US-Iran ಸಂಘರ್ಷ ತಾರಕಕ್ಕೆ: ತೈಲ ಟ್ಯಾಂಕರ್ ದಾಳಿಗೆ Tehran ಪ್ರತಿಕಾರ; ಜೋರ್ಡಾನ್‌ ಅಮೆರಿಕ ಸೇನಾ ನೆಲೆ ಮೇಲೆ ಭೀಕರ ಕ್ಷಿಪಣಿ ದಾಳಿ, Hormuz ಬಿಕ್ಕಟ್ಟು ಮತ್ತಷ್ಟು ಉಲ್ಬಣ..!

ಇದರ ಬೆನ್ನಲ್ಲೇ, ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ರಹಸ್ಯ ಹಾಗೂ ಅತ್ಯಾಧುನಿಕ ಮಾನವರಹಿತ ಸಬ್‌ಮರಿನ್ ಡ್ರೋನ್ ಅನ್ನು ಇರಾನ್ ವಶಪಡಿಸಿಕೊಂಡಿದೆ.
Iran attack
ಇರಾನ್ ದಾಳಿ
Updated on

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಜೋರ್ಡಾನ್‌ನಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಯ ಮೇಲೆ ಭೀಕರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ.

ಇದರ ಬೆನ್ನಲ್ಲೇ, ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ರಹಸ್ಯ ಹಾಗೂ ಅತ್ಯಾಧುನಿಕ ಮಾನವರಹಿತ ಸಬ್‌ಮರಿನ್ ಡ್ರೋನ್ ಅನ್ನು ಇರಾನ್ ವಶಪಡಿಸಿಕೊಂಡಿದೆ.

ಇರಾನ್‌ನ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ಇತ್ತೀಚೆಗೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ಇರಾನ್ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಬುಧವಾರ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಭೀಕರ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ಇರಾನ್‌ನ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದು, ಉಭಯ ದೇಶಗಳ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಂಡಿದೆ.

ಮಂಗಳವಾರ ಇರಾನ್‌ ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡ ಬಳಿಕ, ಪ್ರತಿಕ್ರಿಯೆಯಾಗಿ ಅಮೆರಿಕದ ಪಡೆಗಳು ಐದು ಇರಾನಿನ ತೈಲ ಟ್ಯಾಂಕರ್‌ಗಳನ್ನು ನಾಶಪಡಿಸಿದ್ದವು. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ನಡೆದ ಎರಡನೇ ದಾಳಿಯಾಗಿತ್ತು.

ಯುದ್ಧ ಆರಂಭವಾಗಿ ಆರು ತಿಂಗಳು ಕಳೆದರೂ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಯಾವುದೇ ಪರಿಹಾರ ಕಂಡುಬಂದಿಲ್ಲ. ವಿಶ್ವದ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಬಿಗಿ ಹಿಡಿತ ಸಾಧಿಸಿದ್ದು, ಈ ಜಲಮಾರ್ಗದ ಮೂಲಕ ನಡೆಯುತ್ತಿದ್ದ ಸಾಗಣೆ ಬಹುತೇಕ ಸ್ಥಗಿತಗೊಂಡಿದೆ. ಮತ್ತೊಂದೆಡೆ, ಅಮೆರಿಕ ಇರಾನ್‌ನ ಬಂದರುಗಳು ಮತ್ತು ಆರ್ಥಿಕತೆಯನ್ನು ದುರ್ಬಲಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದೆ.

Iran attack
West Asia Conflict: ಇರಾನ್ ಆರ್ಥಿಕ ಬೆನ್ನೆಲುಬಿಗೆ ಅಮೆರಿಕ ಪೆಟ್ಟು: ಸಮುದ್ರದ ಮಧ್ಯದಲ್ಲೇ 5 ಬೃಹತ್ ತೈಲ ಹಡಗುಗಳು ಗುರಿಯಾಗಿಸಿ ದಾಳಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ..!

ಬುಧವಾರ ಇರಾನ್, ತನ್ನ ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ ಅಮೆರಿಕದ ಮಿತ್ರ ರಾಷ್ಟ್ರಗಳಾದ ಕುವೈತ್ ಮತ್ತು ಬಹ್ರೇನ್ ಸಮೀಪದಲ್ಲಿರುವ ತೈಲ ಟ್ಯಾಂಕರ್‌ಗಳನ್ನೂ ಗುರಿಯಾಗಿಸುವುದಾಗಿ ಎಚ್ಚರಿಕೆ ನೀಡಿತು.

ಇದಾದ ಕೆಲವೇ ನಿಮಿಷಗಳಲ್ಲಿ ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಘಟಕವಾದ ರೆವಲ್ಯೂಷನರಿ ಗಾರ್ಡ್ಸ್, ಜೋರ್ಡಾನ್‌ನ ಅಲ್-ಅಜ್ರಾಕ್‌ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿರುವುದಾಗಿ ತಿಳಿಸಿತು.

ಇರಾನ್‌ನ ಸರ್ಕಾರಿ ಮಾಧ್ಯಮ ವರದಿಗಳ ಪ್ರಕಾರ, ಈ ದಾಳಿಯಲ್ಲಿ ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ ಸೌಲಭ್ಯಗಳು, ಸೈನಿಕರ ನಿಯೋಜನಾ ಪ್ರದೇಶಗಳು ಹಾಗೂ ಯುದ್ಧವಿಮಾನಗಳ ಆಶ್ರಯ ತಾಣಗಳಿಗೆ ಹಾನಿಯಾಗಿದೆ.

ಆದರೆ, ಜೋರ್ಡಾನ್ ಸೇನೆ, ತನ್ನ ದೇಶವನ್ನು ಗುರಿಯಾಗಿಸಿಕೊಂಡು ಇರಾನ್‌ನಿಂದ ಉಡಾಯಿಸಲಾದ 18 ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹೇಳಿಕೆಯ ಪ್ರಕಾರ, ಕುವೈತ್ ಮತ್ತು ಬಹ್ರೇನ್ ಸಮೀಪದ ತೈಲ ಟ್ಯಾಂಕರ್‌ಗಳ ಸಿಬ್ಬಂದಿ ತಮ್ಮ ಹಡಗುಗಳನ್ನು ತೊರೆಯುವಂತೆ ಸೂಚಿಸಲಾಗಿತ್ತು. ಇಲ್ಲದಿದ್ದರೆ ಅವುಗಳನ್ನು ಗುರಿಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.

ಅಮೆರಿಕದ ಪಡೆಗಳು ಐದು ಇರಾನಿನ ತೈಲ ಟ್ಯಾಂಕರ್‌ಗಳನ್ನು ನಾಶಪಡಿಸಿದ ಬಳಿಕ ಈ ಹೊಸ ಸಂಘರ್ಷ ಭುಗಿಲೆದ್ದಿದೆ. ದಾಳಿ ನಡೆಸುವ ಮುನ್ನ ಹಡಗುಗಳಲ್ಲಿದ್ದ ಸಿಬ್ಬಂದಿಗೆ ಹಡಗು ತೊರೆಯುವಂತೆ ಸೂಚಿಸಲಾಗಿತ್ತು ಎಂದು ಅಮೆರಿಕದ ಸೇನೆ ತಿಳಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಂಗಳವಾರ ಮಾತನಾಡಿ, ಇರಾನ್ ಅಮೆರಿಕದ ನೌಕಾಪಡೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವುದರಿಂದ, ಪ್ರತಿಯೊಂದು ದಾಳಿ ಅಥವಾ ದಾಳಿ ಪ್ರಯತ್ನಕ್ಕೂ ಪ್ರತಿಯಾಗಿ ಇರಾನ್ ತೈಲ ಟ್ಯಾಂಕರ್‌ಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಇರಾನ್‌ನ ಮಾಧ್ಯಮಗಳ ವರದಿ ಪ್ರಕಾರ, ಮಂಗಳವಾರ ಖಾರ್ಗ್ ದ್ವೀಪದ ಕರಾವಳಿ ಬಳಿ ಅಮೆರಿಕದ ಕ್ಷಿಪಣಿಯೊಂದು ತೈಲ ಟ್ಯಾಂಕರ್‌ಗೆ ಅಪ್ಪಳಿಸಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇರಾನ್ ಸೇನೆಯ ಮುಖ್ಯಸ್ಥ ಅಲಿ ಅಬ್ದೊಲ್ಲಾಹಿ, ಇರಾನ್‌ನ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದರೆ, ಈ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.

ಅಮೆರಿಕದ ಜಲಾಂತರ್ಗಾಮಿ ಡ್ರೋನ್ ವಶಕ್ಕೆ ಪಡೆದ ಇರಾನ್

ಮಂಗಳವಾರ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್, ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಅತ್ಯಾಧುನಿಕ ಮಾನವರಹಿತ ಜಲಾಂತರ್ಗಾಮಿ ಡ್ರೋನ್‌ಗಳಲ್ಲಿ ಒಂದನ್ನು ವಶಪಡಿಸಿಕೊಂಡಿರುವುದಾಗಿ ಹೇಳಿತ್ತು.

ಆದರೆ ಅಮೆರಿಕದ ಸೇನೆ, ಆ ಡ್ರೋನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು ಎಂದು ಹೇಳಿದ್ದು, ಅದು ಹಳೆಯ ಮಾದರಿಯದ್ದಾಗಿತ್ತು ಮತ್ತು ಯಾವುದೇ ಸೂಕ್ಷ್ಮ ಮಾಹಿತಿಯನ್ನು ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ, ಇರಾನ್‌ನ ಸರ್ಕಾರಿ ದೂರದರ್ಶನವು ರೆವಲ್ಯೂಷನರಿ ಗಾರ್ಡ್ಸ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಅಮೆರಿಕದ ಎರಡು ಯುದ್ಧನೌಕೆಗಳ ಮೇಲೂ ದಾಳಿ ನಡೆಸಿದೆ ಎಂದು ವರದಿ ಮಾಡಿದೆ. ಈ ಆರೋಪದ ಕುರಿತು ಅಮೆರಿಕದ ಸೇನೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com