ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಟೀಸರ್ ಕುರಿತು ನಟ ಕಿಚ್ಚಾ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದಕ್ಕೆ ನಟ ಯಶ್ ಕೂಡ ಧನ್ಯವಾದಗಳು ಸರ್.. ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್ ಜನವರಿ 8ರಂದು ರಿಲೀಸ್ ಆಗಿತ್ತು. ಅವರ ಬರ್ತ್ಡೇ ಪ್ರಯುಕ್ತ ಈ ಟೀಸರ್ ರಿಲೀಸ್ ಆಗಿ ಅಬ್ಬರಿಸಿತ್ತು. ಈ ಟೀಸರ್ ಈವರೆಗೆ 84 ಮಿಲಿಯನ್ ವೀಕ್ಷಣೆ ಪಡೆದಿದ್ದು, ಈ ಟೀಸರ್ ನೋಡಿದ ನಟ ಕಿಚ್ಚಾ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದಿರುವ ನಟ ಸುದೀಪ್, ‘ಯಶ್ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದಿದ್ದಾರೆ.
ಈ ಟ್ವೀಟ್ಗೆ ನಟ ಯಶ್ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಧನ್ಯವಾದಗಳು ಸರ್. ಏಕಾಗ್ರತೆ ಅಥವಾ ಸಮಗ್ರತೆಯನ್ನು ಕಳೆದುಕೊಳ್ಳದೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಉತ್ತಮವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನನ್ನ ಹಿರಿಯರಿಂದ ಕಲಿತಿದ್ದೇನೆ. ಆ ಹಿರಿಯರಲ್ಲಿ ನೀವು ಒಬ್ಬರು’ ಎಂದು ಅವರು ಉತ್ತರಿಸಿದ್ದಾರೆ. ಸುದೀಪ್ ಮತ್ತು ಯಶ್ ಟ್ವೀಟ್ ಗಳು ಇದೀಗ ವೈರಲ್ ಆಗುತ್ತಿವೆ.
7 ವರ್ಷಗಳ ಹಿಂದಿನ ವಿವಾದ
ಈ ಹಿಂದೆ ಈ ಇಬ್ಬರೂ ನಟರ ನಡುವೆ ಸರ್ ವಿವಾದ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. 7 ವರ್ಷಗಳ ಹಿಂದೆ ಸುದೀಪ್ ನಟ ಯಶ್ ಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಇದಕ್ಕೆ ಉತ್ತರಿಸುವ ವಿಡಿಯೋದಲ್ಲಿ ಮಾತನಾಡಿದ್ದ ನಟ ಯಶ್, ಸುದೀಪ್ ಅವರಿಗೆ 'ಸರ್' ಎಂದು ಯಶ್ ಗೌರವ ಕೊಟ್ಟಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆದು ವಿವಾದ ಸೃಷ್ಟಿಯಾಗಿತ್ತು. ಬಳಿಕ ಆ ವಿಚಾರ ತಣ್ಣಗಾಗಿತ್ತು.
ಅಂದು ಯಶ್ ವೀಡಿಯೋ ಮಾಡಿ ಮಾತನಾಡುವ ಭರದಲ್ಲಿ ಸುದೀಪ್ ಸರ್ ಎಂದು ಕರೆದಿರಲಿಲ್ಲ. ಅದಕ್ಕೆ ಕಿಚ್ಚ ಕೂಡ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಯಶ್ ಸರ್ ಎಂದು ಕರೆದಿರುವುದು ಮತ್ತೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಅಂದೇನಾಗಿತ್ತು?
2018ರಲ್ಲಿ ಅಂದಿನ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಫಿಟ್ನೆಸ್ ಕುರಿತು ಅಭಿಯಾನ ಆರಂಭಿಸಿದ್ದರು. ತಾವು ಫಿಟ್ ಆಗಿ ಇರಲು ಮಾಡುವ ವರ್ಕ್ಔಟ್ ವೀಡಿಯೋ ಶೇರ್ ಮಾಡಿ ಬಳಿಕ ಅದೇ ರೀತಿ ತಮ್ಮ ಆಪ್ತರಿಗೆ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಚಾಲೆಂಜ್ ಕೊಟ್ಟಿದ್ದರು. ಸಾಕಷ್ಟು ಜನ ಸೆಲೆಬ್ರೆಟಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ತಾವು ಚಾಲೆಂಜ್ ಸ್ವೀಕರಿಸಿ ಬಳಿಕ ಬೇರೆಯವರಿಗೆ ದಾಟಿಸಿದ್ದರು. ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಕ್ರಿಕೆಟರ್ ವಿನಯ್ ಕುಮಾರ್ ಹಾಕಿದ್ದ ಚಾಲೆಂಜ್ ಅನ್ನು ನಟ ಸುದೀಪ್ ಸ್ವೀಕರಿಸಿ ಗೆದ್ದಿದ್ದರು. ಬಳಿಕ ರಿತೇಶ್ ದೇಶ್ಮುಖ್ , ಸೋಹಿಲ್ ಖಾನ್, ಪ್ರಿಯಾ ಸುದೀಪ್, ಯಶ್ ಹಾಗೂ ಶಿವಣ್ಣನಿಗೆ ಸುದೀಪ್ ಇದೇ ಚಾಲೆಂಜ್ ಕೊಟ್ಟಿದ್ದರು. ಚಾಲೆಂಜ್ ಸ್ವೀಕರಿಸಿ ಯಶ್ ಸಣ್ಣ ಟ್ವಿಸ್ಟ್ ಕೊಟ್ಟಿದ್ದರು. ತಾವು ವರ್ಕೌಟ್ ಮಾಡದೇ ತಮ್ಮ ಬಾಲ್ಯದ ಸ್ನೇಹಿತನಿಂದ ಮಾಡಿಸಿದ್ದರು. ಈ ಬಗ್ಗೆ ವೀಡಿಯೋ ಮಾಡಿ ಮಾತನಾಡಿದ್ದರು.
"ಹಾಯ್ ಸುದೀಪ್, ನೀವು ನನಗೆ ಒಂದು ಚಾಲೆಂಜ್ ಕೊಟ್ಟಿದ್ದೀರಾ.. ನಾವು ಕಲಾವಿದರು ಯಾವಾಗಲೂ ವರ್ಕ್ಔಟ್ ಮಾಡ್ತೀವಿ. ಆದರೆ ನಮ್ಮ ಸ್ನೇಹಿತ ಚೇತನ್ ಅಂತ ಇದ್ದಾನೆ. ಅವನು ಲೈಫ್ ಅಲ್ಲೇ ಫಿಟ್ ಆಗಿ ಇರೋಕೆ ಸಾಧ್ಯ ಇಲ್ಲ. ಅವನ ಕೈಯಲ್ಲಿ ಈ ಟಾಸ್ಕ್ ಮಾಡಿಸ್ತೀನಿ" ಎಂದು ಯಶ್ ಹೇಳಿದ್ದರು. ಎಲ್ಲಾ ಸರಿ ಆದರೆ ಯಶ್ ತಮಗಿಂತ ಚಿತ್ರರಂಗದಲ್ಲಿ ಹಿರಿಯರಾಗಿದ್ದ ಸುದೀಪ್ ಅವರಿಗೆ ಗೌರವ ಕೊಡಲಿಲ್ಲ, "ಹಾಯ್ ಸುದೀಪ್" ಎಂದು ಕರೆದಿದ್ದಾರೆ, 'ಸರ್' ಎಂದು ಕರೆಯಬೇಕಿತ್ತು, ನಿನ್ನೆ ಮೊನ್ನೆ ಬಂದ ನಟ ಯಶ್ ಹೀಗೆ ಮಾಡಬಹುದಾ? ಇದಕ್ಕೆ ಕ್ಷಮೆ ಕೇಳಲೇಬೇಕು ಎಂದು ಸುದೀಪ್ ಅಭಿಮಾನಿಗಳು ಪಟ್ಟು ಹಿಡಿದಿದ್ದರು.