ಎಕ್ಕ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

Ekka Movie Review: ಅಂಡರ್​​ ವರ್ಲ್ಡ್​ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆಯ 'ಎಕ್ಕ'; ದೊಡ್ಮನೆ ಅಭಿಮಾನಿಗಳಿಗೆ ಮನರಂಜನೆ 'ಪಕ್ಕಾ'; ಯುವ ರಾಜ್ ಪಾತ್ರ ಮಾಸ್ ಪ್ರಿಯರಿಗೆ 'ಸುಕ್ಕಾ'!

Shilpa D

ಯುವ ರಾಜ್‌ಕುಮಾರ್‌ ಅಭಿನಯದ ಎಕ್ಕ ಚಿತ್ರವು ಭೂಗತ ಲೋಕದ ಕಥೆಯೊಂದಿಗೆ ತಾಯಿ-ಮಗನ ಸಂಬಂಧವನ್ನು ತೋರಿಸುತ್ತದೆ. ಹಳ್ಳಿ ಹುಡುಗನಿಂದ ಭೂಗತ ರೌಡಿಗೆ ಬದಲಾದ ಕಥೆ, ಪ್ರೇಕ್ಷಕರನ್ನು ಸೆಳೆಯುತ್ತದೆ. ಚಿತ್ರದಲ್ಲಿ ಆ್ಯಕ್ಷನ್, ಸಸ್ಪೆನ್ಸ್, ಮತ್ತು ಕಾಮಿಡಿ ರಿಲೀಫ್‌ಗಳ ಸಮತೋಲನವನ್ನು ಸಾಧಿಸಲು ಪ್ರಯತ್ನಿಸಲಾಗಿದೆ.

ರೋಹಿತ್ ಪದಕಿ ನಿರ್ದೇಶನದ ಯುವ ರಾಜ್ ಕುಮಾರ್ ನಟನೆಯ ಎಕ್ಕ ಸಿನಿಮಾ ರಿಲೀಸ್ ಆಗಿದೆ. ಮೊದಲ ನೋಟದಲ್ಲಿ, ಎಕ್ಕಾ ಮತ್ತೊಂದು ಭೂಗತ ಲೋಕದ ಕಥೆಯಂತೆ ಕಾಣಿಸಬಹುದು. ಆದರೆ ಕಲ್ಲು ಮನಸ್ಸಿನ ನಾಯಕನ ಹಿಂದೆ ಮುಗ್ದ ಮಗುವಿನ ತೊಳಲಾಟವನ್ನು ಚಿತ್ರ ಬಿಚ್ಚಿಡುತ್ತದೆ. ಕಳೆದುಹೋದವನನ್ನು ಹುಡುಕಿಕೊಂಡು ನಗರಕ್ಕೆ ಹೋಗುವ ಹಳ್ಳಿ ಹುಡುಗನೊಬ್ಬ, ಸಮಯದ ಗಾಳಕ್ಕೆ ಸಿಲುಕಿ ದಾರಿ ತಪ್ಪಿ ಕಳೆದುಹೋಗಿ ತನ್ನನ್ನು ತಾನೇ ಹುಡುಕಿಕೊಳ್ಳುವ ಕಥೆಯಾಗಿದೆ.

ಈ ಸಿನಿಮಾದ ಒನ್​ ಲೈನ್ ಕಥೆ ಗಮನಿಸಿದರೆ ‘ಜೋಗಿ’ ಸಿನಿಮಾ ನೆನಪಾಗುತ್ತವೆ. ಹಳ್ಳಿಯಲ್ಲಿ ಇರುವ ಹೀರೋ ಬಡತನದ ಕುಟುಂಬದವನು. ದುಡಿಯಬೇಕು ಎಂದು ಬೆಂಗಳೂರಿಗೆ ಬಂದು ಅನಿವಾರ್ಯ ಕಾರಣದಿಂದ ಭೂಗತ ಲೋಕಕ್ಕೆ ಎಂಟ್ರಿ ಪಡೆಯುತ್ತಾನೆ. ಹಳ್ಳಿಯಲ್ಲಿರುವ ತಾಯಿಗೆ ಮಗ ಈ ರೀತಿ ರೌಡಿ ಆಗಿದ್ದಾನೆ ಎಂಬುದರ ಅರಿವು ಇರುವುದಿಲ್ಲ. ಅಷ್ಟಕ್ಕೂ ಅವರು ಭೂಗತ ಜಗತ್ತಿಗೆ ಕಾಲಿಟ್ಟಿದ್ದು ಹೇಗೆ? ಅಂತಿಮವಾಗಿ ಅವನು ಅದರಿಂದ ಹೇಗೆ ಹೊರಬರುತ್ತಾನೆ ಎಂಬುದೇ ‘ಎಕ್ಕ’ ಚಿತ್ರದ ಕಹಾನಿ.

ಮುತ್ತು (ಯುವ ರಾಜ್‌ಕುಮಾರ್‌) ಪಾರ್ವತಿಪುರದ ರತ್ನಮ್ಮಳ(ಶೃತಿ) ಪುತ್ರ. ಈತ ಕ್ಯಾಬ್‌ ಡ್ರೈವರ್‌. ವೃತ್ತಿಯಿಂದ ಬಿಡುವಾದಾಗ ಇಸ್ಪಿಟ್‌ ಆಟದ ಹವ್ಯಾಸ. ತಾಯಿ, ಗೆಳೆಯರು ಹಾಗೂ ಊರು ಬಿಟ್ಟು ಬೆಂಗಳೂರಿಗೆ ಹೋಗಲೊಲ್ಲದ ಮನಸ್ಸು ಈತನದು. ಇಂತಹ ಸಂದರ್ಭದಲ್ಲಿ ಸ್ನೇಹಿತನೋರ್ವನ ಕಾರಣಕ್ಕೆ ಊರು ಬಿಡುವ ಸಂದರ್ಭ ಬರುತ್ತದೆ.

ಬೆಂಗಳೂರಿಗೆ ಬಂದು ಕ್ಯಾಬ್‌ ಡ್ರೈವರ್‌ ವೃತ್ತಿಯನ್ನು ಮುಂದುವರಿಸುವ ಮುತ್ತುವಿಗೆ ನಂದಿನಿ (ಸಂಜನಾ ಆನಂದ್‌) ಜೊತೆ ಪ್ರೇಮಾಂಕುರವಾಗುತ್ತದೆ. ಅದಾದ ನಂತರ ನಡೆಯುವುದು ಒಂದು ಘನಘೋರ ದುರಂತ. ಆ ಹುಡುಗ ಹಾದಿ ತಪ್ಪಿ ನಿಲ್ಲುವಲ್ಲಿಗೆ ಒಂದು ಸಣ್ಣ ವಿರಾಮ. ತಪ್ಪನ್ನು ಸರಿ ಮಾಡಿಕೊಳ್ಳುವ ಅಂತರ್ಯುದ್ಧದಲ್ಲಿ ನಾಯಕ ಸದಾ ತೊಡಗಿರುತ್ತಾನೆ. ಅದರಲ್ಲಿ ಯಶಸ್ವಿಯಾಗುತ್ತಾನೋ ಇಲ್ಲವೋ ಎಂಬುದೇ ಈ ಕತೆ. ಮೊದಲು ಸರಳವಾಗಿರುವ ಕತೆ ಮಧ್ಯಂತರದ ಹೊತ್ತಿಗೆ ತುಂಬಾ ಗಂಭೀರತೆ ಪಡೆಯುತ್ತದೆ ಅನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್.

ಯುವ ರಾಜ್​ಕುಮಾರ್ ಅವರು ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶೇಡ್​ನಲ್ಲಿ ಅವರು ಮುಗ್ಧ ಹಳ್ಳಿ ಹುಡುಗ. ಯಾರಿಗೆ ತೊಂದರೆ ಆದರೂ ಸಹಾಯಕ್ಕೆ ಮುಂದಾಗುವ ಒಳ್ಳೆಯ ಮನಸ್ಸಿನವನು. ಆ ಗುಣದಿಂದಾಗಿ ಆತ ಸಂಕಷ್ಟಕ್ಕೆ ಕೂಡ ಸಿಲುಕಿಕೊಳ್ಳುತ್ತಾನೆ. ಆದರೆ ಇನ್ನೊಂದು ಶೇಡ್​ನಲ್ಲಿ ಭೂಗತ ಲೋಕದ ರೌಡಿ. ದೊಡ್ಡ ದೊಡ್ಡ ಡಾನ್​ಗಳಿಗೆ ಬಲಗೈ ಬಂಟನಂತೆ ಇರುವ ವ್ಯಕ್ತಿ.

‘ಎಕ್ಕ’ ಸಿನಿಮಾದ ‘ಬ್ಯಾಂಗಲ್ ಬಂಗಾರಿ’ ಹಾಡು ವೈರಲ್ ಆಗಿ ತುಂಬಾ ಸದ್ದು ಮಾಡಿದೆ. ಹಾಡಿನಿಂದಾಗಿಯೇ ಹೆಚ್ಚು ನಿರೀಕ್ಷೆ ಬೆಳೆಯಿತು ಎಂದರೂ ತಪ್ಪಿಲ್ಲ. ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಸಿನಿಮಾದ ಕಥೆ ಸಿದ್ಧವಾದಂತಿದೆ. ಮಾಸ್ ಪ್ರೇಕ್ಷಕರು ಇಷ್ಟಪಡುವಂತಹ ಆ್ಯಕ್ಷನ್ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಕುತೂಹಲ ಕಾಯ್ದುಕೊಳ್ಳುವಂತಹ ಸಸ್ಪೆನ್ಸ್ ಇದೆ. ಕ್ಲಾಸ್ ಅಭಿಮಾನಿಗಳಿಗಾಗಿ ತಾಯಿ-ಮಗನ ಸೆಂಟಿಮೆಂಟ್ ಕೂಡ ಇದೆ. ಕಾಮಿಡಿ ರಿಲೀಫ್ ನೀಡಲು ಸಾಧು ಕೋಕಿಲ ಪಾತ್ರವಿದೆ. ಹೀಗೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿರುವುದು ಸಿನಿಮಾಗೆ ಕೊಂಚ ಹೊರೆಯಾದಂತಿದೆ.

ಯಾವುದೋ ಒಂದು ಕಾರಣಕ್ಕೆ ಹುಟ್ಟಿದ ಊರು ಬಿಟ್ಟು ನಗರ ಸೇರುವ ನಾಯಕ ಮುಂದೆ ಯಾವುದೋ ಕಾರಣಕ್ಕೆ ಭೂಗತ ಜಗತ್ತಿಗೆ ಹೆಜ್ಜೆ ಇಡುವ, ತಾಯಿ ಪ್ರೀತಿ ಅರಸುವ ಹಲವು ಕಥೆಗಳು ತೆರೆ ಮೇಲೆ ಬಂದಿವೆ. ಇದೇ ಮಾದರಿಯಲ್ಲಿ ಭಿನ್ನವಾದ ಹೊಸ ಕಥೆಯೊಂದನ್ನು ಇಟ್ಟುಕೊಂಡು ರೋಹಿತ್‌ ಪದಕಿ ‘ಎಕ್ಕ’ ಹೆಣೆದಿದ್ದಾರೆ. ಎಕ್ಕ ಚಿತ್ರ ದೊಡ್ಮನೆ ಫ್ಯಾನ್ಸ್‌ಗೆ ಇಷ್ಟ ಆಗಿದೆ. ಯುವರಾಜ್‌ಕುಮಾರ್ ರೂಪದಲ್ಲಿ ಪುನೀತ್ ಅವರನ್ನೆ ಕಂಡಿದ್ದಾರೆ. ಜೂನಿಯರ್ ಜಾಕಿ ಅಂತಲೂ ಬಣ್ಣಿಸಿದ್ದಾರೆ.

ನಟನೆಯಲ್ಲಿ ಯುವ ರಾಜ್‌ಕುಮಾರ್‌ ಮತ್ತಷ್ಟು ಪಳಗಿದ್ದಾರೆ. ಇಡೀ ಸಿನಿಮಾದಲ್ಲಿ ಯುವ ರಾಜ್​ಕುಮಾರ್ ಅವರ ಪಾತ್ರ ಹೈಲೈಟ್ ಆಗಿದೆ. ತಾಯಿ ಪಾತ್ರ ಮಾಡಿರುವ ಶ್ರುತಿ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಗಮನ ಸೆಳೆಯುತ್ತಾರೆ. ನಾಯಕಿಯರಾದ ಸಂಜನಾ ಆನಂದ್ ಮತ್ತು ಸಂಪದಾ ಅವರ ಪಾತ್ರಗಳಿಗೆ ಕಡಿಮೆ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ ಅತುಲ್ ಕುಲಕರ್ಣಿ ಅವರು ಕಾಣಿಸಿಕೊಂಡಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಇಷ್ಟವಾಗುವ ಈ ಕಥೆ ಕ್ಲೈಮ್ಯಾಕ್ಸ್‌ನಲ್ಲಿ ಕೊಂಚ ಎಡವಿದಂತೆ ಅನ್ನಿಸುತ್ತದೆ. ಸಂಗೀತ ನಿರ್ದೇಶನ ಚರಣ್ ಅವರು ಹಾಡುಗಳ ಮೂಲಕ ಗಮನ ಸೆಳೆದಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಉತ್ತಮವಾಗಿದೆ.

ಚಿತ್ರ: ಎಕ್ಕ

ನಿರ್ದೇಶನ: ರೋಹಿತ್ ಪದಕಿ

ತಾರಾಗಣ: ಯುವ ರಾಜ್‌ಕುಮಾರ್, ಸಂಜನಾ ಆನಂದ್, ಸಂಪದ, ಅತುಲ್ ಕುಲಕರ್ಣಿ, ಆದಿತ್ಯ, ರಾಹುಲ್ ದೇವ್ ಶೆಟ್ಟಿ, ಶ್ರುತಿ, ಮುಂತಾದವರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಲ್ಯಾಣ ಕರ್ನಾಟಕ ನೀರಾವರಿಗೆ 70,000 ಕೋಟಿ ರೂ.ಗಳ ಅನುದಾನ: ಸಿಎಂ ಸಿದ್ದರಾಮಯ್ಯ ಪ್ರತಿಜ್ಞೆ

ಹಣ ವರ್ಗಾವಣೆ, ಅಕ್ರಮ ನಿವೇಶನ ಹಂಚಿಕೆ ಆರೋಪ: ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನ

ACCಗೆ ಹೊಸ ತಲೆನೋವು: 'ಪ್ರಶಸ್ತಿ ಪ್ರದಾನ ಗಣ್ಯರ ಪಟ್ಟಿಯಿಂದ ಅವನ ಹೆಸರು ಕೈ ಬಿಡಿ' ಎಂದು Suryakumar Yadav ಖಡಕ್ ಪಟ್ಟು!

ಕಾಂಗ್ರೆಸ್ ಮಾತ್ರ ಭಾರತವನ್ನು ಮುನ್ನಡೆಸಲು ಸಾಧ್ಯ ಎಂಬ ಕಟ್ಟುಕತೆಯನ್ನು ಮೋದಿ ಮುರಿದಿದ್ದಾರೆ: ಎಚ್‌ಡಿ ದೇವೇಗೌಡ

ಓಮನ್ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ ಔಟ್; RCB ಆಟಗಾರನಿಗೆ ಸ್ಥಾನ

SCROLL FOR NEXT