ಬಾಲಿವುಡ್ ಗಾಯಕ ಸೋನು ನಿಗಮ್ ಅವರು ಕನ್ನಡಿಗರಲ್ಲಿ ಬೇಷರತ್ ಆಗಿ ಕ್ಷಮೆಯಾಚಿಸಿದ್ದಾರೆ. ಕನ್ನಡಿಗರ ಭಾಷಾಪ್ರೇಮವನ್ನ ಪಹಲ್ಗಾಮ್ ಭಯೋತ್ಪಾದನೆಗೆ ಹೋಲಿಕೆ ಮಾಡಿ ಸೋನು ನಿಗಮ್ ವಿವಾದಕ್ಕೀಡಾಗಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡ ಸೋನು ನಿಗಮ್ ಕ್ಷಮೆಯಾಚಿಸಿರುವ ವಿಷಯವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹಿತ ಹಂಚಿಕೊಂಡಿದ್ದಾರೆ. ಇದರಲ್ಲಿ ಸೋನು ನಿಗಮ್ ತಮ್ಮ ಹೇಳಿಕೆಗೆ ಕನ್ನಡಿಗರಿಗೆ ಕ್ಷಮೆಯಾಚಿಸುವುದಾಗಿ ಹೇಳಿಕೊಂಡಿದ್ದಾರೆ.
ಸೋನು ನಿಗಮ್ ಇಂದು ನನ್ನೊಂದಿಗೆ ಮಾತಾಡಿದರು. ತಾವು ಹಿಂದೆ ಮಾಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ ಅರ್ಥವಾಗಿದೆ. ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದರು. ನಾನು ಹಿಂದೆಯೂ ಹೇಳಿದ್ದೇನೆ. ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಕುರಿತು ವೈಯಕ್ತಿಕವಾಗಿ ಯಾವ ದ್ವೇಷ, ಮುನಿಸು ನಮಗೆ ಇರಲಿಲ್ಲ. ಆ ಒಂದು ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಆಗಿರಲಿಲ್ಲ. ಅದಕ್ಕಾಗಿ ನಮ್ಮ ಪ್ರತಿಭಟನೆ, ಆಕ್ರೋಶ ಸಹಜವಾಗೆ ಇತ್ತು. ಇದೀಗ ಅವರು ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಇದನ್ನು ಮುಗಿಸುವುದು ಒಳ್ಳೆಯದು. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ, ಸಂಸ್ಕಾರ.
ಘಂಟಸಾಲ, ಪಿ ಬಿ. ಶ್ರೀನಿವಾಸ್, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್, ಚಿತ್ರಾ ಹೀಗೆ ಅದ್ಭುತ ಗಾಯಕರು ಕನ್ನಡಿಗರಲ್ಲದೆ ಇದ್ದರೂ ನಾವು ಅವರನ್ನು ಅಪಾರವಾಗಿ ಪ್ರೀತಿಸಿದ್ದೇವೆ. ಅವರು ನಮ್ಮ ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ ಮಹಾನುಭಾವರು. ಆ ಕೃತಜ್ಞತೆ ಸದಾ ಇರುತ್ತದೆ. ಸೋನು ನಿಗಮ್ ಕೂಡ ಇದೇ ಸಾಲಿನಲ್ಲಿ ಬರುವ ಮಹಾ ಗಾಯಕರಲ್ಲಿ ಒಬ್ಬರು. ಈ ಕಹಿಘಟನೆಯನ್ನು ಮರೆತುಬಿಡೋಣ. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುತ್ತದೆ. ಇದು ಎಲ್ಲರಿಗೂ ಒಂದು ಪಾಠ. ನಾನು ವೈಯಕ್ತಿಕವಾಗಿ ಸಂಗೀತ ಪ್ರೇಮಿ. ಸಂಗೀತ ಮನುಷ್ಯನ ಎಲ್ಲಾ ಸಂಕಟಗಳನ್ನು ಮರೆಸುವ ಸಂಜೀವಿನಿ. ಸೋನು ಅವರು ಇನ್ನಷ್ಟು ಕನ್ನಡ ಗೀತೆಗಳನ್ನು ಹಾಡಲಿ, ಕರ್ನಾಟಕದ ನೆಲದಲ್ಲಿ ಅವರ ಕಾರ್ಯಕ್ರಮಗಳು ನಡೆಯಲಿ. ಸಂಗೀತ ನಮ್ಮ ಬದುಕನ್ನು ಇನ್ನಷ್ಟು ಸಹನೀಯ ಗೊಳಿಸಲಿ, ಪ್ರೀತಿ ಗೆಲ್ಲಲಿ.
ವಿಡಿಯೋದಲ್ಲಿ ಗಾಯಕ ಸೋನು ನಿಗಮ್ ಅವರು, ಕನ್ನಡಿಗರ ಬಗ್ಗೆ ಮಾತನಾಡಿದ್ದಾರೆ. ನನ್ನ ಪ್ರೀತಿಯ ಕನ್ನಡಿಗ ಕುಟುಂಬದವರೇ ನನ್ನ ಉದ್ದೇಶ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುವುದು ಆಗಿರಲಿಲ್ಲ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರೊಂದಿಗೆ ಮಾತನಾಡಿದ್ದೇನೆ. ನೀವು ಯಾರನ್ನಾದರೂ ಪ್ರೀತಿ ಮಾಡಿದರೆ, ಅವರೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು ಎಂದು ಬಯಸಿದರೆ, ನೀವು ಕ್ಷಮೆ ಕೇಳುವುದರಲ್ಲಿ ತಪ್ಪಿಲ್ಲ. ನಾನು ಏನಾದಾರೂ ತಪ್ಪಾಗಿ ಮಾತನಾಡಿದ್ದರೆ ನಿಮ್ಮಲ್ಲಿ ಯಾರಿಗಾದರೂ ನನ್ನ ಮಾತುಗಳಿಂದ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ. ನೀವು ನನಗೆ ಅಪಾರವಾದ ಪ್ರೀತಿ ಕೊಟ್ಟಿದ್ದೀರಿ. ಅಪಾರ್ಥದಿಂದ ಈ ಪ್ರೀತಿ ಹಾಳಾಗುವುದು ಬೇಡ, ಮತ್ತೊಮ್ಮೆ ಕನ್ನಡಿಗರಲ್ಲಿ ಕ್ಷಮೆಯಾಚಿಸುತ್ತೇನೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.