ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರು ಮತ್ತೊಮ್ಮೆ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಶಿವಣ್ಣ ಅವರು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಕೊಟ್ಟಿರುವ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇನ್ನೂ ಹಲವರು ಇದು ಶಿವರಾಜ್ ಕುಮಾರ್ ಅವರ ತಪ್ಪಲ್ಲ. ಈ ಹಿಂದಿನ ತಲೆಮಾರಿಗೆ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಇರುವ ತಪ್ಪು ತಿಳುವಳಿಕೆ ಎಂದೂ ಕೆಲವರು ಹೇಳಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಹೇಳಿದ್ದೇನು, ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ತಮ್ಮ ಮುಂಬರುವ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಶೀರ್ಷಿಕೆ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಶಿವರಾಜ್ಕುಮಾರ್ ಭಾಷೆ ಬಗ್ಗೆ ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಇದಕ್ಕೆ ಸಾಕಷ್ಟು ಟೀಕೆ ಕೇಳಿ ಬಂದಿತ್ತು. ಶಿವಣ್ಣ ಹೀಗೆ ಮಾಡಿದರೆ ಹೇಗೆ ಎಂದು ಎಲ್ಲರೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಅವರು ಈಗ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ತಪ್ಪಾಗಿ ಹಾಗೆ ಮಾತನಾಡಿದೆ ಎಂದು ಕ್ಷಮೆ ಕೇಳಿದ್ದಾರೆ.
ಶಿವಣ್ಣ ಅವರು ‘ಒರಿಜಿನಲ್ ಮಾನ್‌ಸ್ಟರ್’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಹಿಂದಿಯಲ್ಲೂ ಬರುತ್ತಿದೆ. ‘ಹಿಂದಿಗೆ ನೀವೇ ಡಬ್ ಮಾಡ್ತೀರಾ’ ಎಂದು ಕೇಳಿದಾಗ, ‘ಕಾಲೇಜು ದಿನಗಳಲ್ಲಿ ಹಿಂದಿ ನನ್ನ ಎರಡನೇ ಭಾಷೆ ಆಗಿತ್ತು. ನನಗೆ ಹಿಂದಿ ಮಾತನಾಡಲು ಬರುತ್ತದೆ. ಅದು ಸುಲಭವಾದ ಭಾಷೆ, ನಮ್ಮ ರಾಷ್ಟ್ರೀಯ ಭಾಷೆ ಎಂಬ ಮಾತುಗಳನ್ನಾಡಿದ್ದರು. ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ಶಿವಣ್ಣ ಅವರು ಈ ಕುರಿತು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ‘ನಾನು ಸಂವಿಧಾನಾತ್ಮಕ ಅಥವಾ ತಾಂತ್ರಿಕ ಅರ್ಥದಲ್ಲಿ ರಾಷ್ಟ್ರಭಾಷೆ ಎಂದು ಹೇಳಿಲ್ಲ. ಬದಲಿಗೆ ದೇಶದಾದ್ಯಂತ ವ್ಯಾಪಕವಾಗಿ ಮಾತನಾಡಲ್ಪಡುವ ಮತ್ತು ಜನಪ್ರಿಯವಾಗಿರುವ ಭಾಷೆ ಎಂಬ ಸರಳ ಅರ್ಥದಲ್ಲಿ ಆ ಮಾತುಗಳನ್ನು ಆಡಿದ್ದು’ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆ, ನಾಡು ಹಾಗೂ ನುಡಿಯ ಬಗ್ಗೆ ತಮಗಿರುವ ಗೌರವ ಮತ್ತು ಪ್ರೀತಿ ಎಂದಿಗೂ ಮೊದಲ ಸ್ಥಾನದಲ್ಲೇ ಇರುತ್ತದೆ. ಸಿನಿಮಾ ಪ್ರಚಾರದ ವೇಳೆ ಹಿಂದಿ ಸಂಭಾಷಣೆ ಹಾಗೂ ಡಬ್ಬಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ತಕ್ಷಣಕ್ಕೆ ಸರಳವಾಗಿ ಉತ್ತರಿಸುವಾಗ ಈ ಮಾತು ಬಂದಿತ್ತೇ ವಿನಃ ಯಾವುದೇ ಭಾಷಾ ಹೇರಿಕೆಯನ್ನು ಬೆಂಬಲಿಸುವ ಉದ್ದೇಶ ಇದರಲ್ಲಿರಲಿಲ್ಲ’ ಎಂದು ಹೇಳಿದ್ದಾರೆ.