ಮುಂಬೈ: ನನಗೆ ನೆನಪಿರುವಂತೆ ಸೀತಾ ಮಾತೆ ರಾಕ್ಷಸರ ವಿರುದ್ಧ ಕತ್ತಿ ಹಿಡಿದು ಹೋರಾಡಿದ್ದು ನೆನಪಿಲ್ಲ ಎಂದು ಖ್ಯಾತ ನಟಿ ದೀಪಿಕಾ ಚಿಖ್ಲಿಯಾ ಹೇಳಿದ್ದಾರೆ.
ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಸಿನಿಮಾದ ದೃಶ್ಯಗಳು, ಪಾತ್ರಗಳ ಚಿತ್ರಣ ಹಾಗೂ ಕೆಲವು ಪ್ರಮುಖ ಸನ್ನಿವೇಶಗಳು ಈಗಾಗಲೇ ಚರ್ಚೆಗೆ ಗ್ರಾಸವಾಗಿವೆ. ಅದರಲ್ಲೂ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ ರಾಕ್ಷಸರ ವಿರುದ್ಧ ಕತ್ತಿ ಹಿಡಿದು ಹೋರಾಡುವ ದೃಶ್ಯಕ್ಕೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದೀಗ 1987ರಲ್ಲಿ ಪ್ರಸಾರವಾಗಿದ್ದ ರಾಮಾನಂದ ಸಾಗರ್ ಅವರ ಜನಪ್ರಿಯ 'ರಾಮಾಯಣ' ಧಾರಾವಾಹಿಯಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದ ನಟಿ ದೀಪಿಕಾ ಚಿಖ್ಲಿಯಾ ಕೂಡ ಈ ದೃಶ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ತಾವು ಓದಿರುವ ರಾಮಾಯಣದ ಆವೃತ್ತಿಗಳಲ್ಲಿ ಸೀತೆ ಈ ರೀತಿ ರಾಕ್ಷಸರ ವಿರುದ್ಧ ಹೋರಾಡುವ ಪ್ರಸಂಗ ನೆನಪಿಲ್ಲ ಎಂದು ಅವರು ಹೇಳಿದ್ದಾರೆ.
'ನನಗೆ ಅಂತಹ ದೃಶ್ಯ ನೆನಪಿಲ್ಲ'
'ದಿ ಫ್ರೀ ಪ್ರೆಸ್ ಜರ್ನಲ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದೀಪಿಕಾ ಚಿಖ್ಲಿಯಾ, "ನನಗೆ ನಿಜವಾಗಿಯೂ ಇದರ ಬಗ್ಗೆ ತಿಳಿದಿಲ್ಲ. ನಮ್ಮ ರಾಮಾಯಣದ ಬಹುಪಾಲು ಕಥೆಗಳು ವಾಲ್ಮೀಕಿ ರಾಮಾಯಣ ಮತ್ತು ತುಳಸಿದಾಸರ ರಾಮಾಯಣವನ್ನು ಆಧರಿಸಿವೆ. ಇವೆರಡರಲ್ಲಿ ಸೀತೆ ಈ ರೀತಿ ಹೋರಾಡುವ ದೃಶ್ಯಗಳಿದ್ದವು ಎಂಬುದು ನನಗೆ ನೆನಪಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ನಮ್ಮ ದೇಶದಲ್ಲಿ 300ಕ್ಕೂ ಹೆಚ್ಚು ರಾಮಾಯಣದ ಆವೃತ್ತಿಗಳಿವೆ. ಪ್ರತಿಯೊಂದು ರಾಮಾಯಣದ ಕಥೆಯೂ ಇನ್ನೊಂದಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಹೀಗಾಗಿ ಚಿತ್ರತಂಡಕ್ಕೆ ಗೊತ್ತಿರುವ ಬೇರೆ ಯಾವುದಾದರೂ ರಾಮಾಯಣದ ಆವೃತ್ತಿಯಿಂದ ಈ ದೃಶ್ಯವನ್ನು ತೆಗೆದುಕೊಂಡಿರಬಹುದು" ಎಂದು ಹೇಳಿದ್ದಾರೆ.
ಅಲ್ಲದೆ, ನಿರ್ದೇಶಕ ನಿತೇಶ್ ತಿವಾರಿ ಅವರ ಸಂಪೂರ್ಣ 'ರಾಮಾಯಣ' ಸಿನಿಮಾವನ್ನು ತಾವು ಇನ್ನೂ ವೀಕ್ಷಿಸಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಸಾಯಿ ಪಲ್ಲವಿ ಅವರ ಕತ್ತಿ ಹಿಡಿದು ಹೋರಾಡುವ ದೃಶ್ಯದ ಒಂದು ತುಣುಕನ್ನು ಮಾತ್ರ ನೋಡಿದ್ದೇನೆ. ದೀಪಾವಳಿ ಬಳಿಕ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ.
ಏನಿದು ಸೀತೆಯ ಯುದ್ಧದ ದೃಶ್ಯದ ವಿವಾದ?
'ರಾಮಾಯಣ' ಚಿತ್ರದ ಮೊದಲ ಭಾಗದಲ್ಲಿ ಅರಣ್ಯವಾಸದ ಸಂದರ್ಭದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರು ಖರ ಹಾಗೂ ದೂಷಣ ನೇತೃತ್ವದ ರಾಕ್ಷಸರ ಸೇನೆಯನ್ನು ಎದುರಿಸುವ ಸನ್ನಿವೇಶವಿದೆ. ವಾಲ್ಮೀಕಿ ರಾಮಾಯಣದ ಪ್ರಕಾರ, ರಾಕ್ಷಸರ ವಿರುದ್ಧ ರಾಮನೇ ಯುದ್ಧ ಮಾಡುತ್ತಾನೆ. ಈ ವೇಳೆ ಸೀತೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ಲಕ್ಷ್ಮಣನಿಗೆ ಸೂಚಿಸುತ್ತಾನೆ.
ಆದರೆ ಸಿನಿಮಾದಲ್ಲಿ ಈ ಪ್ರಸಂಗವನ್ನು ವಿಭಿನ್ನವಾಗಿ ತೋರಿಸಲಾಗಿದೆ. ಸೀತೆಯ ಪಾತ್ರದಲ್ಲಿರುವ ಸಾಯಿ ಪಲ್ಲವಿ ಕತ್ತಿ ಹಿಡಿದು ರಾಕ್ಷಸರ ವಿರುದ್ಧ ಹೋರಾಡುವ ದೃಶ್ಯವನ್ನು ಸೇರಿಸಲಾಗಿದೆ.
ಈ ಬದಲಾವಣೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ವಾಲ್ಮೀಕಿ ರಾಮಾಯಣದ ಕಥೆಗೆ ಇದು ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಅದ್ಭುತ ರಾಮಾಯಣದ ಆಧಾರದಲ್ಲಿ ಈ ದೃಶ್ಯವನ್ನು ಚಿತ್ರಿಸಲಾಗಿದೆ ಎಂದು ಚಿತ್ರತಂಡದ ಸೃಜನಾತ್ಮಕ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಚಿತ್ರದ ಲಾಸ್ ಏಂಜಲೀಸ್ ಪ್ರೀಮಿಯರ್ ವೇಳೆ ನಿರ್ದೇಶಕ ನಿತೇಶ್ ತಿವಾರಿ ಕೂಡ ಸೀತೆಯ ಈ ವೀರಾವೇಶದ ಚಿತ್ರಣಕ್ಕೆ 'ಅದ್ಭುತ ರಾಮಾಯಣ' ಪ್ರೇರಣೆ ಎಂದು ಹೇಳಿದ್ದರು.