ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಮ್ಮ ನೆನಪೊಂದನ್ನ ಹಂಚಿಕೊಂಡಿದ್ದಾರೆ. ಕಹಿ ಘಟನೆಯನ್ನ ನೆನಪಿಸಿಕೊಂಡ ಜಗ್ಗೇಶ್, ನಟಿ ಹಾಗೂ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರ ಬಗ್ಗೆ ಅಪಾರ ಗೌರವವನ್ನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಲಹರಿ ವೇಲು ಮಗನ ಮದುವೆ ಸಮಾರಂಭದಲ್ಲಿ ಜಗ್ಗೇಶ್ ಅವರು ಊಟ ಮಾಡುವಾಗ ಅಲ್ಲಿಗೆ ನಟ ಶಿವರಾಜ್‌ಕುಮಾರ್ ಬಂದಿದ್ದರು. ಕೂಡಲೇ ಎದ್ದು ನೋಡಿ ಉಭಯ ಕುಶಲೋಪರಿ ಮಾತುಕತೆ ನಡೆಸಿದ್ದರು. ಶಿವಣ್ಣ ಬಂದಾಗ ಊಟ ಬಿಟ್ಟು ಎದ್ದು ನಿಂತ ಜಗ್ಗೇಶ್ ಎಂದು ಬರೆದು ಫೋಟೊವೊಂದು ವೈರಲ್ ಆಗ್ತಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ದಶಕದ ಹಿಂದೆ ಜಗ್ಗೇಶ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿತ್ತು. ಆಗ ಜಗ್ಗೇಶ್ ಪರ ಅಣ್ಣಾವ್ರು, ಜಯಮಾಲಾ ನಿಂತಿದ್ದರು. ಆದರೆ ರಾಜ್‌ಕುಮಾರ್ ನಿಮಗೆ ಗೊತ್ತಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಂತಹವರಿಗೆ ಜಗ್ಗೇಶ್ ಟ್ವೀಟ್ ಮಾಡಿ ಕಿವಿಮಾತು ಹೇಳಿದ್ದಾರೆ.
ಎರಡು ಚಿತ್ರ ನಿಮ್ಮೊಂದಿಗೆ ಹಂಚಿಕೊಳ್ಳಲು ಮುಖ್ಯ ಕಾರಣ. ಸಹೋದರಿ ಜಯಮಾಲ ನನ್ನ ಬದುಕಿನ ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತವರು ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. "ರಾಜಕುಮಾರ್ ನಿಂಗೆ ಗೊತ್ತಾ ಅಂತ ಹೇಳ್ತಾರೆ? ಮಕ್ಕಳೆ ನಾನು ದೇಹ ಚೆನ್ನಾಗಿ ಇಟ್ಟು ತಲೆಗೆ ಡೈ ಹಾಕಿ 63 ವರ್ಷ ಹಿಂದೆ ತಂದಮಾತ್ರಕ್ಕೆ ನಿಮ್ಮ ವಯಸ್ಸಿನವನು ಅನ್ಕೊಬೇಡಿ. ನಿಮ್ಮ ಅಜ್ಜ ಅಜ್ಜಿ ತಂದೆ ತಾಯಿ ಕೇಳಿ ಒಬ್ಬ ಹಳ್ಳಿ ಹುಡುಗ ಹೇಗೆ ನವರಸನಾಯಕ ಆದ ಕಥೆ ಹೇಳುತ್ತಾರೆ" ಎಂದು ಜಗ್ಗೇಶ್ ಚಾಟಿ ಬೀಸಿದ್ದಾರೆ.
ಜಗ್ಗೇಶ್ ಎರಡನೆಯ ಫೋಟೊ ಬಗ್ಗೆ ಮಾತನಾಡಿ "ಶಿವಣ್ಣ ಬಂದಾಗ ನನ್ನ ಊಟ ಮುಗಿದು ಕೈ ತೊಳೆದಿದ್ದೆ. ಅವರ ಕಂಡಾಗ ಅಣ್ಣನಂತೆ ಗೌರವಿಸುವ ನಾನು ಎದ್ದು ನಿಂತು ಗೌರವ ನೀಡಿದೆ. ಬದಲಾಗಿ ಊಟ ಬಿಟ್ಟು ನಿಲ್ಲಲಿಲ್ಲಾ. ಅವರು ನನ್ನ ದೇವರ ಮಗ ಜೊತೆಗೆ ನನ್ನ ಕಷ್ಟಕಾಲದಲ್ಲಿ ಅವರ ಜೊತೆ ನಟಿಸಲು 'ರಣರಂಗ' ಚಿತ್ರದಲ್ಲಿ ಇನ್ನೊಬ್ಬ ನಟನ ಬದಲಿಗೆ ನಾನು ಬೇಕೆ ಬೇಕು ಎಂದು ಅವಕಾಶ ಕೊಡಿಸಿದ ಬಂಧು.
ನಾವು ಒಬ್ಬರ ಬಗ್ಗೆ ಮಾತಾಡ ಬೇಕಾದರೆ ಅವರು ತಿಳಿದವರೋ, ಸ್ನೇಹಿತರೋ, ಬಂಧುಗಳೋ ಆಗಿರಬೇಕು ಆಗ ನಿಮ್ಮ ಅಣಕದ ಮಾತಿಗೆ ಅರ್ಥವಿರುತ್ತದೆ" ಎಂದು ಜಗ್ಗೇಶ್ ತಿಳಿ ಹೇಳಿದ್ದಾರೆ. "ಹಿರಿಯರ ಮಾತು ಸತ್ಯವಾಗುತ್ತೆ. ತನ್ನ ಕೇಡು ತನ್ನ ತಿಂದು ಅರಗು ಬಂಗಾರ ತಿನ್ನುತ್ತೆ ಅರ್ಥಾತ್ ನೀವು ಇನ್ನೊಬರಿಗೆ ಅಣಕ ಕೇಡು ಕೆಟ್ಟ ಮಾತು ಬಳಸಿದರೆ ಬರೆದಿಟ್ಟುಕೊಳ್ಳಿ ನಿಮ್ಮ ಅದೃಷ್ಟ ಕರಗಿ ಕಷ್ಟ ಸರಮಾಲೆ ಆವರಿಸಿ ನಿಮ್ಮ ಬೆಳವಣಿಗೆ ಸುಟ್ಟುಹಾಕುತ್ತೆ" ಎಂದು ಜಗ್ಗೇಶ್ ಎಚ್ಚರಿಕೆ ಕೊಟ್ಟಿದ್ದಾರೆ.