ಎರಡನೇ ಸಲ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಚಮತ್ಕಾರ-ಪೋಲಿತನದ ಪೈಪೋಟಿಯ ನಡುವೆ ಒಂದಷ್ಟು ನವಿರು ರೊಮ್ಯಾನ್ಸು, ಹಳೆ ಸೆಂಟಿಮೆಂಟ್ಸು

ಕಡಿಮೆ ಬಜೆಟ್, ಸಣ್ಣ ಎಳೆಯ ಕಥೆ, ಹೆಚ್ಚು ಮಾತು ಅದರಲ್ಲಿ ಸಾಕಷ್ಟು ಪೋಲಿ ಎಂಬ ಫಾರ್ಮುಲಾ ಹಿಡಿದು ಕನ್ನಡ ಚಿತ್ರರಂಗಕ್ಕೆ ಆಗಮಿಸಿದ ನಿರ್ದೇಶಕ ಗುರುಪ್ರಸಾದ್ ಚೊಚ್ಚಲ ಸಿನೆಮಾ 'ಮಠ' ಮೂಲಕ ಅಪಾರ

ಕಡಿಮೆ ಬಜೆಟ್, ಸಣ್ಣ ಎಳೆಯ ಕಥೆ, ಹೆಚ್ಚು ಮಾತು ಅದರಲ್ಲಿ ಸಾಕಷ್ಟು ಪೋಲಿ ಎಂಬ ಫಾರ್ಮುಲಾ ಹಿಡಿದು ಕನ್ನಡ ಚಿತ್ರರಂಗಕ್ಕೆ ಆಗಮಿಸಿದ ನಿರ್ದೇಶಕ ಗುರುಪ್ರಸಾದ್ ಚೊಚ್ಚಲ ಸಿನೆಮಾ 'ಮಠ' ಮೂಲಕ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡು, ನಂತರ 'ಎದ್ದೇಳು ಮಂಜುನಾಥ', 'ಡೈರೆಕ್ಟರ್ ಸ್ಪೆಷಲ್' ಸಿನೆಮಾಗಳನ್ನು ತೋರಿಸಿ, ಮತ್ತೆ ಕಿರುತೆರೆಯಲ್ಲಿ ಕಾಣೆಯಾದವರು, ಈಗ 'ಎರಡನೇ ಸಲ'ದ ಮೂಲಕ ಹಿಂದಿರುಗಿದ್ದಾರೆ. ಶೀರ್ಷಿಕೆ ಮತ್ತು ಟ್ರೇಲರ್ ಮೂಲಕ ವಿಚಿತ್ರ ಕುತೂಹಲ (ತುಸು ನಿರಾಸೆಯನ್ನು) ಹುಟ್ಟಿಸಿದ್ದ ಸಿನೆಮಾ ಇಂದು ಬಿಡುಗಡೆಯಾಗಿದೆ. 
ಮನೆ ಮತ್ತು ತನ್ನ ಪ್ರೀತಿಯ ಗೊಂದಲದ ಪರಿಸ್ಥಿತಿಯಲ್ಲಿ ನೊಂದಿರುವ ವ್ಯಕ್ತಿಯೊಬ್ಬ (ಧನಂಜಯ್) ಅಪರಿಚತ ಯುವತಿಗೆ ಕರೆ ಮಾಡಿ ತನ್ನ ಕಥೆ ಕೇಳುವಂತೆ ಮನವಿ ಮಾಡುತ್ತಾನೆ. ಆ ಯುವತಿ ತನ್ನ ಐದಾರು ಗೆಳೆಯರನ್ನು ಕರೆಸುತ್ತಾಳೆ. ಮದ್ಯ ಮತ್ತು ಊಟದ ಆಸೆಗೆ ಇವರೆಲ್ಲಾ ಕರೆ ಮಾಡಿದ ವ್ಯಕ್ತಿಯ ಕಥೆಯನ್ನು ಹಲವು ಪ್ರಶ್ನೆಗಳ ಮೂಲಕ ವಿವರವಾಗಿ ಕೇಳಿ ತಿಳಿಯಲು ಮುಂದಾಗುತ್ತಾರೆ. ತಂದೆ ಕಳೆದುಕೊಂಡು ಪ್ರೀತಿಯ ಅಮ್ಮನ (ಲಕ್ಷ್ಮಿ) ಜೊತೆ ಮುದ್ದು ಮಗನಾಗಿ ಬದುಕುತ್ತಿರುವ, ವೃತ್ತಿಯಿಂದ ಆರ್ಕಿಟೆಕ್ಟ್ ವ್ಯಕ್ತಿಯ ಮನೆಗೆ ವ್ಯಾಸಂಗ ಮಾಡಲು ಆಶ್ರಯ ಕೋರಿ ಯುವತಿಯಿಬ್ಬಳು(ಸಂಗೀತ ಭಟ್) ಬಂದು ಸೇರಿಕೊಳ್ಳುತ್ತಾಳೆ. ಈ ಯುವತಿಗೆ ಯಾವುದೇ ರೀತಿಯಲ್ಲಿ ಹತ್ತಿರವಾಗುವುದಿಲ್ಲ ಎಂದು ತಾಯಿಗೆ ಕೊಟ್ಟಿರುವ ವಚನವನ್ನು ಮರೆತು ಯುವತಿಯ ಜೊತೆಗೆ ಸಲುಗೆಯಿಂದ ನಡೆದುಕೊಂಡು ಪ್ರೀತಿ ಹೂಂಕರಿಸುವುದರಿಂದ ತೊಳಲುತ್ತರುವ ವ್ಯಕ್ತಿಗೆ, ತಾಯಿ ಬೇರೆ ವಧುವನ್ನು ಹುಡುಕುತ್ತಿದ್ದಾಳೆ. ಈ ವ್ಯಕ್ತಿ ಮುಂದೇನು ಮಾಡಬೇಕು?
ಸರಳ ಕಥೆ ಮತ್ತು ಅಷ್ಟೇ ತೆಳು ಸಂಘರ್ಷಯಿಂದ ಕೂಡಿರುವ ಈ ಕಥೆಯಲ್ಲಿ ಚಮತ್ಕಾರಿ ನಿರೂಪಣೆ ಇದೆ. ನಾಯಕನಟ ತನ್ನ ಅಪರಿಚಿತ ಗೆಳೆಯರಿಗೆ ಕಥೆ ಹೇಳುತ್ತಾ ಹೋಗುವ ಮೂಲಕ ಮುಂದುವರೆಯುವ ಸಿನೆಮಾ ಪ್ರೇಕ್ಷಕರಲ್ಲಿ ಮಿಶ್ರ ಭಾವನೆಗಳನ್ನು ಮೂಡಿಸುತ್ತದೆ. ಕಥೆಯಲ್ಲಿ ಈ ಅಸ್ವಾಭಾವಿಕ ಸಂಘರ್ಷ ಏಕೆ ಎಂಬ ಗೊಂದಲದ ಜೊತೆಗೆ ಮುಂದೇನಾಯಿತು ಎಂಬ ಸರಳ ಕುತೂಹಲವನ್ನು ಉಳಿಸಿಕೊಳ್ಳುವ ಸಿನೆಮಾ ಅಂತ್ಯದ ತೀರ್ಮಾನದ ಬಗ್ಗೆಯೂ ಕಾಯಲು ಪ್ರೇರೇಪಿಸುತ್ತದೆ.
ಒಟ್ಟಾರೆ ಸಿನೆಮಾದಲ್ಲಿ ಹೆಚ್ಚು ಆಪ್ತವಾಗುವುದು ನಾಯಕನಟ ಮತ್ತು ನಾಯಕನಟಿಯ ಪ್ರೇಮಕಥೆ ಹಾಗು ರೋಮ್ಯಾನ್ಸ್ ಭರಿತ ಘಟನೆಗಳು. ಒಂದೇ ಮನೆಯಲ್ಲಿ ಬಂಧಿಯಾಗಿರುವ ಈ ಇಬ್ಬರ ನಡುವೆ ಹುಟ್ಟುವ ಪ್ರೇಮ, ಪ್ರಥಮ ಚುಂಬನ, ತಾಯಿಯ ಕಣ್ಣು ತಪ್ಪಿಸಿ ನಡೆಸುವ ಓಡಾಟಗಳು ಇವೆಲ್ಲವೂ ನವಿರಾಗಿ ಮೂಡಿವೆ. ಈ ತಾಜಾತನದ ನಡುವೆ ನಿರ್ದೇಶಕರು ತಮ್ಮ ಎಂದಿನ ಶೈಲಿಯ ಪೋಲಿ ಹಾಸ್ಯ ಕೂಡ ಸೇರಿಸಿಕೊಂಡು ಒಂದಷ್ಟು ಅಭಿಮಾನಿಗಳನ್ನು ಕೇಕೆ ಹಾಕಲು ಉದ್ರೇಕಿಸಿದರೆ ಮತ್ತೆ ಕೆಲವರಿಗೆ ಮುಜುಗರವನ್ನು ತರಬಲ್ಲದು. ಇದು ನಿರ್ದೇಶಕ ಗುರುಪ್ರಸಾದ್ ತಮ್ಮ ಸಿನೆಮಾಗಳಲ್ಲಿ ಹೂಡುವ ಮಾಮೂಲಿ ಜೂಜು. ಅಮ್ಮ-ಮಗನ ಸಂಬಂಧವನ್ನು ಕೂಡ ಬಹಳ ಆತ್ಮೀಯವಾಗಿ ಕಟ್ಟಿಕೊಡುವ ನಿರ್ದೇಶಕ, ಪೋಷಕರ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ತೀವ್ರ ಭಾವನಾತ್ಮಕ ದೃಶ್ಯಗಳನ್ನೂ ಮೂಡಿಸುತ್ತಾರೆ (ಪೋಷಕರನ್ನು ಎಂದಿಗೂ ವೃದ್ಧಾಶ್ರಮಕ್ಕೆ ಕಳುಹಿಸಬೇಡಿ ಎಂಬ ಸಂದೇಶವನ್ನು ಕೂಡ ಅಂತ್ಯದಲ್ಲಿ ಕೊಡುತ್ತಾರೆ).
ನವಿರು ನಿರೂಪಣೆಯಿಂದ ಪ್ರೇಕ್ಷಕರನ್ನು ಎಲ್ಲಿಯೂ ಸಿಟ್ಟಿಗೆ ಕೆಡವದೆ ಜಾಣ್ಮೆಯಿಂದ ಮುಂದಕ್ಕೆ ಕೊಂಡೊಯ್ಯುವ ನಿರ್ದೇಶಕ ತಾಯಿಯ ಮೇಲಿನ ತೀವ್ರ ಮಮತೆ ಮತ್ತು ಕೊಟ್ಟ ಭಾಷೆಗೆ ತಪ್ಪಿ ಮಾಡಿದ ಪ್ರೀತಿ ಇಷ್ಟೊಂದು ದೊಡ್ಡ ಸಂಘರ್ಷ ಸೃಷ್ಟಿಸಬೇಕೇ, ಇದೆಲ್ಲೋ ಸ್ವಾಭಾವಿಕವಾಗಿಲ್ಲ ಎಂಬ ಗೊಂದಲವನ್ನು ಪ್ರೇಕ್ಷಕರಿಗೆ ಮೂಡುವ ಹೊತ್ತಿಗೆ ಸುಖಾಂತ್ಯವನ್ನು ಹಾಡುತ್ತಾರೆ. ಸುಖಾಂತ್ಯದ ನಂತರ, ಟೈಟಲ್ ಕಾರ್ಡ್ ಓಡುವ ವೇಳೆಯಲ್ಲಿ ಇಡೀ ಸಿನೆಮಾದ ಭಾವವನ್ನು ಬದಲಿಸುವಂತೆ ಹೊಸ ತಿರುವನ್ನು ಕಟ್ಟಿಕೊಡುತ್ತಾರೆ. ಇದು ನಾಯಕನಟನಿಗೆ ಗೊತ್ತಿಲ್ಲದೆ ಅಮ್ಮ ಮತ್ತು ತನ್ನ ಪ್ರಿಯತಮೆ ಹೂಡಿರುವ ನಾಟಕ ಎಂಬ ಅಂತ್ಯವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ಆದುದರಿಂದ ನಾಯಕನಟನ ಆತಂಕವೆಲ್ಲವು ಆಟ ಎಂಬಂತೆ ಪ್ರೇಕ್ಷಕ ಗ್ರಹಿಸಲು ಸ್ಪಷ್ಟಿಕರಣ ನೀಡುತ್ತಾರೆ. 
ಮತ್ತೊಂದು ಕೋನದಲ್ಲಿ ಇದು ಮೆಟಾ ಕಥೆಯೇ ಎಂಬ ಸಂದೇಹವನ್ನು ಕೂಡ ಸಿನೆಮಾ ಸೃಷ್ಟಿಸುತ್ತದೆ. ಸಂಭಾಷಣೆಯಲ್ಲಷ್ಟೇ ದ್ವಂದ್ವ ಅಲ್ಲ, ಕಥೆಯಲ್ಲಿಯೇ ದ್ವಂದ್ವ ಸೃಷ್ಟಿಸಬಲ್ಲೆ ಎಂದು ಬಂದು ನಿಲ್ಲುತ್ತಾರೆ ನಿರ್ದೇಶಕ. ನಿರ್ದೇಶಕರಿಗೆ ಕಥೆಯಲ್ಲಿನ ಸಂಘರ್ಷ-ಅಂತ್ಯದ ಬಗ್ಗೆ ಇರುವ ಗೊಂದಲವನ್ನು, ವಿಭಿನ್ನ ಸಾಧ್ಯತೆಗಳನ್ನು, ತನ್ನ ಕಥೆಯ ಪಾತ್ರವೇ ಅಪರಿಚತರಿಗೆ ಒಂದು ವರ್ಷನ್ ಹೇಳುವ ಮೂಲಕ ಗೊಂದಲವನ್ನು ಪ್ರೇಕ್ಷಕರಿಗೆ ದಾಟಿಸುತ್ತಿರಬಹುದೇ ಎಂದೆನಿಸುವ ಹೊತ್ತಿಗೆ ಸಿನೆಮಾ ಮುಗಿದಿರುತ್ತದೆ. 
ತಾಂತ್ರಿಕವಾಗಿಯೂ ಸಿನೆಮಾ ನಿರ್ದೇಶಕನ ಕಥೆಗೆ ಪೂರಕವಾಗಿ ನಿಲ್ಲುತ್ತದೆ. ತನ್ನ ಕಥೆಯನ್ನು ಹೇಳಿಕೊಳ್ಳುತ್ತಾ ಹಿಂದಕ್ಕೆ ಮುಂದಕ್ಕೆ ಚಲಿಸುವ ನಿರೂಪಣೆ, ಗೊಂದಲತೆಯನ್ನು ಮತ್ತು ಕುತೂಹಲತೆಯನ್ನು ಕಾಯ್ದುಕೊಳ್ಳಲು ಸಹಕರಿಸಿದೆ. ಅನೂಪ್ ಸೀಳಿನ್ ಸಂಗೀತದಲ್ಲಿ ಮೂಡಿಬಂದಿರುವ 'ಪ್ರೇಮ ಕುರುಡು' ಮತ್ತು 'ಹೂವ ಸುರಿದೇನ' ಹಾಡುಗಳು ಮನಸ್ಸಿನಲ್ಲಿ ನಿಲ್ಲುತ್ತವೆ. ಹಾಗೆಯೇ ಈ ಹಾಡುಗಳು ಸಿನೆಮಾ ಕಥೆಗೆ ಹೊಂದಿಕೊಂಡು ಹೊರಗಿನವು ಎನ್ನಿಸಿಕೊಳ್ಳುವುದಿಲ್ಲ. ಹಿನ್ನಲೆಯಲ್ಲಿ ಹಳೆಯ ಚಿತ್ರಗೀತೆಗಳು, ಸಂಗೀತವನ್ನು, ಜಾನಪದ ಹಾಡನ್ನು ಮೂಡ್ ಗೆ ತಕ್ಕಂತೆ ಜಾಣತನದಿಂದ ಬಳಸಿಕೊಳ್ಳಲಾಗಿದೆ. ಛಾಯಾಗ್ರಹಣ ಮತ್ತು ಸಂಕಲನ ಕೂಡ ಚಲನಚಿತ್ರಕ್ಕೆ ಸಹಕರಿಸಿವೆ. 
ನಟನೆಯಲ್ಲಿ ಸಂಗೀತ ಭಟ್, ಧನಂಜಯ್ ಮತ್ತು ಲಕ್ಷ್ಮಿ ಮೂವರು ಬಹಳ ಸ್ವಾಭಾವಿಕವಾಗಿ ನಟಿಸಿ ಸಿನೆಮಾದ ಇನ್ನಿತರ ನ್ಯೂನತೆಗಳನ್ನು ಮರೆಯುವಂತೆ ಮಾಡುತ್ತಾರೆ. ಕಳ್ಳ ಪ್ರೇಮಿಗಳ ನಟನೆಯಲ್ಲಿ ಸಂಗೀತ ಪ್ರರ್ಶನದಲ್ಲಿ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಅನಗತ್ಯ ಪೋಲಿ ಜೋಕುಗಳನ್ನು, ಪುರುಷ ಅಹಂಕಾರದ, ಗಂಡಸು ಸಂತ್ರಸ್ತ ಎಂಬ ಮಿಥ್ಯ ಭಾವನೆಯ ಸಂಭಾಷಣೆಗಳನ್ನು ತಗ್ಗಿಸಿ ಸಿನೆಮಾವನ್ನು ಇನ್ನಷ್ಟು ಆಪ್ತಗೊಳಿಸಬಹುದಿದ್ದರು, ಕಥೆಯೊಳಗಿನ ಕಥೆಯಾಗಿ ಅಥವಾ ಚಮತ್ಕಾರದ ಕಥೆಯಾಗಿ, ಪ್ರಾಯೋಗಿಕವಾಗಿ ಒಂದು ಮಟ್ಟದ ಭರವಸೆ ಮೂಡಿಸುತ್ತದೆ ಗುರುಪ್ರಸಾದ್ ಅವರ ನೂತನ ಸಿನೆಮಾ 'ಎರಡನೇ ಸಲ'. ಬೇಕೆಂತಲೇ ಗೊಂದಲ ಮೂಡಿಸುವ ತಂತ್ರ/ಚಮತ್ಕಾರ ಕೆಲವೊಮ್ಮೆ ಪರವಾಗಿಯೂ ಮತ್ತೆ ಕೆಲವೊಮ್ಮೆ ವಿರೋಧಕ್ಕೂ ಕೆಲಸ ಮಾಡುವ ಸಾಧ್ಯತೆ ಇರುವುದರಿಂದ ಈ ಜೂಜನ್ನು ಪ್ರೇಕ್ಷಕ ಹೇಗೆ ತೆಗೆದುಕೊಳ್ಳುತ್ತಾನೋ ಕಾದು ನೋಡಬೇಕು!  ಟ್ರೇಲರ್ ನಲ್ಲಿ ಕಾಫಿಗೆ ದ್ವಂದ್ವಾರ್ಥ ಸೃಷ್ಟಿಸಿ ಸಿನೆಮಾ ಭರ್ತಿ ಇವುಗಳೇ ತುಂಬಿರಬಹುದೇ ಎಂದು ಆತಂಕ ಸೃಷ್ಟಿಸಿ ಮೂಡಿಸಿದ್ದ ನಿರಾಸೆಯನ್ನು ಸಿನೆಮಾ ತುಸುಮಟ್ಟಿಗೆ ನಿವಾರಿಸಿ ತೊಡೆದುಹಾಕುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT