ರನ್ ಆಂಟನಿ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಭಯೋತ್ಪಾದನೆಯ ಆಟ-ಊಟ-ಸ್ಫೋಟ; ನಾಯಕನ ಓಟ; ನಡುವೆ ಸಂಕಷ್ಟ

'ಸಿದ್ಧಾರ್ಥ'ನ ನಂತರ 'ರನ್ ಆಂಟನಿ' ಮೂಲಕ ನಟ ವಿನಯ್ ರಾಜಕುಮಾರ್ ಸಿನೆಮಾ ಓಟ ಮುಂದುವರೆಸಿದ್ದಾರೆ. ರಘು ಶಾಸ್ತ್ರಿ ನಿರ್ದೇಶನದ ಈ ಚೊಚ್ಚಲ ಸಿನೆಮಾ ಪ್ರೇಕ್ಷಕನ ನಿರೀಕ್ಷೆಯ

'ಸಿದ್ಧಾರ್ಥ'ನ ನಂತರ 'ರನ್ ಆಂಟನಿ' ಮೂಲಕ ನಟ ವಿನಯ್ ರಾಜಕುಮಾರ್ ಸಿನೆಮಾ ಓಟ ಮುಂದುವರೆಸಿದ್ದಾರೆ. ರಘು ಶಾಸ್ತ್ರಿ ನಿರ್ದೇಶನದ ಈ ಚೊಚ್ಚಲ ಸಿನೆಮಾ ಪ್ರೇಕ್ಷಕನ ನಿರೀಕ್ಷೆಯ ನಾಗಾಲೋಟವನ್ನು ಜೊತೆಗೆ ಕೊಂಡೊಯ್ಯುತ್ತದೆಯೇ ಅಥವಾ ತಡೆ ಒಡ್ಡುತ್ತದೆಯೇ?
ಪ್ರೀತಿಯನ್ನು ನಿವೇದಿಸಿಕೊಳ್ಳುವ ದಿನವೇ ತನ್ನ ಪ್ರೇಯಸಿ ಕನ್ನಿಕಾ (ಸುಶ್ಮಿತಾ ಜೋಶಿ) ಮತ್ತೊಬ್ಬನ ಜೊತೆಗೆ ಪ್ರಣಯಿಸುತ್ತಿರುವುದನ್ನು ಕಾಣುವ ಮಾಜಿ ಸೈನಿಕನ ಮಗ ದೇಶಭಕ್ತ ಆಂಟನಿಗೆ (ವಿನಯ್ ರಾಜಕುಮಾರ್) ದಿಕ್ಕು ತೋರುವುದು ಬಹುಮಹಡಿ ಕಟ್ಟಡ. ಅಲ್ಲಿಂದ ಬಿದ್ದರೂ ಜಾಲರಿಗೆ ಸಿಕ್ಕಿ ಉಳಿದುಕೊಂಡು, ಆತ್ಮಹತ್ಯೆ ವಿಫಲವಾದಾಗ ರೈಲು ಹಳಿ ಕಾಣುತ್ತದೆ. ಚಿತ್ತವಿಲ್ಲದ ಮದುವೆಯಿಂದ ತಪ್ಪಿಸಿಕೊಂಡು ಓಡಿ ಬಂದಿರುವಂತೆ ಕಾಣುವ (ಆಕೆ ಧರಿಸಿರುವ ಬಟ್ಟೆಯಿಂದಲೇ ನಾಯಕನಟ ಪತ್ತೆಹಚ್ಚುತ್ತಾನೆ!), ತನ್ನ ಪ್ರಿಯತಮನನ್ನು ಅರಸುತ್ತಿರುವ ಯಶು (ರುಕ್ಷರ್ ಮೀರ್) ಕಾಣಸಿಗುವದು ಕೂಡ ರೈಲ್ವೆ ನಿಲ್ದಾಣದಲ್ಲಿಯೇ. ಅವಳನ್ನು ಕೈಚೀಲ ಕಳ್ಳರಿಂದ ತಪ್ಪಿಸಿದ ನಂತರ ಸಂತ್ರಸ್ತ ನಾಯಕನಿಗೆ ಕೆಲವೇ ನಿಮಿಷಗಳಲ್ಲಿ ಹೊಸ ಹುಡುಗಿಯ ಮೇಲೆ ಪ್ರೀತಿ ಹೂಂಕರಿಸುತ್ತದೆ. ಹೀಗೆ ಮೊದಲಾರ್ಧ ಕನಸಿನ ಹಾಡುಗಳಿಂದ, ಮುಗ್ಧ-ಸಭ್ಯ ಆಂಟನಿ ಮತ್ತು ಯಶು ನಡುವೆ ಒಂದಷ್ಟು ಸಂಭಾಷಣೆ ಮೂಲಕ ಮಧ್ಯಂತರದವರೆಗೆ ಮುಂದುವರೆಯುವ ಸಿನೆಮಾ, ಮಧ್ಯಂತರಕ್ಕೆ ಪ್ರೇಕ್ಷಕನಿಗೆ ಒಂದು ಅನಿರೀಕ್ಷಿತ-ಭಾರಿ ತಿರುವು ನೀಡುತ್ತದೆ. 
ಯಶು ತನ್ನ ಸೊಂಟಕ್ಕೆ ಬಾಂಬ್ ಕಟ್ಟಿ ಮುಂಬೈ ಎಕ್ಸ್ಪ್ರೆಸ್ ಮುಂದೆ ಸ್ಫೋಟಿಸಿಕೊಳ್ಳುತ್ತಾಳೆ. ಸಿಸಿಟಿವಿಯಲ್ಲಿ ಸೆರೆಯಾದ ಆಂಟನಿ ತಾನು ಮುಗ್ಧನೆಂದು ಸಾಬಿತುಪಡಿಸಲು ಓಟ ಶುರುವಿಟ್ಟುಕೊಳ್ಳುತ್ತಾನೆ. ಅದು ಸಾಧ್ಯವೇ? 
ಭಯೋತ್ಪಾದನೆಯ ವಿಷವರ್ತುಲದಲ್ಲಿ ಪಾಪದ ಹುಡುಗನೊಬ್ಬ ಸಿಕ್ಕಿಬಿದ್ದಾಗ ಅವನು ಎದುರಿಸುವ ಸಂಕಷ್ಟಗಳೇನು ಎಂಬ ಕಥೆಗೆ ಸೀಮಿತಗೊಳಿಸಿಕೊಳ್ಳಲು ನಿರ್ದೇಶಕ ಪ್ರಯತ್ನಿಸಿದ್ದರು ಅದು ನಿರೂಪಣೆಗೆ ಒಂದು ರೀತಿಯಲ್ಲಿ ಸಂಕಷ್ಟವನ್ನು ಸೃಷ್ಟಿಸಿದೆ. ಇಲ್ಲಿ ಆ ಮುಗ್ಧ ಹುಡುಗನ ಸಂಕಷ್ಟಗಳೇ ಕೇಂದ್ರವಾಗಿರುವುದರಿಂದ ಭಯೋತ್ಪಾದನೆಯನ್ನು-ಭಯೋತ್ಪಾದಕರ ಕಥೆಯನ್ನು ಲಾಜಿಕಲ್ ಆಗಿ ಕಟ್ಟಿಕೊಡುವ ಸವಾಲಿನಿಂದ ದೂರ ಉಳಿದಿರುವುದು ಮೂಲ ಕಥೆಗೆ ಒಂದು ಅಥೆಂಟಿಸಿಟಿ ಒದಗಿಸಲು ವಿಫಲವಾಗುತ್ತದೆ. ಮುಗ್ಧನೊಬ್ಬ ಆಕಸ್ಮಿಕವಾಗಿ ಭಯೋತ್ಪಾದನೆಯ ಭಾಗವಾಗಿ ತಪ್ಪಾಗಿ ಗುರುತಿಸಿಕೊಳ್ಳುವುದು ನೈಜ ಕಥಾನಕ. ಆದರೆ ಇದನ್ನು ಜನಪ್ರಿಯ ಮಾದರಿಯಲ್ಲಿ ಕಟ್ಟಿಕೊಡಲು ಹೋಗುವಾಗ ಎದುರಾಗುವ ಸವಾಲುಗಳನ್ನು ನಿಭಾಯಿಸಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲವೇನೋ. (ಬಹಳ ಜನಪ್ರಿಯ ಮಾದರಿಯಲ್ಲಿಯೇ ನಮ್ಮ ನಾಯಕ ಈ ವಿಷವರ್ತುಲಕ್ಕೆ ಸಿಕ್ಕಿಹಾಕಿಕೊಳ್ಳುವುದು). ಆದರೆ ಸಂತ್ರಸ್ತನ ಭಾವೋತ್ಕಟನೆಯನ್ನು-ಭಯದ ಭಾವನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಸಾಧ್ಯವಾಗದೆ, ಭಯೋತ್ಪಾದನೆಯ ಕಥೆಯನ್ನು ಸರಿಯಾಗಿ ನಿರೂಪಿಸಲು ಸಾಧ್ಯವಾಗದೆ, ಮುಗ್ಧತೆಯನ್ನು ಸಾಬೀತುಪಡಿಸುವ ಪ್ರಕ್ರಿಯೆಯಲ್ಲಿ ನಡೆಯಬಹುದಾದ ಘಟನೆಗಳು ಅಥೆಂಟಿಕ್ ಅಥವಾ ಪ್ರೇಕ್ಷಕನ ಪ್ರಶ್ನೆಗಳನ್ನು ಮರೆಮಾಚುವಂತೆ ಕಟ್ಟಿಕೊಡಲು ಸಾಧ್ಯವಾಗದಂತೆ (ಪೊಲೀಸರ ಚೇಸಿಂಗ್ ದೃಶ್ಯಗಳು, ಮಾಲ್ ನಿಂದ ನಾಯಕ ನಟ ತಪ್ಪಿಸಿಕೊಳ್ಳುವ ದೃಶ್ಯ, ಅಂತ್ಯದಲ್ಲಿ ಮೂಡುವ ಒಂದಷ್ಟು ತಿರುವುಗಳು ಎಲ್ಲವೂ ಗಂಭೀರತೆಗಿಂದ ಹಾಸ್ಯ ಮೂಡಿಸುವಂತಿವೆ) ಜಾಳು ಜಾಳಾಗಿ ಕಥೆ ಮುಂದುವರೆಯುವುದು ಪ್ರೇಕ್ಷಕನಿಗೆ ನಿರಾಶೆ ಮೂಡಿಸುತ್ತದೆ. ಕೆಲವೊಮ್ಮೆ ವೇಗದ ನಿರೂಪಣೆ ಬೇಡುವ ಕಡೆ ಅನಗತ್ಯವಾಗಿ ಸ್ಲೋ ಮೋಷನ್ ನಲ್ಲಿ ತೋರಿಸುವ ದೃಶ್ಯಗಳು ಪ್ರೇಕ್ಷಕನಿಗೆ ಬೇಸರಿಸುತ್ತವೆ.
ಸಿನೆಮಾ ಒಂದು ಮಟ್ಟಕ್ಕೆ ಹಿತವೆನ್ನಿಸುವುದು ಕೆಲವು ತಾಂತ್ರಿಕ ಆಯಾಮಗಳಿಂದ. ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಕನಸಿನ ಹಾಡುಗಳ ಟ್ಯೂನ್ ಗಳು ಗುನುಗಬಹುದಾಗಿದ್ದು, ಮೊದಲಾರ್ಧದ ರೋಮ್ಯಾನ್ಸ್ ದೃಶ್ಯಗಳಿಗೆ ಮೂಡ್ ನಿರ್ಮಿಸಲು ಸಹಕರಿಸಿವೆ. ಹಿನ್ನಲೆ ಸಂಗೀತ ಕೂಡ ಬಹಳಷ್ಟು ಬಾರಿ ಸಿನೆಮಾದಲ್ಲಿ ಬದಲಾಗುವ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುತ್ತ ನಿರೂಪಣೆಯಲ್ಲಿ ಇಲ್ಲದನ್ನು ಕಟ್ಟಿಕೊಡಲು ಪ್ರಯತ್ನಿಸಿದೆ. ಮನೋಹರ್ ಜೋಶಿ ಮತ್ತು ಕರಮ್ ಚಾವಲಾ ಅವರ ಛಾಯಾಗ್ರಹಣ ಕೂಡ ಸಿನೆಮಾಗೆ ಹಿತವೆನ್ನಿಸುವ ಆಯಾಮಗಳಲ್ಲಿ ಒಂದು. ಪ್ರೀತಿಯಲ್ಲಿ ವಿಫಲನಾಗಿ ಆತ್ಮಹತ್ಯೆಗೆ ಶರಣಾಗುವ ಕಡೆ ವಿನಯ್ ರಾಜಕುಮಾರ್ ಅವರ ನಟನೆ ಪೂರಕವಾಗಿದ್ದರು ಉಳಿದೆಡೆ ಸಪ್ಪೆ ಎಂದೆನಿಸುತ್ತಾರೆ. ಒಂದೆರಡು ಹಾಡಿನಲ್ಲಿ ಹಾಕುವ ಸ್ಟೆಪ್ಸ್ ಪ್ರೇಕ್ಷಕನಿಗೆ ಇಷ್ಟವಾಗಬಹುದು. ರಿಕ್ಷರ್ ಮೀರ್ ಅವರ ನಟನೆ ಪರವಾಗಿಲ್ಲ. ದೇವರಾಜ್ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಅಷ್ಟೇನು ಛಾಪು ಮೂಡಿಸುವುದಿಲ್ಲ. ಆದರೆ ಚಿತ್ರೀಕರಣದ ಪ್ರದೇಶ, ನಿರಂತರತೆ ಮತ್ತು ಸಂಭಾಷಣೆಗಳಲ್ಲಿ ಎಡವಿರುವುದು ಸ್ಪಷ್ಟವಾಗುತ್ತದೆ. ದೊಡ್ಡ ನಗರದಲ್ಲಿ ನಡೆಯುತ್ತಿರುವ ಕಥೆ, ಬಾಂಬ್ ಬ್ಲಾಸ್ಟ್ ಆಗುವಾಗ ಯಾವುದೇ ಸಣ್ಣ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣಗೊಳ್ಳುವುದು (ಹಿಂದೆ ಬೆಟ್ಟ ಗುಡ್ಡಗಳು ಸ್ಪಷ್ಟವಾಗಿ ಕಾಣುವುದು), "ಬಟ್ಟೆ ನೋಡಿದ್ರೆ ಭಕ್ತಿ ಬರಬೇಕೆ ಹೊರತು ಇನ್ನೇನು ಅನ್ನಿಸಬಾರದು" ಎಂದು ನಾಯಕ ನಟ ನಾಯಕಿಗೆ ಹೇಳುವ ಅಥವಾ ನಾಯಕಿ ನಾಯಕನಿಗೆ 'ಗಂಡಸಿನ ರೀತಿಯಲ್ಲಿ ಏನಾದರೂ ಮಾಡು" ಎಂಬಂತಹ ತಿಕ್ಕಲುತನದ ಸಂಭಾಷಣೆಗಳಿಗೆ ಮೊರೆ ಹೋಗಿರುವುದು ಕೂಡ ಸಿನೆಮಾಗೆ ಹಿನ್ನಡೆಯಾಗಿ ಪರಿಣಮಿಸಿದೆ. 
ಇಷ್ಟಾಗಿಯೂ ಭಯೋತ್ಪಾದನೆ ಎಂಬ ಸೂಕ್ಷ್ಮ ವಿಷಯವನ್ನು ದೃಶ್ಯ ಮಾಧ್ಯಮದಲ್ಲಿ ನಿಭಾಯಿಸುವುವಾಗ ಭಯೋತ್ಪಾದಕರಿಗೆ (ನಿರ್ಧಿಷ್ಟ) ಧರ್ಮದ ಹಂಗಿಲ್ಲ (ಇದನ್ನು ಕನಿಷ್ಠ ಹಲವಾರು ಬಾರಿ ಸಂಭಾಷಣೆಯ ಮೂಲಕ ಹೇಳುವ ಮೂಲಕ) ಎಂಬ ವಿಷಯವನ್ನು ತುಸು ಜಾಗರೂಕವಾಗಿ ನಿಭಾಯಿಸಿರುವುದು ಅಭಿನಂದನಾರ್ಹ. ಒಟ್ಟಿನಲ್ಲಿ ಕಥೆಯ ಹರವನ್ನು ಹೆಚ್ಚಿಸಿಕೊಂಡು, ನಾಯಕ ನಟನ ವೈಭವೀಕರಣವನ್ನು ಅಲ್ಲಗೆಳೆಯಲು ಸಾಧ್ಯವಾಗದೆ, ಆದರೆ ನಟನೆಯನ್ನು ಅಷ್ಟು ಪರಿಣಾಮಕಾರಿಯಾಗಿ ಮೂಡಿಸಲು ಸಾಧ್ಯವಾಗದೆ, ನಿರೂಪಣೆಯಲ್ಲಿಯೂ-ಘಟನೆಗಳ ಸೃಷ್ಟಿಯಲ್ಲಿಯೂ ಎಡವಿ, ಪ್ರೇಕ್ಷಕನಿಗೆ ಅನಗತ್ಯ ಪ್ರಶ್ನೆಗಳನ್ನು ಮೂಡಿಸಿ ರಸಸ್ವಾದಕ್ಕೆ ಅಡ್ಡಿಪಡಿಸುವಂತೆ ಸಿನೆಮಾ ನಿರ್ದೇಶಿಸರುವ ರಘು ಶಾಸ್ತ್ರಿ ಚೊಚ್ಚಲ ಬಾರಿಗೆ ಅತಿ ಸಾಧಾರಣ ಯಶಸ್ಸು ಕಂಡಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT