ಬಾಕ್ಸರ್ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಸಿಟಿ ಲೈಟ್ಸ್ ಛಾಯೆಯಲ್ಲಿ ಬಾಕ್ಸರ್ ಕಿಕ್

ಜಗತ್ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್ ಅವರ ಹಾಸ್ಯಮಯ ರೊಮ್ಯಾಂಟಿಕ್ ಚಿತ್ರ 'ಸಿಟಿ ಲೈಟ್ಸ್' ವಿಶ್ವ ಭಾಷೆಗಳ ನಿರ್ದೇಶಕರಿಗೆ ಕಾಡಿರುವಂತೆಯೇ ಕನ್ನಡದ ಹಲವು ನಿರ್ದೇಶಕರಿಗೆ ಸ್ಫೂರ್ತಿ ನೀಡಿದೆ.

ಜಗತ್ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್ ಅವರ ಹಾಸ್ಯಮಯ ರೊಮ್ಯಾಂಟಿಕ್ ಚಿತ್ರ 'ಸಿಟಿ ಲೈಟ್ಸ್' ವಿಶ್ವ ಭಾಷೆಗಳ ನಿರ್ದೇಶಕರಿಗೆ ಕಾಡಿರುವಂತೆಯೇ ಕನ್ನಡದ ಹಲವು ನಿರ್ದೇಶಕರಿಗೆ ಸ್ಫೂರ್ತಿ ನೀಡಿದೆ. ಸ್ಫೂರ್ತಿ ಪಡೆದ ನಿರ್ದೇಶಕರ ಸಾಲಿನಲ್ಲಿ ಈಗ ಹೊಸದಾಗಿ ಸೇರ್ಪಡೆಯಾಗುವವರು ಪ್ರೀತಂ ಗುಬ್ಬಿ. ಗುಬ್ಬಿ ನಿರ್ದೇಶನದ 'ಬಾಕ್ಸರ್'ನಲ್ಲಿ 'ಸಿಟಿ ಲೈಟ್ಸ್'ನ ಮೂಲ ರಚನೆಯ ಅನುಕರಣೆ ಕಾಣುತ್ತದೆ. ಮೂಲ ಸಿನೆಮಾದ ಪ್ರಧಾನ ರಸ ಹಾಸ್ಯವನ್ನು ಇಲ್ಲಿ ಆಕ್ಷನ್ ಬದಲಾಯಿಸಿದ್ದು ಈ 'ಬಾಕ್ಸರ್' ಪ್ರೇಕ್ಷಕನಿಗೆ 'ಕಿಕ್' ನೀಡಲಿದ್ದಾನೆಯೇ?

ರಾಜ(ಧನಂಜಯ್) ಏಕತಾನೆತೆಯನ್ನು ಹೋಗಲಾಡಿಸಲು ಕಿಕ್ ಬಾಕ್ಸಿಂಗ್ ಆಡುವವನು. ಬೆಟ್ಟಪ್ಪ(ರಂಗಾಯಣ ರಘು) ಇದಕ್ಕೆ ಅವಕಾಶ ಮಾಡಿಕೊಡುವ ಅಣ್ಣ. ಬಾಕ್ಸಿಂಗ್ ಅಲ್ಲದೆ ಮಿಷನರಿ ಆಸ್ಪತ್ರೆಯ ರೋಗಿಗಳಿಗೆ ಧನಸಹಾಯ ಮಾಡಲು ವಿವಿಧ ಕೆಲಸಗಳನ್ನೂ ಮಾಡುವ ರಾಜನಿಗೆ ಲಕ್ಷ್ಮಿ(ಕೃತಿಕಾ) ಪರಿಚಯವಾಗುತ್ತದೆ. ಅಂಧೆ ಲಕ್ಷ್ಮಿಯ ಬಗೆಗಿನ ಉದಾಸೀನ ಪ್ರೀತಿಗೆ ತಿರುಗುತ್ತದೆ. ಲಕ್ಷ್ಮಿಯ ಮ್ಯಾನೇಜರ್ ನೀಡುವ ಕಿರುಕುಳದಿಂದ ತಪ್ಪಿಸುತ್ತಾನೆ. ಅವಳನ್ನು ವರಿಸಲೂ ನಿರ್ಧರಿಸುತ್ತಾನೆ ಹಾಗೆಯೇ ಅವಳ ದೃಷ್ಟಿ ದೋಷ ಸರಿಪಡಿಸಲೂ! ಮುಂದೇನಾಗುತ್ತದೆ?

ಹೆಚ್ಚೇನೂ ತಿರುವುಗಳಿಲ್ಲದೆ, ಜೊತೆಗೆ ಯಾವುದೇ ಅತಿರೇಕಗಳಿಲ್ಲದೆ ಒಂದು ಸರಳ ಪ್ರೇಮಕಥೆಯನ್ನು ಸಶಕ್ತ ತಾಂತ್ರಿಕ ವೈಭವದೊಂದಿಗೆ ಕಟ್ಟಿಕೊಡಲು ನಿರ್ದೇಶಕ ಯಶಸ್ವಿಯಾಗಿದ್ದಾರೆ. ಕ್ಲೀಶೆಯ ಐಡಿಯಲ್ ಪಾತ್ರಗಳನ್ನು, ಘಟನೆಗಳನ್ನು ಸೃಷ್ಟಿಸುವ ಬದಲು ಕೆಲವು ಸಂದಿಗ್ಧ ಸನ್ನಿವೇಶಗಳನ್ನು ಸೃಷ್ಟಿಸಲು ನಿರ್ದೇಶಕನಿಗೆ ಸಾಧ್ಯವಾಗಿದ್ದಲ್ಲಿ ಸಿನೆಮಾ ಇನ್ನಷ್ಟು ಕಳೆಕಟ್ಟುತ್ತಿತ್ತು. ಸದಾ ಒಳ್ಳೆಯದನ್ನೇ ಚಿಂತಿಸುವ ಒಳ್ಳೆಯದನ್ನೇ ಮಾಡುವ ಫೀಲ್ ಗುಡ್ ನಾಯಕ-ನಾಯಕಿಯರಾಚೆಗಿನ ಬದುಕನ್ನು ಕಟ್ಟಿಕೊಡುವ ಪ್ರಯೋಗಗಳು ಏಕಾಗುವುದಿಲ್ಲ ಎಂಬ ಪ್ರಶ್ನೆಯೂ ಮೂಡದೆ ಇರದು. ೫-ಸ್ಟಾರ್ ಹೋಟೆಲಿನಲ್ಲಿ ಶಿಷ್ಟಾಚಾರ ಗೊತ್ತಿರದ ನಾಯಕ, ಫೈವ್ ಸ್ಟಾರ್ ಹೋಟೆಲ್ಲಿನ ಊಟ ಹಿಡಿಸದೆ, ಪಾನಿ ಪುರಿ ಇಷ್ಟ ಪಡುವ ನಾಯಕಿ ಹೀಗೆ 'ಪೊಲಿಟಿಕಲ್ಲಿ ಕರೆಕ್ಟ್' ಗುಣಗಳನ್ನೇ ನಾಯಕ ನಾಯಕಿಯರಿಗೆ ಆರೋಪಿಸುವ ಜಾಣ್ಮೆ ಕಮರ್ಷಿಯಲ್ ದೃಷ್ಟಿಯಿಂದ ಹಿತವಾದರೂ ಇದನ್ನೇ ಪುನರಾವರ್ತಿತವಾಗಿ ನೋಡಿರುವ ಪ್ರೇಕ್ಷಕ ಇನ್ನೂ ಹೆಚ್ಚಿನದನೇನನ್ನೋ ಬಯಸುತ್ತಾನೆ ಎಂಬುದು ಕೂಡ ನಿಜವೇ. ಬಡ್ಡಿ ಸಂಗ್ರಹಿಸುವ ರಾಜ, ತನ್ನ ಹಿಂಸಾಪ್ರವೃತ್ತಿಗೆ ಸ್ವಯಂ ಮನನೊಂದು ಒಳ್ಳೆಯನಾಗುತ್ತಾನೆ ಎಂಬ ನಾಯಕನ ಎಸ್ಟಾಬ್ಲಿಶ್ಮೆಂಟ್ ದ್ವಿತೀಯಾರ್ಧದಲ್ಲಿ ಪ್ರೆಶ್ ಆಗಿ ಕಾಣಿಸಿಕೊಂಡರೂ ನಾಯಕಿಯ ಮಟ್ಟಿಗೆ ಅಂತಹ ಯಾವುದೇ ಪ್ರಯತ್ನಗಳು ಇಲ್ಲ. ಅನಾಥೆ-ನತದೃಷ್ಟ ಅಂಧೆ-ಚೆಲುವೆ-ಬುದ್ಧಿವಂತೆ ಎಂಬುದನ್ನು ಬಿಟ್ಟರೆ ಪಾತ್ರದ ಗಟ್ಟಿ ನಿರೂಪಣೆಯಲ್ಲಿ ಎಡವಲಾಗಿದೆ.  ಆಕ್ಷನ್ ದೃಶ್ಯಗಳಲ್ಲಿ- ಒರಟಾದ ನಟನೆಯಲ್ಲಿ ಭರವಸೆ ಮೂಡಿಸುವ ನಟ ಧನಂಜಯ್, ರೊಮ್ಯಾಂಟಿಕ್ ಆಗುವಾಗ ಸಪ್ಪೆ ಎನಿಸುತ್ತಾರೆ. ಕೃತಿಕಾ ಪರಿಪೂರ್ಣ ಪ್ರಮಾಣದ ತಮ್ಮ ಚೊಚ್ಚಲ ಸಿನೆಮಾದಲ್ಲಿ ಭರವಸೆ ಮೂಡಿಸುತ್ತಾರೆ. ರಂಗಾಯಣ ರಘು ಅವರ ನಟನೆ ಎಂದಿನಂತೆ ಚೆನ್ನಾಗಿದೆ. ಹರಿಕೃಷ್ಣ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಪರವಾಗಿಲ್ಲ. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಮತ್ತು ಜೋನಿ ಹರ್ಷ ಅವರ ಸಂಕಲನ ಸಿನೆಮಾವನ್ನು ಗಟ್ಟಿಯಾಗಿ ಹಿಡಿದಿವೆ. ಎ ಹರ್ಷ ನೃತ್ಯ ಸಂಯೋಜನೆಯಲ್ಲಿ ಧಂನಜಯ್ ಅವರ ನೃತ್ಯ ಮತ್ತು ರವಿವರ್ಮಾ ಸಾಹಸ ನಿರ್ದೇಶನದ ಆಕ್ಷನ್ ದೃಶ್ಯಗಳು ಪಡ್ಡೆಗಳಿಗೆ ಇಷ್ಟವಾಗುತ್ತವೆ. ಹೊಸದು ಎನ್ನುವುದು ಅಥವಾ ಕುತೂಹಲಕಾರಿ ಎನ್ನುವುದು ಏನು ಇಲ್ಲದೆಯೂ ಅತಿರೇಕದ್ದು ಏನೂ ಇಲ್ಲದೆ ಒಂದು ಸರಳ, ಸುಂದರ ಪ್ರೇಮಕಥೆಯನ್ನು ಕಟ್ಟಿಕೊಡಲು ಪ್ರೀತಂ ಗುಬ್ಬಿ ಯಶಸ್ವಿಯಾಗಿದ್ದಾರೆ.

ಬೇರೆಲ್ಲ ಕ್ರೀಡೆಗಳಿಗಿಂತಲೂ 'ಬಾಕ್ಸಿಂಗ್', ಸಿನೆಮಾ ಕಲೆಗೆ ಹೆಚ್ಚು ಸ್ಫೂರ್ತಿಯಾಗಿದೆ ಮತ್ತು ವಿಶ್ವ ಸಿನೆಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಬಾಕ್ಸಿಂಗ್, ಜೀವನದ ರೂಪಕದಂತಿದ್ದು, ಹೋರಾಟದ ಪ್ರತೀಕವಾಗಿರುವುದರಿಂದಲೂ ಇರಬಹುದು ಅಥವಾ ಈ ಕ್ರೀಡೆಗೆ (ವೃತ್ತಿಪರ ಬಾಕ್ಸಿಂಗ್ ಹೊರತುಪಡಿಸಿ) ನಿಯಮಗಳ ಚೌಕಟ್ಟು ಮೀರುವ ಗುಣಕ್ಕೂ ಇರಬಹುದು. ಮಾನಸಿಕ ಮತ್ತು ದೈಹಿಕ ಶ್ರಮ ಮತ್ತು ಸಹನೆ ಪರೀಕ್ಷಿಸುವ ಈ ಕ್ರೀಡೆ ಸಿನೆಮಾಗಳಿಗೆ ಸ್ಫೂರ್ತಿಯಾಗಿರುವುದು ಸರಿಯೇ. ಬಾಕ್ಸಿಂಗ್ ನಂತೆಯೇ ಚೌಕಟ್ಟುಗಳನ್ನು ಮೀರಿ ಕನ್ನಡದ ನಿರ್ದೇಶಕರು ಹೊಸ ಪ್ರಯತ್ನಗಳಿಗೆ ಒಡ್ಡಿಕೊಂಡು, ಹೊಸತುಗಳನ್ನು ಸೃಷ್ಟಿಸಿದರೆ ಪ್ರೇಕ್ಷಕನ ಶ್ರಮ ಮತ್ತು ಸಹನೆಗೆ ನೀಡುವ ಗೌರವವಾಗಿ ಉಳಿಯುತ್ತವೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT