ಚಿತ್ರದಲ್ಲಿ ವಿಲನ್ ಒಬ್ಬ ಕಿರಚುವ "ಚಂದಮಾಮ ಕಥೆ ಹೇಳ್ತಾ ಇದ್ಯೇನೋ?" ಎಂಬ ಡೈಲಾಗ್ ಕೇಳಿದಾಗ, ಚಂದಮಾಮ ಕಥೆಗಳನ್ನು ಓದಿದ್ದ ಪ್ರೇಕ್ಷಕರಿದ್ದರೆ ಮತ್ತು ಈ ಸಿನೆಮಾದ ಕಥೆಯನ್ನು ಆ ಹಂತದವರೆಗೂ ಸಹಿಸಿಕೊಂಡಿದ್ದರೆ ಅವರಿಗೆ ಆಗಬಹುದಾದ ಆಘಾತ ಎಂತಾದ್ದು? ಮತ್ತದೇ ಆಂಜನೇಯನ ಬಾಲ ಹಿಡಿದು, ತಮ್ಮ ಹಿಂದಿನ ಎರಡು ಸಿನೆಮಾಗಳ ಥೀಮ್ ನಲ್ಲೇ, ಕಥೆ ಹೇಳಹೊರಟಿರುವ ನಿರ್ದೇಶಕನನ್ನು ಪ್ರೇಕ್ಷಕರು ಹೇಗೆ ತಾಳಿಕೊಳ್ಳಬಹುದು?
ಹಿಮಗಿರಿ ಎಂಬ ರಾಜ್ಯ. ಅಲ್ಲಿ ಮಲ್ಲಯುದ್ಧವನ್ನು ಆರಾಧಿಸುವ ರಾಜ ಚಂದ್ರವರ್ಮ. ಉತ್ತರದ ವೀರ ಕೇಸರಿ ಮತ್ತು ದಕ್ಷಿಣದ ಗಜಪತಿ, ಇವರಿಬ್ಬರೂ ಜಗದಂಕ ಮಲ್ಲರು ಮತ್ತು ಬದ್ಧ ವೈರಿಗಳು. ಮಲ್ಲ ಯುದ್ಧಕ್ಕೆ ಇಳಿದರೆ ಯಾರೂ ಸೋಲುವುದಿಲ್ಲ ಯಾರೂ ಗೆಲ್ಲುವುದಿಲ್ಲ. ಇಂತಹವರಿಗೆ ೮೦೦ ಎಕರೆ ಜಮೀನನ್ನು ಸಮಾನವಾಗಿ ಹಂಚುವ ರಾಜ, ಈ ಎರಡು ಪ್ರದೇಶಗಳ (ಗಜಸೀಮೆ ಮತ್ತು ಸಿಂಹರಾಯದುರ್ಗ) ನಡುವೆ ಕಾದಾಟ ಶಾಶ್ವತವಾಗಿ ಉಳಿಯುವಂತೆ ಮಾಡಿಬಿಡುತ್ತಾನೆ. ಈ ಕಥೆಯನ್ನು ಅನಿಮೇಟೆಡ್ ಸ್ಟಿಲ್ ಗಳ ಮೂಲಕ ಪ್ರೇಕ್ಷಕರಿಗೆ ಕಂಠವೊಂದು ಹಿನ್ನಲೆಯಾಗಿ ತಿಳಿಸುತ್ತದೆ. ಕಟ್. ನಗರದಲ್ಲಿ ಇಬ್ಬರು ಆಪ್ತ ಗೆಳೆಯರು. ಜೀವ (ಶರಣ್) ಮತ್ತು ರಘು. ರಘುವಿಗೆ ಅಪಘಾತವಾಗುತ್ತದ್ದೆ, ಆ ಕ್ಷಣಕ್ಕೂ ಮುಂಚಿತವಾಗಿ ರಘುವಿನ ತಪ್ಪಲ್ಲದಿದ್ದರೂ, ಸಿಂಹರಾಯದುರ್ಗದ ಜಯಸಿಂಹನಿಗೆ ಹೆದರಿ ಓಡಿ ಬಂದಿರುತ್ತಾನೆ. ಅಲ್ಲಿ ಜಯಸಿಂಹ ರಘುವಿನ ತಾಯಿ ಮತ್ತು ತಂಗಿಯರನ್ನು ಜೀತದಾಳಾಗಿ ಇರಿಸಿಕೊಂಡಿರುತ್ತಾನೆ. ಈಗ ಈ ಪ್ರಾಣಸೇಹಿತ ರಘುವಿನ ಕುಟುಂಬದ ರಕ್ಷಣೆಯ ಪಣ ತೊಡುತ್ತಾನೆ. ಸದಾ ಕಾದಾಡುವ ಗಜಸೀಮೆಯ ವೀರಪ್ಪ ಮತ್ತು ಸಿಂಹರಾಯದುರ್ಗದ ಜಯಸಿಂಹರನ್ನು ಪಳಗಿಸಿ, ರಘುವಿನ ಕುಟುಂಬವನ್ನು ರಕ್ಷಿಸಲು ಜೀವನಿಗೆ ಸಾಧ್ಯವೇ?
ಸಿನೆಮಾ ಶೀರ್ಷಿಕೆಯಲ್ಲಿರುವ ೮೦೦, ಕಾದಾಡುವ ಗ್ರಾಮಗಳ ೪೦೦ ಎಕರೆ ಭೂಮಿ ಕೂಡಿದಾಗ ಬರುವ ಸಂಖ್ಯೆ ಎನ್ನುವುದಕ್ಕಿಂತಲೂ, ನಿರ್ದೇಶಕನ ಹಿಂದಿನ ಸಿನೆಮಾಗಳಾದ ಭಜರಂಗಿಯಿಂದಲೂ, ವಜ್ರಕಾಯದಿಂದಲೂ ತಲಾ ೪೦೦ ಅಂಶಗಳನ್ನು ಮರು ಬಳಸಿದ್ದಾರೆ ಎಂತಲೂ ತಿಳಿಯಬಹುದೇನೋ. ಆದರೆ ಆ ಅಂಶಗಳೆಲ್ಲವೂ ಸವಕಲಾಗಿದ್ದು, ಪ್ರೇಕ್ಷಕನ ತಾಳ್ಮೆ ಮತ್ತು ಬುದ್ಧಿಮತ್ತೆಯನ್ನು ಇನ್ನಷ್ಟು ಅವಮಾನಿಸಲು ಮುಂದಾಗಿವೆ. "ಚಂದಮಾಮ ಕಥೆ ಹೇಳ್ತಾ ಇದ್ಯೇನೋ?" ಎಂಬ ಸಂಭಾಷಣೆ ಬರೆಯುವುದಕ್ಕೂ ಮೊದಲು ಕೆಲವು ಚಂದಮಾಮ ಕಥೆಗಳನ್ನು ಕಥೆಗಾರ-ನಿರ್ದೇಶಕ ಓದಿದ್ದರೆ, ಇಂತಹ ಕೆಟ್ಟ ಚಿತ್ರಕಥೆಯ, ಅತಿ ಕೆಟ್ಟ ಸ್ಕ್ರಿಪ್ಟ್ ನ ಸಹವಾಸಕ್ಕೆ ಬೀಳುತ್ತಿರಲಿಲ್ಲವೇನೋ! ವಿಕ್ಷಿಪ್ತತೆಯೇ ವಿಜೃಂಭಿಸುವ ಈ ಸ್ಕ್ರಿಪ್ಟ್ ನಲ್ಲಿ ಮನರಂಜನೆ ಮೂರಾಬಟ್ಟೆಯಾಗಿರುವದಷ್ಟೇ ಅಲ್ಲ, ಪಾತ್ರಗಳಗಾಲಿ, ಸಿನೆಮಾದಲ್ಲಿ ನಡೆಯುವ ಘಟನೆಗಳಾಗಲೀ ಯಾವುವೂ ಒಂದು ಕ್ಷಣವೂ ಮನಸ್ಸಿಗೆ ಮುದ ನೀಡುವುದಿಲ್ಲ. ಕಾನೂನಿನ ಗಂಧ ಗಾಳಿಯೇ ಬೀಸದ, ಯಾರನ್ನು ಬೇಕಾದರೂ ಜೀತದಾಳು ಮಾಡಿಕೊಳ್ಳಬಹುದಾದ, ಉಸಿರೆತ್ತಿದರೆ ಹೊಡೆದಾಡಿಕೊಂಡು ಸಾಯುವ ಈ ಗ್ರಾಮಗಳ ಕಲ್ಪನೆಯನ್ನು ಮೂರನೇ ಬಾರಿಗೆ ಮತ್ತೆ ತೋರಿಸುತ್ತಿರುವುದು ಪ್ರೇಕ್ಷಕನಿಗೆ ಉಸಿರುಗಟ್ಟಿದ ಅನುಭವ. ಇವಕ್ಕೆ ಅಗತ್ಯವಾದ ಎಸ್ಟಾಬ್ಲಿಶ್ಮೆಂಟ್ ಇಲ್ಲದೆ ಮೂರನೇ ಬಾರಿಗೂ ಸಿನೆಮಾ ಸೊರಗಿದೆ. ಶರಣ್ ತಮ್ಮ ಎಂದಿನ ನಟನೆಯನ್ನು ಮುಂದುವರೆಸಿದ್ದು ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಸಿನೆಮಾ ನೋಡುವ ಬೇಸರಿಕೆಯನ್ನು ಇಮ್ಮಡಿಗೊಳಿಸುತ್ತಾರೆ. ಪಾತ್ರದ ಕೆಟ್ಟ ಪರಿಕಲ್ಪನೆಯೂ ಇರಬಹುದು, ಜಯಸಿಂಹನ ತಂಗಿಯ ಪಾತ್ರದಲ್ಲಿ ಶುಭಾ ಪೂಂಜಾ ಜೀವಮಾನದ ಅತಿ ಕೆಟ್ಟ ನಟನೆ ನೀಡಿದ್ದಾರೆ. ಮತೊಬ್ಬ ವಿಲನ್ ವೀರಪ್ಪ ಮಗಳಾಗಿ, ಶರಣ್ ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಶೃತಿ ಹರಿಹರನ್ ಕೂಡ ಬೇಸರ ಮೂಡಿಸುತ್ತಾರೆ. ಅರುಣ್ ಸಾಗರ್ ಮತ್ತು ಕಾದಾಡುವ ವಿಲನ್ ಗಳ ನಟನೆ ಕೂಡ ಇದಕ್ಕೆ ವಿರುದ್ಧವಲ್ಲ. ಇದಕ್ಕೆ ತಕ್ಕನಾದ ಅಬ್ಬರದ ಸಂಗೀತ ನೀಡಿರುವ ಅರ್ಜುನ್ ಜನ್ಯ ಪ್ರೇಕ್ಷಕರ ಸಹನೆಗೆ ಇನ್ನಷ್ಟು ಸವಾಲೆಸೆಯುತ್ತಾರೆ. ಛಾಯಾಗ್ರಹಣವಾಗಲೀ, ಸಂಕಲನದಲ್ಲಾಗಲೀ ಹೆಚ್ಚುಗಾರಿಕೆ ಎನ್ನುವಂತಾದ್ದೇನಿಲ್ಲ. ಸ್ಟೀರಿಯೋಟಿಪಿಕಲ್ ನಾಯಕ-ನಾಯಕಿ ಮತ್ತು ಹುಚ್ಚಾಟದ ವಿಲನ್ ಗಳು, ತಳ ಬುಡವಿಲ್ಲದ ನಡೆಯುವ ಘಟನೆಗಳು. ಅಬ್ಬರದ ಡೈಲಾಗ್ ಗಳು. ವಿಪರೀತ ಲೌಡ್ ಎನ್ನಿಸುವ ಸಂಭಾಷಣೆ. ಇಂತಹ ರಿಪಿಟೆಶನ್ ಗಳ ವೀರರಾಗಿರುವ ನಿರ್ದೇಶಕ ಹರ್ಷ ಆಂಜನೇಯ-ವಿಕ್ಷಿಪ್ತ ಗ್ರಾಮಗಳ ಥೀಮ್ ಬಿಟ್ಟು, ಬೇರೆ ಕಥೆಗಳನ್ನು ಕಟ್ಟುವುದಕ್ಕೋ ಅಥವಾ ಹೆಚ್ಚೆಚ್ಚು ಕಥೆಗಳನ್ನು ಓದಿ ಪತ್ತೆ ಹಚ್ಚುವುದಕ್ಕೋ ಚಿತ್ತ ಹರಿಸುವುದು ಉತ್ತಮ!
ಕಥೆಯಲ್ಲಿನ ಕಲ್ಪನೆಯಾಗಲಿ ಅಥವಾ ನಟನೆಯಾಗಲೀ ತೀರಾ ನೈಜವಾಗಿರಬೇಕು ಎಂಬುದು ಪ್ರೇಕ್ಷಕನ ಬೇಡಿಕೆಯಲ್ಲ, ಅದು ನೈಜತೆಗೆ ಹತ್ತಿರವಾಗಿರಬೇಕು ಅಥವಾ ಆ ಕಲ್ಪನೆ ಒಂದು ದಿನ ನಿಜವಾಗಬಹುದು(ಅಥವಾ ಹಿಂದೆ ನಿಜವಾಗಿತ್ತು) ಎಂದೆನಿಸಿ ಪ್ರೇಕ್ಷಕ ತನ್ನ ಅಪನಂಬಿಕೆಯನ್ನು ತಳ್ಳಿಹಾಕುವಂತಿರಬೇಕು. ಆ ಕಲ್ಪನೆಯನ್ನು ಪ್ರಶ್ನಿಸುವಂತಿರದೆ, ಆ ಲೋಕದಲ್ಲಿ ಕಳೆದು ಹೋಗಿ ಅಲ್ಲಿನ ಎಮೋಶನ್ ಗಳಲ್ಲಿ ಬೆರೆತುಹೋಗಬೇಕು. ಅದು ಕಥೆಯ-ಕಲ್ಪನೆಯ ಹಾಗೂ ದೃಶ್ಯ ಮಾಧ್ಯಮದ ಶಕ್ತಿ. ಆದರೆ ಈ ಚಿತ್ರವನ್ನೂ ಒಳಗೊಂಡಂತೆ ಇತ್ತೀಚಿನ ಚಿತ್ರಗಳು ವಿಕ್ಷಿಪ್ತತೆಯ ವಿಜೃಂಭಣೆಯನ್ನೇ, ಅತಿರೇಕವನ್ನೇ ಕಲ್ಪನೆ ಎಂದು ತಿಳಿದು ದೃಶ್ಯ ಮಾಧ್ಯಮಕ್ಕೆ ಅಪಾಯ ತಂದೊಡ್ಡಿದ್ದು, ಮಹಿಳೆ-ಸೆಕ್ಸ್ ಸುತ್ತ ಕೆಟ್ಟ-ಬೇಜವಾಬ್ದಾರಿ ಪಾತ್ರಗಳನ್ನು ಹೆಣೆದು (ಸ್ಮಿತಾ ಪಾತ್ರದಲ್ಲಿ ಶುಭಾ ಪೂಂಜಾ ಅಥವಾ ಅರುಣ್ ಸಾಗರ್ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದು) ಅದನ್ನು ಅತಿರಂಜಿತಗೊಳಿಸಿ ಅದನ್ನೇ ಹಾಸ್ಯವೆಂದು ಕೆಟ್ಟದಾಗಿ ಪ್ರೇಕ್ಷಕರಿಗೆ ಉಣಬಡಿಸುತ್ತಿರುವುದು ಕನ್ನಡ ಚಿತ್ರೋದ್ಯಮಕ್ಕೆ ಹಿಡಿದಿರುವ ಗ್ರಹಣ. ಇದರಿಂದ ಶೀಘ್ರ ಬಿಡಿಸಿಕೊಳ್ಳುವುದೊಳಿತು!