ಉಪ್ಪಿ2 ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

'ನಾನ್'ಬಿಟ್ 'ನೀನ್'ಬಿಟ್ ತಲೆಗೆ ಹೇನ್ ಬಿಟ್ ಉಪ್ಪಿ೨

ಕಥೆಗೆ ಶುರು ಮತ್ತು ಅಂತ್ಯ ಇರಬೇಕು ಆದರೆ ಅದು ಅದೇ ಕ್ರಮದಲ್ಲಿ ಇರಬೇಕಿಲ್ಲ ಎಂಬುದು ಸಿನೆಮಾ ಪಂಡಿತರ ಅಭಿಮತ. ಆದರೆ ಆ ಕಥೆ ಆ ಕ್ರಮಕ್ಕೆ ಬೇಡಿಕೆಯಿಡಬೇಕು. ಸಿನೆಮಾಸಕ್ತರಿಗೆ ಗೊಂದಲ

ಕಥೆಗೆ ಶುರು ಮತ್ತು ಅಂತ್ಯ ಇರಬೇಕು ಆದರೆ ಅದು ಅದೇ ಕ್ರಮದಲ್ಲಿ ಇರಬೇಕಿಲ್ಲ ಎಂಬುದು ಸಿನೆಮಾ ಪಂಡಿತರ ಅಭಿಮತ. ಆದರೆ ಆ ಕಥೆ ಆ ಕ್ರಮಕ್ಕೆ ಬೇಡಿಕೆಯಿಡಬೇಕು. ಸಿನೆಮಾಸಕ್ತರಿಗೆ ಗೊಂದಲ ಮೂಡಿಸುವ ಸಲುವಾಗಿಯೇ ಕಥೆ ಹೊಸೆಯುವುದು, ಹೇಳುವ ಕ್ರಮ ಬದಲಿಸುವುದು, ಹಲವಾರು ಅನಗತ್ಯ ಟ್ವಿಸ್ಟ್ ಗಳನ್ನು ಸೇರಿಸುವುದು, ಪ್ರೇಕ್ಷಕರು ಅರ್ಥವಾಗಲಿಲ್ಲ ಎಂದಾಗ, ಅದು ನಿರ್ದೇಶಕ ಜಾಣ್ಮೆ ಎಂದು ಸಂಭ್ರಮಿಸುವುದು ಇವೆಲ್ಲಾ ನಿರ್ದೇಶಕ ಉಪೇಂದ್ರ ಪರೀಕ್ಷಿಸಿ ಪ್ರಮಾಣಿಸಿ ಗೆದ್ದಿರುವ ಸೂತ್ರಗಳು. ಇಂತಹುದೇ ಸೂತ್ರಗಳನ್ನು ಇಟ್ಟುಕೊಂಡು ಕೆಲವೊಮ್ಮೆ ಉಪೇಂದ್ರ ಸಿನೆಮಾದ ಮುಂದುವರೆದ ಭಾಗ ಇರಬಹುದೇ ಎಂದು ಊಹಿಸುವಂತೆ ಮಾಡುವ ಆದರೆ ಹಲವಾರು ಬಾರಿ ಉಪೇಂದ್ರ ಸಿನೆಮಾದ ಪುನರಾವರ್ತನೆ ಎನಿಸುವಂತೆ ಮಾಡುವ ಉಪ್ಪಿ೨ ಸಿನೆಮಾ ತೆರೆಗೆ ಬಂದಿದೆ.

'ನೀನು' (ಉಪೇಂದ್ರ) ಎಂಬುವ, ವರ್ತಮಾನದಲ್ಲಷ್ಟೇ ನಂಬಿಕೆಯಿಡಬೇಕು, ಭೂತ ಭವಿಷ್ಯವನ್ನು ಚಿಂತಿಸಬಾರದು ಎಂದು ಸದಾ ಎಲ್ಲರಿಗೂ ಭೋದಿಸುವ, ಶ್ರಮದಲ್ಲಿ ನಂಬಿಕೆಯಿಟ್ಟು ಬದುಕುವ ಮಧ್ಯವಯಸ್ಕನನ್ನು ಅರಸಿ 'ಖುಷಿ' (ಕ್ರಿಶ್ಚಿನ ಅಖೀವಾ) ಎಂಬ ಹುಡುಗಿ ಉಪೇಂದ್ರ ಸಿನೆಮಾದಲ್ಲಿ ದಾಮಿನಿ 'ನಾನು' ನನ್ನು ಹುಡುಕಿ ಬರುವಂತೆಯೇ ಅರಸಿ ಬರುತ್ತಾಳೆ. ಆದರೆ ಭೂತದಲ್ಲಿ ಬದುಕುವ ಕೆಲವು ಭೂಗತ ರೌಡಿಗಳು (ಉಪೇಂದ್ರ ಸಿನೆಮಾದ ಖಳನಟನನ್ನೂ ಒಳಗೊಂಡಂತೆ) ಹಾಗೂ ಭವಿಷ್ಯವನ್ನೇ ಚಿಂತಿಸುವ ಕೆಲವು ಪೊಲೀಸ್ ಅಧಿಕಾರಿಗಳು ಖುಷಿಗೆ ದಾರಿ ತಪ್ಪಿಸುತ್ತಾರೆ ಜೊತೆಗೆ ಪ್ರೇಕ್ಷಕರ ದಾರಿಯನ್ನೂ! ಈ ಗೊಂದಲಗಳ ಮಧ್ಯೆ ಖುಷಿಗೆ 'ನೀನು' ಸಿಗುವನೇ?

ಉಪೇಂದ್ರ ಸಿನೆಮಾಗಳಲ್ಲಿ ಯಾವೊತ್ತು ರಂಜಿಸುವುದು ಸಂಭಾಷಣೆ. 'ಎ'. 'ಉಪೇಂದ್ರ' ಸಿನೆಮಾಗಳು ಜನರಿಗೆ ಗೊಂದಲ ಸೃಷ್ಟಿಸಿ ಎಷ್ಟು ಗೆದ್ದವೋ, ಅಷ್ಟೇ ಶ್ರೇಯಸ್ಸು ಪಡ್ಡೆ ಹುಡುಗರು ಮತ್ತೆ ಮತ್ತೆ ಹೇಳಿ ಸಂಭ್ರಮಿಸಬಹುದಾಗಿದ್ದ ಆ ತಿಕ್ಕಲುತನದ, ರಿದಮಿಕ್ ಡೈಲಾಗುಗಳಿಗೂ ಸಲ್ಲುತ್ತದೆ. ಆದರೆ ಈ ಸಿನೆಮಾದ ಸಂಭಾಷಣೆಯಲ್ಲಿ ಆ ಮಾಂತ್ರಿಕ ಸ್ಪರ್ಶವನ್ನು ಉಪೇಂದ್ರ ಕಳೆದುಕೊಂಡಿದ್ದಾರೆ. ವರ್ತಮಾನದಲ್ಲಿ ಬದುಕಬೇಕು, ಹಿಂದಿನದು ಮುಂದಿನದನ್ನು ಯೋಚಿಸಬೇಡ, ಕಣ್ಮುಂದೆ ಇರುವುದಷ್ಟೇ ಸತ್ಯ, ಶ್ರಮದಲ್ಲಿ ನಂಬಿಕೆಯಿಡು ಎಂಬ ಸುಲಭ ತತ್ವಜ್ಞಾನದ ಸೂತ್ರವೊಂದನ್ನಿಡಿದು ಸಿನೆಮಾವಿಡಿ ಜಾಳುಜಾಳಾಗಿ ಬೋಧನೆ ನೀಡಿ ಪ್ರೇಕ್ಷಕರನ್ನು ಜಾಡಿಸಿಬಿಡುತ್ತಾರೆ. ಅಲ್ಲದೆ ಈ ಸನ್ನಿವೇಶಗಳು ಅತಿ ಅಸ್ವಾಭಿಕವಾಗಿ ಮೂಡಿಬಂದಿರುವುದು ಹೆಚ್ಚು ಬೇಸರಿಕೆ ತರುತ್ತದೆ. ಪ್ರೇಕ್ಷಕರಲ್ಲಿ ಗೊಂದಲ ಸೃಷ್ಟಿಸಬೇಕೆಂದೇ ಹಲವಾರು ಬಾರಿ ಸಿನೆಮಾ ಡೀವಿಯೇಟ್ ಆಗುವುದು, ತೆರೆ ಸಂಪೂರ್ಣ ಖಾಲಿ ಆಗುವುದು ಇಂತಹ ಗಿಮಿಕ್ ಗಳು ಮೂಲ ನಿರೂಪಣೆಗೆ ಹೊಂದಾಣಿಕೆಯಾದಂತೆ ಕಾಣುವುದೇ ಇಲ್ಲ. ಎಲ್ಲವೂ ತುರುಕಿದಂತಿದ್ದು, ಇದರ ತಾರ್ಕಿಕ ಯೋಚನೆಗೆ ಇಳಿದರೆ ಪ್ರೇಕ್ಷಕ ಗೊಂದಲನಾಗಿ ಹುಚ್ಚನಾಗುತ್ತಾನೆ. ಬಹುಶಃ ಉಪೇಂದ್ರ ಅವರ ಗಟ್ಟಿತನ ಇರುವುದು ಅದರಲ್ಲೇ. ಆ ನಿಟ್ಟಿನಲ್ಲಿ ಉಪೇಂದ್ರ ಭಾಗಶಃ ಯಶಸ್ವಿಯಾಗಿದ್ದಾರೆ. ಹಾಡುಗಳ ಗೀತ ರಚನೆಯಲ್ಲಿ ಉಪೇಂದ್ರ ಅವರ ಖಟ್ಟಾ ಅಭಿಮಾನಿಗಳನ್ನು ತಣಿಸಬಲ್ಲ ಕೆಲವು ಸಾಲುಗಳು ಬಂದರೂ, ಗುರುಕಿರಣ್ ಅವರ ಸಂಗೀತ ಎಲ್ಲೂ ಹಿತವೆನಿಸುವುದಿಲ್ಲ. ಅಶೋಕ್ ಕಶ್ಯಪ್ ಅವರ ಕ್ಯಾಮರಾ ಕೂಡ ಯಾವುದೇ ಹೆಚ್ಚುಗಾರಿಕೆಯಿಲ್ಲ. ಬಹುತೇಕ ಪೋಷಕ ಪಾತ್ರವರ್ಗ 'ಉಪೇಂದ್ರ' ಸಿನೆಮಾದಲ್ಲಿ ಕಂಡವರೇ. ಹಾಗು ಅವರ ನಟನೆ ಕೂಡ ಅಲ್ಲಿ ಕಂಡಿರುವಂತದೇ. ಉಪೇಂದ್ರ ತನ್ನ ಅಭಿಮಾನಿಗಳಿಗೆ 'ಸಿನೆಮಾ ಅರ್ಥವಾಗಲಿಲ್ಲ' ಎಂದು ಹೇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಾಕೃತಿಯ 'ಅಮೂರ್ತತೆ'ಯನ್ನು ಸಮರ್ಥಿಸಿಕೊಳ್ಳಲು ಹಲವಾರು ಬಾರಿ ಬೇಂದ್ರೆಯವರ 'ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತೆ' ಈ ಸಾಲುಗಳನ್ನು ಬಳಸಲಾಗುತ್ತದೆ. ಉಪ್ಪಿ೨ ಸಿನೆಮಾದಲ್ಲಿ ಅಂತಹ ಯಾವುದೇ 'ಅಮೂರ್ತತೆ' ಇಲ್ಲ ಆದರೆ 'ಹುಚ್ಚುತನ'ವಿದೆ. ಸಿನೆಮಾ ಭಾವಗೀತೆಯಂತೂ ಅಲ್ಲವೇ ಅಲ್ಲ. ಉಪೇಂದ್ರ ಅವರ ಮಾಮೂಲಿ ಶೈಲಿಯಲ್ಲಿ ಅವವೇ ಗೊಂದಲಗಳು, ಹಿಂದಿನ ಸಿನೆಮಾಗಳ ಪುನರಾವರ್ತಿತ-ಮುಂದುವರೆದ ಸಂಭಾಷಣೆಗಳು, ಆ ತಿಕ್ಕಲುತನಗಳು ಮತ್ತು ಹಾವಭಾವಗಳನ್ನು ಮತ್ತೆ ಹೊಸ ತಟ್ಟೆಯಲ್ಲಿ ಹಾಕಿ ಕಲೋಸಗರ ಮಾಡಿ ಒಗ್ಗರಣೆ ಹಾಕಿ ಕಿಚಡಿ ಮಾಡಿ ತಮ್ಮ ಅಭಿಮಾನಿಗಳಿಗೆ ಉಪ್ಪಿ೨ ಎಂದು ಬಡಿಸಿದ್ದಾರೆ. ಒಮ್ಮೆ ನೋಡಲು ಆತಂಕವೇನಿಲ್ಲ ಎನ್ನಬಹುದಾದರೂ ಈ ಗೊಂದಲಗಳನ್ನು ಸಂಭ್ರಮಿಸುವ ಪ್ರೇಕ್ಷಕರು ಕೇಳಬೇಕಾದ ಪ್ರಶ್ನೆ, ಈ ಸಿನೆಮಾ ಹೇಳಬೇಕಾದದ್ದನ್ನು, ಪ್ರದರ್ಶಿಸಬೇಕಿದ್ದ ಮನರಂಜನೆಯನ್ನು ಸರಳವಾಗಿಸಿ, ಅತಿರಂಜಿತ ಗೊಂದಲಗಳನ್ನು ನಿವಾರಿಸಿ ನಿರ್ದೇಶಿಸಿದ್ದರೆ ಸಿನೆಮಾದ ಶಕ್ತಿ ಕುಂದುತ್ತಿತ್ತೇ? ಸರಳವಾಗಿ ಅರ್ಥವಾಗುವ ಅರ್ಥಗರ್ಭಿತ ಸಿನೆಮಾ ಮಾಡಲು ಉಪೇಂದ್ರರಿಗೆ ಸಾಧ್ಯವೇ?

-ಗುರುಪ್ರಸಾದ್
guruprasad.n@kannadaprabha.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT