ಬೆಂಗಳೂರು: ತೆಲುಗಿನ ಬಹುನಿರೀಕ್ಷಿತ ‘ದಿ ಪ್ಯಾರಡೈಸ್’ ಚಿತ್ರದ ಪ್ರಚಾರದ ವೇಳೆ ಜಡೆ ವಿಚಾರವಾಗಿ ನಡೆದ ನಾನಿ ಹಾಗೂ ಕನ್ನಡ ಮಹಿಳಾ ಪತ್ರಕರ್ತರ ನಡುವಿನ ತಮಾಷೆಯ ಮಾತುಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು.. ನಟ ನಾನಿ ಅಭಿನಯದ ದಿ ಪ್ಯಾರಡೈಸ್ ಚಿತ್ರದಲ್ಲಿ ನಾನಿ ಜಡೆ ಹಾಕಿಕೊಂಡಿರುವ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾನಿ, 'ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಜಡೆ ಹಾಕಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಇದು ಬದಲಾಗಿದೆ. ಮಹಿಳೆಯರು ಮತ್ತೆ ಜಡೆ ಹಾಕಿಕೊಳ್ಳಲು ಆರಂಭಿಸಿದರೆ ಚೆನ್ನಾಗಿರುತ್ತದೆ ಎಂದು ನಾನಿ ಹೇಳಿದರು.
ಅಂತೆಯೇ ಹಿಂದಿನ ಕಾಲದಲ್ಲಿ ಮಹಿಳೆಯರು ಎಣ್ಣೆ ಹಚ್ಚಿಕೊಂಡು ಜಡೆ ಹಾಕಿಕೊಳ್ಳುತ್ತಿದ್ದರು. ಹೀಗಾಗಿ ಆಗ ಕೂದಲು ದಟ್ಟವಾಗಿ ಬೆಳೆಯುತ್ತಿತ್ತು. ಈಗ ಯಾರೂ ಕೂಡ ಎಣ್ಣೆ ಹಚ್ಚಿಕೊಳ್ಳುವುದಿಲ್ಲ. ಜಡೆ ಕೂಡ ಹಾಕಲ್ಲ. ಹೀಗಾಗಿ ಕೂದಲು ಉದುರುವಿಕೆ ಹೆಚ್ಚಾಗಿದೆ ಎಂದರು.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿದ್ದ ಮಹಿಳಾ ಪತ್ರಕರ್ತೆ ನಾನಿಯ ಮಾತಿಗೆ ತಮಾಷೆಯಾಗಿ ತಿರುಗೇಟು ನೀಡಿದ್ದು, “ನೀವೇ ಕೂದಲು ಬೆಳೆಸಿ ಜಡೆ ಹಾಕಿಕೊಂಡು ಹೇಳಿದ್ದರೆ ನಾವು ಕೇಳುತ್ತಿದ್ದೆವು. ಆದರೆ ನೀವು ಸಿನಿಮಾದಲ್ಲಿ ವಿಗ್ ಹಾಕಿಕೊಂಡಿದ್ದೀರಿ. ನೀವೇ ವಿಗ್ ಹಾಕಿಕೊಂಡು ನಮಗೆ ಜಡೆ ಹಾಕಿಕೊಳ್ಳಿ ಎಂದರೆ ಯಾರು ಕೇಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ನಾನಿ ಖಡಕ್ ಉತ್ತರ
ಪತ್ರಕರ್ತೆಯ ಪ್ರಶ್ನೆಗೆ ನಟ ನಾನಿ ಕೂಡ ನಗುತ್ತಲೇ ಪ್ರತಿಕ್ರಿಯಿಸಿದ್ದು, “ನಾನು ನಟ. ಪಾತ್ರಕ್ಕೆ ಅಗತ್ಯವಿದ್ದ ಕಾರಣ ಸಿನಿಮಾದಲ್ಲಿ ವಿಗ್ ಹಾಕಿಕೊಂಡಿದ್ದೇನೆ. ಸಿನಿಮಾದಲ್ಲಿ ನಾನು ನಟನೆಯ ಭಾಗವಾಗಿ ಅಳುತ್ತೇನೆ, ಹಾಗೆಂದು ಹೊರಗಿರುವವರು ಕೂಡ ನಕಲಿಯಾಗಿ ಅಳುವುದಿಲ್ಲವಲ್ಲ” ಎಂಬರ್ಥದಲ್ಲಿ ನಾನಿ ಉತ್ತರಿಸಿದ್ದಾರೆ. ಈ ಮಾತಿಗೆ ಅಲ್ಲಿದ್ದವರು ನಗುವಿನ ಅಲೆಯಲ್ಲಿ ತೇಲಿದ್ದಾರೆ.
ಮಹಿಳೆಯರಿಗೆ ಸಂಪೂರ್ಣ ಗೌರವ ಎಂದ ನಟ
ಇನ್ನು ಮಾತುಕತೆ ಮುಂದುವರಿದಾಗ, ಮಹಿಳೆಯರಿಗೆ ಇಂದಿನ ದಿನಗಳಲ್ಲಿ ಕೂದಲನ್ನು ನಿರ್ವಹಿಸಲು ಸಮಯದ ಕೊರತೆಯಿದೆ ಎಂಬ ಪತ್ರಕರ್ತೆಯ ಮಾತನ್ನೂ ನಾನಿ ಒಪ್ಪಿಕೊಂಡಿದ್ದಾರೆ. ತಮ್ಮ ಪಾತ್ರಕ್ಕಾಗಿ ದೀರ್ಘಕೂದಲಿನ ಲುಕ್ ಕಾಪಾಡಿಕೊಳ್ಳುವುದೂ ಸುಲಭವಾಗಿರಲಿಲ್ಲ ಎಂದು ಹೇಳಿ, ಮಹಿಳೆಯರ ಸಮಸ್ಯೆಯನ್ನು ಅರ್ಥಮಾಡಿಕೊಂಡಿರುವುದಾಗಿ ಮತ್ತು ಮಹಿಳೆಯರ ಕುರಿತು ಸಂಪೂರ್ಣ ಗೌರವವಿದೆ ಎಂದು ತಿಳಿಸಿದ್ದಾರೆ.
ವಿಡಿಯೋ ವೈರಲ್
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾನಿಯ ಉತ್ತರ ಹಾಗೂ ಪತ್ರಕರ್ತೆಯ ಪ್ರಶ್ನೆ ಕುರಿತು ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಶ್ರೀಕಾಂತ್ ಓಡೆಲಾ ನಿರ್ದೇಶನದ ‘ದಿ ಪ್ಯಾರಡೈಸ್’ ಚಿತ್ರದಲ್ಲಿ ನಾನಿ, ಕಾಯದು ಲೋಹರ್, ಹಿರಿಯ ನಟ ಮೋಹನ್ ಬಾಬು ಹಾಗೂ ರಾಘವ್ ಜುಯಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 24ರಂದು ತೆರೆಗೆ ಬರಲಿದೆ.