‘ಮಹಾಭಾರತ’ ಧಾರಾವಾಹಿಯಲ್ಲಿ ಭೀಮನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟ ಸೌರವ್ ಗುರ್ಜರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತಿಪರ ಕುಸ್ತಿಪಟು ಸಹ ಆಗಿರುವ ಸೌರವ್ ವಿರುದ್ಧ ಮಹಿಳೆಯೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದರು.
ಹೈದರಾಬಾದ್ ನಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಅವರಿಗೆ ವಂಚನೆ ಮಾಡಿರುವ ಆರೋಪ ಸೌರವ್ ಅವರ ಮೇಲಿದೆ.
ಸೌರವ್ ಗುರ್ಜರ್ ಎಂದಾಕ್ಷಣ ‘ಮಹಾಭಾರತ’ ಧಾರಾವಾಹಿಯ ಭೀಮನ ಪಾತ್ರ ಬಹುತೇಕರ ನೆನಪಿಗೆ ಬರುತ್ತದೆ. ತಮ್ಮ ಗಂಭೀರ ನೋಟ, ಬಲಿಷ್ಠ ದೇಹ ಹಾಗೂ ಅಭಿನಯದ ಮೂಲಕ ಸೌರವ್ ಈ ಪಾತ್ರಕ್ಕೆ ವಿಶೇಷ ಮೆರುಗು ನೀಡಿದ್ದರು. ಇದಲ್ಲದೆ, ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿನ ‘ಜೋರ್’ ಪಾತ್ರದ ಮೂಲಕವೂ ಅವರು ಗಮನ ಸೆಳೆದಿದ್ದರು. ಆದರೆ ಇದೀಗ ಅವರ ವೃತ್ತಿಜೀವನದ ಸುದ್ದಿಗಳಿಗಿಂತ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಆರೋಪವೊಂದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, 2021ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಸೌರವ್ ಗುರ್ಜರ್ ಅವರ ಪರಿಚಯವಾಗಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ನಂತರ ವಾಟ್ಸಾಪ್ ಮೂಲಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಅದೇ ವರ್ಷದ ಡಿಸೆಂಬರ್ 25ರಂದು ಇಬ್ಬರೂ ಮೊದಲ ಬಾರಿಗೆ ನೇರವಾಗಿ ಭೇಟಿಯಾಗಿದ್ದರು ಎನ್ನಲಾಗಿದೆ.
ತಮ್ಮನ್ನು ಮದುವೆಯಾಗುವುದಾಗಿ ಸೌರವ್ ಭರವಸೆ ನೀಡಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಮದುವೆಯಾದ ನಂತರ ಪತ್ನಿಗೆ ಸಿಗುವಂತಹ ಹಕ್ಕು ಮತ್ತು ಗೌರವವನ್ನು ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಈ ಭರವಸೆಗಳನ್ನು ನಂಬಿ ತಾವು ಅಮೆರಿಕದಿಂದ ಭಾರತಕ್ಕೆ ಮರಳಿದ್ದಾಗಿ ಮಹಿಳೆ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ, ಇಬ್ಬರೂ ಸೇರಿ ಭಾರತದಲ್ಲಿ ಹೊಸದಾಗಿ ವ್ಯಾಪಾರ ಆರಂಭಿಸುವುದಾಗಿ ಸೌರವ್ ಹೇಳಿದ್ದರು ಮತ್ತು ಅಮೆರಿಕದಲ್ಲಿದ್ದ ತಮ್ಮ ಉದ್ಯೋಗವನ್ನು ತೊರೆಯುವಂತೆ ಪ್ರೇರೇಪಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಆದರೆ ನಂತರ ಮದುವೆಯ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದವು ಎನ್ನಲಾಗಿದೆ.
ಆದರೆ ಆ ಬಳಿಕ ಮದುವೆಯ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯ್ತು, ನಾನು ಮದುವೆಗೆ ಒತ್ತಾಯಿಸಿದಾಗೆಲ್ಲ ನನ್ನನ್ನು ಬ್ಲಾಕ್ ಮಾಡುತ್ತಿದ್ದ, ಸಾಕಷ್ಟು ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ನನಗೆ ಸೌರವ್ ನೀಡಿದ್ದಾನೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.