ಕನ್ನಡ ಚಿತ್ರೋದ್ಯಮಕ್ಕೂ ಭೂಗತ ಚಿತ್ರಗಳಿಗೂ ಎಲ್ಲಿಲ್ಲದ ನಂಟು. ಮಚ್ಚು ಲಾಂಗು ಚಿತ್ರಗಳು ಎಂದು ಯಾರು ಎಷ್ಟೇ ಟೀಕಿಸಿದರೂ ಇವುಗಳ ಸಂಖ್ಯೆಗೆ ಎಂದೂ ಕೊರತೆಯಾಗಿಲ್ಲ. ಕೊರತೆ ಇರುವುದು ಈ ಸಿನೆಮಾಗಳು ಹೇಳುವ ವಿಷಯದಲ್ಲಿ ಮಾತ್ರವೇ. ಆದರೂ ಭೂಗತ ಲೋಕದ ಹಿನ್ನಲೆಯಲ್ಲಿ ಸೂಕ್ಷ್ಮವಾದ ಕಥೆ ಹೊಸೆದ ಆ ದಿನಗಳು, ದುನಿಯಾ, ಗಣಪ ಈ ರೀತಿಯ ಸಿನೆಮಾಗಳು ಕೂಡ ಆಗಾಗ ಸುಳಿಯುವುದುಂಟು. ಹೆಚ್ಚೆಚ್ಚು ಲಾಂಗು ಮಚ್ಚು ಸಿನೆಮಾಗಳಿಗೆ ಪ್ರಸಿದ್ಧಿಯಾದ ದುನಿಯಾ ಸಿನೆಮಾ ಖ್ಯಾತಿಯ ವಿಜಯ್ ನಟಿಸಿರುವ 'ಆರ್ ಎಕ್ಸ್ ಸೂರಿ' ಚಿತ್ರರಂಗಕ್ಕೆ ಹೊಸ ಸೇರ್ಪಡೆ. ಇದು ಪ್ರೇಕ್ಷಕನಿಗೆ ಏನಾದರು ಹೊಸತನ್ನು ಉಣಬಡಿಸಿದೆಯೇ? ಅಥವಾ ಚೊಚ್ಚಲ ನಿರ್ದೇಶಕ ಶ್ರೀ ಜಯ್ ಅವರ ಈ ಸಿನೆಮಾ ಅದೇ ಲಾಂಗು ಮಚ್ಚು ರಕ್ತಸಿಕ್ತ ಸಿನೆಮಾಗಳ ಹನುಮಂತ ಬಾಲವನ್ನು ಬೆಳೆಸಿದೆಯೇ?
ಆರ್ ಎಕ್ಸ್ ಸೂರಿ (ದುನಿಯಾ ವಿಜಯ್) ತನ್ನ ತಂಗಿಗೆ ಬರುವ ಅಶ್ಲೀಲ ಸಂದೇಶದ ಬೆನ್ನತ್ತಿ, ರೌಡಿಯೊಬ್ಬನನ್ನು ಕೊಂದು ಆಕಸ್ಮಿಕವಾಗಿ ರೌಡಿಸಂಗೆ ಇಳಿಯುತ್ತಾನೆ. ಇವಳ ಬಾಲ್ಯ ಕಾಲದ ಗೆಳತಿ ಮೀರಾ (ಆಕಾಂಕ್ಷಾ) ಸೂರಿಯನ್ನು ಪ್ರೀತಿಸುತ್ತಾಳೆ. ಆದರೆ ಇವನ ಹಿನ್ನಲೆ ತಿಳಿದು ಆಕಾಂಕ್ಷಾ ತಾಯಿ ಅವಳಿಗೆ ತೊಡಕಾಗಿರುತ್ತಾಳೆ. ಆರ್ ಎಕ್ಸ್ ಸೂರಿಯನ್ನು ಕೊಲ್ಲಲು ಮತ್ತೊಬ್ಬ ರೌಡಿ ಟೈಗರ್ (ರವಿಶಂಕರ್) ಹತ್ತಿಪ್ಪತ್ತು ಬಾರಿ ಸ್ಕೆಚ್ ಹಾಕಿ ವಿಫಲನಾಗುತ್ತಾನೆ. ಕೊನೆಗೆ ಸೂರಿಯ ಗೆಳೆಯನ ದ್ರೋಹದಿಂದ ಸಫಲನಾಗುತ್ತಾನೆ.
ಸಿನೆಮಾದಲ್ಲಿ ಏನಿದೆ ಎಂದರೆ ರೌಡಿಸಮ್ ಇದೆ, ಲಾಂಗು ಮಚ್ಚುಗಳ ಸುಲಲಿತ ಬೀಸಾಟ ಇದೆ, ತಾಳಲಾರದ ಹಿರೋಯಿಸಂ ಇದೆ, ಅತಿರೇಕವೆಂದರೆ ಅತಿರೇಕವೆನಿಸುವ ನಟನೆಯಿದೆ, ನಗೆಪಾಟಲಿನಂತೆ ಕಾಣುವ ಭಾವನಾತ್ಮಕ ದೃಶ್ಯಗಳಿವೆ, ವಾಕರಿಕೆ ತರಿಸುವ ಸೊಂಟದ ಕೆಳಗಿನ ಸಂಭಾಷಣೆಯುಳ್ಳ ಕಾಮಿಡಿ ಟ್ರ್ಯಾಕ್ ಇದೆ, ಅಬ್ಬರಿಸಿ ಬೊಬ್ಬಿರಿವ ಸಂಗೀತವಿದೆ, ಎಂದೋ ಹಳಸಿದ ಚಿತ್ರಕಥೆಯಿದೆ. ಚೊಚ್ಚಲ ನಿರ್ದೇಶಕ ಶ್ರೀ ಜಯ್ ಸಿನೆಮಾದ ಎಲ್ಲ ವಿಭಾಗಗಳಲ್ಲೂ ದಾರಿ ತಪ್ಪಿದ್ದಾರೆ. ಆಕಸ್ಮಿಕವಾಗಿ ಭೂಗತಲೋಕಕ್ಕೆ ಬಂದು, ತನ್ನವರ ದ್ರೋಹದಿಂದಲೇ ಹತನಾಗುವುದು ಜೊತೆಗೊಂದು ಪ್ರೇಮ ಕಥೆ ತುರುಕುವುದು ಬಹುಶಃ ಇಂದಿಗೆ ಪ್ರಾಚೀನ ಎನ್ನುವಷ್ಟು ಹಳೆಯ ಕಥೆ ಇದನ್ನು ಮತ್ತೆ ರಚಿಸಿದ್ದೇನೆ ಎಂದು ಹೇಳುವ ನಿರ್ದೇಶಕನ ದಾರ್ಷ್ಟ್ಯಕ್ಕೆ ಮರುಗಬೇಕೋ, ಸಿಡುಕಬೇಕೋ ಎಂಬುದು ಪ್ರೇಕ್ಷಕನ ದ್ವಂದ್ವ. ಇದಕ್ಕೆ ತಕ್ಕಂತೆ ಬಳಸಿರುವ ದುನಿಯಾ ವಿಜಯ್ ಅವರ ಅತೀ ಸಾಧಾರಣ ನಟನೆ, ಆದರೆ ಅವರ ಅತಿರಂಜಿತ ಹಿರೋಯಿಸಂ. ವಿಜಯ್ಗೆ ಸೆಡ್ಡು ಹೊಡೆದು ತಮ್ಮ ಹಿಂದಿನ ಸಿನೆಮಾಗಳ ಅತಿರೇಕತೆಯನ್ನು ಮೀರಿ ನಟಿಸಿರುವ ರವಿಶಂಕರ್, ವಲ್ಗರ್ ಎನಿಸುವ ಸಾಧು ಕೋಕಿಲಾ ಮತ್ತು ಬುಲೆಟ್ ಪ್ರಕಾಶ್ ಹಾಸ್ಯ ಟ್ರ್ಯಾಕ್, ಪ್ರಶಾಂತ್ ಸಿದ್ಧಿಯ ಕೆಟ್ಟ ನಟನೆ ಪ್ರೇಕ್ಷಕನನ್ನು ಬುಲೆಟ್ ವೇಗದಲ್ಲಿ ಸಿನೆಮಾ ಮಂದಿರದಿಂದ ಒದ್ದೋಡಿಸುತ್ತದೆ. ಗಟ್ಟಿ ಮನಸ್ಸು ಮಾಡಿ ಕೂತವರಿಗೆ ಮಾತ್ರ ಸಿನೆಮಾ ಮುಂದೆಯೇ ಹೋಗುವುದಿಲ್ಲ. ಸಿನೆಮಾ ದೃಶ್ಯಗಳಲ್ಲಿ ಮಚ್ಚು ಲಾಂಗುಗಳಿಂದ ರಕ್ತ ಹೊಳೆ ಹರಿಸುತ್ತಿದ್ದರೆ, ಅರ್ಜುನ್ ಜನ್ಯ ಸಂಗೀತ ಆಯುಧಗಳಿಲ್ಲದೆಯೇ ಕಿವಿಗಳಲ್ಲಿ ರಕ್ತ ಸುರಿಸುತ್ತದೆ. ಅದಕ್ಕೆ ಗೀತರಚನಕಾರರು ಸಕತ್ ಸಾಥ್ ನೀಡಿದ್ದಾರೆ. ದೃಶ್ಯಗಳು ಎಲ್ಲಿ ಮುಗಿಯುತ್ತವೆ ಮತ್ತೆಲ್ಲಿ ಪ್ರಾರಂಭವಾಗುತ್ತವೆ ಏಕೆ ಹೀಗೆ ಎಂದು ಪ್ರಶ್ನೆ ಹಾಕಿಕೊಂಡರೆ ತಲೆನೋವು ಖಚಿತ. ಆ ಮಟ್ಟಿಗಿದೆ ಸಂಕಲನಕಾರನ ಕೆಲಸ. ಸಿನೆಮಾದಲ್ಲಿ ಏನಾದರೂ ಒಳ್ಳೆಯ ಸಂಗತಿಗಳಿವೆಯೇ ಎಂದು ಕಷ್ಟ ಪಟ್ಟು ಯೋಚಿಸಿದಲ್ಲಿ, ಗಣೇಶನ ಪೂಜೆಯನ್ನು ಯಾವುದೇ ಪುರೋಹಿತನಿಲ್ಲದೆ ಯುವಕರೇ ಮಾಡುವುದು, ಆರ್ಕೆಸ್ಟ್ರಾದಲ್ಲಿ ಶಂಕರ್ ನಾಗ್ ಅವರನ್ನು ಮಿಮಿಕ್ರಿ ಮಾಡುವುದು ಮಾತ್ರ ಹಿತವೆನಿಸುವ ದೃಶ್ಯಗಳು! ಒಟ್ಟಿನಲ್ಲಿ ಭಿತ್ತಿಚಿತ್ರದಲ್ಲಿ ಮಚ್ಚು ಲಾಂಗು ಕಂಡರೆ ಸಿನೆಮಾ ನೋಡಬಾರದು ಎಂಬ ಧೃಢ ಸಂಕಲ್ಪವನ್ನು ಪ್ರೇಕ್ಷನಿಗೆ ನೀಡಬಲ್ಲ ಅತಿ ಪರಿಣಾಮಕಾರಿ ಕೆಟ್ಟ ಚಿತ್ರ ಇದು ಎಂಬುದರಲ್ಲಿ ಸಂಶಯವಿಲ್ಲ.
ರೌಡಿಸಂ ಚಿತ್ರದ ವಸ್ತುವಾಗಬಾರದೆಂದೇನಿಲ್ಲ. ಆದರೆ ಕೊಲೆಗಳನ್ನು ಅತಿರಂಜಿಸುವುದು, ಅತಾರ್ಕಿಕವಾಗಿ ಕೊಲೆಗಳನ್ನು ಸಮರ್ಥಿಸಿಕೊಳ್ಳುವುದು, ಕೊಲೆಗಳ ಹೊಣೆಗಾರಿಕೆಯನ್ನು ನಿರ್ಲ್ಯಕ್ಷಿಸುವುದು, ಕಾನೂನು ವ್ಯವಸ್ಥೆಯನ್ನು ಸಿನೆಮಾದಲ್ಲಿ ಒಳಗೊಳ್ಳದೆ ಇರುವುದು ಅಥವಾ ಹೀರೊನನ್ನು ವೈಭವೀಕರಿಸಲು ಅದನ್ನು ಕೆಟ್ಟದಾಗಿ ಪ್ರತಿನಿಧಿಸುವುದು ಇವಕ್ಕೆಲ್ಲಾ ಕನ್ನಡ ಚಿತ್ರೋದ್ಯಮ ಒಂದು ಅಂತ್ಯ ಕಾಣಿಸದ ಹೊರತು ಅಥವಾ ಇಂತಹ ಚಿತ್ರಗಳನ್ನು ವೈಭವೀಕರಿಸುವುದನ್ನು ನಿಲ್ಲಿಸದ ಹೊರತು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನೆಮಾಗಳ ಕೊರತೆ ಇದೆ ಎಂಬ ಪ್ರೇಕ್ಷಕನ ಕೂಗಿಗೆ, ಅಳಲಿಗೆ ಪರಿಸಮಾಪ್ತಿಯೇ ಇಲ್ಲ. ಬುಲೆಟ್ ಬಸ್ಯಾ ಆಯ್ತು, ಆರ್ ಎಕ್ಸ್ ಸೂರಿ ಆಯ್ತು ಇನ್ನಿನ್ಯಾವ ಬೈಕ್ ಹೆಸರಿನ ಹಿಂಸಾರಂಜನೆಯನ್ನು ಕನ್ನಡ ಪ್ರೇಕ್ಷಕ ಸಹಿಸಿಕೊಳ್ಳಬೇಕೋ! ನಮ್ಮ ಹೀರೋಗಳು ಹೊಂಡಕ್ಕೆ ಬೀಳೋ - ಹೀರೋ ಹೊಂಡಾ....ಸದ್ಯದಲ್ಲೇ....ಬರಲಿದೆಯೇ!
ಕೊನೆ ಮಾತು: "ಆರ್ ಎಕ್ಸ್ ಸೂರಿ, ಥಿಯೇಟರಿನಲ್ಲೇ ಘೋರಿ' ಎಂಬ ಗಾದೆಮಾತು ಹೊಗೆ ಹಾಕಿಸಿಕೊಂಡಿದ್ದ ಪ್ರೇಕ್ಷಕನಿಂದ ಬಂದದ್ದು ದುನಿಯಾಗೆ ಕೇಳಿಸಿತೇ?