Mungaru Male 2 Kannada Movie Review
ಕಾಲ ಬದಲಾದಂತೆ ಜನ ಪ್ರೀತಿಸುವ ಬಗೆಯೂ ಬದಲಾಗಿದೆ ಎಂದು ನಿರ್ದೇಶಕ ಶಶಾಂಕ್ ಧ್ವನಿಯ ಸಂದೇಶ ಹೊತ್ತು ಪ್ರಾರಂಭವಾಗುವ 'ಮುಂಗಾರು ಮಳೆ 2', ಹಿಂದಿನ 'ಮುಂಗಾರು ಮಳೆ' ನೀಡಿದ ಅನುಭವಕ್ಕಿಂತಲೂ ಹೆಚ್ಚಿನದೇನಾದರೂ ಪ್ರೇಕ್ಷಕರಿಗೆ ನೀಡುತ್ತದೆಯೇ? ಪ್ರೀತಿಯ ಬಗೆ ಅಥವಾ ಪ್ರೀತಿಯ ಸಂಘರ್ಷಗಳು ನಿಜಕ್ಕೂ ಅಷ್ಟು ಬದಲಾಗಿವೆಯೇ? ಹಾಗಿದ್ದರೆ ನಿರ್ದೇಶಕ ಅವುಗಳನ್ನು ಅಷ್ಟು ಸಶಕ್ತವಾಗಿ ಹಿಡಿದಿದ್ದಾರೆಯೇ?
ಮೊದಲ 'ಮುಂಗಾರು ಮಳೆ'ಯಿಂದ ಜನರ ಮನಸ್ಸಿನಲ್ಲಿ ಈಗಾಗಲೇ ಉಳಿದಿರುವ ಮುಖ್ಯ ಪಾತ್ರಗಳ ಹೆಸರುಗಳನ್ನು ಉಳಿಸಿಕೊಳ್ಳುವ ಜಾಣ್ಮೆ ತೋರಿರುವ ನಿರ್ದೇಶಕ, ಈ ಪಾತ್ರಗಳ ಚಹರೆಯನ್ನು ಮಾತ್ರ ಸಂಪೂರ್ಣವಾಗಿ ಬದಲಿಸಿದ್ದಾರೆ. ಆದರೆ ಈ ಬದಲಾವಣೆಯ ಅಗತ್ಯ ಮಾತ್ರ ಪ್ರಶ್ನಾರ್ಹವಾಗಿ ಉಳಿಯುತ್ತದೆ. ನಾಯಕನಟ ಪ್ರೀತಮ್ (ಗಣೇಶ್) ಈಗ ತಿಂಗಳಿಗೆ ಸ್ಲೊವೇನಿಯಾದಲ್ಲಿ 50 ಲಕ್ಷ ರೂ ವ್ಯಯಿಸುವ ಶಕ್ತಿಯುಳ್ಳ ಧನಿಕ. ಅವನಿಗೆ ಸ್ವಲ್ಪವೂ ಕುಂದು ಬಾರದಂತೆ ನೋಡಿಕೊಳ್ಳುವ ಸಿರಿವಂತ ತಂದೆ (ರವಿಚಂದ್ರನ್). ಸಂಖ್ಯೆಯ ಲೆಕ್ಕವೇ ಇಲ್ಲದೆ ಹಲವು ತಾತ್ಕಾಲಿಕ ಗರ್ಲ್ ಫ್ರೆಂಡ್ ಗಳ ಜೊತೆಗೆ ಸುತ್ತಾಡುವ ಇವನಿಗೆ, ಒಬ್ಬ ಹುಡುಗಿಯ ಜೊತೆಗೆ ಒಂದು ವಾರ ಕಳೆದರೆ ಮಹಾ ಬೇಸರ ಮೂಡುವ ವ್ಯಕ್ತಿತ್ವ ಇವನದ್ದು! ಇವನು ವಿಮಾನ ನಿಲ್ದಾಣದಲ್ಲಿರುವಾಗ, 'ರೈಲಿನಲ್ಲಿ ಜೈಪುರಕ್ಕೆ ತೆರಳುವ' ಜಾಹಿರಾತು ನೋಡಿ ತನ್ನ ಜೀವನದಲ್ಲಿ ಮೊದಲ ಬಾರಿಗೆ ರೈಲು ಹತ್ತುತ್ತಾನೆ. ಅಲ್ಲಿ ಇವನ ಜೊತೆಯಾಗುವುದು ಸಾಹಸಮಯ ಜೀವನವನ್ನು ಪ್ರೀತಿಸುವ ನಂದಿನಿ (ನೇಹಾ ಶೆಟ್ಟಿ). ಇಬ್ಬರೂ ತಾತ್ಕಾಲಿಕ ಪ್ರೇಮಿಗಳಾಗಿ ಒಪ್ಪಂದ ಮಾಡಿಕೊಂಡು, ದೈಹಿಕ-ಮಾನಸಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವುದಿಲ್ಲ ಎಂಬ ನಿಯಮದೊಂದಿಗೆ ರಾಜಸ್ಥಾನದಲ್ಲಿ ಚೆಲ್ಲಾಟ ಪ್ರಾರಂಭಿಸುತ್ತಾರೆ.
ಹೀಗೆ ಮೊದಲಾರ್ಧ, ಹೀರೊ-ಹೀರೋಯಿನ್ ಗಳ ಸುದೀರ್ಘ ಎಸ್ಟಾಬ್ಲಿಶ್ಮೆಂಟ್, ಅವರ ಭೇಟಿ ಮತ್ತು ಅವರ ಸುತ್ತುವಿಕೆಯಲ್ಲಿ ಮುಂದುವರೆಯುವ ಕಥೆಯಲ್ಲಿ ಅಮೋಘ ಎಂದೆನಿಸುವ ಯಾವುದೇ ಘಟನೆಗಳಿಲ್ಲದೆ, ದ್ವಿತೀಯಾರ್ಧದಲ್ಲಿ ಏನೋ ಮಹತ್ವದ್ದು ಇರಬೇಕೆಂಬ ನಿರೀಕ್ಷೆಯನ್ನು ಹೆಚ್ಚಿಸುತ್ತದಷ್ಟೆ. ರಾಜಸ್ಥಾನದ ಮರುಭೂಮಿಯ ಚಿತ್ರೀಕರಣವಷ್ಟೇ ಈ ಭಾಗದಲ್ಲಿ ಪ್ರೇಕ್ಷಕರಿಗೆ ಒಂದಷ್ಟು ತಾತ್ಕಾಲಿಕ ನೆಮ್ಮದಿ ನೀಡುವ ಅಂಶ.
ಸಾಹಸಮಯಿ ನಂದಿನಿ ತಿಳಿಯದಂತೆ ರಾಜಸ್ಥಾನ ತೊರೆದು ಹೋದಮೇಲೆ ಇಲ್ಲಿಯವರೆಗೂ ಸದಾ ಹುಡುಗಾಟದಲ್ಲೇ ನಿರತನಾಗಿದ್ದ ಪ್ರೀತಮ್ ಗೆ ಗಂಭೀರವಾದ ಪ್ರೀತಿ ಹುಟ್ಟಿಬಿಡುತ್ತದೆ. ಅದಕ್ಕೆ ನೆರವಾಗುವ ತಂದೆ ನಂದಿನಿಯ ವಿಳಾಸ ಪತ್ತೆಹಚ್ಚುತ್ತಾನೆ. ನಂದಿನಿಯ ಮಡಿಕೇರಿ ಮನೆಗೆ ತೆರಳುವ ಗಣೇಶ್, ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುವ ಮುಂಚಿತವಾಗಿಯೇ ನಂದಿನಿ ತನ್ನ ಅತ್ತೆಯ ಮಗನನ್ನು ಮದುವೆಯಾಗುತ್ತಿರುವ ವಿಷಯ ತಿಳಿಯುತ್ತದೆ. ಮುಂದೇನು?
ಮೊದಲ 'ಮುಂಗಾರು ಮಳೆ'ಯ ಜೊತೆಗೆ ಹೋಲಿಸದೆ ಇರದಷ್ಟು ತಾಜಾತನ ಸಿನೆಮಾದಲ್ಲಿಲ್ಲ. ಶೀರ್ಷಿಕೆಯ ಹೆಸರು ಅದೇ, ಪ್ರಮುಖ ಪಾತ್ರಗಳ ಹೆಸರುಗಳು ಅವೇ, ಹೆಚ್ಚು ಕಡಿಮೆ ಸಂಘರ್ಷವು ಅದೇ, ಬದಲಾಗಿರುವುದು ನಾಯಕನಟನ ಆರ್ಥಿಕ ಶಕ್ತಿಯಷ್ಟೇ. ಆ ಆರ್ಥಿಕ ಶಕ್ತಿಯಿಂದ ಪ್ರೇಕ್ಷಕರಿಗೆ/ಸಿನೆಮಾಗೆ ಹೆಚ್ಚುವರಿಯಾಗಿ ದಕ್ಕುವುದು ಪರದೇಶದ ಸೌಂದರ್ಯದ ಕೆಲವು ದೃಶ್ಯಗಳಷ್ಟೇ! ಚಿತ್ರದುದ್ದಕ್ಕೂ ಮೂಡುವ ಸಿರಿವಂತ ಅಪ್ಪ-ಮಗನ ಆತ್ಮೀಯ ಸಂಬಂಧ ಸಿನೆಮಾಗೆ-ಸಿನೆಮಾ ಕಥೆಗೆ ಯಾವುದೇ ರೀತಿಯಲ್ಲಿ ಗಟ್ಟಿಯಾಗಿ ಸಹಕರಿಸದೆ ನೆಪಮಾತ್ರಕ್ಕೆ, ಮತ್ತೊಬ್ಬ ದೊಡ್ಡ ನಟನನ್ನು ತೊಡಗಿಸಿಕೊಳ್ಳುವ ದೃಷ್ಟಿಯಿಂದ ಸೃಷ್ಟಿಸಿರುವ ತಂದೆಯ ಪಾತ್ರ ಎಂದೆನಿಸದೆ ಇರದು. ಪ್ರೀತಿಸುವ ರೀತಿ ಬದಲಾಗಿದೆ ಎಂದು ಹೇಳಿದ ಮಾತಿಗೆ ಬದ್ಧನಾಗಿರಲೆಂದೋ ಏನೋ, ಕೊನೆಗೆ ಅಂತ್ಯವನ್ನು ಹಿಂದಿನ 'ಮುಂಗಾರು ಮಳೆ'ಗಿಂತ ಧನಾತ್ಮಕವಾಗಿ ರೂಪಿಸಿರುವುದನ್ನು ಹೊರತುಪಡಿಸಿದರೆ, ಕಥೆಯ ವ್ಯಾಪ್ತಿಯಲ್ಲಿ ಮೂಲ ಯೋಗರಾಜ್ ಭಟ್ ಅವರ 'ಮುಂಗಾರು ಮಳೆ' ಸಿನೆಮಾದ ಛಾಯೆಯಿಂದ ಹೊರಬರಲು ನಿರ್ದೇಶಕನಿಗೆ ಸಾಧ್ಯವೇ ಆಗಿಲ್ಲ. ಇನ್ನು ಅಂತ್ಯವನ್ನು ಜಗ್ಗಿರುವ ರೀತಿಯಂತೂ ಹಾಸ್ಯಾಸ್ಪದವಾಗಿದೆ.
ಹತ್ತು ವರ್ಷದ ನಂತರ ಮೂಡಿಬಂದಿರುವುದಕ್ಕೋ, ಹೂಡಿಕೆಯಲ್ಲಿ ಆಗಿರುವ ಅಗಾಧ ಬದಲಾವೆಣೆಯಿಂದಲೋ ಏನೋ, ಸಿನೆಮಾ ಚಿತ್ರೀಕರಣದ ಪ್ರದೇಶಗಳಲ್ಲಿ ರಿಚ್ ನೆಸ್ ಕಾಣಿಸುತ್ತದೆ. (ಆದರೆ ಇದು ಕಥೆಗೆ-ಸಂಘರ್ಷಕ್ಕೆ ಮಾತ್ರ ಯಾವುದೇ ರೀತಿಯಲ್ಲಿ ಹೆಚ್ಚು ಸಹಕರಿಸಿಲ್ಲ). ಶೇಖರ್ ಚಂದ್ರ ಅವರ ಛಾಯಾಗ್ರಹಣ ತುಸು ಆಶಾವಾದ ಮೂಡಿಸುವ ಅಂಶ. ಮಡಿಕೇರಿಯ ಮಳೆ ಕಣ್ಣಿಗೆ ಹಬ್ಬ ತರಿಸಿ, ಅಗತ್ಯ ಭಾವನಾತ್ಮಕ ದೃಶ್ಯಗಳಿಗೆ ಸಹಕರಿಸಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರುವ ಒಂದೆರಡು ಹಾಡುಗಳು ಹಿತವೆನ್ನಿಸಿದರು, ಹಿನ್ನಲೆ ಸಂಗೀತದ ಆರ್ಭಟ ಕೆಲವೊಮ್ಮೆ ಇನ್ನಿಲ್ಲದ ಕಿರಿಕಿರಿ ಉಂಟುಮಾಡುತ್ತದೆ. ಗಣೇಶ್ ತಮ್ಮ ಮೊದಲ 'ಮುಂಗಾರು ಮಳೆ'ಯ ನಟನೆಯನ್ನು ಮುಂದುವರೆಸಿ ತಮ್ಮ ಹಾಸ್ಯದ ನಟನೆಯಿಂದ, ಬಸವಳಿದ ಪ್ರೇಕ್ಷಕರಿಗೆ ತುಸು ನೆಮ್ಮದಿ ನೀಡುತ್ತಾರೆ. ನೇಹಾ ಶೆಟ್ಟಿ ಚೊಚ್ಚಲ ಸಿನೆಮಾದಲ್ಲಿ ಪರವಾಗಿಲ್ಲ ಎಂಬಂತೆ ನಟಿಸಿದ್ದಾರೆ. ಸಾಧುಕೋಕಿಲಾ ಅವರ ಅರ್ಥವಿಲ್ಲದ ಹಾಸ್ಯ ಇಲ್ಲಿಯೂ ಮುಂದುವರೆದಿದೆ. ರವಿಚಂದ್ರನ್, ರವಿಶಂಕರ್ ನಟನೆ ಎಂದಿನಂತಿದೆ. ಸಂಭಾಷಣೆಯಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ.
ಪ್ರೀತಿಯ ಸ್ವರೂಪದ ಬದಲಾವಣೆಯ ನೆಪ ಹೂಡಿ, ಮೊದಲ 'ಮುಂಗಾರು ಮಳೆ'ಯ ಛಾಯೆಯಿಂದ ಹೊರಬರಲು ಸಾಧ್ಯವಾಗದೆ, ಒತ್ತಾಯಪೂರ್ವಕ ಅಂತ್ಯವನ್ನೇನೋ ಸೃಷ್ಟಿಸಿ, ಅನಂತನಾಗ್ ಮತ್ತು (ದೇವಸಾಸ್) ಮೊಲದ (ಮೂಲ 'ಮುಂಗಾರು ಮಳೆ'ಯ ಪಾತ್ರಗಳು) ಅನುಪಸ್ಥಿತಿಯನ್ನು ಪ್ರೇಕ್ಷಕರಿಗೆ ಕಾಡುವಂತೆ ಮಾಡಿರುವ ನಿರ್ದೇಶಕ ಶಶಾಂಕ್, ಕನ್ನಡ ಸಿನೆ ಪ್ರೇಕ್ಷಕರ ಭಾರಿ ಮುಂಗಾರು ಮಳೆಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ನೆಲ ನೆನೆಸುವಷ್ಟು ಮಳೆಯಾಗಿದೆಯಷ್ಟೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos