ಲಕ್ಷ್ಮಣ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಕ್ಲೀಷೆಯ ಲಕ್ಷ್ಮಣರೇಖೆ ಹಾಕಿಕೊಂಡು ಸೊರಗಿದ 'ಲಕ್ಷ್ಮಣ'

ಮೈಸೂರು ನಗರದ ಮನಮೋಹಕ ವೈಮಾನಿಕ ಚಿತ್ರೀಕರಣದೊಂದಿಗೆ ಪ್ರಾರಂಭವಾಗುವ 'ಲಕ್ಷ್ಮಣ' ಸಿನೆಮಾದ ಕೆಲವೇ ನಿಮಿಷಗಳಲ್ಲಿ ನಾಯಕ ನಟಿ ಅಂಜಲಿ (ಮೇಘನಾ ರಾಜ್) ನಿವೃತ್ತ ಎಸಿಪಿ

ಮೈಸೂರು ನಗರದ ಮನಮೋಹಕ ವೈಮಾನಿಕ ಚಿತ್ರೀಕರಣದೊಂದಿಗೆ ಪ್ರಾರಂಭವಾಗುವ 'ಲಕ್ಷ್ಮಣ' ಸಿನೆಮಾದ ಕೆಲವೇ ನಿಮಿಷಗಳಲ್ಲಿ ನಾಯಕ ನಟಿ ಅಂಜಲಿ (ಮೇಘನಾ ರಾಜ್) ನಿವೃತ್ತ ಎಸಿಪಿ ಜಗದೀಶ್ (ಜೈಜಗದೀಶ್) ಅವರನ್ನು ಕೊಲ್ಲುತ್ತಾಳೆ. ಈ ಕಾಂಟ್ರ್ಯಾಸ್ಟ್ ಪ್ರೇಕ್ಷಕನಲ್ಲಿ ಹುಟ್ಟಿಸುವ ಭರವಸೆಯನ್ನು (ಯಾವುದೋ ಒಳ್ಳೆಯ ಥ್ರಿಲ್ಲರ್ ಸಿನೆಮಾ ಇರಬಹುದೆಂಬ) ಕೊನೆಯವರೆಗೂ ಕಾಯ್ದುಕೊಳ್ಳಲು ಸಾಧ್ಯವಾಗಿದೆಯೇ? ಅನೂಪ್ 'ಹೀರೊ' ಆಗಿ ಪಾದಾರ್ಪಣೆ ಮಾಡಿರುವ ಈ ಸಿನೆಮಾದಲ್ಲಿ ಆಶಾವಾದ ಮೂಡಿಸುತ್ತಾರೆಯೇ?

ರೈಲ್ವೆ ಹಳಿಯ ನಡುವೆ ಲಕ್ಷ್ಮಣ (ಅನೂಪ್) ಓಡುತ್ತಾ ಇದ್ದಾನೆ. ಎದುರಿನಿಂದ ರೈಲು ಬರುತ್ತಿದೆ. ಆತ್ಮಹತ್ಯೆಗಾಗಿ ಹಳಿಯ ಮೇಲೆ ಮಲಗಿರುವ ಹೈದನೊಬ್ಬ, ತನ್ನ ಮನಬದಲಿಸಿ ಲಕ್ಷ್ಮಣನನ್ನು ಹಳಿಯಿಂದ ಹೊರಗೆಳೆದು, ತರುವಾಯ ಅವನಿಂದಲೇ ಜೀವನದ ಬಗ್ಗೆ ಬೋಧಿಸಿಕೊಳ್ಳುತ್ತಾನೆ. ನಂತರ ಒಂದು ಅದ್ದೂರಿ ಹಾಡು. ಹೀಗೆ ನಾಯಕನಟನನ್ನು ಸಿನೆಮಾದ ಕಥೆಗೆ ಸಂಬಂಧವೇ ಇಲ್ಲದ ದೃಶ್ಯದಿಂದ ಬಹಳ ಮಾಮೂಲಿಯಾಗಿ ಪರಿಚಯಿಸುವ ನಿರ್ದೇಶಕ ಹೀರೊನನ್ನು ಈ ಸಿನೆಮಾಗಷ್ಟೇ ಅಲ್ಲ ಇಡೀ ಚಿತ್ರರಂಗಕ್ಕೆ ಪರಿಚಯ ಮಾಡಿಕೊಡುವ ಉಮ್ಮೇದಿನಿಂದ ನಡೆಸಿರುವ ಪ್ರಯಾಸ ಪ್ರೇಕ್ಷಕನಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ.

ಲಕ್ಷ್ಮಣನದ್ದು ಅದ್ಭುತ ಹೊಂದಾಣಿಕೆಯ-ಒಬ್ಬರಿಗೊಬ್ಬರು ಗೆಳೆಯರಂತಿರಿವ ಸುಂದರ ಕುಟುಂಬ. ವಿದ್ಯಾಭ್ಯಾಸಕ್ಕೆಂದು ಮಗ ಬೆಂಗಳೂರಿಗೆ ಹೊರಟಾಗ, ಅವನನ್ನು ಬಿಟ್ಟು ಇರಲಾರದೆ ಇಡೀ ಕುಟುಂಬ ವಾಸ ಬದಲಿಸಲು ಮುಂದಾಗುತ್ತದೆ. ಬೆಂಗಳೂರಿನ ಮಳೆಯಲ್ಲಿ ನೆನೆಯುತ್ತಾ ಐಸ್ ಕ್ರೀಮ್ ತಿನ್ನುತ್ತಿರುವ ಅಂಜಲಿಯನ್ನು ಪ್ರಪ್ರಥಮವಾಗಿ ನೋಡಿ, ಒಂದೇ 'ಟೇಸ್ಟ್' ಎಂದು ಲಕ್ಷ್ಮಣ ಹತ್ತಿರವಾಗುತ್ತಾನೆ. ಒಂದೇ ಕಾಲೇಜಿನಲ್ಲಿ ಓದುವ ಇವರು ಹೆಚ್ಚು ಮುಖಾಮುಖಿಯಾಗಿ ಅದು ಅನುರಾಗಕ್ಕೂ ತಿರುಗುತ್ತದೆ. ಮೊದಲಾರ್ಧದ ಕಥೆ ಹೀಗೆ ಮುಂದುವರೆದು, ಹೆಚ್ಚೇನು ಘಟಿಸದೆ ಅಥವಾ ಅಪ್ಯಾಯಮಾನವಾದ ಯಾವುದೇ ಘಟನೆಗಳು ಮೂಡದೆ ಪ್ರೇಕ್ಷಕನಿಗೆ ಆಕಳಿಕೆ ತರಿಸುತ್ತದೆ. ಎಂದಿನಂತೆ ಸಿನೆಮಾಗಳಲ್ಲಿ ಕಂಡು ಬರುವ ಮಾಮೂಲಿ ರೌಡಿಸಂ-ಮಚ್ಚು-ಕೊಚ್ಚು-ಅಬ್ಬರ-ಅರುಚಾಟದ ದೃಶ್ಯಗಳು ಹೇರಳವಾಗಿವೆ. ಕಾಲೇಜಿನಲ್ಲಿ ಚಿಕ್ಕ(ಚಿಕ್ಕಣ್ಣ) ಎನ್ನುವ ವಿದ್ಯಾರ್ಥಿಯೊಬ್ಬ ತಾನು ದೊಡ್ಡ ರೌಡಿ ಎಂದು ಬಡಾಯಿ ಕೊಚ್ಚಿಕೊಳ್ಳುವ ದೃಶ್ಯಗಳು ಹಾಸ್ಯವನ್ನು ಹೊಕ್ಕಿಸಬೇಕಿದ್ದರು ಈಗಾಗಲೇ ಅಂತಹ ದೃಶ್ಯಗಳನ್ನು ಯಥೇಚ್ಛವಾಗಿ ನೋಡಿರುವ ಪ್ರೇಕ್ಷಕನಿಗೆ ಹಿಂಸಿಸುತ್ತವೆ. ಇನ್ನು ಬೆಂಗಳೂರಿಗೇ ದೊಡ್ಡ ರೌಡಿ ದೇಸಾಯಿ ಮತ್ತವನ ಸಹಚರರಾದ ಕೋಟೆ ಮತ್ತು ಮಾರಿ ಇವರ ದುರಾಡಳಿತದ ಅತಿರೇಕದ ಚಿತ್ರಣ ಮತ್ತು ಕಾನೂನುರಹಿತ ಬೆಂಗಳೂರನ್ನು ತೋರಿಸುವಾಗ ಇದು ಯಾವ ಕಾಲಘಟ್ಟದ ಸಿನೆಮಾ ಎಂಬುದು ಕೂಡ ಸ್ಪಷ್ಟವಾಗದೆ ಪ್ರೇಕ್ಷಕನಿಗೆ ಗೊಂದಲ ಮೂಡಿಸುತ್ತದೆ. ಹೀರೊ ಮತ್ತು ವಿಲನ್ ಗಳ ಅತಿ ವೈಭವೀಕರಣದಲ್ಲಿ ನಾಜೂಕಿನ ಕೊರತೆ ಎದ್ದು ಕಾಣುತ್ತದೆ. ರಸ್ತೆ ಮೇಲುಸೇತುವೆಯಿಂದ ದೇಸಾಯಿ ಸಹಚರ ಮಾರಿಯ ರುಂಡವನ್ನು ತುಂಡು ಮಾಡುವ ಲಕ್ಷ್ಮಣನನ್ನು ನೋಡುವ ಅವನ ಕುಟುಂಬಕ್ಕೆ ಆಘಾತವಾಗುತ್ತದೆ.

ಒಂದು ಸಣ್ಣ ಕುತೂಹಲತೆಯನ್ನು ಮಧ್ಯಂತರ ಪ್ರೇಕ್ಷಕನಲ್ಲಿ ಮೂಡಿಸಿದರು, ಅದು ಬಂದ ಹಾಗೆಯೇ ಮಾಯವಾಗಿ ಈ ಹಿಂದೆ ಹಲವಾರು ಸಿನೆಮಾಗಳಲ್ಲಿ ಕಂಡಿರುವ ಮತ್ತೊಂದು ದ್ವೇಷದ ಕಥೆಯ ಅನಾವರಣವಾಗುತ್ತದೆ. ದೇಸಾಯಿ ಮತ್ತು ಅವನ ಸಹಚರರನ್ನು ಕೊಲ್ಲಲು ಲಕ್ಷ್ಮಣ ಮುಂದಾಗಿದ್ದು ಏಕೆ ಎಂಬುದಕ್ಕೆ ಅವನ ಪೂರ್ವದ ಕಥೆ ತೆರೆದುಕೊಂಡು ಎಸಿಪಿ ರಣಧೀರ (ರವಿಚಂದ್ರನ್) ಮತ್ತು ಕುಟುಂಬದ ದುರಂತ ಕಥೆ ಮೂಡುತ್ತದೆ. ಇದಕ್ಕೂ ಲಕ್ಷ್ಮಣನಿಗೂ, ಅಂಜಲಿ ಮಾಡಿದ ಕೊಲೆಗೂ ಏನು ಸಂಬಂಧ?

ಸಿನೆಮಾ ಉದ್ದಕ್ಕೂ ಲೌಡ್ ಮತ್ತು ವಾಚಾಳಿ ಎಂದೆನಿಸುವುದಲ್ಲದೆ, ವಿಪರೀತ ಬೋಧನೆ, ಹಿರೋಯಿಸಂ ನಿಂದ ಬಳಲುತ್ತದೆ. ದ್ವಿತೀಯಾರ್ಧಕ್ಕೆ ಗುಂಡಿ ಬಿಚ್ಚಿಕೊಂಡು ಕಂಡಕಂಡಲ್ಲಿ ಶತ್ರುಗಳನ್ನು(ಕೆಡುಕರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?) ಕೊಲ್ಲುವ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ಅವರ ಹಿರೋಯಿಸಂ ಅನ್ನು ಕೂಡ ಪ್ರೇಕ್ಷಕ ಸಹಿಸಿಕೊಳ್ಳಬೇಕು. ಹೀರೋಗಳು ಮತ್ತು ವಿಲನ್ ಗಳು ಏಕರೀತಿಯಲ್ಲಿ ಕೊಲೆಗಳನ್ನು ಮಾಡುತ್ತ ರುಂಡ ಮುಂಡಗಳನ್ನು ಚೆಂಡಾಡುತ್ತಾ ಹೋಗುವುದು ಕೂಡ ಅತಿರೇಕದಲ್ಲಿ ಮೂಡಿರುವುದು ಬೇಸರಿಕೆ ತರಿಸುತ್ತದೆ. ಚಿತ್ರಕಥೆಯಲ್ಲಿ ಯಾವುದೇ ಗಟ್ಟಿ ಸಂಘರ್ಷವಿಲ್ಲದೆ ಕೇಡಿನ ಸಂಹಾರಕ್ಕೆ ಸಂತ್ರಸ್ತನ ಮಾಮೂಲಿ ಸೇಡಿನ ಕಥೆಯಾಗಿ ಕುತೂಹಲವನ್ನು ಕಮರಿಹಾಕುತ್ತದೆ. ರೋಮ್ಯಾನ್ಸ್ ದೃಶ್ಯಗಳು ಕೂಡ ಪ್ರೇಕ್ಷಕನಿಗೆ ಎಲ್ಲೂ ಮುದ ನೀಡುವುದಿಲ್ಲ. ಕಳೆದುಕೊಂಡ ಕುಟುಂಬದ ಸದಸ್ಯರನ್ನು ಮತ್ತೆ ಕಾಣುವ ಹೀರೋಗೆ ಆಗುವ ತಲ್ಲಣ-ಆನಂದ ಮಾತ್ರ ಇಡೀ ಸಿನೆಮಾದಲ್ಲಿ ಒಮ್ಮೆ ಮಾತ್ರ ಪ್ರೇಕ್ಷಕನನ್ನು ಎಂಗೇಜ್ ಮಾಡುವ ಶಕ್ತಿ ಇರುವ ದೃಶ್ಯ ಎಂದೆನಿಸುತ್ತದೆ.

ಯಾರ ನಟನೆಯೂ ವಿಶೇಷ ಎನ್ನುವಂತೆ ಮೂಡಿ ಬಂದಿಲ್ಲವಾದರೂ, ಮೇಘನಾ ರಾಜ್ ಇದ್ದುದರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಚೊಚ್ಚಲ ಚಿತ್ರದಲ್ಲಿ ಕಾಣಿಸಿಕೊಂಡಿರುವ ಅನೂಪ್ ಅವರಿಗೆ ಇನ್ನು ಹೆಚ್ಚಿನ ಸಿದ್ಧತೆ ಬೇಕಾಗಿದೆ. ಅವರ 'ವಾಯ್ಸ್ ಕಲ್ಚರ್' ನಲ್ಲಿ ಇನ್ನು ಸಾಕಷ್ಟು ಸುಧಾರಣೆಯಾಗಬೇಕಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರುವ ಯಾವ ಹಾಡುಗಳು ಮನಸ್ಸಿನಲ್ಲಿ ಉಳಿಯುವಂತಿಲ್ಲ. ಛಾಯಾಗ್ರಹಣ ಪರವಾಗಿಲ್ಲ ಆದರೆ ಚಿತ್ರಕಥೆ, ಛಾಯಾಗ್ರಹಣಕ್ಕಾಗಲಿ- ಸಂಕಲನಕ್ಕಾಗಲಿ ಸವಾಲೆಸೆದಂತಿಲ್ಲ.

ಚಿತ್ರಕತೆ- ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಆರ್ ಚಂದ್ರು, ಹೀರೊ ವೈಭವೀಕರಣ, ಕಥೆಗೆ ಹೆಚ್ಚೇನು ಪೂರಕವಲ್ಲದ ಪಂಚಿಗ್ ಸಂಭಾಷಣೆಗೆ ನೀಡಿರುವ ಪ್ರಾಮುಖ್ಯತೆಯನ್ನು ಕಥೆಗಾಗಲಿ-ನಾಜೂಕಿನ ನಿರೂಪಣೆಗಾಗಲಿ ಅಥವಾ ನಟರಿಂದ ಅತ್ಯುತ್ತಮ ನಟನೆಯನ್ನು ಹೊರತೆಗೆಯುವ ಪರ್ಯಾಸಕ್ಕಾಗಲಿ ನೀಡದೆ ಅತಿ ಸಾಧಾರಣ ಎನ್ನಬಹುದಾದ ಸಿನೆಮಾ ನೀಡಿದ್ದಾರೆ.

ಇಂದಿನ ದಿನಗಳಲ್ಲಿ ಕಮರ್ಷಿಯಲ್ ಸಿನೆಮಾ ಎಂದು ಕೆರೆದುಕೊಳ್ಳುವ ಈ ಸಿನೆಮಾಗಳು ತಮ್ಮ ಸುತ್ತಲೇ ಹಳೆ ಫಾರ್ಮುಲಾಗಳ (ಹಿರೋಯಿಸಂ, ರೌಡಿಯಿಸಂ, ಪಂಚಿಗ್ ಡೈಲಾಗ್ ಗಳು) ಲಕ್ಷ್ಮಣ ರೇಖೆ ಹಾಕಿಕೊಂಡು ಸೊರಗುತ್ತಿವೆ. ಇವುಗಳನ್ನು ಮೀರಿ ಹೊಸತನ್ನು ಸೃಷ್ಟಿಸಬಲ್ಲ ಸಾಮಾರ್ಥ್ಯ ಎಲ್ಲರಿಗೂ ಇದ್ದೇ ಇದೆ. ಹೊಸ ಸಾಧ್ಯತೆಗಳತ್ತ ಜಿಗಿಯುವ ಅಥವಾ ಮಾಡಿದ್ದನ್ನೇ ಇನ್ನು ನಾಜೂಕಾಗಿ, ಸೂಕ್ಷ್ಮವಾಗಿ, ಕಲಾತ್ಮಕವಾಗಿ, ರಂಜನೀಯವಾಗಿ ಮರು ಸೃಷ್ಟಿಸುವ ಜರೂರು ಸದ್ಯಕ್ಕಿದೆ!



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT