ಹಾರರ್ ಚಲನಚಿತ್ರಗಳ ಪ್ರಾಕಾರಕ್ಕೆ ಬಂದಾಗ ಕಲ್ಪನೆಯ ಎಲ್ಲೆಯನ್ನು ಎಗ್ಗಿಲ್ಲದೆ ವಿಸ್ತರಿಸಬಹುದು. ದೆವ್ವಗಳು ಮುಗ್ಧವಾಗಿರಬಹುದು, ಭಯಂಕರವಾಗಿದ್ದು ಭಯಭೀತಿ ಮೂಡಿಸಬಹುದು, ಹಾಸ್ಯ ಮಾಡಬಹುದು, ಜನಪ್ರಿಯ ಮಾದರಿಗಳಲ್ಲಿ ಫೈಟ್ ಮಾಡಬಹುದು, ಇದ್ದು ಇಲ್ಲದಂತಾಗಿ ಕೇವಲ ಮಾನಸಿಕ ದೆವ್ವವು ಆಗಿರಬಹುದು. ಆದುದರಿಂದ ಈ ದೆವ್ವಗಳು ಕಾಡುವ ಮನುಷ್ಯರಲ್ಲಿ ಹುಟ್ಟಬಹುದಾದ ಪ್ರತಿಕ್ರಿಯೆಗಳಿಗೂ ನಿರ್ಧಿಷ್ಟತೆ-ತರ್ಕಗಳನ್ನು ಆರೋಪಿಸುವುದು ಕಷ್ಟ, ಆದುದರಿಂದ ಆ ವಿಷಯದಲ್ಲೂ ಕಲ್ಪನೆಯ ಎಲ್ಲೆ ಮಿತಿಮೀರಬಹುದು. ಹೀಗಿದ್ದೂ ಹಾರರ್ ವಿಷಯವನ್ನು ಪ್ರಾಧಾನ್ಯವಾಗಿರಿಸಿಕೊಂಡು ಇತ್ತೀಚೆಗೆ ಕನ್ನಡದ ಹಲವು ಯುವ ನಿರ್ದೇಶಕರು ತಾಳ್ಮೆಯ-ಸ್ಟೈಲಿಶ್ ನಿರೂಪಣೆಯಿಂದ ಒಳ್ಳೆಯ ಕಥೆ ಇಟ್ಟುಕೊಂಡು ಸಿನೆಮಾಗಳನ್ನು ಕಟ್ಟಿ ಪ್ರೇಕ್ಷಕರನ್ನು ರಂಜಿಸಿದ ತಾಜಾ ಉದಾಹರಣೆಗಳು ಕಣ್ಮುಂದೆಯೇ ಇರುವಾಗ (ರಂಗಿತರಂಗ, ಯು-ಟರ್ನ್, ಕರ್ವ) ತಮಿಳು ಚಲನಚಿತ್ರ ಕಾಂಚನಾ-2 ಸಿನೆಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಿ ನಿರ್ದೇಶಕ ಆರ್ ಅನಂತ ರಾಜು ಬೆಟ್ಟ ಅಗೆದಿದ್ದಾರೆ ಎನ್ನಬಹುದು. ಉಪೇಂದ್ರ ಅಭಿನಯದ ಈ ಚಿತ್ರ ಕೊನೆಗೆ ಹಿಡಿದದ್ದು ಏನು?
ಟಿವಿ ಚಾನೆಲ್ ಒಂದು ಪ್ರತಿಸ್ಪರ್ಧಿಯ ದೇವರ ಕಾರ್ಯಕ್ರಮಕ್ಕೆ ಸೆಡ್ಡುಹೊಡೆಯಲು, ದೆವ್ವ ಇದೆ ಎಂಬ ಕಟ್ಟು-ಕಥೆ ಸೃಷ್ಟಿಸಿ ಕಾರ್ಯಕ್ರಮ ಮಾಡಲು ಮಂಗಳೂರು ಬೀಚಿನ ಭೂತಬಂಗಲೆಯೊಂದಕ್ಕೆ ಬರುತ್ತಾರೆ. ಚಿಕ್ಕಂದಿಲಿಂದಲೂ ದೆವ್ವ ಪಿಶಾಚಿಗಳೆಂದರೆ ಬೆದರುವ ರಾಘವ (ಉಪೇಂದ್ರ) ಈ ಕಾರ್ಯಕ್ರಮಕ್ಕೆ ಕ್ಯಾಮರಾಮ್ಯಾನ್ ಹಾಗೂ ನಂದಿನಿ (ಅವಂತಿಕಾ ಶೆಟ್ಟಿ) ನಿರ್ದೇಶಕಿ. ತಂಡ ಕಟ್ಟಿಕೊಂಡು ಚಿತ್ರೀಕರಣ ಪ್ರಾರಂಭಿಸಿದ ಮೇಲೆ ನಿಜವಾಗಿಯೂ ಭೂತದ ಚೇಷ್ಟೆಗಳು ಪ್ರಾರಂಭವಾಗುತ್ತವೆ. ಕಾರ್ಯಕ್ರಮ ಚಿತ್ರೀಕರಣದ ವೇಳೆ ನಂದಿನಿಗೆ ಬೀಚಿನಲ್ಲಿ ಸಿಗುವ ಮಾಂಗಲ್ಯ ಸರದೊಂದಿಗೆ 'ಕಲ್ಪನಾ' ಭೂತ ಪ್ರಧಾನವಾಗಿ ನಂದಿನಿಯನ್ನು ಹಾಗೂ ತಂಡದ ಇತರರನ್ನು ಕಾಡಲು ಪ್ರಾರಂಭಿಸುತ್ತದೆ. ಸಿನೆಮಾ ಸಮಯದ 75% ಪ್ರತಿಶತ ಈ ಭೂತದ ಚೇಷ್ಟೆಗಳಾದರೆ, ಇನ್ನುಳಿದ ಸಣ್ಣ ಭಾಗ ಕಲ್ಪನಾಳ (ಪ್ರಿಯಾಮಣಿ) ಹಿಂದಿನ ಕಥೆ, ನಂತರ ಕೆಲವು ದೆವ್ವಗಳ ಫೈಟ್ ನೊಂದಿಗೆ ಹಾಗೂ ಒಳ್ಳೆಯ(ದೈವಾಂಶಭೂತ) ದೆವ್ವ ಗೆಲ್ಲುವುದರೊಂದಿಗೆ ದುರಂತ ಕಥೆಯ ಸಿನೆಮಾ ಸುಖಾಂತ್ಯ ಕಾಣುತ್ತದೆ.
'ಹಾರರ್-ಹಾಸ್ಯ' ಒಂದು ರೀತಿಯ ವಿಚಿತ್ರ-ವಿಶಿಷ್ಟ ಪ್ರಾಕಾರ ಎನ್ನಬಹುದಾದರೂ, ಕೊನೆಗೆ ದೆವ್ವದಿಂದ ಕಾಡಿಸಿಕೊಳ್ಳುತ್ತಿರುವವರ ಪ್ರತಿಕ್ರಿಯೆ ಹಾಸ್ಯವೋ ಅಥವಾ ದೆವ್ವದ ಕಲ್ಪನೆಯೇ ಹಾಸ್ಯವೋ, ಮಂತ್ರವಾದಿಗಳು ಎರಚುವ ಬೂಧಿ ಹಾಸ್ಯವೋ ಎಂಬುದರ ಸ್ಪಷ್ಟತೆಯ ಗೆರೆಗಳು ಮರೆಯಾಗುತ್ತಾ ಹೋದಂತೆ ಕಲಸುಮೇಲೋಗರ ಆಗಿ ಸಿನೆಮಾ ಎಡಬಿಡಂಗಿ ಆಗುವ ಸಾಧ್ಯತೆ ಇದ್ದು ಕಲ್ಪಾನಾ-2 ಕೂಡ ಇದೆ ಸುಳಿಯಲ್ಲಿ ಸಿಲುಕಿ ನರಳಿದೆ. ಇಡೀ ಸಿನೆಮಾ ಗಲಾಟೆ ಸಂಭಾಷಣೆಯಿಂದ ನರಳಿದ್ದರೆ, ಹೆದರಿಕೊಳ್ಳಲಾದರೂ ತುಸು ಸಮಯ ಕೊಡಿ ಎಂದು ಪ್ರೇಕ್ಷಕ ಅಂಗಲಾಚುವಂತೆ ಮಾಡುತ್ತದೆ. ಸರಿಯಾಗಿ ಕಾಣದೆ ಕ್ಷಣಮಾತ್ರದಲ್ಲಿ ದೆವ್ವ ಸರಿದುಹೋಗಿ ಭಯಮಿಶ್ರಿತ ಅಚ್ಚರಿ ತರುವ ದೃಶ್ಯಗಳು ಸಿನೆಮಾದಲ್ಲಿ ಏನಿಲ್ಲವೆಂದರೂ 25-30 ಬಾರಿ ಕಾಣಿಸಿಕೊಂಡು ಪ್ರೇಕ್ಷಕನಿಗೆ ಏಕತಾನತೆಯ ದೆವ್ವ ಹಿಡಿಸುತ್ತದೆ. ಕೊನೆಗೆ ಒಂದಷ್ಟು ದೆವ್ವಗಳು ಒಡಮೂಡಿ ಅವುಗಳು ಕಚ್ಚಾಡಿ ಕಿತ್ತಾಡಿ ಸಾಯುವ ಹೊತ್ತಿಗೆ ಸಿನೆಮಾ ಇನ್ನು ಮುಗಿಯುತ್ತಿಲ್ಲವೇಕೆ ಎಂಬ ಭೀತಿ ಪ್ರೇಕ್ಷಕನಿಗೆ ಕಾಡಿದರೆ, ಕ್ಲೈಮ್ಯಾಕ್ಸ್ ಮುಂಚಿತವಾಗಿ ಮೂಡುವ ದೆವ್ವಗಳ ಪೂರ್ವದ ಮೇಲೊಡ್ರಾಮಾ ಕಥೆ ಕೂಡ ಪ್ರೇಕ್ಷನಿಗೆ ಯಾವುದೇ ರೀತಿಯಲ್ಲಿ ಹಿತ ಮೂಡಿಸುವುದಿಲ್ಲ. ಸಿನೆಮಾದಲ್ಲಿ ಮೂಡಿರುವ ಹಾಸ್ಯವು ಹೆಚ್ಚೇನು ಮೋಡಿ ಮಾಡದೆ ದ್ವಂದ್ವಾರ್ಥ (ಡಬಲ್ ಮೀನಿಂಗ್), ಸೆಕ್ಸಿಸ್ಟ್ ಜೋಕುಗಳಿಗೆ ಹೆಚ್ಚು ಮಣೆ ಹಾಕಿರುವುದು ಕೆಲವೊಮ್ಮೆ ವಾಕರಿಕೆ ಕೂಡ ತರಿಸುತ್ತದೆ.
ಉಪೇಂದ್ರ ಕೆಲವೊಮ್ಮೆ ಅವರ ಮ್ಯಾನರಿಸಂ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದರು ಹಿರೋಯಿಸಂ ಬೆರೆತ ದೆವ್ವದ ಪಾತ್ರದ ನಟನೆಯಲ್ಲಿ ಬೇಸರ ಮೂಡಿಸುತ್ತಾರೆ. ಅವಂತಿಕಾ ಶೆಟ್ಟಿ ಮತ್ತು ಪ್ರಿಯಾಮಣಿ ಅವರ ನಟನೆಯೂ ಅತಿ ಸಾಧಾರಣವಾದದ್ದು. ಅರ್ಜುನ್ ಜನ್ಯ ಅವರ ಸಂಗೀತಲ್ಲಿ ಮೂಡಿ ಬಂದಿರುವ ಹಾಡುಗಳು ಸಿನೆಮಾದ ಕಥೆಗೂ ಪೂರಕವಾಗದೆ, ಪ್ರತ್ಯೇಕವಾಗಿ ಗುನುಗಿಕೊಳ್ಳುವಂತೆಯೂ ಇರದೆ ಸಿನೆಮಾ ಸಮಯವನ್ನು ಇನ್ನಷ್ಟು ಲಂಬಿಸಲು ಸಹಕರಿಸಿವೆ. ಕಥೆ-ನಿರೂಪಣೆಯಲ್ಲಿ ಯಾವುದೇ ಗಟ್ಟಿತನವಿಲ್ಲದೆ, ಎಲ್ಲವೂ ಅತಿ ಸಾಧಾರಣ ಎನ್ನಬಹುದಾದ ದೆವ್ವ, ಮಂತ್ರವಾದಿ, ಒಂದಷ್ಟು ಭಯ, ಹಾಸ್ಯ, ಆಕ್ಷನ್, ಹಿರೋಯಿಸಂ ಎಲ್ಲವನ್ನು ಬೆರೆಸಿ ಕಲಸಿ ಉಸಿರುಗಟ್ಟಿಸುವ ಸಿನೆಮಾ ಒಂದರ ರಿಮೇಕ್ ಮಾಡಿ ನಿರ್ದೇಶಕ ಬೆಟ್ಟ ಕಡಿದು ಇಲಿ ಹಿಡಿದಿದ್ದಾರೆ ಎನ್ನಬಹುದು!