ಪೋಟೋ ಸಿನಿಮಾ ಸ್ಟಿಲ್
ಪೋಟೋ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

'ಫೋಟೋ' ಚಿತ್ರ ವಿಮರ್ಶೆ: ಲಾಕ್ ಡೌನ್ ಕರಾಳ ದಿನಗಳ ನರಕದ ಸತ್ಯದರ್ಶನ; ಬಡವನ ಬದುಕಿನ ನೋವಿನ ಅನಾವರಣ

Shilpa D

'ಒಂದು ಫೋಟೋ ಸಾವಿರ ಮಾತುಗಳನ್ನು ಹೇಳುತ್ತದೆ' ಎಂಬ ಹಳೇಯ ಮಾತಿನಂತೆ 'ಫೋಟೋ' ಸಿನಿಮಾ ಕೂಡ ಸಾವಿರ ಕತೆಗಳನ್ನು ತೋರಿಸಲು ಬಂದಿದೆ. ನಮ್ಮನ್ನು ಇನ್ನಿಲ್ಲದಂತೆ ಕಾಡಿದ ಘಟನೆ, ಸನ್ನಿವೇಶ, ಸಂದರ್ಭವನ್ನು ಫೋಟೋ ಸಿನಿಮಾ ಮತ್ತೆ ಸ್ಮೃತಿ ಪಟಲಕ್ಕೆ ತರುತ್ತದೆ.

ಬಿಸಿಲಿನ ಝಳದಲ್ಲಿ ತಂದೆ-ಮಗನ ಪ್ರಯಾಣ, ಎಲ್ಲರೂ ಕೈ ಬಿಟ್ಟರೂ ನಿನಗೆ ನಾನಿದ್ದೇನೆ ಎಂಬ ಅಪ್ಪ-ಮಗನ ಬಾಂಧವ್ಯ, ತಮ್ಮ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಎದುರಿಸುವ ಮನೋಸ್ಥೈರ್ಯ. ಬಿಕೋ ಎನ್ನುವ ರಸ್ತೆಗಳು, ವಿಶಾಲವಾದ ಹೊಲ-ಗದ್ದೆಗಳನ್ನೇ ರೂಪಕಗಳನ್ನಾಗಿ ಬಳಸಿಕೊಂಡು ನೈಜತೆಯ ನೆರಳಿನಲ್ಲಿ ಯುವ ನಿರ್ದೇಶಕ ಉತ್ಸವ್​ ಗೋನಾವರ ಸಿನಿಮಾ ಮಾಡಿದ್ದಾರೆ.

ಮಾರ್ಚ್ 2020 ರಲ್ಲಿ ಕೋವಿಡ್ ಸಾಂಕ್ರಾಮಿಕದ ವೇಳೆ ದೇಶಾದ್ಯಂತ ಲಾಕ್​ಡೌನ್​ ಜಾರಿ ಮಾಡಿದಾಗ ಜನರ ಜೀವನ ಅಸ್ತವ್ಯಸ್ತ ಆಯಿತು. ನಗರದಲ್ಲಿ ವಾಸಿಸುವ ಶ್ರೀಮಂತರಿಗೆ ಎಲ್ಲ ಸೌಕರ್ಯಗಳು ಮನೆಯ ಬಾಗಿಲಿಗೆ ಬರುವ ಅನುಕೂಲ ಇತ್ತು. ಆದರೆ ಮನೆಯೇ ಇಲ್ಲದೇ ಬೀದಿಯಲ್ಲಿ ಆಶ್ರಯ ಪಡೆದ ಬಡವರ ಬದುಕು ಊಹಿಸಲಾಗದಂತಹ ಕಷ್ಟಕ್ಕೆ ನೂಕಲ್ಪಟ್ಟಿತ್ತು. ಕೂಲಿ ಕೆಲಸ ಮಾಡಲು ಬೇರೆ ಬೇರೆ ನಗರಗಳಿಗೆ ತೆರಳಿದ್ದ ಕಾರ್ಮಿಕರು ಪುನಃ ತಮ್ಮ ಊರು ಸೇರಲು ಪಟ್ಟ ಕಷ್ಟಗಳು ಒಂದೆರಡಲ್ಲ. ನಡುರಸ್ತೆಯಲ್ಲೇ ಪ್ರಾಣ ಬಿಟ್ಟವರೂ ಇದ್ದಾರೆ. ಅಂಥ ಕರಾಳ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ ‘ಫೋಟೋ’ ಸಿನಿಮಾ.

ಇಡೀ ಪ್ರಪಂಚವೇ ತಲೆಕೆಳಗಾಗುತ್ತಿದ್ದರೂ ಮನುಷ್ಯ ತನ್ನ ದೃಢ ಮನಸ್ಸಿನ ಗಟ್ಟಿ ನಿರ್ಧಾರದಿಂದ ಎನೆಲ್ಲಾ ಸಹಿಸಿಕೊಳ್ಳುತ್ತಾನೆ ಎಂಬುದನ್ನು ಫೋಟೋ ಸಿನಿಮಾ ತೋರಿಸುತ್ತದೆ. ಸಂಕಷ್ಟದ ಸಮಯದಲ್ಲಿ ಎದುರಾಗುವ ಮತ್ತಷ್ಟು ಸಮಸ್ಯೆಗಳನ್ನು ನಿಭಾಯಿಸುವ, ಕಷ್ಟಗಳನ್ನು ಸಹಿಸಿಕೊಳ್ಳುವ ಬಡ ಕೂಲಿ ಕಾರ್ಮಿಕನ ಕತೆಯೇ ಫೋಟೋ.

ಬೆಂಗಳೂರಿನಿಂದ ಸಿಂಧನೂರಿನ ತನ್ನ ಮನೆಗೆ ಲಾಕ್‌ಡೌನ್‌ನ ನಡುವೆ ಪ್ರಯಾಣದಲ್ಲಿ ದುರಂತವಾಗಿ ಸಾವನ್ನಪ್ಪಿದ ದಿನಗೂಲಿ ಕೆಲಸಗಾರ್ತಿ ಗಂಗಮ್ಮ ಎಂಬ 29 ವರ್ಷದ ಮಹಿಳೆಯ ನಿಜ ಜೀವನದ ಕತೆಯಿಂದ ಸ್ಫೂರ್ತಿ ಪಡೆದು ಫೋಟೋ ಸಿನಿಮಾ ತಯಾರಾಗಿದೆ. ನಿರ್ದೇಶಕ ಉತ್ಸವ್​ ಗೋನಾವರ ಅವರು ಹೇಳಬೇಕಾದ ಎಲ್ಲವನ್ನೂ ಮೊನಚಾದ ದೃಶ್ಯಗಳ ಮೂಲಕವೇ ಹೇಳಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಂಭವಿಸಿದ ನರಕಯಾತನೆಯನ್ನು ನಿರ್ದೇಶಕರು ಕಣ್ಣಿಗೆ ಕಟ್ಟುವಂತೆ ಬಿಡಿಸಿಟ್ಟಿದ್ದಾರೆ.

ರಂಗಭೂಮಿ ಕಲಾವಿದ ಮಹಾದೇವ ಹಡಪದ ಅವರು ಕೂಲಿ ಕಾರ್ಮಿಕನ ಪಾತ್ರದಲ್ಲಿ ನಟಿಸಿದ್ದಾರೆ. ಮಗನ ಪಾತ್ರದಲ್ಲಿ ಬಾಲ ನಟ ವೀರೇಶ್​ ಗೋನಾವರ ನಟಿಸಿದ್ದಾನೆ. ಕೂಲಿ ಕೆಲಸ ಮಾಡುವ ತಂದೆ ಗ್ಯಾನ (ಮಹಾದೇವ ಹಡಪದ್) ತನ್ನ ಸಾಲ ತೀರಿಸಲು ಬೆಂಗಳೂರಿಗೆ ಕೆಲಸ ಹುಡುಕಿ ಬಂದಿರುತ್ತಾನೆ. ಹಣ ಸಂಪಾದನೆಗಾಗಿ ಸಾಕಷ್ಟು ಶ್ರಮಿಸುತ್ತಿರುತ್ತಾನೆ. ಈತನ ಮಗ ದುರ್ಗ್ಯ(ವಿರೇಶ್) ರಾಯಚೂರಿನಲ್ಲಿ ತನ್ನ ತಾಯಿಯ ಜೊತೆ ವಾಸವಿರುತ್ತಾನೆ. ಆತನಿಗೆ ವಿಧಾನ ಸೌಧ ಮತ್ತು ‘ಡಿ ಬಾಸ್​’ ದರ್ಶನ್​ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬ ಕನಸಿರುತ್ತದೆ. ಇನ್ನೇನು ಆತ ವಿಧಾನ ಸೌಧ ನೋಡಲು ಹೋಗಬೇಕು ಎಂಬಷ್ಟರಲ್ಲಿ ಲಾಕ್​ಡೌನ್​ ಜಾರಿ ಆಗುತ್ತದೆ.

ತಂದೆ-ಮಗ ವಾಪಸ್​ ಊರು ಸೇರಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಯಾವುದೇ ವಾಹನದ ವ್ಯವಸ್ಥೆ ಇಲ್ಲ. ನಡೆದುಕೊಂಡು ಹೋಗಲು ನಿರ್ಧರಿಸುವ ಅವರಿಗೆ ನರಕವೇ ಎದುರಾದಂತೆ ಕಷ್ಟಗಳು ಎದುರಾಗುತ್ತವೆ. ಹಣ ಇಲ್ಲದೇ, ಊಟವಿಲ್ಲದೇ ನೂರಾರು ಕಿಲೋಮೀಟರ್​ ಕಾಲು ನಡಿಗೆಯಲ್ಲಿ ಸಾಗುವ ತಂದೆ-ಮಗನ ಕಥೆ ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಜನರು ಅನುಭವಿಸಿದ ನೋವುಗಳನ್ನು ತೆರೆದಿಡುತ್ತದೆ. ಲಾಕ್‌ಡೌನ್‌ ಹೆಸರಿನಲ್ಲಿ ಇಡೀ ದೇಶ ಬಾಗಿಲು ಹಾಕಿಕೊಂಡಿತ್ತು. ಅದೇ ದೇಶದ ಹೆದ್ದಾರಿಗಳಲ್ಲಿ ಅನ್ನ, ನೀರು ಇಲ್ಲದೆ ನೂರಾರು ನೂರಾರು ಕಿಲೋಮೀಟರ್‌ ದೂರ ಸಾವಿರಾರು ಜನ ಬರಿಗಾಲಿನಲ್ಲಿ ನಡೆಯುತ್ತಿದ್ದರು. ಇಂತಹ ಸಂಕಷ್ಟ ಸಮಯದಲ್ಲಿ ತಮ್ಮ ಊರಿಗೆ ಹೊರಟ ತಂದೆ ಮಗ ಗೂಡು ಸೇರುವರೇ ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.

ದುರ್ಗ್ಯಾನ ಮುಗ್ಧತೆ, ಗ್ಯಾನಪ್ಪನ ಅನಾಥ ಭಾವನೆ, ತಾಯಿಯ ಸಿಟ್ಟು ಸಿನಿಮಾದಲ್ಲಿ ಸಹಜತೆ ತೋರಿಸುತ್ತದೆ. ಬಾಲ ಕಲಾವಿದ ವೀರೇಶ, ದುರ್ಗ್ಯಾ ಪಾತ್ರದಲ್ಲಿ ನಟಿಸಿದ್ದು ಮುಗ್ಧತೆಯನ್ನು ಕಾಪಾಡಿಕೊಂಡಿದ್ದಾನೆ, ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದಾಗ ಆತ ಅನುಭವಿಸುವ ನೋವು ದುಃಖ ಕಣ್ಣಂಚಲ್ಲಿ ನೀರು ತರಿಸುತ್ತದೆ. ಈ ಚಿತ್ರಣವು ಮಗುವಿನ ಆಕಾಂಕ್ಷೆಗಳಲ್ಲಿ ಅಂತರ್ಗತವಾಗಿರುವ ಶುದ್ಧತೆ ಮತ್ತು ದುರ್ಬಲತೆಯನ್ನು ಪ್ರತಿಬಿಂಬಿಸುತ್ತದೆ. ಸಂಧ್ಯಾ ಅರಕೆರೆ ತಾಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಿರ್ದೇಶಕರು ಇಡೀ ಹಳ್ಳಿಯನ್ನು ಕಥೆಯಲ್ಲಿ ಅಚ್ಚುಕಟ್ಟಾಗಿ ಸಂಯೋಜಿಸಿದ್ದಾರೆ, ಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಗ್ರಾಮಸ್ಥರು ನೀಡುವ ಬೆಂಬಲ, ಸಮುದಾಯ ಮತ್ತು ಒಗ್ಗಟ್ಟಿನ ಮಹತ್ವವನ್ನು ಎತ್ತಿ ತೋರಿಸಿದ್ದಾರೆ. ಜಹಾಂಗೀರ್‌ ಹುಸೇನಪ್ಪನ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ.

ದಿನೇಶ್ ದಿವಾಕರನ್ ಅವರ ಛಾಯಾಗ್ರಹಣ ನೈಜತೆಗೆ ಹಿಡಿದ ಕನ್ನಡಿಯಾಗಿದೆ. ರೈ ಹಿರೇಮಠ್ ಅವರ ಸಂಗೀತ ಸಂಯೋಜನೆ ಕತೆಗೆ ಪೂರಕವಾಗಿದೆ. ಒಟ್ಟಾರೆಯಾಗಿ, ಫೋಟೋ ಜೀವನದ ಸವಾಲುಗಳ ನಡುವೆ ಮಾನವ ಚೇತನದ ಅಚಲ ಶಕ್ತಿಯಾಗಿ ನಿಂತಿದೆ.

ಚಲನಚಿತ್ರವು ಪ್ರಕ್ಷುಬ್ಧ ಯುಗದ ಸಮಾಜದ ಸಮಸ್ಯೆ ಬಗ್ಗೆ ತಿಳಿಸುತ್ತದೆ. ಆದರೆ ನಮ್ಮಲ್ಲಿ ಪ್ರತಿಯೊಬ್ಬರೊಳಗೆ ಬೇರೂರಿರುವ ಸಹಜ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಇದು ರಾಜಕೀಯಗೊಳಿಸಲಾಗದ ಸಿನಿಮಾ, ಏಕೆಂದರೆ ಇದು ಇಡೀ ರಾಷ್ಟ್ರ ಮತ್ತು ಜಗತ್ತಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಜನತೆ ಪಡೆದ ಅನುಭವ ಮತ್ತು ಸವಾಲುಗಳ ನೈಜ ಚಿತ್ರಣವಾಗಿದೆ.

ಸಿನಿಮಾ: ಫೋಟೋ

ನಿರ್ದೇಶನ: ಉತ್ಸವ್​ ಗೋನಾವರ

ಕಲಾವಿದರು: ಮಹಾದೇವ​ ಹಡಪದ, ವೀರೇಶ್​ ಗೋನಾವರ, ಸಂಧ್ಯಾ ಅರಕೆರೆ, ಎಂ.ಎಸ್​. ಜಹಾಂಗೀರ್

SCROLL FOR NEXT