ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭದಿಂದಲೂ ಒಂದಿಲ್ಲೊಂದು ವಿಚಾರಗಳಿಗೆ ಸದ್ದಾಗುತ್ತಲೇ ಇದೆ. ಫಿನಾಲೆಗೆ ಇನ್ನೊಂದು ವಾರ ಬಾಕಿ ಉಳಿದಿರುವಾಗ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಈ ಬಾರಿ ವಿನ್ನರ್ ಯಾರೆಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್ ವಿರುದ್ಧವೂ ಇದೀಗ ವ್ಯಾಪಕ ಟೀಕೆ ಕೇಳಿಬರುತ್ತಿದೆ. ಕಳೆದ ಶನಿವಾರ ಮತ್ತು ಭಾನುವಾರ ನಡೆದ ಕಿಚ್ಚನ ಪಂಚಾಯಿತಿಯಲ್ಲಿ ಧ್ರುವಂತ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದೇ ಇದಕ್ಕೆ ಕಾರಣ.
ಸಾಮಾನ್ಯವಾಗಿ ಪ್ರತಿ ವಾರ ಚೆನ್ನಾಗಿ ಆಡುವ ಮತ್ತು ಕಿಚ್ಚನ ಮನಸ್ಸು ಗೆಲ್ಲುವ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಸಿಗುತ್ತದೆ. ಈ ವೇಳೆ ಚಪ್ಪಾಳೆ ತಟ್ಟುವ ಸುದೀಪ್, ಸ್ಪರ್ಧಿಗಳ ಆಟವನ್ನು ಹೊಗಳುತ್ತಾರೆ ಮತ್ತು ವೈಯಕ್ತಿಕವಾಗಿ ಕಿಟ್ ಅನ್ನು ಸಹ ನೀಡುತ್ತಾರೆ. ಈ ಆವೃತ್ತಿಯ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಇಡೀ ಸೀಸನ್‌ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಸೀಸನ್‌ನ ಕಿಚ್ಚನ ಚಪ್ಪಾಳೆ ನೀಡಿದ್ದರು. ಆದರೆ, ಸುದೀಪ್ ಅವರ ಈ ನಿರ್ಧಾರಕ್ಕೆ ವೀಕ್ಷಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.
ಈ ಸೀಸನ್‌ನಲ್ಲಿ ಉತ್ತಮವಾಗಿ ಆಡಿದ್ದೀರಿ ಮತ್ತು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದೀರಿ. ಅದಕ್ಕಾಗಿ ನಾನು ಮೊದಲ ಬಾರಿಗೆ ಸೀಸನ್‌ನ ಚಪ್ಪಾಳೆ ನೀಡುತ್ತಿದ್ದೇನೆ ಎಂದು ಸುದೀಪ್ ಹೇಳಿದ್ದರು. ಹೀಗಾಗಿ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಧ್ರುವಂತ್‌ಗಿಂತ ಗಿಲ್ಲಿ ಮುಂದಿದ್ದಾನೆ ಎಂದು ಕಿಡಿಕಾರಿದ್ದರು. ಇದರ ಪರಿಣಾಮವಾಗಿ ಬಿಗ್ ಬಾಸ್ ಆಯೋಜಕರು ನಿರ್ಧಾರ ಬದಲಿಸಿದ್ದು, ಧ್ರುವಂತ್ ಅವರಿಗೆ ಸೀಸನ್‌ನ ಚಪ್ಪಾಳೆ ಬದಲು ಈ ವಾರದ ಕಿಚ್ಚನ ಚಪ್ಪಾಳೆ ನೀಡಲಾಗಿದೆ ಎಂದು ಹೇಳಿದ್ದಾರೆ.
‘ಮೊಟ್ಟ ಮೊದಲ ಕಿಚ್ಚನ ಸೀಸನ್ ಚಪ್ಪಾಳೆ’ ಎಂದು ಮೊದಲಿಗೆ ಧ್ರುವಂತ್ ಅವರ ಫೋಟೊವನ್ನು ‘ಕಲರ್ಸ್ ಕನ್ನಡ’ ವಾಹಿನಿಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು. ಬಳಿಕ ಆ ಪೋಸ್ಟ್ ಅನ್ನು ಅಳಿಸಲಾಗಿದ್ದು, ‘ಈ ವಾರದ ಕಿಚ್ಚನ ಚಪ್ಪಾಳೆ’ ಎಂದು ಹೊಸ ಪೋಸ್ಟ್ ಹಾಕಲಾಗಿದೆ.
ಈ ಪೋಸ್ಟ್‌ಗೆ ಹಲವಾರು ಬಳಕೆದಾರರು ಪ್ರತಿಕ್ರಿಯಿಸಿದ್ದು, 'ಸೀಸನ್‌ನಾ ಚಪ್ಪಾಳೆ ಡಿಲೀಟ್ ಮಾಡಿ ವಾರದ ಚಪ್ಪಾಳೆ ಅಂತ ಹಾಕಿದ್ದಾರೆ. ಗುಡ್ ಇವಾಗಾದ್ರು ಅರ್ಥ ಆಯ್ತು ಕಲರ್ಸ್ ಕನ್ನಡ ವಾಹಿನಿ ಗೆ' ಎಂದು ಒಬ್ಬರು ಬರೆದಿದ್ದರೆ, 'ಕಳಪೆ ಎಪಿಸೋಡ್ ನಡೆಸಿದ ಕಿಚ್ಚನಿಗೆ ನಮ್ಮೆಲ್ಲರ ಚಪ್ಪಾಳೆ' ಎಂದು ಮತ್ತೊಬ್ಬರು ಬರೆದಿದ್ದಾರೆ. ಮಿಡ್ ವೀಕ್‌ನಲ್ಲಿ ಧ್ರುವಂತ್ ಎಲಿಮಿನೇಟ್ ಆಗ್ಬೇಕು, ಕಿಚ್ಚನ ಚಪ್ಪಾಳೆ ಹೋಸೇಲ್ ದರದಲ್ಲಿ ರಿಟೇಲ್ ಮಾರಾಟ, ಯಾಕ್ರೋ ನೀವ್ ಹಿಂಗೇ ಈ ನಾಗವಲ್ಲಿ ದೃವಂತ್ ಗೆ ಸೀಸನ್ ಚಪ್ಪಾಳೆ ಅಂತ ಪೋಸ್ಟ್ ಮಾಡಿದ್ರಿ ಎಲ್ರೋ ಅದು ಪೋಸ್ಟ್ ಕಾಣಿಸ್ತಿಲ್ಲ ಎಂದೆಲ್ಲ ಹಲವರು ಕಮೆಂಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸದ್ಯಕ್ಕೆ ಗಿಲ್ಲಿ ನಟನ ಹಾವಳಿಯೇ ಜೋರಾಗಿದೆ. ಗಿಲ್ಲಿ ಬೆಂಬಲಿಗರು ಈ ಬಾರಿ ಗಿಲ್ಲಿಯೇ ವಿನ್ನರ್ ಎಂದು ಈಗಾಗಲೇ ಘೋಷಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ಪರ್ಧಿಗಳು ಕೂಡ ಗಿಲ್ಲಿಗೆ ಸಿಗುತ್ತಿರುವ ಬೆಂಬಲ ನೋಡಿ ದಂಗಾಗಿದ್ದಾರೆ ಮತ್ತು ಈ ಬಾರಿ ಗಿಲ್ಲಿಯೇ ಗೆಲ್ಲುವುದು ಎಂದು ಹೇಳುತ್ತಿದ್ದಾರೆ.