ರೆಬೆಲ್ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ತಲೆ ನಡು ಬುಡ ಇಲ್ಲದ ರೆಬೆಲ್; ಪ್ರೇಕ್ಷಕನಿಗೆ ವಿಪರೀತ ಟ್ರಬಲ್

ಸಿನೆಮಾ ನೋಡುವುದು ಆರೋಗ್ಯಕ್ಕೆ ಹಾನಿಕರ, ಶೀಘ್ರ ತಲೆ ನೋವು ಮತ್ತು ಮೈಗ್ರೇನ್ ಗಳನ್ನು ಉಂಟು ಮಾಡುತ್ತದೆ' ಎಂದು ನಿರಂತರ ಸ್ಕ್ರಾಲ್

ಬೆಂಗಳೂರು: ಮುತ್ತಿನಹಾರ ಸಿನೆಮಾ ನಿರ್ದೇಶನ ಮಾಡಿದವರು ಎಸ್ ವಿ ರಾಜೇಂದ್ರ ಸಿಂಗ್ ಬಾಬು ಎಂಬುದನ್ನು ಅವರು ಈಗ ೧೦ ವರ್ಷ ಬಿಟ್ಟು ಸಿನೆಮಾವನ್ನು ನಿರ್ದೇಶಿಸಿದ್ದರು ಮರೆಯಲು ಸಾಧ್ಯವಿಲ್ಲ. ೧೦ ವರ್ಷದ ನಂತರ ಈಗ ತಮ್ಮ ಪುತ್ರನೇ ನಾಯಕನಟನಾಗಿರುವ 'ರೆಬೆಲ್' ಸಿನೆಮಾ ನಿರ್ದೇಶಿಸಿದ್ದಾರೆ. ಈ ಹತ್ತು ವರ್ಷದ ಅವಧಿಯಲ್ಲಿ ತಮ್ಮ ಸಿನೆಮಾ ನಿರ್ದೇಶನ ಜ್ಞಾನವನ್ನು-ಸೂಕ್ಷ್ಮತೆಯನ್ನು ವಯೋವೃದ್ಧರಾದ ರಾಜೇಂದ್ರಸಿಂಗ್ ಬಾಬು ವೃದ್ಧಿಸಿಕೊಂಡಿದ್ದಾರೆಯೇ? ಅಥವಾ ಈ ಕಾಲಾವಧಿಯಲ್ಲಿ ತಮ್ಮ ಮೊನಚನ್ನು ಕಳೆದುಕೊಂಡಿದ್ದಾರೆಯೇ?

ಅನುಪಮಾ ರಾವ್(ಸುಹಾಸಿನಿ) ಬಹಳ ನಿಷ್ಟಾವಂತ ಭದ್ರತಾ ಕಾರ್ಯದರ್ಶಿ. ರಕ್ಷಣಾ ಸಾಮಗ್ರಿ ಒಪ್ಪಂದದಲ್ಲಿ ಲೋಪ ದೋಷವುಳ್ಳ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬಾರದೆಂಬ ಕಟು ನಿಲುವು ತೆಗೆದುಕೊಳ್ಳುತ್ತಾರೆ. ಇದರಿಂದ ರಕ್ಷಣಾ ಮಂತ್ರಿ ರಾಣಾ (ಶರತ್ ಲೋಹಿತಾಶ್ವ) ಅವರನ್ನು ಎದುರು ಹಾಕಿಕೊಂಡು ಕಷ್ಟ ಕೋಟಲೆಗಳನ್ನು ಎದುರಿಸುತ್ತಾರೆ. ಇವರ ಮಗ ಕಾರ್ತಿಕ್ (ಆದಿತ್ಯ) ಮೇಜರ್. ತಮ್ಮ ತಂದೆ ನಡೆಸುವ ಶಾಲೆಯಲ್ಲಿ ಭಯೋತ್ಪಾದನೆ ದಾಳಿ ನಡೆದು ಅಲ್ಲಿಗೆ ರಕ್ಷಣೆಗೆ ತೆರಳುವ ಆದಿತ್ಯ ದೋಷಪೂರಿತ ರಕ್ಷಣಾ ಜ್ಯಾಕೆಟ್ ಮತ್ತು ಹೆಲ್ಮೆಟ್ ಗಳಿಂದ ತಂಡದ ಸದಸ್ಯರನ್ನು ಕಳೆದುಕೊಳ್ಳುತ್ತಾನೆ. ಆದುದರಿಂದ ತನ್ನ ಮುಂದಿನ ಕರ್ತವ್ಯವನ್ನು ನಿಭಾಯಿಸಲು ನಿರಾಕರಿಸಿ ಕೋರ್ಟ್ ಮಾರ್ಷಲ್ ಗೆ ಒಳಗಾಗಿ ಎರಡು ವರ್ಷದ ಜೈಲು ಸಜೆಗೆ ಗುರಿಯಾಗುತ್ತಾನೆ. ಆದರೆ ಅಲ್ಲಿಂದ ತಪ್ಪಿಸಿಕೊಂಡ ದುಷ್ಟ ಸಂಹಾರಕ್ಕೆ ಸಿಂಗಪುರಕ್ಕೆ ತೆರಳುತ್ತಾನೆ. ಇನ್ನುಮುಂದೆ ಏನು ನಡೆಯುತ್ತದೆ ಎಂಬುದೇ ಕಥೆ. ಊಹಿಸುವುದೇನೂ ಕಷ್ಟವಲ್ಲ.

ಚಲನಚಿತ್ರದ ಎಲ್ಲ ವಿಭಾಗಗಳಲ್ಲೂ ಇಷ್ಟು ಕಳಪೆ ಪ್ರದರ್ಶನ ನೀಡುವುದೆಂದರೆ ಅದು ಒಂದು ರೀತಿಯ ದಾಖಲೆಯೇ ಸರಿ. ಅದು ಸಹ ಹಿರಿಯ ಖ್ಯಾತ ನಿರ್ದೇಶಕರೊಬ್ಬರಿಂದ! ಮೊದಲಿಗೆ ಕಥೆ. ಲೋಪದೋಷವುಳ್ಳ ರಕ್ಷಣಾ ಸಾಮಗ್ರಿಯ ಖರೀದಿ ಕಥೆ ಇದೆ ಎಂದು ಮೊದಲಿಗೆ ನಿಮಗೆ ಅನ್ನಿಸಿದ್ದರೆ ಅದು ನೆಪ ಮಾತ್ರ ಅಷ್ಟೆ. ನಂತರ ಲಂಗು ಲಗಾಮೇ ಇಲ್ಲದೆ ನಾಗಾಲೋಟವಾಗಿ ಕಥೆ ಓಡುತ್ತದೆ ಹಾಗೂ 'ಹಿರೋ' ಆದಿತ್ಯನ ಸುತ್ತಲೇ ಗಿರಾಕಿ ಹೊಡೆಯುತ್ತದೆ. ತಲೆ-ಬುಡ-ನಡು ಏನೂ ಇಲ್ಲದ ಈ ಕಥೆಯನ್ನು ಯಾರಾದರು ಅಮೆಚ್ಯೂರ್ ನಿರ್ದೇಶಕ ಮಾಡಿದ್ದರೂ ಒಪ್ಪುವುದು ಕಷ್ಟವೇ! ಎಂ ಆರ್ ರಮೇಶ್ ಬರೆದಿರುವ ಅತಿ ಸಾಧಾರಣ ಸಂಭಾಷಣೆ ತಲೆಚಿಟ್ಟು ಹಿಡಿಸುತ್ತದೆ. ಹಾಗೇಯೆ ಇಷ್ಟು ಕೆಟ್ಟದಾಗಿ ಛಾಯಾಗ್ರಹಣ ಮಾಡಿದಂತಹ ಕನ್ನಡ ಚಿತ್ರಗಳೇ ಬಹುಷಃ ಕಳೆದ ಐದಾರು ವರ್ಷಗಳಲ್ಲಿ ಕಂಡುಬಂದಿಲ್ಲ. ಐಫೋನ್ ಬಳಸಿ ಅತ್ಯುತ್ತಮ ಗುಣಮಟ್ಟದ ಫೀಚರ್ ಫಿಲ್ಮ್ ಗಳನ್ನು ನಿರ್ಮಿಸಿತ್ತಿರುವ ಈ ಯುಗದಲ್ಲಿ ಕೆಟ್ಟ ಲೈಟಿಂಗ್, ಚುಕ್ಕಿಗಳು, ಕೆಟ್ಟ ಶಾಟ್ ಕಾಂಪೊಸಿಷನ್, ಮುಖಗಳೇ ಸರಿಯಾಗಿ ಕಾಣದ ಸಿನೆಮಾಟೋಗ್ರಫಿ ಚಿತ್ರಕ್ಕೆ ಇದ್ದ ಅಲ್ಪ ಸ್ವಲ್ಪ ಶಕ್ತಿಯನ್ನು ಕುಂದಿಸಿದೆ. ಇದಕ್ಕೆ ಪೂರಕವಾಗಿ ಸಂಕಲನಕಾರ ಪೂರ್ಣ ಪರಿಶ್ರಮ ಹಾಕಿದ್ದಾರೆ. ವಿಮಾನ ಹಾರುವ ಒಂದೇ ದೃಶ್ಯವನ್ನು ಹತ್ತು ಹಲವಾರು ಬಾರಿ ತೋರಿಸುವುದು, ಮಧ್ಯ ಎಲ್ಲೋ ಅನಾವಶ್ಯಕವಾಗಿ ಹಡಗುಗಳನ್ನು ತೋರಿಸುವುದು, ಪದೇ ಪದೇ ನೀರು ಉಗುಳುವ ಗೊಂಬೆಯನ್ನು ತೋರಿಸುವುದು ಚಲನಚಿತ್ರವನ್ನು ೨೫ ವರ್ಷ ಹಿಂದಕ್ಕೆ ಕೊಂಡೊಯ್ಯುತ್ತದೆ. ಸಂಗೀತ ಆ ದೇವರಿಗೆ ಪ್ರೀತಿಯಾಗಬೇಕು ಎಂದರೆ ಸಾಕಲ್ಲವೇ? ಹೀಗೆ ಎಲ್ಲ ವಿಭಾಗದಲ್ಲೂ ತಂತ್ರಜ್ಞರನ್ನು ಅತಿ ಕಳಪೆಯಾಗಿ ದುಡಿಸಿಕೊಂಡಿರುವ ರಾಜೇಂದ್ರ ಸಿಂಗ್ ಬಾಬು ಯಾವುದೇ ಪೂರ್ವನಿಯೋಜಿತ ಪ್ಲಾನ್ ಇಲ್ಲದೆ, ಸರಿಯಾದ ಸ್ಕ್ರಿಪ್ಟ್ ಇಲ್ಲದೆ ತಮ್ಮ ಹಿಂದಿನ ಟ್ಯಾಲೆಂಟ್ ಎಲ್ಲವನ್ನೂ ಮರೆತು ಬೇಜವಾಬ್ದಾರಿ ಸಿನೆಮಾ ಮಾಡಿದ್ದಾರೆ. ರಕ್ಷಣಾ ಮಂತ್ರಿಯ ಅಂಗರಕ್ಷಕರಿಗೆ ಗ್ಲೋ ಜ್ಯಾಕೆಟ್ಗಳನ್ನು ಹಾಕಿರುವುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣಿಸುತ್ತದೆ. ಚೆಂಡುಗಳಂತೆ ಬಾಂಬುಗಳನ್ನು ಎಸೆದಾಡುವುದು, ಯಾವುದೇ ದೃಶ್ಯದಲ್ಲಿ ಸರಿಯಾದ ಟೆನ್ಷನ್ ಕಂಡುಬರದೇ ಇರುವುದು, ಹಿರೋಗೆ ಎಲ್ಲ ಸಮಯದಲ್ಲೂ ಅತಿ ಸುಲಭವಾಗಿ ಅನುಕೂಲವಾಗುವ ದೃಶ್ಯಗಳನ್ನು ಹೆಣೆದಿರುವುದು ಹೀಗೆ ಇಂತಹ ತಪ್ಪುಗಳು ಹತ್ತು ಹಲವು ಕಾಣಿಸುತ್ತವೆ. ತಮ್ಮ ಅತಿ ನೆಚ್ಚಿನ ನಟಿ ಸುಹಾಸಿನಿಯವರಿಂದಲು ಉತ್ತಮವಲ್ಲದ ನಟನೆ ತೆಗಿಸಬಹುದು ಎಂಬುದನ್ನು ಸಾಧಿಸಿದ್ದಾರೆ ನಿರ್ದೇಶಕರು. ಉಳಿದ ಪೋಷಕ ಪಾತ್ರವರ್ಗ ಅವಿನಾಶ್, ರಾಮಕೃಷ್ಣ, ಶರತ್ ಲೋಹಿತಾಶ್ವ ಸಾಮಾನ್ಯ ನಟನೆ ನೀಡಿದ್ದಾರೆ. ನಾಯಕ ನಟಿ ಸಂಜನಾ ನಟನೆ ಕಿರಿಕಿರಿ ಉಂಟುಮಾಡುತ್ತದೆ. ಇದ್ದುದರಲ್ಲಿ ಆದಿತ್ಯ ಅವರ ನಟನೆ ಸ್ವಲ್ಪ ಸಹಿಸುವಂತಿದೆ ಅಷ್ಟೇ!

ಚಲನಚಿತ್ರಗಳಲ್ಲಿ ಧೂಮಪಾನ ಮದ್ಯಪಾನ ಸೇವಿಸುವ ದೃಶ್ಯ ಬಂದಾಗ 'ಧೂಮಪಾನ/ಮದ್ಯಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಸಂದೇಶವನ್ನು ಕೆಳಗೆ ಸ್ಕ್ರಾಲ್ ಮಾಡುವುದು ನಿಯಮ. ಇನ್ನು ಮುಂದೆ ಇಂತಹ ಸಿನೆಮಾಗಳ ಉದ್ದಕ್ಕೂ 'ಸಿನೆಮಾ ನೋಡುವುದು ಆರೋಗ್ಯಕ್ಕೆ ಹಾನಿಕರ, ಶೀಘ್ರ ತಲೆ ನೋವು ಮತ್ತು ಮೈಗ್ರೇನ್ ಗಳನ್ನು ಉಂಟು ಮಾಡುತ್ತದೆ' ಎಂದು ನಿರಂತರ ಸ್ಕ್ರಾಲ್ ಮಾಡುವ ಹಾಗೆ ಸೆನ್ಸಾರ್ ಮಂಡಲಿ ಕಡ್ಡಾಯಗೊಳಿಸುವುದೊಳಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Canada ವಿರುದ್ಧ Trump ಸುಂಕಾಸ್ತ್ರ; 20 ಬಿಲಿಯನ್ ಡಾಲರ್‌ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ, ಪ್ರತೀಕಾರದ ಎಚ್ಚರಿಕೆ ನೀಡಿದ Carney..!

‘ಪನೀರ್’ ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟಕ್ಕೆ ನಿರ್ಬಂಧ: ರಾಜ್ಯದಲ್ಲಿ ಒಂದು ವರ್ಷ ನಿಷೇಧ..!

'Economic D-Day' ಘೋಷಣೆ: Iran ವಿರುದ್ಧ ಅಮೆರಿಕಾ ಆರ್ಥಿಕ ದಿಗ್ಬಂಧನ ಅಸ್ತ್ರ; ಇದು ಆರ್ಥಿಕ ಭಯೋತ್ಪಾದನೆ-‘ಜಗತ್ತನ್ನು ವಸಾಹತು ಮಾಡುವ ಹುನ್ನಾರ’- ಇರಾನ್ ಆಕ್ರೋಶ

ಹಾರ್ಮುಜ್ ಜಲಸಂಧಿ ನಮ್ಮದೇ: ಟ್ರಂಪ್ ಸ್ಫೋಟಕ ಹೇಳಿಕೆ; ನಮ್ಮ ಭೂಪ್ರದೇಶಕ್ಕೆ ಕೈಹಾಕಿದರೆ ಸರ್ವನಾಶ ಗ್ಯಾರಂಟಿ- ಟೆಹ್ರಾನ್ ಖಡಕ್ ವಾರ್ನಿಂಗ್

Somalia ಕರಾವಳಿಯಲ್ಲಿ ಹಡಗುಗಳ ಹೈಜಾಕ್: ಕಡಲ್ಗಳ್ಳರ ವಶದಲ್ಲಿದ್ದ 22 ಮಂದಿ ಭಾರತೀಯರು ಸೇಫ್; ಕೇಂದ್ರ ಸರ್ಕಾರ