ಇತ್ತೀಚೆಗೆ ಬಾಲಿವುಡ್ ನಟಿ ಕತ್ರೀನಾ ಕೈಫ್ ತೂಕದ ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
ತಾಯಿಯಾದ ಬಳಿಕ ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು. ಆದರೆ ಈ ಬದಲಾದ ಅವರ ದೇಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾಡಿ ಶೇಮಿಂಗ್ ಮಾಡುವ ಪೋಸ್ಟ್‌ಗಳು ಹಾಗೂ ಹೋಲಿಕೆ ಮಾಡುವ ಟ್ರೋಲ್‌ಗಳು ಹರಿದಾಡುತ್ತಿವೆ.
ಈ ವಿಚಾರದ ಕುರಿತು ಇದೀಗ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ʻಪ್ರೈಮ್ ಹಂತʼ (ಅತ್ಯುತ್ತಮ ಹಂತ) ಮತ್ತು ʻಮುಕ್ತಾಯದ ಹಂತʼ ಎಂದು ವಿಂಗಡಿಸಿ ಪೋಸ್ಟ್ ಹಾಕುವ ವಿಚಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.
ಮಹಿಳೆಯ ಅತ್ಯುತ್ತಮ ಹಂತ ಎನ್ನುವ ಮಾತು ಆಕೆಗೆ ಮುಕ್ತಾಯದ ದಿನ ಇದೆ ಎನ್ನುವಂತೆ ಬಿಂಬಿಸುತ್ತದೆ. ಅತ್ಯುತ್ತಮ ಹಂತವೆಂದರೆ ಕೇವಲ ಮ್ಯಾಗಜೀನ್ ಮುಖಪುಟದ ಮಾಡೆಲ್‌ನಂತೆ ಕಾಣುವ ಕೆಲವೇ ವರ್ಷಗಳು ಎಂದು ನಿರ್ಧರಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಮಹಿಳೆಗೆ ಗರ್ಭಧಾರಣೆ, ಋತುಬಂಧದ ಪೂರ್ವದ ಹಂತ ಹಾಗೂ ಜೀವನದ ವಿವಿಧ ಘಟ್ಟಗಳಲ್ಲಿ ದೇಹ ಬದಲಾಗುತ್ತದೆ. ಅದು ಅವನತಿಯಲ್ಲ, ಬದಲಿಗೆ ಅದು ಬದುಕುವ ಕ್ರಮವಾಗಿದೆ. ʼಅತ್ಯುತ್ತಮ ಹಂತʼ ಎಂದರೆ ಕೇವಲ ಸಣ್ಣ ಸೊಂಟದ ಅಳತೆಯಲ್ಲ; ಅದು ಶಕ್ತಿ, ವಿವೇಕ, ಕೆಲಸ, ಸಂತೋಷ ಮತ್ತು ಆಕೆ ಕಟ್ಟಿಕೊಂಡಿರುವ ಎಲ್ಲವೂ ಆಗಿದೆ. ಕತ್ರಿನಾ ಸದ್ಯ ತಮ್ಮ ಅತ್ಯುತ್ತಮ ಹಂತದಲ್ಲಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಹುಟ್ಟಿದ ದಿನದಿಂದ ಹಿಡಿದು ಜೀವನದ ಕೊನೆಯ ದಿನದವರೆಗೂ ಅತ್ಯುತ್ತಮ ಹಂತದಲ್ಲಿಯೇ ಇರುತ್ತಾಳೆ ಎಂದಿದ್ದಾರೆ.
ಇನ್ನು, "ಆಕೆಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ" ಎಂದು ಹೇಳುವವರಿಗೆ ಕೇಳುತ್ತೇನೆ: ಹಾಗಾದರೆ ಕಡಿಮೆ ಹಣವಿರುವ ಮಹಿಳೆಯನ್ನು ದೇಹದ ಆಕಾರದ ಕಾರಣಕ್ಕೆ ಅವಮಾನಿಸಬಹುದೇ? ಅಥವಾ "ಆಕೆಗೆ ಮಗುವಾಗಿದೆ, ಹಾಗಾಗಿ ಆ ತೂಕ ಸರಿ" ಎನ್ನುವವರು, ಮಗುವಾಗದಿದ್ದರೆ ಆ ತೂಕ ಸರಿಯಲ್ಲ ಎಂದು ಭಾವಿಸುತ್ತಾರೆಯೇ? ಇದ್ಯಾವ ರೀತಿಯ ಅರ್ಥಹೀನ ಸಮರ್ಥನೆ? ಎಂದು ಕಿಡಿಕಾರಿದ್ದಾರೆ.
ಒಬ್ಬ ಮಹಿಳೆಯ ದೇಹವನ್ನು ಅವಮಾನಿಸಬಾರದು ಎನ್ನಲು ಬ್ಯಾಂಕ್ ಬ್ಯಾಲೆನ್ಸ್‌ನ ಅಗತ್ಯವಿಲ್ಲ ಅಥವಾ ಅದಕ್ಕೊಂದು ನಿರ್ದಿಷ್ಟ ಕಾರಣವೂ ಬೇಕಿಲ್ಲ. ಇದಕ್ಕೆ ಯಾವುದೇ ಷರತ್ತುಗಳಾಗಲಿ, ವಿನಾಯಿತಿಗಳಾಗಲಿ ಇಲ್ಲ. ದೇಹದ ಆಕಾರವನ್ನು ನೋಡಿ ಅವಮಾನಿಸುವುದು ತಪ್ಪು. ಅಷ್ಟೇ ಎಂದು ರಮ್ಯಾ ತಮ್ಮ ಪೋಸ್ಟ್ ನಲ್ಲಿ ಸ್ಪಷ್ಪಪಡಿಸಿದ್ದಾರೆ.