ನಾ ಪಂಟ ಕಣೋ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಪುಂಡ ಪ್ರಚಂಡನೋ, ಬಲ್ಲಿದರಿಗೆ ಭಂಟನೋ ಈ ಪಂಟ

ಕನ್ನಡ ಭಾಷೆಯಲ್ಲಿ ಪಂಟ ಪದದ ಪ್ರಾಚೀನತೆ ನಿಗದಿಪಡಿಸುವುದು ತುಸು ಕಷ್ಟದ ಕೆಲಸವೇ! ಜನಪ್ರಿಯ ಆಡುಪದವಾಗಿ ಬಳಕೆಯಲ್ಲಿರುವ ಇದು ಈಗ ನಿಘಂಟುಗಳಲ್ಲಿ ಸೇರ್ಪಡೆಯಾಗಿರುವುದು

ಕನ್ನಡ ಭಾಷೆಯಲ್ಲಿ ಪಂಟ ಪದದ ಪ್ರಾಚೀನತೆ ನಿಗದಿಪಡಿಸುವುದು ತುಸು ಕಷ್ಟದ ಕೆಲಸವೇ! ಜನಪ್ರಿಯ ಆಡುಪದವಾಗಿ ಬಳಕೆಯಲ್ಲಿರುವ ಇದು ಈಗ ನಿಘಂಟುಗಳಲ್ಲಿ ಸೇರ್ಪಡೆಯಾಗಿರುವುದು ಕೂಡ ಅನುಮಾನವೇ! ಆದುದರಿಂದ ಇದರ ನಿಖರ ಅರ್ಥವನ್ನು ನಿರ್ಧರಿಸಲು ಮತ್ತು ಈ ಅರ್ಥಕ್ಕೆ ಋಣಾತ್ಮಕ ಲಕ್ಷಣಗಳಿವೆಯೇ ಅಥವಾ ಧನಾತ್ಮಕವೋ ಎಂದು ಕಂಡುಹಿಡಿಯುವುದು ಕೂಡ ತ್ರಾಸವೇ! ಈ ನಿಟ್ಟಿನಲ್ಲಿ ಸಂಕೀರ್ಣತೆಯನ್ನು ತುಂಬಿಕೊಂಡ ಈ ಪದವನ್ನು ಒಳಗೊಂಡ 'ನ ಪಂಟ ಕಣೋ' ಸಿನೆಮಾವನ್ನು ನೋಡಲು ಪ್ರೇಕ್ಷಕರು ಕೂಡ ಕೊಂಚ ಪಂಟರಾಗಿರಬೇಕೇ ಎಂಬ ಅನುಮಾನ ಹುಟ್ಟುವುದು ಸಹಜವೇ. ತಮಿಳಿನ 'ರಾಜತಂಧಿರಂ' ಸಿನೆಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಿದ್ದಾರೆ ಕಲಾಸಾಮ್ರಾಟ್ ಎಸ್ ನಾರಾಯಣ್. 'ಲಕ್ಷ್ಮಣ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದ ಅನೂಪ್ ರೇವಣ್ಣ ಪಂಟನಾಗಿ ಮೆರೆದಿದ್ದು, ಈ ಸಿನೆಮಾ ಪ್ರೇಕ್ಷಕರಿಗೆ ಮತ್ತೆ ಮತ್ತೆ ನೋಡಲು ಆಹ್ವಾನಿಸುವಂತಿದೆಯೇ?
ಕಿಲಾಡಿತನದಲ್ಲಿ ಸಣ್ಣಪುಟ್ಟ ಕಳ್ಳತನದ ಕೆಲಸಗಳನ್ನು ಮಾಡಿ ಬದುಕುವ ಪಂಟ ಅರ್ಜುನ್ (ಅನೂಪ್ ರೇವಣ್ಣ). ಇವನ ಕೆಲಸದ ಜೊತೆಗೆ, ಬದುಕುವ ಕೋಣೆ, ಬಟ್ಟೆ ಬರೆಗಳನ್ನು ಹಂಚಿಕೊಳ್ಳುವ ಇವನ ಇಬ್ಬರು ಗೆಳೆಯರು ದೇವರಾಜ್ ಮತ್ತು ಪ್ರಕಾಶ್ ಅಕಾ ಕೋಳಿ. ಹೀಗೆ ಹೇಗೋ 'ಬಡವ ನೀ ಮಡಗ್ದಂಗೆ ಇರು' ಅಂತ ಬದುಕುತ್ತಿರುವ ಈ ಪುಡಿಗಳ್ಳರ ನಾಯಕನಾದ ಅರ್ಜುನ್ ಗೆ ಚಿನ್ನದಂಗಡಿಯನ್ನು ದೋಚುವ ಅವಕಾಶ ಬಂದರೂ ಹೆಚ್ಚಿನ ಅಪಾಯದ ಕಾರಣ ನೀಡಿ ನಿರಾಕರಿಸುತ್ತಾನೆ. ಆದರೆ ಗೆಳತಿ ಮಿಶೆಲ್ಲ ಬೆಮೆಲ್ಲೊ ಹಣಕಾಸಿನ ತೊಂದರೆಯಲ್ಲಿರುವುದನ್ನು ತಿಳಿದು, ಆಕೆಗೆ ಸಹಾಯ ಮಾಡಲು ದೊಡ್ಡ ಮೊತ್ತದ ಹಣವನ್ನು ಕಳ್ಳತನ ಮಾಡಲು ಮುಂದಾಗುತ್ತಾನೆ. ಇದು ಮುಂದೆ ಸೃಷ್ಟಿಸುವ ಅವಾಂತರಗಳೇನು? ಇವೆಲ್ಲದರಿಂದ ಪಂಟ ಪಾರಾಗುವ ಪರಿಯೇನು?
ಅತಿ ಚಮತ್ಕಾರದ ಕಥೆಯಿದು ಎಂಬ ಮುಖವಾಡ ಹೊದ್ದ, ಅತಿ ದಡ್ಡತನದಿಂದ ಕೂಡಿದ ಈ ತಮಿಳು ಸಿನೆಮಾದ ರಿಮೇಕ್ ಮಾಡಲು ಮನಸ್ಸು ಮಾಡಿರುವ ನಿರ್ಧಾರವನ್ನೇ ಬಹುಷಃ 'ಪಂಟತನ' ಎಂದು ಕರೆಯಬಹುದೇನೋ! ಇರಲಿ, ಸಿನೆಮಾ ಒಳಗೊಂಡಿರುವ ಒಂದೆರಡು ಸಂಗತದ ವಿಷಯಗಳನ್ನು ಮೊದಲಿಗೆ ನೆನಪಿಸಿಕೊಳ್ಳೋಣ. ಆರ್ಥಿಕ ಒತ್ತಡದಲ್ಲಿರುವ ನಾಯಕನಟಿ, ಅತ್ಯಲ್ಪ ಮತ್ತು ಬಿಡುವಿನ ಸಮಯದಲ್ಲಿಯೇ ಹೆಚ್ಚೆಚ್ಚು ಗಳಿಕೆ ಮಾಡಬಹುದು ಎಂಬ 'ನೆಟ್ವರ್ಕಿಂಗ್ ಸಂಸ್ಥೆ'ಯ ಸದಸ್ಯೆಯಾಗಿ ಕಂಡ ಕಂಡವರನ್ನೆಲ್ಲಾ ಅದರ ಜಾಲಕ್ಕೆ ಸೇರಿಸುವ ಉಪಕಥೆ ಬಹಳ ರಿಲೆವೆಂಟ್ ಆಗಿದ್ದು ಆಪ್ತವಾಗಿ ಮೂಡಿದೆ. ಚಿಟ್ ಫಂಡ್ ಹಗರಣವನ್ನು ಕೂಡ ಒಳಗೊಳ್ಳಲು ಪ್ರಯತ್ನಿಸಿರುವ ಎಳೆ ಕೂಡ ಒಂದು ಮಟ್ಟಕ್ಕೆ ಫಲ ನೀಡಿದೆ. 
ಇನ್ನುಳಿದಂತೆ ಸಿನೆಮಾದಲ್ಲಿ ನಾಯಕನಟನ ಹೀರೋಯಿಸಂನ ವೈಭವಕ್ಕಾಗಿಯೇ ಕಥೆ ಹೆಣೆದಿರುವಂತೆ ಕಂಡು, ಒಂದು ಕಡೆ ಒಡವೆ ಅಂಗಡಿಯ ಮಾಲೀಕನಿಗೂ, ಮತ್ತೊಂದು ಕಡೆ ಪೊಲೀಸರಿಗೂ ವಿಷಯ ತಿಳಿಸಿ ಕನ್ನ ಹಾಕಿ ಚಮತ್ಕಾರದಿಂದ ತಪ್ಪಿಸಿಕೊಂಡು, ಕೆಡುಕರನ್ನೇ ಬಲೆಗೆ ಬೀಳಿಸುವ ವ್ಯೂಹಕ್ಕೆ ನಗಬೇಕೋ, ಪಂಟರ ವಿಷಯ ನಮಗೇಕಪ್ಪಾ ಎಂದು ಕಡೆಗಣಿಸಬೇಕಾ ಎಂಬ ಗೊಂದಲವನ್ನು ಪ್ರೇಕ್ಷಕರಲ್ಲಿ ಯಶಸ್ವಿಯಾಗಿ ಮೂಡಿಸುತ್ತದೆ ಸಿನೆಮಾ. ಒಂದು ಹಂತಕ್ಕೆ ಯಾವುದೋ ರೋಚಕ ಕಥೆಯನ್ನು ಹೇಳಲು ನಿರ್ದೇಶಕ ಹೊರಟಿದ್ದಾರೆ ಎಂದೆನಿಸಿದರೂ, ಕೊನೆಗೆ ಚಮತ್ಕಾರತೆಯನ್ನು ಮೇಲು ಮಾಡಿ ಜಾಳು ಜಾಳಾದ ವಿಜೃಂಭಣೆಯನ್ನು ಮೆರೆದಿರುವುದಕ್ಕೆ ನಿರಾಶೆ ಮೂಡುತ್ತದೆ. 'ಪಂಟ'ನ ತಂತ್ರಗಾರಿಕೆಯ ಕನ್ನದ ಕಾರ್ಯಗಳು ಸಮಯದಲ್ಲಿ ಹಿಗ್ಗಿದಂತೆ ಭಾಸವಾಗಿ ಸಮಯ ಎಂಬುದು ಸಾಪೇಕ್ಷ ಎಂಬುದನ್ನು ಸಾಬೀತುಪಡಿಸುತ್ತವೆ. 
ತಾಂತ್ರಿಕವಾಗಿಯೂ ಸಿನೆಮಾದಲ್ಲಿ ಮಾಂತ್ರಿಕತೆಯ ಸ್ಪರ್ಶವಿಲ್ಲ. ಸಾಧಾರಣವಾಗಿ ಮೂಡಿರುವ ಛಾಯಾಗ್ರಹಣಕ್ಕೆ, ನಿರ್ದೇಶಕ ಎಸ್ ನಾರಾಯಣ್ ಅವರೇ ಸಂಗೀತ ನೀಡಿರುವ ಹಾಡುಗಳು ಮನಸ್ಸಿನಲ್ಲಿ ನಿಲ್ಲದೆ ಜಾರಿ ಮಾಯವಾಗುತ್ತವೆ. ಇನ್ನು ಗ್ರಾಫಿಕ್ಸ್ ನಲ್ಲಿ ಮೂಡಿರುವ ಒಂದು ಹಾಡಂತೂ ಈ ಚಿತ್ರತಂಡಕ್ಕೆ ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆಯ ಇರಾದೆಯೇ ತಿಳಿದಿಲ್ಲವೆಲ್ಲ ಎಂಬ ವ್ಯಸನಕ್ಕೆ ದೂಡುತ್ತದೆ. 
ಎರಡನೇ ಸಿನೆಮಾದಲ್ಲಿ ನಟಿಸುತ್ತಿರುವ ಅನೂಪ್ ರೇವಣ್ಣ, ಸಿನಿಮಾದುದ್ದಕ್ಕೂ ಒಂದೇ ಮುಖಭಾವ ಮತ್ತು ಒಂದೇ ರೀತಿಯಲ್ಲಿ ಸಂಭಾಷಣೆಯನ್ನು ಉಲಿಯುವ ಪರಿ ಅವರಿನ್ನೂ ಪಳಗಬೇಕಾಗಿರುವುದನ್ನು ಸೂಚಿಸಿದರೆ, ಜೊತೆಗೆ ಆಗಾಗ ನಗುಮುಖವನ್ನು ಕೂಡ ನಟಿಸಿರುವುದು ಸ್ವಲ್ಪ ಸಮಾಧಾನ ನೀಡುತ್ತದೆ. ಚೊಚ್ಚಲ ಬಾರಿಗೆ ನಟಿಸಿರುವ ರಿತೀಕ್ಷ ಆಗಾಗ ಬಂದು ಹೋದರೆ, ರವಿ ಕಾಳೆ, ಕರಿಸುಬ್ಬು ಸೇರಿದಂತೆ ಉಳಿದ ತಾರಾಗಣವು ಶ್ರಮವಹಿಸಿ ನಟಿಸಿದೆ. 
ರಿಮೇಕ್ ನಿಪುಣರಾದ ನಿರ್ದೇಶಕ ಕಲಾಸಾಮ್ರಾಟ್ ಎಸ್ ನಾರಾಯಣ್ ಆಯ್ಕೆ, ಅವರೇ ಆಗಾಗ ಹೇಳಿಕೊಳ್ಳುವಂತೆ 'ಇಲ್ಲಿನ ಮಣ್ಣಿಗೆ ತಕ್ಕಂತೆ' ಅಳವಡಿಸಿಕೊಳ್ಳುವಿಕೆ, ತಾರಾಗಣದಿಂದ ಒಳ್ಳೆಯ ನಟನೆಯನ್ನು ತೆಗೆಯುವ ಶಕ್ತಿ, ಇನ್ನಷ್ಟು ಚೊಕ್ಕವಾಗಿ ಥ್ರಿಲ್ಲರ್ ರೂಪದಲ್ಲಿ ಜಾಣ್ಮೆಯಿಂದ ಮೂಡಿಸಬಹುದಾಗಿದ್ದ ಅವಕಾಶ ಎಲ್ಲವು ಎಲ್ಲೋ ಎಡವಿ ಸಾಧಾರಣ ರಿಮೇಕ್ ಒಂದನ್ನು ನಿರ್ದೇಶಿಸಿ ಮುಗಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತು ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

Hong Kong ಅಗ್ನಿ ಪ್ರಮಾದ: 55 ಮಂದಿಯ ಜೀವ ತೆಗೆಯಿತಾ ಸಿಗರೇಟ್? ವೈರಲ್ ಆಗಿರುವ ವಿಡಿಯೋದಲ್ಲೇನಿದೆ? 3 ಬಂಧನ

ರಾಜ್ಯದ ಮಹಿಳಾ ಕ್ರೀಡಾಪಟುಗಳನ್ನು ಸನ್ಮಾನಿಸಿ, ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದ ಸಿಎಂ

LPG ಆಮದು: ಭಾರತ-ಅಮೆರಿಕ ಒಪ್ಪಂದ ತೈಲ ಸಂಸ್ಥೆಗಳಿಗೆ ದುಬಾರಿ; ಗ್ರಾಹಕರ ಮೇಲೆ ಪರಿಣಾಮ? ತಜ್ಞರು ಹೇಳಿದ್ದೇನು?

SCROLL FOR NEXT