ಅಭಿಮನ್ಯು ಚಿತ್ರದಲ್ಲಿ ಅರ್ಜುನ್ ಸರ್ಜಾ 
ಸಿನಿಮಾ ವಿಮರ್ಶೆ

ಮಹತ್ವದ ಸಂದೇಶದ ಭಾರ ಹೊತ್ತು ಸೊರಗಿದ ಅಭಿಮನ್ಯು

ಮಹತ್ವದ ಸಂದೇಶದ ಭಾರ ಹೊತ್ತು ಸೊರಗಿದ ಅರ್ಜುನ್ ಸರ್ಜಾ ಅಭಿಮನ್ಯು

ಬಡಗಿ ಕೆಲಸ ಮಾಡುವ ಒಂದು ಬಡ ಕುಟುಂಬ. ಸರಕಾರಿ ಶಾಲೆಗಳೆಲ್ಲಾ ಕೆಟ್ಟವು-ಕೆಲಸಕ್ಕೆ ಬಾರದವು ಎಂಬ ಅಭಿಪ್ರಾಯ. ಮಗಳನ್ನು ಸಿರಿವಂತ ಮಕ್ಕಳೆ ಓದುವ ದುಬಾರಿ ಮತ್ತು ಹೆಸರುವಾಸಿ ಖಾಸಗಿ ಶಾಲೆಗೆ ಸೇರಿಸಬೇಕೆಂಬ ಆಸೆ. ಫೀಸ್ ೧.೨ ಲಕ್ಷ. ಚಿನ್ನ ಮಾರಿ ಬಂದದ್ದು ೨೪ ಸಾವಿರ. ಶಾಲಾ ಮುಖ್ಯಸ್ಥ ನಿಂದ ಫೀಸ್ ಕಟ್ಟಲು ೧೫ ದಿನಗಳ  ಗಡವು. ದುಡ್ಡಿಗಿದ್ದ ಎಲ್ಲ ಮಾರ್ಗಗಳು ಮುಚ್ಚಿ, ಕೊನೆಗೆ ತನ್ನ ಒಂದು ಕಿಡ್ನಿ ಮಾರಿ ೩೦ ಸಾವಿರ ಗಳಿಸುತ್ತಾನೆ. ಕೊನೆಗೂ ಫೀಸ್ ಕೊಡಲಾಗದೆ, ಮಗಳ ಮುಂದೆಯೇ ಶಾಲಾ ಮುಖ್ಯಸ್ಥನಿಂದ ಅವಮಾನ ಅನುಭವಿಸಿ, ಮನೆಯಲ್ಲಿ ಮಗಳಿಗೆ ವಿಷ ಕೊಟ್ಟು, ತನ್ನ ಹೆಂಡತಿಯ ಜೊತೆಗೂಡಿ ನೇಣಿಗೆ ಶರಣಾಗುತ್ತಾನೆ.

ಸುಂದರ ದೈಹಿಕ ಮೈಕಟ್ಟಿನ ಮಧ್ಯವಯಸ್ಕ ಅಭಿಮನ್ಯು (ಅರ್ಜುನ್ ಸರ್ಜಾ). ಲಂಚ ಕೊಟ್ಟು ಪೋಲೀಸ್ ಕೆಲಸಕ್ಕೆ ಸೇರಲು ಮನಸ್ಸು ಬರದೆ, ಹಾರ್ಡ್ವೇರ್ ರಿಪೇರಿ ಮಾಡಿ ಜೀವನ ನಡೆಸುವ ನಾಯಕ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಾನೆ. ಸ್ವತಃ ಉತ್ತಮ ಕರಾಟೆ ಪಟು. ಆದರ್ಶ ಯುವಕ. ಮೇಲೆ ತಿಳಿಸಿದ ಆತ್ಮಹತ್ಯಾ ಪ್ರಕರಣದ ವಿಷಯ ತಿಳಿದು, ದೇಶಕ್ಕೆ ಏನಾದರೂ ಮಾಡಬೇಕೆಂದು ಪಣ ತೊಡುತ್ತಾನೆ.

ಶಿಕ್ಷಣದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾಡಿ ಜಾಲಾಡಿ, ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚೆಚ್ಚು ಮಾಹಿತಿ ಕಲೆಹಾಕುತ್ತಾನೆ. ತನ್ನ ಗೆಳೆಯನೊಬ್ಬನ ಸಹಾಯದಿಂದ ಒಂದು ಪತ್ರಿಕಾ ಗೋಷ್ಠಿ ಕರೆದು, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದಿಲ್ಲ. ಆದರೆ ಖಾಸಗಿ ಶಾಲೆಗಳು ಬೇಡುವ ಶಿಕ್ಷಣ ಶುಲ್ಕವನ್ನು ಬಡವರು ಭರಿಸಲು ಸಾಧ್ಯವಿಲ್ಲ. ಶಿಕ್ಷಣದ ಹಕ್ಕು ಕಾಯ್ದೆ ಜಾರಿಯಿದ್ದರೂ, ಖಾಸಗಿ ಶಿಕ್ಷಣ ಸಂಸ್ಥೆಗಳು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಆದುದರಿಂದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡು, ಇಡೀ ಪ್ರಾಥಮಿಕ ಶಿಕ್ಷಣವನ್ನೆ ರಾಷ್ಟ್ರೀಕರಣ ಮಾಡಬೇಕೆಂದು ಒಬ್ಬ ಸಾಮಾನ್ಯ ಪ್ರಜೆಯಾಗಿ ಟಿವಿ ವಾಹಿನಿಗಳ ಮೂಲಕ ಆಗ್ರಹಿಸುತ್ತಾನೆ. ಈ ಪತ್ರಿಕಾ ಘೋಷ್ಟಿಯನ್ನು ಮನೆಮನೆಗಳಲ್ಲಿ, ಟಿವಿ ಶೋ  ರೂಮುಗಳಲ್ಲಿ ಗುಂಪು ಗುಂಪಾಗಿ ಜನ ನೋಡಿ ಅಭಿಮನ್ಯು ಮನೆಮಾತಾಗಿ, ಜನಮನದ ಕಣ್ಮಣಿಯಾಗುತ್ತಾನೆ. ಒಂದು ಹಾಡಿನಲ್ಲಿ ಜನರಿಗೆ ಆಧುನಿಕ ಅಂಬೇಡ್ಕರ್ ಆಗಿಬಿಡುತ್ತಾನೆ.

ಈಗ ಶಿಕ್ಷಣ ಸಂಸ್ಥೆಗಳ ಮಾಲೀಕರೆಲ್ಲಾ ಒಂದಾಗಿ, ಭೂಗತ ದೊರೆಯ ಮೊರೆ ಹೋಗುತ್ತಾರೆ. ಆ ಭೂಗತ ದೊರೆ ಅಭಿಮನ್ಯುವಿನ ಬಗೆಗಿನ ಮಾಧ್ಯಮದ ಗಮನವನ್ನು ಬೇರೆಡೆ ಸೆಳೆಯಲು ಬಾಂಬ್ ಬ್ಲಾಸ್ಟ್ ಮಾಡಿಸುತ್ತಾನೆ. ಶಿಕ್ಷಣ ಕಾರ್ಯದರ್ಶಿಯನ್ನು ಕೊಲ್ಲಿಸುತ್ತಾನೆ. ಆ ಕೊಲೆಯನ್ನು ಅಭಿಮನ್ಯುವಿಗೆ ಆರೋಪಿಸಿ ಅವನನ್ನು ಜೈಲಿಗೆ ಕಳುಹಿಸುತ್ತಾನೆ. ಜೈಲಿನಿಂದ ಕೊನೆಗೂ ಬಿಡಿಸಿಕೊಳ್ಳುವ ಅಭಿಮನ್ಯು, ಜೈಲಿನಲ್ಲಿದ್ದ ಇನ್ನೊಬ್ಬ ಭೂಗತೆ ದೊರೆಯನ್ನು ಒಳ್ಳೆಯ ಪ್ರಜೆಯನ್ನಾಗಿ ಮಾರ್ಪಡಿಸಿ, ಅವನ ಸಹಾಯದಿಂದ ಲಂಡನ್ ನಲ್ಲಿ ಶಿಕ್ಷಣ ಸಂಸ್ಥೆಗಳ ಮಾಲೀಕರ ಮಕ್ಕಳನ್ನು ಅಪಹರಿಸುತ್ತಾನೆ. ನಂತರ ತಾನಂದುಕೊಂಡದ್ದನ್ನು ಕಷ್ಟ ಕೋಟಲೆಗಳ ಮೂಲಕ ಸಾಧಿಸುವುದೇ ಕಥೆ.

ಇಂತಹ ಮಹತ್ವದ ಸಂದೇಶವನ್ನು ನೀಡಲು ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ  ಹೊಣೆ ಹೊತ್ತಿರುವ ಅರ್ಜುನ ಸರ್ಜಾ ಈ ಫೀಲ್ ಗುಡ್ ಸಿನೆಮಾ ಮಾಡಲು ತಮ್ಮ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರದಲ್ಲಿ ಹರ ಸಾಹಸ ಮಾಡಿದ್ದಾರೆ. ಬಹುಶಃ ತಾವು ಹಿಂದೆ ನಟಿಸಿದ್ದ ಒಂದೇ ದಿನದಲ್ಲಿ ಮುಖ್ಯಮಂತ್ರಿ ಆಗಿ ಸಮಾಜವನ್ನು ಬದಲಾವಣೆ ಮಾಡುವ "ಮುದಲ್ವನೆ" ಚಿತ್ರದಿಂದ ಅರ್ಜುನ್ ಸ್ಪೂರ್ತಿ ಪಡೆದ ಹಾಗಿದೆ. ಇಡೀ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಆಗಬೇಕು ಎಂಬಂತಹ ತರಹದ ಕನಸುಗಳು ಹೆಚ್ಚು ಜನಗಳನ್ನು ತಲುಪುವ ಚಲನಚಿತ್ರ ಮಾಧ್ಯಮದಲ್ಲಿ ಬಿಂಬಿತವಾಗುವುದು ಅತಿ ಅವಶ್ಯಕ. ಆ ನಿಟ್ಟಿನಲ್ಲಿ ಅರ್ಜುನ್ ಸರ್ಜಾ ಅಭಿನಂದನೀಯ. ಒಂದು ಸಂದೇಶವನ್ನು ಸಮಾಜಕ್ಕೆ ನೀಡಬೇಕೆಂಬ ಅವರ ಉಕ್ತಟ ಆಸೆಯಿಂದಲೇ, ಅವರು ಸಿನೆಮಾದ ರಂಜನೆಯ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ ಎಂದೆನಿಸುತ್ತದೆ, ಅಥವಾ ರಂಜನೆಯ ದೃಷ್ಟಿಯಿಂದ ಸಿನೆಮಾ ಸೋತಿದೆ ಎನ್ನಬಹುದು.  ಹಾಗೆಂದ ಕೂಡಲೇ ಅವರು ನೀಡಬೇಕೆಂದ ಸಂದೇಶ ಸುತ್ತ ಬಿಗಿಯಾದ ಮತ್ತು ಸಹಜವಾದ ಕಥೆಯನ್ನು ಹೆಣೆಯಲು ಗೆದ್ದಿದ್ದಾರೆ ಎನ್ನಲು ಕೂಡ ಸ್ವಲ್ಪ ಕಷ್ಟ. ಕಥೆಯ ಬಗ್ಗೆ, ಶಿಕ್ಷಣದ ತೊಂದರೆಗಳ ಬಗ್ಗೆ, ಕನಸನ್ನು ಸಾಧಿಸುವ ಬಗ್ಗೆ ಇನ್ನೂ ಹೆಚ್ಚಿನ ಸಹಜತೆಯ ಅವಶ್ಯಕತೆ ಇತ್ತು.  

ತಮ್ಮ ಕರಾಟೆ ಫೈಟ್ ಗಳಿಂದ ಮತ್ತು ಆದರ್ಶಪ್ರಾಯವಾದ ಡೈಲಾಗ್ ಗಳಿಂದ ತಮ್ಮ ಅಭಿಮಾನಿಗಳಿಗೆ ಅರ್ಜುನ್ ಸರ್ಜಾ ಇಷ್ಟವಾಗುತ್ತಾರೆ . ಹಾಸ್ಯ ಸನ್ನಿವೇಶಗಳು-ಹಾಸ್ಯ ಸಂಭಾಷಣೆಗಳು ಚಿತ್ರಕ್ಕೆ ತುರುಕಿದಂತಿದ್ದು, ಕಿರಿಕಿರಿ ಉಂಟು ಮಾಡುತ್ತವೆ. ಕನ್ನಡ ಸಿನೆಮಾದವರು ಇನ್ನು ಮುಂದೆ ಸಿನೆಮಾಗೆ ಒಬ್ಬ ಹಾಸ್ಯನಿರ್ದೇಶಕನಿಂದ ಹಾಸ್ಯ ಸನ್ನಿವೇಶಗಳನ್ನು ಚಿತ್ರೀಕರಿಸುವುದು ಒಳಿತು. ಸುರ್ವಿನ್‍ಚಾವ್ಲಾ, ರವಿಕಾಳೆ, ಸಿಮ್ರಾನ್‍ಕಪೂರ್ ಅವರ ನಟನೆ ಅಗತ್ಯಕ್ಕೆ ತಕ್ಕಂತಿದೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಹಾಡುಗಳ ಸಾಹಿತ್ಯ ಮನಸ್ಸಿನಲ್ಲಿ ಉಳಿಯುವಂತಿಲ್ಲ.  

ಸಿನೆಮಾ ರಂಜನೆಗಷ್ಟೆಯೆ? ಅಥವಾ ಸಿನೆಮಾದಲ್ಲಿ ಬರಿ ಕಥೆ ಹೇಳಬೇಕೋ? ಅಥವಾ ಅದು ಒಂದು ಒಳ್ಳೆಯ ಸಂದೇಶ ನೀಡಬೇಕೋ?  ಎಂಬುದು ಹಳೆಯ ಚರ್ಚೆ. ಸಿನೆಮಾ ಬರೀ ರಂಜನೆಗಷ್ಟೆ ಸೀಮಿತ ಅಲ್ಲ ಎಂಬುದು ಅರ್ಜುನ ಸರ್ಜಾ ವರ ಅಭಿಮತ ಎಂದು ಈ ಚಿತ್ರದ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಈ ಎಲ್ಲವನ್ನೂ ಸಿನೆಮಾದಲ್ಲಿ ಮೇಳೈಸಿದಾಗ ಕಲಾತ್ಮಕವಾಗಿ ನಿಭಾಯಿಸಲು ಹೆಚ್ಚಿನ ಶ್ರಮ ಬೇಕು. ಈ ನಿಟ್ಟಿನಲ್ಲಿ ಕಥೆಗಾಗಿ, ಚಿತ್ರಕಥೆಗಾಗಿ, ಸಂಭಾಷಣೆಗಾಗಿ, ನಿರ್ದೇಶನಕಾಗಿ, ನಟನೆಗಾಗಿ ಪ್ರತ್ಯೇಕವಾಗಿ ಪ್ರತಿಭಾವಂತ ಕಲಾವಿದರು ಕೆಲಸ ಮಾಡಿದರೆ ಉತ್ತಮ ಇಡಿಯಾಗಳು ಸಿನಿಮಾ ಒಳಹೊಕ್ಕು ಸಿನೆಮಾ ಇನ್ನೂ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಅರ್ಜುನ್ ಸರ್ಜಾ ಯೋಚಿಸುವುದೊಳಿತು.

ಸಂದೇಶದ ಭಾರವನ್ನು ಸಿನೆಮಾ ಹೊರಲಾರದೆ, ರಂಜನೆಯ ದೃಷ್ಟಿಯಿಂದ ಅಭಿಮನ್ಯು ಸೊರಗಿದರೂ, ಈ ಮಾಸ್ ಮೀಡಿಯಾದಲ್ಲಿ ಇಂತಹ ಒಂದು ವಿಷಯಕ್ಕೆ ಪ್ರಾತಿನಿಧ್ಯ ಕೊಟ್ಟದ್ದಕ್ಕಾದರೂ ಸಿನೆಮಾವನ್ನು ನೋಡಿ ಅಭಿನಂದಿಸಬಹುದು. 

- ಗುರುಪ್ರಸಾದ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT