ಸಿನಿಮಾ ವಿಮರ್ಶೆ

ಸಿನಿಮಾ ಅಂತೇಳಿ ಕಾಮಿಡಿ ಮಾಡ್ತೀರಾ!?

'ಜಿಂಕೆಮರಿ'ಯ ಕೊರಳಲ್ಲಿ ಹಳಸಲು ಕಥೆಯ ಹಗ್ಗ. ಆ ಹಗ್ಗವನ್ನು 'ಲೂಸ್‌' ಆಗಿ ಹಿಡಿದ ನಿರ್ದೇಶಕರು, ಜಿಂಕೆಮರಿಯನ್ನು ಟ್ಯಾಕೀಸಿನಲ್ಲಿ ಓಡಲು ಬಿಟ್ಟಿದ್ದಾರೆ!

'ಜಿಂಕೆಮರಿ'ಯ ಕೊರಳಲ್ಲಿ ಹಳಸಲು ಕಥೆಯ ಹಗ್ಗ. ಆ ಹಗ್ಗವನ್ನು 'ಲೂಸ್‌' ಆಗಿ ಹಿಡಿದ ನಿರ್ದೇಶಕರು, ಜಿಂಕೆಮರಿಯನ್ನು ಟ್ಯಾಕೀಸಿನಲ್ಲಿ ಓಡಲು ಬಿಟ್ಟಿದ್ದಾರೆ! ಹಗ್ಗ ತುಂಡಾಗಲು ಅತಿ ಕಡಿಮೆ ಸಮಯ ಸಾಕು. ನಂತರ 'ಜಿಂಕೆಮರಿ'ಯ ಓಟ ಟ್ಯಾಕೀಸಿನಿಂದ ಹೊರಕ್ಕೆ!
'ನಂದ ಲವ್ಸ್ ನಂದಿತಾ' ಚಿತ್ರದ ಸೆಕ್ಸಿ ಸಕ್ಸಸ್ ಹಾಡೇ 'ಜಿಂಕೆಮರಿ' ಟೈಟಲ್‌ಗೆ ಸ್ಫೂರ್ತಿ. ಕಥೆಗೂ ಹೆಸರಿಗೂ ಹೆಸರುಕಾಳಷ್ಟು ಸಂಬಂಧವಿಲ್ಲ. ತೆಲುಗಿನ 'ಬಿಂದಾಸ್‌'ನ ರೀಮೇಕ್ ಅಂತ ಹೇಳಿಕೊಳ್ಳಲೂ ನಿರ್ದೇಶಕ ನವೀನ್‌ಕುಮಾರ್‌ಗೆ ಮುಜುಗರವಾದೀತು. ಕಾಮಿಡಿ ಉಪ್ಪಿನಕಾಯಿಯನ್ನು ಅತಿಯಾಗಿ ಬಡಿಸಿದ್ದು, ಕೆಲವೊಮ್ಮೆ ಅವೂ ಸಪ್ಪೆಯಾಗಿ ರುಚಿಸುವುದರಿಂದ 'ಊಟ ಬಿಟ್ಟು' ಎದ್ದು ಹೋಗುವುದೋ ಬಿಡುವುದೋ ಎಂಬ ಗೊಂದಲ ಹುಟ್ಟದಿದ್ದರೆ ಪ್ರೇಕ್ಷಕ ನಿದ್ರಿಸುತ್ತಿದ್ದಾನಂತಲೇ ಅರ್ಥ!
ಕಥೆಯಲ್ಲೇನೂ ಸ್ಪೆಷೆಲ್ಲಿಲ್ಲ. ಅಂಥ ಕಥೆಗಳ ಗುಡ್ಡೆಯೇ ಕನ್ನಡದಲ್ಲಿದೆ. ಎರಡು ಹಾವು- ಮುಂಗುಸಿಯಂಥ ಗೌಡರ ಕುಟುಂಬ.
ಎಂಪಿ ಎಲೆಕ್ಷನ್ನಿಗೆ ತಮ್ಮ ಕಡೆಗೆ ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕಾಗಿ ಕತ್ತಿಮಸೆಯುವಲ್ಲಿಂದ ಚಿತ್ರ ಶುರು. ಪರಸ್ಪರ ಕೊಲೆಗೆ ಕೈಹಾಕುವ ಗೌಡರ ಮಕ್ಕಳು. ತೀರಾ ತರಲೆ, ಇವನು ಜತೆಗಿದ್ದರೆ ನಮಗೇ ಆಪತ್ತು ಎಂಬ ಕಾರಣಕ್ಕೆ ಶಿವನಗೌಡರಾದ ಅವಿನಾಶ್, ನಾಯಕ ಅಜಯ್‌ನನ್ನು ಊರಿನಿಂದ ಹೊರಹಾಕುತ್ತಾನೆ. ಅವನು ಸೀದಾ ವಿರೋಧಿ ಗೌಡರ ಮನೆ ಸೇರಿ, ತಮ್ಮ ಕುಟುಂಬದ ಮೇಲಿನ ದ್ವೇಷ ಕರಗಿಸಲೆತ್ನಿಸುವುದನ್ನೇಚ್ಯುಯಿಂಗ್ ಗಮ್ ಥರ ಎಳೆಯಲಾಗಿದೆ.
ಅಜಯ್, ಮಾವನ ಮಗಳನ್ನು ಪಟಾಯಿಸುವಾಗ ಡೈಲಾಗ್‌ಗಳ ಪಟಾಕಿ ಸಿಡಿಯುತ್ತದೆ. ಕಥೆಯನ್ನು ನಿರ್ಲಕ್ಷಿಸಿ ಚಿತ್ರವನ್ನು ತೀರಾ ತಮಾಷೆಯಾಗಿ ಮೂಡಿಸಲು ಹೋಗಿ, ಅರ್ಥವೇ ಇಲ್ಲದ ದೃಶ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಪ್ರಥಮಾರ್ಧ ಪ್ರಯಾಸಪಟ್ಟುಕೊಂಡೇ ನೋಡಬೇಕು. ದ್ವಿತೀಯಾರ್ಧದಲ್ಲಿ ಕಥೆಯ ಹರಿವು ಬೋರ್ ತರುವುದಿಲ್ಲ. ಸಿನಿಮಾ ಉದ್ದೇಶದ ಹಾದಿಗೆ ಮರಳುತ್ತದೆ. ಶೋಭರಾಜ್, ಬುಲೆಟ್ ಪ್ರಕಾಶರ ಪ್ರವೇಶ ದ್ವಿತೀಯಾರ್ಧಕ್ಕೆ ಕಳೆ. ಕಾಮಿಡಿ ಪಂಚಿಂಗ್ ಡೈಲಾಗ್‌ಗಳೂ ಮೆರೆದಾಡುವುದರಿಂದ 'ನಗಿಸುವ ಯೋಗಿ'ಯನ್ನೂ ನೋಡಬಹುದು.
ಕಥೆಯುದ್ದಕ್ಕೂ ಜಾಣತನ ಪ್ರದರ್ಶಿಸಿ, ಹಾಸ್ಯವನ್ನೂ ಹೆಗಲಿಗೇರಿಸಿಕೊಂಡು ಯೋಗಿ ಮಿಂಚುತ್ತಾರೆ. ಸಾಹಸ ದೃಶ್ಯಗಳಲ್ಲೂ ಸೊಗಸಿದೆ. ನಾಯಕಿ ಸೋನಿಯಾ ಗೌಡರ ವಯ್ಯಾರಕ್ಕೆ ಹೋಲಿಸಿದರೆ, ನಟನೆ ಸ್ವಲ್ಪ ಡಲ್ಲು. ಗಡಸು ದನಿಯ ಗೌಡ ಶರತ್ ಲೋಹಿತಾಶ್ವ, ಕೆಂಪುಗಣ್ಣಿನ ಅವಿನಾಶ್, ವಿವೇಚನೆ ಬಳಸುವ ರಮೇಶ್ ಭಟ್, ವಿಲನ್ ಕಡೆಯಿಂದ ಯಾವುದೇ ವೀಕ್ನೆಸ್ ಬಿಟ್ಟುಕೊಡುವುದಿಲ್ಲ. ಅಚ್ಯುತ್ ಕುಮಾರ್, ನೀನಾಸಂ ಅಶ್ವತ್ಥ್‌ರನ್ನು ದುಡಿಸಿಕೊಂಡಿದ್ದು ಏನೇನೂ ಸಾಲದು. ಪೊಲೀಸಾಗಿ ಬಂದ ನಿರ್ಮಾಪಕ ಮಹೇಶ್ ಬಾಳೆಕುಂದ್ರಿಯ ನಟನೆ ಬೇಕಾದಷ್ಟಾಯಿತು. ಸಾಯಿಕಾರ್ತಿಕ್ ಸಂಗೀತ ಅನಿವಾರ್ಯದ ಅಳವಡಿಕೆಯಷ್ಟೇ. ಸುಮನ್ ರಂಗನಾಥ್‌ರ ಐಟಂ ಸಾಂಗ್, ಕಿವಿಗಿಂತ ಹೆಚ್ಚಾಗಿ ಕಣ್ಣರಳಿಸುವಂತಿದೆ. ನಕ್ಕು ತುಂಬಾ ದಿನ ಆಗಿದೆ ಎನ್ನುವವರು 'ಜಿಂಕೆಮರಿ'ಗೆ ವಿಸಿಟ್ ಕೊಡಬಹುದಷ್ಟೇ! ಬೇರೆ ಕಾರಣ ಕೇಳಬೇಡಿ.

-ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯಾದ್ಯಂತ 'ಜಾತಿ ಗಣತಿ' ಆರಂಭ; ಕೆಲವು ಕಡೆ ತಾಂತ್ರಿಕ ದೋಷ, ಹಲವಡೆ ಸರ್ವರ್ ಸಮಸ್ಯೆ

ಅಪ್ರಾಪ್ತ ಬಾಲಕಿ ಜೊತೆ ಓಡಿ ಹೋಗಿ ಸಿಕ್ಕಿಬಿದ್ದ ಯುವಕ: ಪೊಲೀಸ್ ಜೀಪಿನ ಮೇಲೆ ಹತ್ತಿ ಬಾಲಕಿ ಜೊತೆ ಅಶ್ಲೀಲ ನೃತ್ಯ; Video

ಮೋದಿ ಮಹಾನ್ ಡೋಂಗಿ, 8 ವರ್ಷ ಹೆಚ್ಚು GST ವಿಧಿಸಿದ್ದೂ ಅವರೇ, ಈಗ ವಾಪಾಸ್ ಕೊಡ್ತೀರಾ?

TCS Layoffs Row: ಭಾರತದ ಐಟಿ ದೈತ್ಯ ಸಂಸ್ಥೆ ವಿರುದ್ಧ "ಬಲವಂತದ ರಾಜೀನಾಮೆ" ಆರೋಪ! 30,000 ಉದ್ಯೋಗಕ್ಕೆ ಕುತ್ತು?

ರಾಜ್ಯಸಭಾ ಸದಸ್ಯೆ Sudha Murty ಗೆ ಸೈಬರ್ ವಂಚಕರ ಬೆದರಿಕೆ!

SCROLL FOR NEXT