ಮಾದ ಮತ್ತು ಮಾನಸಿ ಸಿನೆಮಾ ವಿಮರ್ಶೆ
'ಮುಂಗಾರು ಮಳೆ' ಸಿನೆಮಾದ ಸಂಗೀತದಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಸಂಗೀತ ನಿರ್ದೇಶಕ ಮನೋಮೂರ್ತಿ ಈಗ ನಿರ್ಮಾಪಕ ಕೂಡ. ಅವರ ನಿರ್ಮಾಣದ ಮತ್ತು ಅವರೇ ಸಂಗೀತ ನೀಡಿರುವ 'ಮಾದ ಮತ್ತು ಮಾನಸಿ' ಬಿಡುಗಡೆಯಾಗಿದೆ. ಯಶಸ್ಸು ಮರೀಚಿಕೆಯಂತೆ ಕಾಡುತ್ತಿರುವ ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಸತೀಶ್ ಪ್ರಧಾನ್ ಅವರ ಈ ಸಿನೆಮಾಗೆ ಪ್ರೇಕ್ಷಕರನ್ನು ಹಿಡಿದಿಟ್ಟಿಕೊಳ್ಳಲು ಸಾಧ್ಯವಾಗಿದೆಯೇ?
ಮಾನಸಿಯನ್ನು (ಶ್ರುತಿ ಹರಿಹರನ್) ಓಡಿಸಿಕೊಂಡು ಬರುವ ಮಾದ (ಪ್ರಜ್ವಲ್ ದೇವರಾಜ್) ರೈಲು ಪ್ರಯಾಣ ಬೆಳೆಸುತ್ತಾನೆ. ಸಹ ಪ್ರಯಾಣಿಕನಿಗೆ (ರಂಗಾಯಣ ರಘು) ತನ್ನ ಪ್ರೇಮಕಥೆಯನ್ನು ನಿವೇದಿಸಿಕೊಳ್ಳುತ್ತಾನೆ. ಮಧ್ಯಂತರದ ಹೊತ್ತಿಗೆ ಮಾದ ಮಾನಸಿಯನ್ನು ಪ್ರೇಮಿಸುತ್ತಿದ್ದರು, ಮಾನಸಿ ಮನಸ್ಸು ಅವಳ ಕಾಲೇಜು ಸಹಪಾಠಿ ದೀಪಕ್ ಕಡೆಗೆ, ಆದುದರಿಂದ ಅವರಿಬ್ಬರನ್ನು ಒಂದುಗೂಡಿಸಲು ಮಾದ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಿದ್ದಾನೆ ಎಂದು ತಿಳಿದುಬರುತ್ತದೆ. ಈ ಮಧ್ಯೆ ಮಾನಸಿಯ ಮೇಲೆ ರೌಡಿಗಳು ದಾಳಿ ಮಾಡುತ್ತಾರೆ. ಮುಂದೇನಾಗುತ್ತದೆ?
ತ್ರಿಕೋನ ಪ್ರೇಮಕಥೆಯೊಂದಕ್ಕೆ ಅಲ್ಲಲ್ಲಿ ಸವಕಲು ತಿರುವುಗಳನ್ನು ಕೃತಕವಾಗಿ ತುರುಕಿ ನೀರಸ ಚಿತ್ರಕಥೆಯೊಂದನ್ನು ರಚಿಸಿರುವ ನಿರ್ದೇಶಕ, ದೃಶ್ಯಮಾಧ್ಯಮಕ್ಕೂ ಅದನ್ನು ಅಷ್ಟೇ ನೀರಸವಾಗಿ ಅಳವಡಿಸಿದ್ದಾರೆ. ಸೂತ್ರ ಸಂಬಂಧವೇ ಇಲ್ಲದ ಒಂದು ಫೈಟ್ ನಿಂದ ಪ್ರಾರಂಭವಾಗುವ ಸಿನೆಮಾ, ಓತಪ್ರೇತವಾಗಿ ಕಥೆ ಹೆಣೆಯುತ್ತಾ, ಹತ್ತು ಹಲವು ಹಳಸು ಎನ್ನುವಂತಹ ಘಟನೆಗಳನ್ನು ಹೆಣೆಯುತ್ತಾ, ಅರ್ಥವಿಲ್ಲದ ಮತ್ತು ತಪ್ಪು ಸಂದೇಶ ನೀಡುವ ಸಂಭಾಷಣೆಗಳೊಂದಿಗೆ ಓಡುವ ಸಿನೆಮಾ ಮಧ್ಯಂತರದ ಹೊತ್ತಿಗೆ ಪ್ರೇಕ್ಷಕನಲ್ಲಿ ಆಕ್ರೋಶದ ಹೊಗೆ ಹೊತ್ತಿಸುವ ತಾಕತ್ತು ಹೊಂದಿದೆ.
ರೇಪ್ ವಿಷಯ ಒಳಗೊಂಡಿರುವ ಈ ಸಿನೆಮಾ ಕೊನೆಯ ಪಕ್ಷ ದ್ವಿತೀಯಾರ್ಧದಲ್ಲಾದರೂ ಅದರ ಸುತ್ತ ಒಂದು ಅರ್ತಿಗರ್ಭಿತ, ಭಾವನಾತ್ಮಕ, ಪ್ರಗತಿಪರವಾದ ಕಥೆ ಕಟ್ಟಿಕೊಡಬಹುದೇನೋ ಎಂಬ ನಿರೀಕ್ಷೆಯನ್ನು ಕೂಡ ನಿರ್ದೇಶಕ ಹುಸಿಗೊಳಿಸುತ್ತಾರೆ. ರೇಪ್ ಗೆ ಒಳಗಾದ ಯುವತಿಯನ್ನು ನಿರಾಕರಿಸುವ ಅವನ ಪ್ರಿಯತಮ, ಸ್ವೀಕರಿಸುವಂತೆ ಅವನನ್ನು ಗೋಗರೆಯುವ ಮಾನಸಿ ಮತ್ತು ಮಾದ, ಉದಾರಿ ಮತ್ತು ತ್ಯಾಗಮಯಿ ಮಾದ ಹೀಗೆ ಎಲ್ಲ ಪಾತ್ರ ಮತ್ತು ಸನ್ನಿವೇಶಗಳು ಕ್ಯಾರಿಕೇಚರ್ಡ್ ಎನ್ನಿಸುವುದಲ್ಲದೆ, ಅದನ್ನಾದರೂ ಒಂದು ಘನತೆಯಿಂದ ಮತ್ತು ಪರಿಣಾಮಕಾರಿಯಾಗಿ ಚಿತ್ರಿಸದೆ, ಮಹಾ ಸೋಮಾರಿತನದಿಂದ ಬರೆದು ನಿರ್ದೇಶಿಸಿರುವ ಚಿತ್ರ ಇದು ಎಂದೆನಿಸುತ್ತದೆ. ಹೀರೊ ವೈಭವೀಕರಣದ ಮುಂದೆ ಮತ್ತೆಲ್ಲವೂ ಗೌಣವಾಗಿ, ಒಂದು ಒಳ್ಳೆಯ ಸಿನೆಮಾದಲ್ಲಿ ಇರಬೇಕಾದ ಮೂಲಭೂತ ಗುಣಗಳೆಲ್ಲವೂ ಮರೆಯಾಗುತ್ತವೆ. ಅಲ್ಲಲ್ಲಿ ಕೆಟ್ಟ ಹಾಸ್ಯ ಕೂಡ ಹಾಸುಹೊಕ್ಕು ಗಾಯದ ಮೇಲೆ ಬರೆಯನ್ನು ಎಳೆದ ಅನುಭವ ನೀಡುತ್ತದೆ.
ಪಾತ್ರದ ಪರಿಕಲ್ಪನೆ, ಘಟನೆಗಳನ್ನು ಹೆಣೆದು ಪೋಣಿಸುವಿಕೆ, ಚಿತ್ರಕಥೆ ಮತ್ತು ನಿರೂಪಣೆ ಯಾವುದರಲ್ಲೂ ನಿಖರತೆ, ಸೃಜನಶೀಲತೆ ಇರದ ಈ ಸಿನೆಮಾದಲ್ಲಿ ನಟನೆ ಕೂಡ ಬಹಳ ಸಾಮಾನ್ಯವಾಗಿ ಮೂಡಿಬಂದಿರುವುದು ಇನ್ನಷ್ಟು ಬೇಸರದ ಅಂಶ. ಪ್ರಜ್ವಲ್ ದೇವರಾಜ್ ಆಗಲಿ, ಶ್ರುತಿ ಹರಿಹರನ್ ಆಗಲಿ ಪರಿಪೂರ್ಣವಾದ ನಟನೆ ನೀಡಿಲ್ಲ. ಉಳಿದ ಪೋಷಕ ವರ್ಗದ ನಟನೆ ಕೂಡ ಅಷ್ಟಕ್ಕಷ್ಟೇ. ಮನೋಮೂರ್ತಿ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳಲ್ಲಿ, ಸಾಹಿತ್ಯವು ಸ್ಪಷ್ಟವಾಗಿ ಕೇಳಿಸುವುದಿಲ್ಲ, ಇತ್ತ ನೀರಸ ಕಥೆಯಿಂದ ಬೇಸರಗೊಂಡ ಪ್ರೇಕ್ಷಕನ ಮನಸ್ಸನ್ನು ಹೊರತಂದು ಉಲ್ಲಾಸವನ್ನೂ ನೀಡುವುದಿಲ್ಲ. ಆರ್ಭಟಿಸುವ ಹಿನ್ನಲೆ ಸಂಗೀತ ತಲೆಯ ಮೇಲೆ ಸುತ್ತಿಗೆಯಲ್ಲಿ ಹೊಡೆಸಿಕೊಂಡ ಅನುಭವ ನೀಡುತ್ತದೆ. ಉಳಿದ ತಾಂತ್ರಿಕ ಆಯಾಮಗಳು ಕೂಡ ಸಪ್ಪೆಯಾಗಿವೆ. ಅನಗತ್ಯವಾಗಿ ಹೆಚ್ಚೆಚ್ಚು ತುರುಕಿರುವ ಡ್ರೋನ್ ಶಾಟ್ ಗಳು, ನಿರಂತರತೆ ಕಾಯ್ದುಕೊಳ್ಳದ ಸಂಕಲನ ಹೀಗೆ ಯಾವ ಸಣ್ಣ ಅಂಶವೂ ಸಿನೆಮಾವನ್ನು ಸಹ್ಯವಾಗುವತ್ತ ಕೊಂಡೊಯ್ಯಲು ಸಹಕರಿಸಿಲ್ಲ.
ಕಥೆ-ಚಿತ್ರಕಥೆಯ ಪರಿಕಲ್ಪನೆಯಲ್ಲಿ ಯಾವುದೇ ಹೊಸತನವಿಲ್ಲದೆ-ಪರಿಶ್ರಮವಿಲ್ಲದೆ, ಅಗತ್ಯವಾದ ಭಾವನೆಗಳನ್ನು ನಟರಿಂದ ಹೊರಹೊಮ್ಮಿಸಲು ಸಾಧ್ಯವಾಗದೆ, ಕಲಸೋಗರ ನೀರಸ ಘಟನೆಗಳನ್ನು ಪೋಣಿಸಿ ಸಿನೆಮಾ ಮಾಡಿ ಮುಗಿಸಿ, ನಿಮಗೆ ಸಾಧ್ಯವಾದರೆ ಸಂಪೂರ್ಣವಾಗಿ ನೋಡಿ ಎಂದು ಪ್ರೇಕ್ಷಕರಿಗೆ ಸವಾಲೆಸೆಯಿದ್ದಾರೆ ನಿರ್ದೇಶಕ ಸತೀಶ್ ಪ್ರಧಾನ್.