

ತೆಲುಗು ನಟ ವಿಜಯ್ ದೇವರಕೊಂಡ ಮತ್ತು ಪತ್ನಿ ರಶ್ಮಿಕಾ ಮಂದಣ್ಣ ನಟನೆಯ 'ರಣಬಾಲಿ' ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮದುವೆಯ ನಂತರ ಅವರು ದೊಡ್ಡ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲು, ಈ ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹ ಮೂಡಿಸಿತ್ತು. ಆದರೆ ಚಿತ್ರ ಬಿಡುಗಡೆಯಾದಾಗಿನಿಂದಲೂ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಕೆಲವು ವೀಕ್ಷಕರು ಈ ಜೋಡಿಯ ನಟನೆ ಮತ್ತು ತೆರೆಯ ಮೇಲಿನ ಕೆಮಿಸ್ಟ್ರಿ ಚೆನ್ನಾಗಿಲ್ಲ. ಚಿತ್ರದ ಕಥೆ ಮತ್ತು ಚಿತ್ರದ ದೀರ್ಘಾವಧಿ ಇಷ್ಟವಾಗುತ್ತಿಲ್ಲ.
ರಣಬಾಲಿ 1876 ಮತ್ತು 1878ರ ನಡುವೆ ಮದ್ರಾಸ್ ಗೆ ಅಪ್ಪಳಿಸಿದ್ದ ವಿನಾಶಕಾರಿ ಬರಗಾಲದ ಹಿನ್ನೆಲೆಯಲ್ಲಿದೆ. ಈ ಚಿತ್ರವು ಬ್ರಿಟಿಷ್ ಆಳ್ವಿಕೆಯ ಸಂದರ್ಭಗಳು ಮತ್ತು ತನ್ನ ಹಳ್ಳಿಯನ್ನು ರಕ್ಷಿಸಲು ಹೋರಾಡುವ ನಾಯಕನ ಕಥೆಯನ್ನು ಚಿತ್ರಿಸುತ್ತದೆ. ನಿರ್ದೇಶಕ ರಾಹುಲ್ ಸಂಕೃತ್ಯಾಯನ್ ಅವರ ಚಿತ್ರವು ಹೆಚ್ಚು ಮನ್ನಣೆ ಪಡೆಯದ ಐತಿಹಾಸಿಕ ವ್ಯಕ್ತಿಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸುತ್ತದೆ. ಆದರೆ ಚಿತ್ರವು ಪ್ರೇಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಇಲ್ಲವಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ನೆಗೆಟಿವ್ ಹೇಳಿಕೆಗಳು ಬರುತ್ತಿವೆ.
ರಣಬಾಲಿ ಚಿತ್ರವು ಮೊದಲ ದಿನವೇ ಭಾರತದಲ್ಲಿ 9.25 ಕೋಟಿ ರೂ. ನಿವ್ವಳ ಕಲೆಕ್ಷನ್ ಮಾಡಿದೆ. ರಣಬಾಲಿ ಮೊದಲ ದಿನ 2,515 ಪ್ರದರ್ಶನ ಕಂಡಿದೆ. ಭಾರತದಲ್ಲಿ ಇದರ ಒಟ್ಟು ಸಂಗ್ರಹ 10.75 ಕೋಟಿ ರೂ.ಗಳಾಗಿದ್ದರೆ, ವಿದೇಶಿ ಮಾರುಕಟ್ಟೆಗಳು ಮತ್ತೊಂದು 5.75 ಕೋಟಿ ರೂ.ಗಳ ಕೊಡುಗೆ ನೀಡಿವೆ. ಇದು ಚಿತ್ರವು ವಿಶ್ವಾದ್ಯಂತ ಆರಂಭಿಕ ದಿನದ ಗಳಿಕೆ 16.50 ಕೋಟಿ ರೂ.ಗಳಿಗೆ ತಲುಪಿದೆ.
ವಿಜಯ್ ದೇವರಕೊಂಡ ಅವರ ಹಿಂದಿನ ಎರಡು ಪ್ರಮುಖ ಬಿಡುಗಡೆಗಳಾದ 'ಕಿಂಗ್ಡಮ್' ಮತ್ತು 'ಲೈಗರ್' ಚಿತ್ರಗಳಿಗಿಂತ 'ರಣಬಾಲಿ' ಕಡಿಮೆ ಆರಂಭಿಕ ಗಳಿಕೆಯನ್ನು ಕಂಡಿದೆ. ಅವರ ಹಿಂದಿನ ಚಿತ್ರ 'ಕಿಂಗ್ಡಮ್', ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ 4,236 ಪ್ರದರ್ಶನಗಳ ಮೂಲಕ 18 ಕೋಟಿ ರೂಪಾಯಿಗಳ ನಿವ್ವಳ (nett) ಗಳಿಕೆಯನ್ನು ದಾಖಲಿಸಿತ್ತು. 'ಕಿಂಗ್ಡಮ್' ಚಿತ್ರದ ಮೊದಲ ದಿನದ ಗಳಿಕೆಯು 'ರಣಬಾಲಿ'ಯ ಗಳಿಕೆಗಿಂತ ಸುಮಾರು ಎರಡು ಪಟ್ಟು ಹೆಚ್ಚಿತ್ತು. ಮತ್ತೊಂದೆಡೆ, ಕನ್ನಡದ ಪ್ರೇಮದ ಊರಲಿ ಹಾಗೂ ರಜನಿಕಾಂತ್ ಅಭಿನಯದ ಜೈಲರ್ 2 ಚಿತ್ರಗಳು ರಣಬಾಲಿಗೆ ಸಕತ್ ಪೈಪೋಟಿ ನೀಡುತ್ತಿದೆ. ಬೆಂಗಳೂರಿನಲ್ಲಿ ರಣಬಾಲಿಗೆ ಕಡಿಮೆ ಸಂಖ್ಯೆಯ ಥಿಯೇಟರ್ ಗಳು ಸಿಕ್ಕಿವೆ.