ಮಂಡ್ಯ: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ‘ತಿಥಿ’ ಸಿನಿಮಾದ ‘ಸೆಂಚುರಿಗೌಡ’ ಪಾತ್ರದಿಂದ ಖ್ಯಾತಿ ಪಡೆದಿದ್ದ ಪಾಂಡವಪುರ ತಾಲ್ಲೂಕಿನ ಸಿಂಗ್ರೇಗೌಡನಕೊಪ್ಪಲು ಗ್ರಾಮದ ಸಿಂಗ್ರೀಗೌಡ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಮಂಡ್ಯ ಭಾಷೆ ಮತ್ತು ನಟನೆ ಮೂಲಕ ಚಿತ್ರರಸಿಕರನ್ನು ರಂಜಿಸಿದ್ದ ಸಿಂಗ್ರೀಗೌಡರನ್ನು ತಿಥಿ ಸಿನಿಮಾದ ನಂತರ ಎಲ್ಲರೂ ‘ಸೆಂಚುರಿಗೌಡ’ ಎಂದೇ ಕರೆಯುತ್ತಿದ್ದರು. ಕೆಲವು ತಿಂಗಳ ಹಿಂದೆ ಬಿದ್ದ ಪರಿಣಾಮ ಸೊಂಟದ ಮೂಳೆ ಮುರಿದಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ತಿಥಿ, ತರ್ಲೆ ವಿಲೇಜ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೋಮವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸಿಂಗ್ರಿಗೌಡ ಅವರು ಜನಸಾಮಾನ್ಯರ ಮನಸ್ಸಿನಲ್ಲಿ ಸೆಂಚುರಿಗೌಡ ಎಂದೇ ಖ್ಯಾತಿ ಪಡೆದಿದ್ದರು. ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನೂರಕ್ಕೂ ಹೆಚ್ಚು ವಯಸ್ಸಾಗಿದ್ದ ಸೆಂಚುರಿಗೌಡ ಅವರು ಜನವರಿ 4 ರ ರಾತ್ರಿ ಕೊನೆಯುಸಿರು ಎಳೆದಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರಿಗೌಡನ ಕೊಪ್ಪಲಿನವರು ಸೆಂಚುರಿಗೌಡ ಅಲಿಯಾಸ್ ಸಿಂಗ್ರಿಗೌಡ. ತಿಥಿ ಸಿನಿಮಾದ ಬಳಿಕ ಸಿಂಗ್ರಿಗೌಡ ಅವರು ಸೆಂಚುರಿಗೌಡ ಎಂದು ಬದಲಾಗಿದ್ದರು. 2015ರಲ್ಲಿ ರಿಲೀಸ್ ಆಗಿದ್ದ ತಿಥಿ ಸಿನಿಮಾದ ನಂತರ ಅವರಿಗೆ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬಂದಿದ್ದವು. ಆದರೆ, ಅವರು ಕೆಲವೊಂದು ಸಿನಿಮಾದಲ್ಲಿ ನಟಿಸಿದ್ದರು.