ಸಿನಿಮಾ ವಿಮರ್ಶೆ

ಶೈನಿಂಗ್ ಸ್ಟಾರ್‌ನ 'ಬಿರುದಿನ' ಕೊಳಲು

ಡಾ.ರಾಜ್‌ಕುಮಾರ್ ಅವರು ತೀರಿಕೊಂಡ ದಿನ ನಡೆದ ಘಟನೆಯ ಆಧಾರಿತ ಚಿತ್ರ ಎಂಬ ಒಕ್ಕಣಿಕೆ 'ಜನ್ಮ' ಚಿತ್ರದ್ದು. ಹಾಗಂತ ಪೂರ್ತಿ ಚಿತ್ರವನ್ನು ಈ ರಾಜ್‌ಕುಮಾರ್ ಎಪಿಸೋಡ್ ಆವರಿಸಿಕೊಂಡಿಲ್ಲ. ಆರಂಭದಲ್ಲಿ ಡಾ.ರಾಜ್‌ಕುಮಾರ್ ಅವರ ಮೇಲಿನ ಅಭಿಮಾನ ಚಿತ್ರಕ್ಕೆ ಜನ್ಮ ಕೊಡುತ್ತದೆ. ಕೊನೆಗೆ 'ಅಂತ್ಯ ಹಾಡುವ' ಸಮಯದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತದೆ. ರಾಜ್‌ಕುಮಾರ್ ಎಪಿಸೋಡ್ ಜೊತೆಗೆ, ಕ್ಲೈಮ್ಯಾಕ್ಸ್‌ಗೆ ಮುನ್ನ, ಅವರದ್ದೇ ಆದ ಶೈಲಿಯಲ್ಲಿ 'ಕಾಣಿಸ್ತಾರೆ, ಆದರೆ ಕಾಣಿಸಲ್ಲ' ಎನ್ನುವಂಥ 'ಗೆಸ್ಟ್ ಅಪಿಯರೆನ್ಸ್?'ನಲ್ಲಿ 'ರಜನೀ ಸಾರ್‌' ದರ್ಶನವೂ ಆಗುತ್ತದೆ. ಹಾಗಂತ ಇದನ್ನು ಮಲ್ಟಿಸೂಪರ್‌ಸ್ಟಾರ್ ಸಿನಿಮಾ ಎನ್ನುವಂತಿಲ್ಲ. ಇದೇನಿದ್ದರೂ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವ 'ಶೈನಿಂಗ್ ಸ್ಟಾರ್‌' ಸಂತೋಷ್ ಚಿತ್ರ ಮಾತ್ರ.
ಗಾಜನೂರಿನಲ್ಲೊಬ್ಬ ಅಣ್ಣಾವ್ರ ಅಭಿಮಾನಿ. ಕರುಳಿನ ಕುಡಿಯ ಬಗ್ಗೆ ಸದಾ ಕಾಳಜಿ ವಹಿಸುವ ಅವನ ಅಮ್ಮ. ಕುಡಿಯುವುದನ್ನೇ ತನ್ನ ಜನ್ಮಕ್ಕಂಟಿದ ಶಾಪದಂತೆ ಮಾಡಿಕೊಂಡ ಅಪ್ಪ. ಇವರ ಜೊತೆಗೆ ನಾಯಕನೆಡೆಗೆ ಕುಡಿನೋಟ ಬೀರುವ ಹುಡುಗಿ. ಈ ಹುಡುಗ ತನ್ನ ಪ್ರೇಯಸಿ ಜೊತೆ ತಮಿಳುನಾಡಿಗೆ ಓಡಿಹೋಗುತ್ತಾನೆ. ಅಲ್ಲಿ ಅವನ ಹುಡುಗಿ ಕಳೆದುಹೋಗುತ್ತಾಳೆ. ಚೆನ್ನೈನಲ್ಲಿ ಕಳೆದುಹೋದ ತನ್ನ ಪ್ರೇಯಸಿಯನ್ನು 'ಓಹೋಹೋ, ಚೆನ್ನೈ ಚೆನ್ನೆ' ಎಂದು ಹಾಡುತ್ತಾ ಹುಡುಕುವ ನಾಯಕನಿಗೆ ಅಂಡರ್‌ವರ್ಲ್ಡ್ ಶಾಪ ತಟ್ಟುತ್ತದೆ. ಕಾವೇರಿ ಎನ್ನುವ ಅವನ ಹುಡುಗಿಯ ಹೆಸರಿನ ಬಲದಿಂದ, ಕಥೆಗೆ ಕಾವೇರಿ ವಿವಾದದ ತಾಪ ಮತ್ತು ಮಧ್ಯಂತರದ ಹೊತ್ತಿಗೆ 'ಕಾವೇರಿಯನ್ನು ಬಿಡುವುದಿಲ್ಲ' ಎನ್ನುವ ನಿರ್ದೇಶಕ ಅಶೋಕ್ ಪಾಟೀಲರ 'ಶಾಪ'ವೂ ತಟ್ಟುತ್ತದೆ. ಕೊನೆಗೆ ನಾಯಕಿ ರಜನೀಕಾಂತ್‌ರ ಸಹಾಯದಿಂದ ಊರಿಗೆ ವಾಪಸ್ಸು ಬರುತ್ತಾಳೆ. ಅವಳನ್ನು  ಹುಡುಕಿಕೊಂಡು ಹೋದ ನಾಯಕ ಆಕೆಯನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವ ದಿನವೇ ಅಣ್ಣಾವ್ರು ತೀರಿಕೊಂಡು ನಾಯಕ ನಾಯಕಿಯರ ಜನ್ಮಕ್ಕೆ ಮಂಕು ಕವಿಯುವಲ್ಲಿಗೆ ಚಿತ್ರಕ್ಕೆ ಅ'ಶುಭಂ'.
ಕಥೆಯ ಎಳೆ, ಅದರಲ್ಲಿರುವ ಹಲವು ತಿರುವುಗಳನ್ನು ನೋಡಿದರೆ ಖಂಡಿತಾ ಇದೊಂದು ಗಟ್ಟಿ ಸಿನಿಮಾ ಆಗಬಹುದಿತ್ತು ಎನಿಸುತ್ತದೆ. ಕಥೆ, ಸಂಭಾಷಣೆ, ಪಾತ್ರಗಳ ಕಲ್ಪನೆಯ ವಿಷಯದಲ್ಲಿ ನಿರ್ದೇಶಕ ಚಂದ್ರಚೂಡ್ ಚಕ್ರವರ್ತಿ ಅವರ ಪ್ರಯತ್ನ ಖುಷಿಕೊಡುತ್ತದೆ. ಆದರೆ, ಸಿನಿಮಾ ರೂಪಕ್ಕೆ ತರುವ ಅವರ ಪ್ರಯತ್ನ ಮಾತ್ರ ಸಂಪೂರ್ಣ ಸಫಲವಾಗಿಲ್ಲ. ಚಿತ್ರದ ಕತೆ ಕಾವೇರಿ ನದಿ ವಿವಾದದ ನಡುವೆ ಸಾಗಿದರೂ 'ಹೃದಯದಲಿ ಇದೇನಿದು ನದಿಯೊಂದು ಓಡಿದೆ' ಎನ್ನುವಂಥ ಪ್ರೀತಿ ಕಾಣಿಸುವುದಿಲ್ಲ. ಕತೆಯಲ್ಲಿ ಸ್ಪಷ್ಟತೆ ಇಲ್ಲ. ಅನವಶ್ಯಕವಾದ ದೃಶ್ಯಗಳು ಮತ್ತು ಪಾತ್ರಗಳು ಥೇಟ್ ಕಾವೇರಿ ವಿವಾದದಂತೆ ಗೊಂದಲ ಮತ್ತು ಗೋಜಲು, ಮತ್ತು ಅಹಿತಕರ ವಾತಾವರಣವನ್ನು ಸೃಷ್ಠಿಸುತ್ತವೆ. ದೃಶ್ಯವೊಂದರಲ್ಲಿ ಆಟೋರಾಜನಾಗಿ ಗ್ರ್ಯಾಂಡ್ ಎಂಟ್ರಿ ಕೊಡುವ ಮುನ್ನವೇ ಬುಲೆಟ್ ಪ್ರಕಾಶ್ ಆರಂಭದ ಪೊರ್ಕಿ ಹಾಡೊಂದರಲ್ಲಿ ಬಂದು ಹೋಗಿರುತ್ತಾರೆ ಎನ್ನುವುದು ಆಶ್ಚರ್ಯ. ಹಾಗಂತ ಅದನ್ನು 'ಡ್ರೀಮ್ ಸಾಂಗ್‌' ಎಂದುಕೊಳ್ಳುವುದು ಹಾಸ್ಯದ ಪರಮಾವಧಿ ಆದೀತು. ಆದರೆ ಇವೆಲ್ಲದರ  ನಡುವೆಯೂ 'ಜನ್ಮ' ತನ್ನ ತರ್ಕ ಮತ್ತು ನೈಜತೆಯಿಂದಾಗಿ ಗಮನಸೆಳೆಯುತ್ತದೆ.
ಟೈಟಲ್‌ಕಾರ್ಡ್‌ನಲ್ಲಿ ನಾಯಕ ಸಂತೋಷ್‌ಗೆ ಶೈನಿಂಗ್ ಸ್ಟಾರ್ ಎಂಬ 'ಬಿರುದಿನ' 'ಕೊಳಲು' ಸಿಕ್ಕರೂ, ನಾಯಕನ ತಾಯಿಯ ಪಾತ್ರ ಮಾಡಿರುವ ಸಿತಾರಾ ಚಿತ್ರದ ನಿಜವಾದ ಶೈನಿಂಗ್ ಸ್ಟಾರ್. ಸಂತೋಷ್‌ಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ  ಮಾಡಿದ್ದೇನೆ ಎಂಬ ಸಂತೋಷ ಮಾತ್ರ. ನಾಯಕಿ ಮೀನಾಕ್ಷಿ ತಣ್ಣಗೆ ಹರಿಯುವ ನದಿಯಂತೆ. ಮೆಂಟ್ಲು ಪಾತ್ರದ ಭರತ್ ಭರವಸೆ ಹುಟ್ಟಿಸುತ್ತಾರೆ. ಚಿತ್ರದ ಶೀರ್ಷಿಕೆ ಗೀತೆ ಮತ್ತು ನಾನು ಬಿದಿರಿನ ಕೊಳವೆ, ನಿನ್ನ ಉಸಿರು ಸೇರಿದರೆ ಕೊಳಲಾಗುವೆ ಎನ್ನುವ ಸಾಹಿತ್ಯದ ಹಾಡುಗಳಲ್ಲಿ ಅನೂಪ್ ಸೀಳಿನ್ ಗೆದ್ದಿದ್ದಾರೆ. ಜಗದೀಶ್ ವಾಲಿ ಛಾಯಾಗ್ರಹಣ ಚಿತ್ರಕ್ಕೆ ಅಗತ್ಯವಿದ್ದ ಫೀಲ್ ತಂದುಕೊಟ್ಟಿದೆ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ