ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾವನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಶ್ಲಾಘಿಸಿದ್ದು, "ಪ್ರತಿಯೊಬ್ಬ ಭಾರತೀಯ ನೋಡಲೇಬೇಕಾದ ಚಿತ್ರ" ಎಂದು ತಿಳಿಸಿದ್ದಾರೆ.
ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ, ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ಚಿತ್ರದ ಹಿಂದಿರುವ ತಂಡವನ್ನು ಅಭಿನಂದಿಸಿದ ಹಿರಿಯ ನಟ, ಬಾಕ್ಸ್ ಆಫೀಸ್‌ನಲ್ಲಿನ ಚಿತ್ರದ ಓಟವನ್ನೂ ಶ್ಲಾಘಿಸಿದರು.
ಎಂಥ ಚಿತ್ರ. ಧುರಂಧರ್2! ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್! ರಣ್ವೀರ್ ಮತ್ತು ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ. ಜೈ ಹಿಂದ್" ಎಂದು ರಜನಿ ಟ್ವೀಟ್ ಮಾಡಿದ್ದಾರೆ.
2025ರ ಬ್ಲಾಕ್ಬಸ್ಟರ್ ಸಿನಿಮಾವಾದ ಧುರಂಧರ್ ಚಿತ್ರದ ಸೀಕ್ವೆಲ್ ಆಗಿರುವ 'ಧುರಂಧರ್: ದಿ ರಿವೇಂಜ್' ಸಿನಿಮಾ, ಅದ್ಭುತ ಅಭಿನಯ ಮತ್ತು ದೇಶಭಕ್ತಿಯ ವಿಷಯಗಳಿಂದ ಹೆಚ್ಚಿನ ಗಮನ ಸೆಳೆಯುತ್ತಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆ ರಜನಿಕಾಂತ್ ಅಭಿಪ್ರಾಯ ಹೊರಬಿದ್ದಿದ್ದು, ಫಿಲ್ಮ್ಮೇಕರ್ ಅದಿತ್ಯ ಧರ್ ಮನದುಂಬಿ ಧನ್ಯವಾದ ಅರ್ಪಿಸಿದ್ದಾರೆ.
'ಸರ್, ನಾವೆಲ್ಲರೂ 'ಮನರಂಜನೆ'ಯನ್ನು ಒಂದೇ ಮಾನದಂಡದಿಂದ ಅಳೆಯುತ್ತಾ ಬೆಳೆದಿದ್ದೇವೆ, ಅದು ನೀವು. ದಶಕಗಳಿಂದ ನಾವು ಶಿಳ್ಳೆ ಹೊಡೆಯುವುದು, ನಗುವುದು ಮತ್ತು ಅಳುವಂತೆ ಮಾಡಿದ್ದೀರಿ. ಅದೇ ಸ್ವಾಗ್ನೊಂದಿಗೆ ನಿಮ್ಮ ಕೆಲಸವನ್ನು ಮುಂದುವರಿಸಿದ್ದೀರಿ. ಅದು ಪ್ಯೂರ್ ಮ್ಯಾಜಿಕ್. ನೀವು ಧುರಂಧರ್ 2 ಅನ್ನು ನೋಡಲೇಬೇಕಾದ ಚಿತ್ರ ಎಂದು ಕರೆದಿರುವುದು ನನ್ನ ಜೀವನದ ಬಿಗ್ಗೆಸ್ಟ್ ಸೂಪರ್‌ಸ್ಟಾರ್ ಕ್ಷಣದಂತೆ ಭಾಸವಾಗುತ್ತಿದೆ. ನಮಗೆಲ್ಲರಿಗೂ ದೊಡ್ಡ ಕನಸು ಕಾಣಲು ಕಲಿಸಿದ ವ್ಯಕ್ತಿಯ ಆಶೀರ್ವಾದದಂತೆ ಭಾಸವಾಗುತ್ತಿದೆ. ಪದಗಳಿಗೂ ಮೀರಿದ ಕೃತಜ್ಞತಾ ಭಾವ. ಇದು ನೇರವಾಗಿ ಹೃದಯಕ್ಕೆ ತಲುಪಿದೆ. ಜೈ ಹಿಂದ್'' ಎಂದು ನಿರ್ದೇಶಕ ಆದಿತ್ಯ ಧರ್ ಹೇಳಿದ್ದಾರೆ.