಿಯವರೆಗೂ ನನ್ನ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ. ನಿರ್ಮಾಪಕ ಆರ್. ಎಸ್ ಶ್ರೀನಿವಾಸ್ ರವರು ನನ್ನ ಬಳಿ ಬಂದು ನಿರ್ದೇಶನ ಮಾಡಿ ಕೊಡಲು ಕೇಳಿಕೊಂಡು ನನ್ನ ಬಳಿ ಬಂದು 2004 ರಲ್ಲಿ ಕೆ. ಪಿ. ಶ್ರೀಕಾಂತ್ ಎನ್ನುವವರ ಮೂಲಕ ಆರ್. ಎಸ್ ಶ್ರೀನಿವಾಸ್ ರವರು ಬಂದು ಮುಂಗಡವಾಗಿ 9 ಲಕ್ಷಗಳನ್ನು ನೀಡಿದ್ದರು.
ಅದರಲ್ಲಿ ಚೆಕ್ ಮೂಲಕ 5 ಲಕ್ಷ ಹಾಗೂ ನಗದು ರೂಪದಲ್ಲಿ 4 ಲಕ್ಷಗಳನ್ನು ನೀಡಿದ್ದರು. ಇದಾದನಂತರ ಅವರಿಗಾಗಿ ಸಿನಿಮಾ ಮಾಡಲು ಒಂದು ಆಫೀಸ್ ಮಾಡಿ ಒಂದು ತಂಡವನ್ನು ಕಟ್ಟಿಕೊಂಡು ಚಿತ್ರಕಥೆ ಬರೆಯಲು ಪ್ರಾರಂಭಿಸಿದೆ, ಕಥೆ ಹಾಗೂ ಚಿತ್ರ ಕಥೆ ತಯಾರಾದ ನಂತರ ಹಲವು ಬಾರಿ ಸಂಪರ್ಕಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದೇ ಇದ್ದಾಗ ಒಂದು ವರ್ಷಗಳ ಕಾಲ ನನ್ನ ಹಾಗೂ ನನ್ನ ತಂಡದ ಸಮಯವನ್ನು ವ್ಯರ್ಥ ಮಾಡಿದ್ದಲ್ಲದೆ ಯಾವುದೇ ರೀತಿಯ ಹಣ ಕಾಸನ್ನು ನನ್ನ ಆಫೀಸ್ ನ ವೆಚ್ಚಕ್ಕಾಗಲಿ, ನನ್ನ ಸಹ ನಿರ್ದೇಶಕರಿಗೆ ಹಾಗೂ ತಂಡಕ್ಕಾಗಲಿ ನೀಡಲಿಲ್ಲ.
ಒಂದು ವರ್ಷಗಳ ಕಾಲ ಆಫೀಸ್ ನ ಹಾಗೂ ತಂಡದ ಖರ್ಚು-ವೆಚ್ಚಗಳನ್ನು ನಾನೇ ಬರಿಸಿರುತ್ತೇನೆ, ಇದರಿಂದ ನನಗೆ ವೈಯಕ್ತಿಕವಾಗಿ 15 ರಿಂದ 20 ಲಕ್ಷ ಖರ್ಚು ಮಾಡಿದ್ದೇನೆ ಹಾಗೂ ನನಗೆ ಈ ಸಮಯದಲ್ಲಿ ಹಲವಾರು ನಿರ್ಮಾಪಕರು ನನಗೆ ನಿರ್ದೇಶಿಸಲು ಹಾಗೂ ನನಗೆ ಅವಕಾಶಗಳು ಬಂದಿದ್ದವು ನಾನು ಇವರ ಚಿತ್ರ ನಿರ್ದೇಶನ ಮಾಡಲು ಬಂದಂತಹ ಈ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಲ್ಲದೆ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದ್ದೇನೆ’ ಎಂದು ದೂರಿನಲ್ಲಿ ಹೇಳಿದ್ದಾರೆ.