ಬಾಲಿವುಡ್ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಾದ್‌ಶಾ ಕಳೆದ ಮಾರ್ಚ್ 24ರಂದು ಪಂಜಾಬಿ ನಟಿ ಇಶಾ ರಿಖಿ ಜೊತೆ ಮದುವೆಯಾಗಿದ್ದರು. ಈ ಜೋಡಿ ಮದುವೆಯಾದ ಐದು ತಿಂಗಳಲ್ಲೇ ವಿಚ್ಛೇದನ ಪಡೆದುಕೊಂಡಿದ್ದು, ದಾಂಪತ್ಯ ಜೀವನಕ್ಕೆ ತೆರೆ ಎಳೆದಿದೆ.
ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಈಗ ಅಧಿಕೃತ ತೆರೆ ಬಿದ್ದಿದೆ. ಇಬ್ಬರೂ ಪರಸ್ಪರ ಒಪ್ಪಂದದ ಮೂಲಕ ಬೇರೆಯಾಗಲು ನಿರ್ಧರಿಸಿದ್ದಾರೆ. ಬಾದ್‌ಶಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ನಾವಿಬ್ಬರೂ ಗೌರವಯುತವಾಗಿ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಪರಸ್ಪರ ಸಮ್ಮತಿಯಿಂದಲೇ ಈ ಹಾದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕಷ್ಟದ ಸಮಯದಲ್ಲಿ ಅಭಿಮಾನಿಗಳು ಮತ್ತು ಮಾಧ್ಯಮಗಳು ನಮ್ಮ ವೈಯಕ್ತಿಕ ಜೀವನಕ್ಕೆ ಗೌರವ ನೀಡಬೇಕು. ಈ ವಿಷಯದ ಬಗ್ಗೆ ನಾವು ಮುಂದೆ ಯಾವುದೇ ಬಹಿರಂಗ ಚರ್ಚೆ ಮಾಡುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಕೆಲವು ವಾರಗಳ ಹಿಂದೆ ಇಶಾ ರಿಖಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಭಾವನಾತ್ಮಕ ಪೋಸ್ಟ್ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಗಂಡನ ಅಧಿಕಾರ ಮತ್ತು ಪ್ರಭಾವಕ್ಕೆ ಹೆದರಿ ನಾನು ಮೌನವಾಗಿದ್ದೆ’ ಎಂದು ಅವರು ಬರೆದಿದ್ದರು. ನನ್ನ ಮೌನವನ್ನು ಒಪ್ಪಿಗೆ ಎಂದು ಭಾವಿಸಬಾರದು ಎಂದು ಅವರು ಹೇಳಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.
ಇದು ರ‍್ಯಾಪರ್ ಬಾದ್‌ಶಾ ಅವರಿಗೆ ಎರಡನೇ ವಿಚ್ಛೇದನವಾಗಿದೆ. ಈ ಹಿಂದೆ ಅವರು ಜಾಸ್ಮಿನ್ ಮಸಿಹ್ ಎಂಬುವವರನ್ನು 2012ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಓರ್ವ ಮಗಳಿದ್ದಾಳೆ. 2020ರಲ್ಲಿ ಜಾಸ್ಮಿನ್ ಅವರಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದ ನಂತರ, ಬಾದ್‌ಶಾ ಅವರು ಇಶಾ ರಿಖಿ ಅವರನ್ನು ಮದುವೆಯಾಗಿದ್ದರು.