ಕನ್ನಡದ ಜನಪ್ರಿಯ ಹಾಗೂ ಮೋಸ್ಟ್ ಗ್ಲಾಮರಸ್ ನಟಿ ಶರ್ಮಿಳಾ ಮಾಂಡ್ರೆ ಅವರು ಹಸೆಮಣೆ ಏರಲು ಸಿದ್ಧರಾಗಿದ್ದು, ತಮಿಳುನಾಡಿನ ಸೊಸೆಯಾಗಲಿದ್ದಾರೆ.
ಹೌದು, ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸಿರುವ ಶರ್ಮಿಳಾ ಮಾಂಡ್ರೆ ಅವರ ವಿವಾಹ ನಿಶ್ಚಿತಾರ್ಥ ಜೂನ್ 25ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಲಿದೆ.
ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂಧರಮ್ ಅವರ ಕೈ ಹಿಡಿಯಲಿದ್ದಾರೆ. ಸುಧನ್ ಅವರು ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಸಿನಿಮಾ ‘ಮಹಾರಾಜ’ದ ನಿರ್ಮಾಪಕ ಆಗಿದ್ದಾರೆ.
‘ಮಹಾರಾಜ’ ಮಾತ್ರವಲ್ಲದೆ ಇತ್ತೀಚೆಗೆ ಸೂಪರ್ ಹಿಟ್ ಆದ ತಮಿಳು ಸಿನಿಮಾ ‘ತಾಕ್ ಕಿಳವಿ’ಗೂ ಇವರು ಸಹ ನಿರ್ಮಾಪಕರಾಗಿದ್ದಾರೆ. ಜೂನ್ 25 ರಂದು ಶರ್ಮಿಳಾ ಹಾಗೂ ಸುಧನ್ ಅವರ ನಿಶ್ಚಿತಾರ್ಥ ನಡೆಯಲಿದ್ದು, ಮದುವೆ ಸಹ ಇದೇ ವರ್ಷದಲ್ಲಿ ನೆರವೇರಲಿದೆ.
ಸುಧನ್ ಅವರು ಪ್ಯಾಷನ್ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು, ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
2007 ರಲ್ಲಿ ಬಿಡುಗಡೆ ಆದ ‘ಸಜನಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ಶರ್ಮಿಳಾ ಮಾಂಡ್ರೆ ಅವರು, ಹಲವು ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ತಮಿಳಿನ ‘ಅದೃಷ್ಟಶಾಲಿ’ ಮತ್ತು ‘ದಸರಾ’ ಹೆಸರಿನ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಶರ್ಮಿಳಾ ಮಾಂಡ್ರೆ ನಟಿ ಮಾತ್ರವೇ ಅಲ್ಲದೆ ನಿರ್ಮಾಪಕಿಯೂ ಆಗಿದ್ದು ತಮಿಳಿನಲ್ಲಿ ನಾಲ್ಕು ಸಿನಿಮಾ ನಿರ್ಮಿಸಿದ್ದಾರೆ. ಕನ್ನಡದಲ್ಲಿ ‘ದಸರಾ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ‘ಕಾದಲ್ ಕೊಂಜಂ ತೂಕಲಾ’ ಹೆಸರಿನ ತಮಿಳು ಸಿನಿಮಾವನ್ನೂ ಸಹ ನಿರ್ಮಾಣ ಮಾಡುತ್ತಿದ್ದಾರೆ.