ಬೆಂಗಳೂರು: ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ವೇಳೆಯಲ್ಲಿ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ತಮ್ಮ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ಹೌದು, 2002ರ ಹಳೆಯ ದಾಖಲೆಗಳೊಂದಿಗೆ ಹೆಸರು ಮ್ಯಾಚ್ ಆಗದ ಕಾರಣ ಶಿವರಾಜ್‌ಕುಮಾರ್ ಅವರ ಹೆಸರಿನಲ್ಲಿ ಸ್ವಯಂಚಾಲಿತವಾಗಿ ಒಂದು ದೋಷದ ನೋಟಿಸ್ ಸೃಷ್ಟಿಯಾಗಿತ್ತು. ಇದರ ಪರಿಶೀಲನೆಗಾಗಿ ಅಧಿಕಾರಿಗಳು ಶಿವಣ್ಣನ ಮನೆಗೆ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ, ಶಿವರಾಜ್‌ಕುಮಾರ್ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು 'ಪುಟ್ಟಸ್ವಾಮಿ ಶಿವರಾಜ್‌ಕುಮಾರ್' ಎಂದು ಬದಲಾಯಿಸಿಕೊಳ್ಳಲು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಶಿವಣ್ಣ ಇನ್ಮುಂದೆ ಪುಟ್ಟಸ್ವಾಮಿ ಶಿವರಾಜ್‌ಕುಮಾರ್
ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ ಶಿವಣ್ಣನ ಹೆಸರು ಮತದಾರರ ಪಟ್ಟಿಯಲ್ಲಿ ಇದುವರೆಗೆ ಕೇವಲ ಶಿವರಾಜ್‌ಕುಮಾರ್ ಎಂದಷ್ಟೇ ಇತ್ತು. ಆದರೆ, ಅವರ ಅಧಿಕೃತ ಪಾಸ್‌ಪೋರ್ಟ್‌ನಲ್ಲಿ ಪುಟ್ಟಸ್ವಾಮಿ ಶಿವರಾಜ್‌ಕುಮಾರ್ ಎಂದಿರುವುದರಿಂದ, ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಒಂದೇ ಹೆಸರು ಇರಲಿ ಎಂಬ ಉದ್ದೇಶದಿಂದ ಅವರು ಈ ತಿದ್ದುಪಡಿಗೆ ಮುಂದಾಗಿದ್ದಾರೆ. ಹಾಗಾಗಿ, ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿ ಕಾಂತರಾಜ್ ಹಾಗೂ ಬಿಎಲ್‌ಒ ಅಧಿಕಾರಿಗಳು ನೇರವಾಗಿ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಶಿವರಾಜ್‌ಕುಮಾರ್ ಅವರೇ ಸ್ವಯಂಪ್ರೇರಣೆಯಿಂದ ಅಗತ್ಯ ದಾಖಲೆಗಳೊಂದಿಗೆ ಫಾರಂ 8 ಅಡಿಯಲ್ಲಿ ಹೆಸರು ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ, ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೊಸ ಹೆಸರು ಅಧಿಕೃತವಾಗಿ ಬದಲಾಗಲಿದೆ.