ಕಾಂತಾರ- ಚಾಪ್ಟರ್ 1 ಸ್ಟಿಲ್ 
ಸಿನಿಮಾ ವಿಮರ್ಶೆ

ಕಾಂತಾರ: ಚಾಪ್ಟರ್ 1 Movie Review: ಹೂದೋಟದಲ್ಲಿ ರಿಷಬ್‌ ಅಬ್ಬರ; ತೆರೆಮೇಲೆ 'ಬೆರ್ಮೆ' ಆ್ಯಕ್ಷನ್ ಭಯಂಕರ; ವೈಭೋಗದ ದೃಶ್ಯಕಾವ್ಯ- ಪುರಾಣಕಥೆಯ ವಿಸ್ಮಯ!

Shilpa D

ಕಾಂತಾರ: ಚಾಪ್ಟರ್ 1 ಸಿನಿಮಾ ದಕ್ಷಿಣ ಭಾರತದ ಸಿನಿ ರಸಿಕರನ್ನು ಕಾತರದಿಂದ ಕಾಯಿಸಿಕೊಂಡು, ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವು ತುಳುನಾಡು ಸಂಸ್ಕೃತಿಯ ವೈಭವವನ್ನು ತೆರೆಮೇಲೆ ತೋರಿಸುತ್ತದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯದ 'ಬೆರ್ಮೆ' ಪಾತ್ರವು ದೈವದ ರಕ್ಷಣೆಗೆ ನಿಂತು, ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ಅದ್ದೂರಿ ಮೇಕಿಂಗ್ ಮತ್ತು ವೈಭವದ ದೃಶ್ಯಕಾವ್ಯವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ದಕ್ಷಿಣ ಭಾರತದ ಸಿನಿ ರಸಿಕರು ಕಾತರದಿಂದ ಕಾಯುತ್ತಿದ್ದ ಸಿನಿಮಾ ಕಾಂತಾರ ಚಾಪ್ಟರ್ 1 ರಿಲೀಸ್ ಆಗಿದೆ. ತುಳುನಾಡು ಸಂಸ್ಕೃತಿಗೆ ಸಂಬಂಧಿಸಿದಂತೆ ರಿಷಬ್ ಶೆಟ್ಟಿ ನಿರ್ದೇಶಿರುವ ಚಿತ್ರ ಎಲ್ಲರ ಮನಸೂರೆಗೊಂಡಿದೆ. ಸರಿಯಾಗಿ ಮೂರು ವರ್ಷಗಳ ಹಿಂದೆ ತೆರೆಕಂಡಿದ್ದ 'ಕಾಂತಾರ' ಸಿನಿಮಾವು ದೇಶಾದ್ಯಂತ ಮಾಡಿದ ಮೋಡಿ ಸಾಮಾನ್ಯದಲ್ಲ. ಪ್ರಚಂಡ ಗೆಲುವನ್ನು ತನ್ನದಾಗಿಸಿಕೊಂಡಿತ್ತು.

ಕರಾವಳಿ, ಮಲೆನಾಡು ಭಾಗಗಳಲ್ಲಿ ದೈವ, ಭೂತ, ಪಂರ್ಜುಲಿ...ಹೀಗೆ ನೂರಾರು ದೈವಗಳನ್ನು ಆರಾಧಿಸುತ್ತಾರೆ. ರಕ್ತ, ಮಾಂಸ ಬೇಡುವ ಈ ದೈವಗಳನ್ನು ದೇವರ ಸ್ಥಾನದಲ್ಲಿ ಕೂರಿಸುವುದಿಲ್ಲ. ಬದಲಿಗೆ ಶಿವಗಣಗಳೆಂದು ನಂಬುತ್ತಾರೆ. ಅಂಥದ್ದೇ ಶಿವಗಣಗಳ ಸಾಮ್ರಾಜ್ಯ ‘ಕಾಂತಾರ’ದ ಕಾಡು. ಆ ಕಾಡಿನಲ್ಲಿ ವಿರೋಧಿಗಳಿಂದ ದೈವವನ್ನು ಕಾಯುವವನು ಕಥಾನಾಯಕ ‘ಬೆರ್ಮೆ’(ರಿಷಬ್ ಶೆಟ್ಟಿ).

ಒಂದು ಕಾಲದಲ್ಲಿ, ರಾಜಶೇಖರ (ಜಯರಾಮ್) ಎಂಬ ರಾಜನಿದ್ದ, ಅವನು ಕಾಂತಾರ ಭೂಮಿಯನ್ನು ಬ್ರಹ್ಮ ರಾಕ್ಷಸನ ಕೋಪದಿಂದ ಕಾಡುತ್ತಿದ್ದನು. ಆತನ ಮಗ ಕುಲಶೇಖರ (ಗುಲ್ಶನ್ ದೇವಯ್ಯ) ತನ್ನ ತಂದೆಯ ಸಿಂಹಾಸನವನ್ನು ಆನುವಂಶಿಕವಾಗಿ ಪಡೆಯುತ್ತಾನೆ, ಆದರೆ ಆತನಿಗೆ ತನ್ನ ತಂದೆಯ ಬುದ್ಧಿವಂತಿಕೆ ಇರುವುದಿಲ್ಲ. ಹೀಗಾಗಿ ಆತ ತೊಂದರೆಗೆ ಸಿಲುಕುತ್ತಾನೆ. ರಾಜಶೇಖರನ ಮಗಳು ಕನಕಾವತಿ (ರುಕ್ಮಿಣಿ ವಸಂತ್) ಶಕ್ತಿಯಾಗಿ ಬೆಳೆಯುತ್ತಾಳೆ, ಕಥೆಗೆ ಅನಿರೀಕ್ಷಿತ ತಿರುವು ಕೊಡುವುದೇ ಕನಕಾವತಿ.

ಕ್ರಿ..ಶ.4-5 ಶತಮಾನದ ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೃಷ್ಟಿಯಾದ ಮಾಯಾವಿಲೋಕವಿದು. ಕಾಡಿನಿಂದ ಹೊರಬಂದು ಸರಿಯಾಗಿ ಊರನ್ನೇ ನೋಡದ, ಮನುಕುಲದ ಸಂಪರ್ಕವೇ ಇಲ್ಲದ ‘ಬೆರ್ಮೆ’ ಮತ್ತವನ ಸಂಗಡಿಗರು ಬಾಂಗ್ರಾ ರಾಜ್ಯಕ್ಕೆ ಕಾಲಿಡುತ್ತಾರೆ. ಬಾಂಗ್ರಾ ರಾಜ ಮನೆತನದ ಅರಸ ರಾಜಶೇಖರ ಮತ್ತು ಆತನ ಮಗ ಕುಲಶೇಖರನಿಗು ಹಾಗೂ ಈ ಕಾಂತಾರದ ಕಾಡಿಗೂ ಒಂದು ನಂಟಿರುತ್ತದೆ. ಅಜ್ಜನ ಕಾಲದಿಂದಲೂ ದ್ವೇಷವಿರುತ್ತದೆ. ಈಶ್ವರನ ಹೂದೋಟ ಎಂಬ ಸಣ್ಣ ಭಯವೂ ಇರುತ್ತದೆ. ಬೆರ್ಮೆ ಮತ್ತು ರಾಜನ ನಡುವಿನ ಸಮರದಲ್ಲಿ ದೈವದ ಪಾತ್ರವೇನು? ದೈವಕ್ಕೂ ಹೂದೋಟಕ್ಕೂ ಯಾವ ನಂಟು ಎಂಬುದನ್ನು ತೆರೆಮೇಲೆ ನೋಡಬೇಕು.

ಕಾಂತಾರ ಸಿನಿಮಾವು ಸಿಂಪಲ್ ಮೇಕಿಂಗ್‌ನಿಂದ ಕೂಡಿತ್ತು. ಕಥೆಗೆ ಎಷ್ಟು ಬೇಕೋ ಅಷ್ಟನ್ನು ಖರ್ಚು ಮಾಡಲಾಗಿತ್ತು. ಆದರೆ ಈ ಪ್ರೀಕ್ವೇಲ್‌ನಲ್ಲಿ ಅದ್ದೂರಿ ಮೇಕಿಂಗ್‌ ಮೇಲೆ ಹೆಚ್ಚಿನ ಗಮನ ನೀಡಲಾಗಿದೆ. ಒಂದಿಡೀ ಊರನ್ನೇ ಸೃಷ್ಟಿ ಮಾಡಲಾಗಿದೆ. ದೇವಸ್ಥಾನ, ಅರಮನೆ ದರ್ಬಾರ್‌ನ ಸೆಟ್‌ಗಳು ಗಮನಸೆಳೆಯುತ್ತವೆ. ಈಶ್ವರ ಹೂದೋಟ ಎಂಬ ಕಾಡಿನೊಳಗಿನ ಜಗತ್ತು ಮತ್ತೊಂದು ಮಾಯಾ ಲೋಕವನ್ನೆ ತೆರೆದಿಡುತ್ತದೆ. ಸಿನಿಮಾದ ಅದ್ದೂರಿತನಕ್ಕೆ ವಿಎಫ್‌ಎಕ್ಸ್ ಮತ್ತಷ್ಚು ಮೆರಗು ನೀಡಿದೆ. ಸಿನಿಮಾದಲ್ಲಿ ಅದ್ದೂರಿತನಕ್ಕೆ ಎಲ್ಲಿಯೂ ಕೊರತೆ ಆಗದಂತೆ ‘ಹೊಂಬಾಳೆ ಫಿಲ್ಮ್ಸ್’ ನೋಡಿಕೊಂಡಿದೆ. ರಿಷಬ್ ಅವರು ಸಿನಿಮಾನ ತಾಂತ್ರಿಕವಾಗಿ ಶ್ರೀಮಂತವಾಗಿರುವಂತೆ ನೋಡಿಕೊಂಡಿದ್ದಾರೆ.

ಸಾಕಷ್ಟು ಕಡೆ ತಾಳ್ಮೆ ಪರೀಕ್ಷಿಸುವ ಕಾಂತಾರ ಮೊದಲಾರ್ಧಕ್ಕಿಂತ ದ್ವಿತೀಯಾರ್ಧದ ಕಥೆ ವೇಗವಾಗಿದೆ. ಆದರೆ ಈ ಭಾಗದ ಅರ್ಧದಷ್ಟು ಕಥೆಯನ್ನು ಆ್ಯಕ್ಷನ್‌ ನುಂಗಿ ಹಾಕಿದೆ. ಫಸ್ಟ್ ಹಾಫ್‌ನಲ್ಲಿ ಸಿನಿಮಾದ ಕಥಾ ವಿಸ್ತರಣೆ, ಪಾತ್ರ ಪರಿಚಯಗಳಿಂದ ಕೂಡಿದೆ, ಒಂದು ಆಕ್ಷನ್ ಸೀನ್ ಮೂಲಕ ಮುಗಿಯುತ್ತದೆ. ಇಂಟರ್‌ವಲ್‌ಗೂ ಮುನ್ನ ಬರುವ ಒಂದು ದೃಶ್ಯ ಬಹಳಷ್ಟು ರೋಮಾಂಚಕಾರಿಯಾಗಿದೆ. ಆದರೆ ಸೆಕೆಂಡ್ ಹಾಫ್‌ನಲ್ಲಿ ಆಕ್ಷನ್‌ಗೆ ಜಾಸ್ತಿ ಮಹತ್ವ ನೀಡಲಾಗಿದೆ, ಅದರ 'ಅಬ್ಬರ' ಜೋರಾಗಿಯೇ ಇದೆ. ಯುದ್ಧದ ಸೀನ್‌ಗಳಲ್ಲಿ 'ಬಾಹುಬಲ' ಪ್ರದರ್ಶನ ಮಾಡಲಾಗಿದೆ. ಉಳಿದಂತೆ, ಕರಾವಳಿಯ ಬಹುತೇಕ ದೈವಗಳ ಪರಿಚಯವಿದೆ. ಕೊನೆಗೆ ಕ್ಲೈಮ್ಯಾಕ್ಸ್‌ನಲ್ಲಿ ಮತ್ತೊಂದು ರಣಭಯಂಕರ ಆಕ್ಷನ್ ಸೀನ್‌ ಅನ್ನು ಸಂಯೋಜಿಸಿಟ್ಟಿದ್ದಾರೆ ರಿಷಬ್, ಸಾಕಷ್ಟು ಕಡೆ ರಿಸ್ಕ್‌ ತೆಗೆದುಕೊಂಡು ತಾವು ಯಾವ ಆ್ಯಕ್ಷನ್‌ ನಾಯಕನಿಗೂ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಚಿತ್ರದಲ್ಲಿ ಫೈಟ್​ಗಳೇ ಹೆಚ್ಚು ಅಬ್ಬರಿಸಿದಂತೆ ಕಾಣಿಸುತ್ತದೆ. ಚಿತ್ರದಲ್ಲಿ ಬರುವ ಯುದ್ಧದ ದೃಶ್ಯ ರಾಜಮೌಳಿಯ ‘ಬಾಹುಬಲಿ’ ಸಿನಿಮಾ ನೆನಪಿಸುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಬ್ರಹ್ಮರಾಕ್ಷಸನ ಪಾತ್ರವಂತೂ ಹಾಲಿವುಡ್ ಸಿನಿಮಾದಂತೆ ಭಾಸವಾಗುತ್ತದೆ.

ಕನಕವತಿಯಾಗಿ ರುಕ್ಮಿಣಿ ವಸಂತ್‌ ಇಷ್ಟವಾಗುತ್ತಾರೆ. ಬಾಂಗ್ರಾ ರಾಜ ಮನೆತನದ ಅರಸರಾಗಿ ಜಯರಾಮ್ ಮತ್ತು ಅವರ ಮಗ ಕುಲಶೇಖರನಾಗಿ ಗುಲ್ಶನ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಸೈನಿಕನಾಗಿ ಪ್ರಕಾಶ್‌ ತೂಮ್ಮಿನಾಡು ಹಾಗೂ ದೀಪಕ್‌ ರೈ ಕೆಲವೆಡೆ ನಗಿಸುತ್ತಾರೆ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ದೃಶ್ಯಗಳ ವೈಭವವನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಅರವಿಂದ್‌ ಕಶ್ಯಪ್‌ ಛಾಯಾಚಿತ್ರಗ್ರಹಣ ಇಡೀ ಚಿತ್ರದ ಮತ್ತೊಂದು ಹೈಲೆಟ್‌. ಕಥೆಯನ್ನು ಮತ್ತಷ್ಟು ಬಿಗಿಯಾಗಿ ಹೆಣೆಯುವ ಅವಕಾಶ ರಿಷಬ್​ಗೆ ಇತ್ತು. ಮೇಕಿಂಗ್‌ ಮೇಲೆ ನೀಡಿದಷ್ಟೇ ಗಮನವನ್ನು ಚಿತ್ರಕಥೆ ಮೇಲೂ ನೀಡಿದ್ದರೆ ಚೆನ್ನಾಗಿರುತ್ತಿತ್ತೇನೋ ಎನಿಸುತ್ತದೆ.

ಸಿನಿಮಾ: ಕಾಂತಾರ: ಚಾಪ್ಟರ್ 1

ನಿರ್ದೇಶಕ: ರಿಷಬ್ ಶೆಟ್ಟಿ

ಕಲಾವಿದರು: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ತ ಹಾಗು ಇತರರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ ಹಗಲು ದರೋಡೆ: 7 ಕೋಟಿ ಕದ್ದ ಖದೀಮರು; 4 ಶಂಕಿತರ ಫೋಟೋ, ಡಿಜಿ-ಐಜಿಪಿಗೆ ಪರಮೇಶ್ವರ್ ತಾಕೀತು!

ದಾಖಲೆಯ 10ನೇ ಬಾರಿಗೆ ಬಿಹಾರದ ಸಿಎಂ ಆಗಿ ನಿತೀಶ್ ನಾಳೆ ಪ್ರಮಾಣವಚನ: BJPಯ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ DCM!

ದೆಹಲಿಯ JNU ಗೆ ಶೃಂಗೇರಿ ಶ್ರೀಗಳ ಭೇಟಿ: ಕ್ಯಾಂಪಸ್ ನಲ್ಲಿ ವಿದ್ಯಾರಣ್ಯ ಮೂರ್ತಿಗೆ ಮಾಲಾರ್ಪಣೆ, VIKAS ಕುರಿತು ಉಪನ್ಯಾಸ; Video

ರೈತರು ಶಾಲು ಬೀಸಿದ್ದನ್ನು ನೋಡಿದರೆ ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು: ಪ್ರಧಾನಿ ಮೋದಿ

ಶಬರಿಮಲೆಯಲ್ಲಿ ಜನದಟ್ಟಣೆ: ಅಯ್ಯಪ್ಪ ಭಕ್ತರ ಸುರಕ್ಷಿತ, ಸುಗಮ ಸಂಚಾರಕ್ಕಾಗಿ ಕೇರಳಕ್ಕೆ ಕರ್ನಾಟಕ ಸರ್ಕಾರ ಮನವಿ!

SCROLL FOR NEXT