ರಹಸ್ಯ ಮದುವೆ, ವಿಚ್ಛೇದನದ ವದಂತಿಗಳ ಕುರಿತು ನಟ ಗೋವಿಂದಾ ಗರಂ; ₹100 ಕೋಟಿ ಮೌಲ್ಯದ ಕಾನೂನು ಕ್ರಮದ ಎಚ್ಚರಿಕೆ

ಗೋವಿಂದ ಅವರು ರಾಣಿ ಸ್ವರ್ಣಕರ್ ಅವರನ್ನು ನ್ಯಾಯಾಲಯವೊಂದರಲ್ಲಿ ರಹಸ್ಯವಾಗಿ ವಿವಾಹವಾದರು ಎಂಬ ಸುಳ್ಳು ಸುದ್ದಿಗಳು ಆನ್‌ಲೈನ್‌ನಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾನೂನು ನೋಟಿಸ್ ಕಳುಹಿಸಲಾಗಿದೆ.
Govinda
ನಟ ಗೋವಿಂದಾ
Updated on

ನಟ ಹಾಗೂ ಮಾಜಿ ಸಂಸದ ಗೋವಿಂದ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವದಂತಿಗಳ ಕಾರಣದಿಂದಾಗಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇದೀಗ, ತಮ್ಮ ವೈಯಕ್ತಿಕ ಜೀವನದ ಕುರಿತಾದ ಸುಳ್ಳು ಮತ್ತು ದಾರಿ ತಪ್ಪಿಸುವ ವರದಿಗಳ ವಿರುದ್ಧ ಅವರು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಗೋವಿಂದ ಅವರ ಪರವಾಗಿ ಹೊರಡಿಸಲಾದ ಸಾರ್ವಜನಿಕ ಪ್ರಕಟಣೆಯಲ್ಲಿ, ನಟ ಅಥವಾ ಅವರ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸುಳ್ಳು, ಮಾನಹಾನಿಕರ, ದುರುದ್ದೇಶಪೂರಿತ, ಕಟ್ಟುಕಥೆಯ ಅಥವಾ ಪರಿಶೀಲಿಸದ ವಿಷಯವನ್ನು ಸೃಷ್ಟಿಸುವುದು, ಪ್ರಕಟಿಸುವುದು, ಅಪ್‌ಲೋಡ್ ಮಾಡುವುದು, ಪ್ರಸಾರ ಮಾಡುವುದು ಅಥವಾ ಹಂಚಿಕೊಳ್ಳುವುದರ ವಿರುದ್ಧ ಸಾರ್ವಜನಿಕರು, ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ವೇದಿಕೆಗಳು ಮತ್ತು ಕಂಟೆಂಟ್ ಕ್ರಿಯೇಟರ್ಸ್‌ಗೆ ಎಚ್ಚರಿಕೆ ನೀಡಲಾಗಿದೆ.

ಗೋವಿಂದ ಅವರು ರಾಣಿ ಸ್ವರ್ಣಕರ್ ಅವರನ್ನು ನ್ಯಾಯಾಲಯವೊಂದರಲ್ಲಿ ರಹಸ್ಯವಾಗಿ ವಿವಾಹವಾದರು ಎಂಬ ಸುಳ್ಳು ಸುದ್ದಿಗಳು ಆನ್‌ಲೈನ್‌ನಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾನೂನು ನೋಟಿಸ್ ಕಳುಹಿಸಲಾಗಿದೆ. ಇದಕ್ಕೂ ಮುನ್ನ, ಗೋವಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದವು; ಆದರೆ, ಆ ವರದಿಗಳು ನಂತರ ಸುಳ್ಳು ಅಥವಾ ಸತ್ಯಕ್ಕೆ ದೂರವಾದವು ಎಂದು ಹೇಳಲಾಗಿತ್ತು.

ಈ ಸೂಚನೆಯು ನಿರ್ದಿಷ್ಟವಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾರ್ಪಡಿಸಲಾದ ಕಂಟೆಂಟ್ ಕುರಿತು ಹೇಳುತ್ತದೆ. ಇದರಲ್ಲಿ ಫೋಟೊಗಳು, ವಿಡಿಯೋಗಳು, ಆಡಿಯೋ ರೆಕಾರ್ಡಿಂಗ್‌ಗಳು, ತಿರುಚಿದ ಚಿತ್ರಗಳು (morphed images), ಡೀಪ್‌ಫೇಕ್‌ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ಸಾಮಗ್ರಿಗಳು ಸೇರಿವೆ.

ಸೂಚನೆ ಪ್ರಕಾರ, ಗೋವಿಂದ ಅವರ ಖಾಸಗಿ ಅಥವಾ ಕೌಟುಂಬಿಕ ಜೀವನಕ್ಕೆ ಸಂಬಂಧಿಸಿದಂತೆ, AI ಅಥವಾ ಇತರ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಅವರ ಧ್ವನಿ, ಫೋಟೊಗಳು, ಐಡೆಂಟಿಟಿ ಗುರುತು ಅಥವಾ ಅವರನ್ನೇ ಹೋಲುವಂತಹ ರೂಪವನ್ನು ಸೃಷ್ಟಿಸಲು, ಮಾರ್ಪಡಿಸಲು ಅಥವಾ ಬಳಸಲು ಅನುಮತಿ ಇಲ್ಲ ಎನ್ನಲಾಗಿದೆ.

ಮಾನನಷ್ಟ, ಗೌಪ್ಯತೆಯ ಉಲ್ಲಂಘನೆ, ಗುರುತಿನ ದುರ್ಬಳಕೆ ಮತ್ತು ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇಂತಹ ವಿಷಯವನ್ನು ಹರಡಲು ಕಾರಣರಾದವರ ವಿರುದ್ಧ ₹100 ಕೋಟಿವರೆಗೆ ಸಿವಿಲ್ ಮೊಕದ್ದಮೆಗಳನ್ನು ಹೂಡುವುದಾಗಿಯೂ ಮತ್ತು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಕ್ರಮಗಳು, ಆಸ್ತಿ ಮಾರಾಟ ಅಥವಾ ಖರೀದಿ ಮೇಲಿನ ನಿರ್ಬಂಧಗಳು ಹಾಗೂ ಪಾಸ್‌ಪೋರ್ಟ್‌ಗಳ ಜಪ್ತಿ ಸೇರಿದಂತೆ, ನ್ಯಾಯಾಲಯದ ಮೂಲಕ ಹೆಚ್ಚುವರಿ ಕಾನೂನು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಬಗ್ಗೆ ಗೋವಿಂದ ಎಚ್ಚರಿಕೆ ನೀಡಿದ್ದಾರೆ.

ಉದ್ದೇಶಪೂರ್ವಕವಾಗಿ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಪ್ರಕಟಿಸುತ್ತಿರುವ ಅಥವಾ ಹರಡುತ್ತಿರುವ ಆರೋಪವಿರುವ ಯೂಟ್ಯೂಬ್ ಚಾನೆಲ್‌ಗಳು ಮತ್ತು ಇತರ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ತಮ್ಮ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಅಭಿಯಾನವೊಂದು ನಡೆಯಬಹುದು ಎಂಬ ಆತಂಕವನ್ನು ಗೋವಿಂದ ಅವರು ತಮ್ಮ ಹಿಂದಿನ ಅನುಭವಗಳ ಆಧಾರದ ಮೇಲೆ ವ್ಯಕ್ತಪಡಿಸಿದ್ದಾರೆ. ಇಂತಹ ಚಟುವಟಿಕೆಗಳು ಮಾನಸಿಕ ಹಾಗೂ ಸಾಮಾಜಿಕ ಹಾನಿಯನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ.

ಗೋವಿಂದ ಅವರ ವೈಯಕ್ತಿಕ ಜೀವನದ ಕುರಿತಾದ ಪರಿಶೀಲಿಸದ ವರದಿಗಳ ಹರಡುವಿಕೆಯನ್ನು ತಡೆಯುವುದು ಹಾಗೂ ಸೂಕ್ತ ಪರಿಶೀಲನೆಯಿಲ್ಲದೆ ಇಂತಹ ವಿಷಯಗಳನ್ನು ಪ್ರಕಟಿಸುವುದನ್ನು ಹಂಚಿಕೊಳ್ಳದಂತೆ ವ್ಯಕ್ತಿಗಳು ಮತ್ತು ವೇದಿಕೆಗಳಿಗೆ ಎಚ್ಚರಿಕೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com