ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದಲ್ಲಿ ಸಸ್ಪೆಂಡ್ ಆಗಿರುವ ಪೊಲೀಸ್ ಅಧಿಕಾರಿ ಮಾರ್ಕ್ ದುಷ್ಟರ ವಿರುದ್ಧ ಹೋರಾಡುವ ಕಥೆ. ಸುದೀಪ್ ಅವರ ಆ್ಯಕ್ಷನ್ ಹೀರೋ ಅವತಾರ, ಹೊಸ ಹೇರ್‌ಸ್ಟೈಲ್, ಮತ್ತು ಮ್ಯಾನರಿಸಂ ಅಭಿಮಾನಿಗಳಿಗೆ ಫುಲ್ ಕಿಕ್ ನೀಡುತ್ತದೆ. ಚಿತ್ರದಲ್ಲಿ ಸಸ್ಪೆನ್ಸ್, ಆ್ಯಕ್ಷನ್, ಮತ್ತು ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರನ್ನು ಕಟ್ಟಿ ಹಾಕುತ್ತವೆ. ಅಜನೀಶ್ ಲೋಕನಾಥ್ ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಚಿತ್ರಕ್ಕೆ ಮತ್ತಷ್ಟು ಜೀವ ತುಂಬುತ್ತದೆ.
ವಿಜಯ್ ಕಾರ್ತಿಕೇಯ ನಿರ್ದೇಶಿಸಿ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ರಿಲೀಸ್ ಆಗಿದೆ. ಈ ಹಿಂದೆ ಮ್ಯಾಕ್ಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಸುದೀಪ್ ಮಾರ್ಕ್ ನಲ್ಲಿ ಸೂಪರ್ ಕಾಪ್ ಆಗಿದ್ದಾರೆ. ಮಾರ್ಕ್ ಸಿನಿಮಾದಲ್ಲಿ ಸುದೀಪ್ ಅವರನ್ನು ಆ್ಯಕ್ಷನ್ ಹೀರೋ ಆಗಿ ವಿಜೃಂಭಿಸಲಾಗಿದೆ. ಕಿಚ್ಚನ ಮಾಸ್ ಅಭಿಮಾನಿಗಳನ್ನು ಗಮನದಲ್ಲಿರಿಸಿಕೊಂಡು ಸಿನಿಮಾ ಮಾಡಲಾಗಿದೆ. ರಗಡ್ ಪೊಲೀಸ್ ಆಫೀಸರ್ ಆಗಿ, ದುಷ್ಟ ಪಡೆಗಳ ವಿರುದ್ಧ ತೊಡೆ ತಟ್ಟಿ ನಿಲ್ಲುವ ಪಾತ್ರದಲ್ಲಿ ಸುದೀಪ್ ಮಿಂಚಿದ್ದಾರೆ.
ಸಸ್ಪೆಂಡ್ ಆಗಿರುವ 'ಸೂಪರಿಂಟೆಂಡೆಂಟ್ ಆಫ್ ಪೊಲೀಸ್' ಅಜಯ್ ಮಾರ್ಕಂಡೇಯ ಎ.ಕೆ.ಎ. ‘ಮಾರ್ಕ್’ (ಸುದೀಪ್) ತಾಯಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಯೊಬ್ಬ ಅವರ ಬಳಿ ಇದ್ದ ಅವರ ಕೇರ್ ಟೇಕರ್ ಆಗಿದ್ದ ಮಹಿಳೆಯ ಮಗುವನ್ನು ಅಪಹರಣ ಮಾಡುತ್ತಾನೆ. ಆ ದಿನ ಇದೇ ರೀತಿ ಮಂಗಳೂರಿನಲ್ಲಿ ಸುಮಾರು ಹದಿನೈದು ಮಕ್ಕಳ ಅಪಹರಣ ನಡೆಯುತ್ತದೆ. ಈ ಪ್ರಕರಣವನ್ನು ಭೇದಿಸುವುoಕ್ಕೆ ‘ಮಾರ್ಕ್’ ಇಳಿಯುತ್ತಾನೆ. ಸಸ್ಪೆಂಡ್ ಆಗಿರುವ ಒಬ್ಬ ಪೊಲೀಸ್ ಆಫೀಸರ್ ದುಷ್ಟ ಕೂಟದ ವಿರುದ್ಧ ಯುದ್ಧ ಸಾರುವ ಮತ್ತು ಆ ಹಾದಿಯಲ್ಲಿ ನಡೆಯುವ ಕಥೆಯೇ ಮಾರ್ಕ್ ಸಿನಿಮಾ.
ನಿರ್ದೇಶಕ ವಿಜಯ ಕಾರ್ತಿಕೇಯ ಈ ಹಿಂದೆ ಮ್ಯಾಕ್ಸ್ ಸಿನಿಮಾ ಮೂಲಕ ಸುದೀಪ್ ಗರಡಿ ಪ್ರವೇಶಿಸಿದವರು. ಸುದೀಪ್ ಅವರ ಮ್ಯಾನರಿಸಂ, ಅವರ ಫ್ಯಾನ್ ಬೇಸ್ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದ ವಿಜಯ್ ಸುದೀಪ್ ಅವರಿಗೆ ಹೊಂದಿಕೆಯಾಗುವಂತಹ ಕಥೆ ಹೆಣೆದಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ಮ್ಯಾಕ್ಸ್ ಸಿನಿಮಾ ಪ್ರಭಾವ ಮಾರ್ಕ್ ನಲ್ಲಿ ಸ್ವಲ್ಪ ಕಂಡು ಬರುತ್ತದೆ. ಮ್ಯಾಕ್ಸ್ ನಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿಯೊಬ್ಬ ಮತ್ತೆ ಸೇವೆಗೆ ಸೇರಿದ ದಿನ ನಡೆಯುವ ಘಟನೆ ಇದೆ. ಆದರೆ ‘ಮಾರ್ಕ್’ನಲ್ಲಿ ಸೇವೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬ ಅಮಾನತುಗೊಂಡ ನಂತರ ನಡೆಯುವ ಕಥೆಯಿದೆ.
ಮತ್ತಲ್ಲಿದ್ದರೂ, ಸಸ್ಪೆನ್ಸ್ ನಲ್ಲಿದ್ರೂ ಸದಾ ಡ್ಯೂಟಿಯಲ್ಲಿರೋದು ಮಾರ್ಕ್, ಡ್ರಗ್ಸ್ ಸೀಝ್ ಮಾಡಿ ಪೊಲೀಸರೇ ಸಂಕಷ್ಟಕ್ಕೆ ಸಿಲುಕಿದಾಗ ಆಪತ್ಭಾಂಧವ ಆಗಿ ಬರೋದು ಮಾರ್ಕ್. ಒಂದ್ಕಡೆ ರಾಜಕಾರಣಿಗಳು ಹಾಗೂ ರೌಡಿಗಳ ಅಟ್ಟಹಾಸ. ಮತ್ತೊಂದೆಡೆ ತಾಯಿಯನ್ನೇ ಕೊಂದು ಸಿಎಂ ಆಗಲು ಹೊರಟಿರುವ ಆದಿ ಕೇಶವನ ಪಿತೂರಿ ಮಾರ್ಕ್ ಗೆ ತಿಳಿಯುತ್ತದೆ. ಡ್ರಗ್ ಮಾಫಿಯಾಕ್ಕೊಂದು ಗತಿ ಕಾಣಿಸಬೇಕು. ಇದನ್ನು ಪೂರೈಸಲು ಇರುವುದು ಆತನ ಮುಂದಿರುವುದು ಕೇವಲ ಎರಡು ರಾತ್ರಿ, ಒಂದು ಹಗಲಿನ ಅವಧಿ. ಕಿಡ್ನ್ಯಾಪ್ ಆದ 18 ಮಕ್ಕಳನ್ನ 18 ಗಂಟೆಗಳಲ್ಲಿ ಬಿಡಿಸುವ ಸಾಹಸದಲ್ಲಿ ಮಾರ್ಕ್ ಗೆಲ್ಲುತ್ತಾನಾ ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು.
ಚಿತ್ರದ ಮೊದಲಾರ್ಧದ ಕಥೆ ವೇಗವಾಗಿ ಸಾಗುತ್ತದೆ. ಮುಂದೆ ಏನಾಗಲಿದೆ ಎನ್ನುವ ತಳಮಳ, ಕೌತುಕ ಇಲ್ಲಿ ಸೃಷ್ಟಿಯಾಗುತ್ತದೆ. ಚಿತ್ರದಲ್ಲಿ ಅಲ್ಲಲ್ಲಿ ಭಾವನಾತ್ಮಕ ಸನ್ನಿವೇಶಗಳನ್ನು ಸೇರಿಸಲಾಗಿದೆ. ಮೊದಲೇ ಹೇಳಿದಂತೆ ಇದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಆದ್ದರಿಂದ, ಹಾಡು, ಫೈಟ್, ಐಟಂ ಸಾಂಗ್ ಗಳಿವೆ. ಸುದೀಪ್ ಗೆ ರೊಮ್ಯಾನ್ಸ್ ಮಾಡುವ ಅವಕಾಶವಿಲ್ಲ. ನಟನೆಯಲ್ಲಿ ಸುದೀಪ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಕಥೆ ಕೆಲವು ಕಡೆ ಕೊಂಚ ಬೋರಿಂಗ್ ಎನಿಸಬಹುದು. ಇನ್ನಷ್ಟು ಥ್ರಿಲ್ಲಿಂಗ್ ಅಂಶಗಳನ್ನ ಸೇರಿಸಿದ್ದರೆ, ಪ್ರೇಕ್ಷಕರಿಗೆ ಮತ್ತಷ್ಟು ಇಷ್ಚವಾಗುತ್ತಿತ್ತು. ಕಥೆಯನ್ನು ಮತ್ತಷ್ಟು ಗಟ್ಟಿಯಾಗಿ ಹೊರತರಲು ನಿರ್ದೇಶಕರಿಗೆ ಅವಕಾಶವಿತ್ತು. ನಿರ್ದೇಶಕರು ಸ್ವಲ್ಪ ಎಡವಿದ್ದಾರೆ ಎನಿಸುತ್ತದೆ.
ಮಾರ್ಕ್ ನಲ್ಲಿ ಸುದೀಪ್ ಸಸ್ಪೆಂಡೆಡ್ ಎಸ್‌ಪಿ. ಹೀಗಾಗಿ ಅವರು ಪೊಲೀಸ್ ಯೂನಿಫಾರ್ಮ್‌ನಲ್ಲಿ ಕಾಣಿಸಿಕೊಂಡಿಲ್ಲ. ಸುದೀಪ್ ಹೆಚ್ಚು ಕಾಸ್ಟ್ಯೂಮ್ಸ್ ಬಳಸಿಲ್ಲ. ಸುದೀಪ್ ಅವರ ಹೊಸ ಹೇರ್‌ಸ್ಟೈಲ್, ಮ್ಯಾನರಿಸಂ ಮಾತ್ರ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡುತ್ತದೆ. ಇಡೀ ಚಿತ್ರದಲ್ಲಿ ಸುದೀಪ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಮಸ್ತ್ ಮಲೈಕಾ ಹಾಡಿನಲ್ಲಿ ಸುದೀಪ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಸುದೀಪ್ ಅವರ ಸ್ಟಂಟ್ಸ್ ಸಹ ಕ್ಲಾಸಿ ಆಗಿದೆ. ಇನ್ನೂ ಸಿನಿಮಾದ ಎರಡು ಹಾಡು ಮನಸ್ಸನಲ್ಲಿ ಉಳಿಯುವಂತಿವೆ, ಸೈಕೋ ಸೈಥಾನ್ ಸಾಂಗ್ ಗೆ ಸುದೀಪ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಮಸ್ತ್ ಮಲೈಕಾ ಹಾಡಿಗೆ ಸುದೀಪ್ ಪುತ್ರಿ ಸಾನ್ವಿ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅಜನೀಶ್ ಲೋಕನಾಥ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅದ್ಭುತವಾಗಿದೆ. ಶೇಖರ್‌ಚಂದ್ರ ಛಾಯಾಗ್ರಹಣ ಚೆನ್ನಾಗಿದೆ.
ನಟ ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್, ರೋಶಿನಿ ಪ್ರಕಾಶ್, ದೀಪ್ಶಿಕಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನೂ ಕೆಲವು ಪಾತ್ರಗಳು ತಲೆಯಲ್ಲಿ ಉಳಿಯುವುದಿಲ್ಲ ‘ಮಸ್ತ್ ಮಲೈಕಾ’ ಹಾಡಲ್ಲಿ ಮಾತ್ರ ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿ ಹೋಗುತ್ತಾರೆ. ಒಟ್ಟಾರೆ ಮಾರ್ಕ್ ಸುದೀಪ್ ಅವರ ಒನ್ ಮ್ಯಾನ್ ಶೋ ಆಗಿದೆ.
ಸಿನಿಮಾ: ಮಾರ್ಕ್
ನಿರ್ದೇಶಕ: ವಿಜಯ್ ಕಾರ್ತಿಕೇಯ
ಕಲಾವಿದರು: ಕಿಚ್ಚ ಸುದೀಪ್, ನವೀನ್ ಚಂದ್ರ, ಗುರು ಸೋಮಸುಂದರಂ, ವಿಕ್ರಾಂತ್, ಯೋಗಿ ಬಾಬು, ರೋಶಿಣಿ ಪ್ರಕಾಶ್ ಮುಂತಾದವರು.